ಬೆಂಗಳೂರು: ಲಾರ್ಸನ್ ಆ್ಯಂಡ್ ಟೂಬ್ರೊ ಸಮೂಹವು ತನ್ನ ಅಧೀನದಲ್ಲಿರುವ ಎರಡು ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಎಲ್ ಆ್ಯಂಡ್‍ಟಿ ಇನ್ಫೋಟೆಕ್ ಮತ್ತು ಬೆಂಗಳೂರು ಮೂಲದ ಮೈಂಡ್ ಟ್ರಿಯನ್ನು ವಿಲೀನಗೊಳಿಸಿದೆ.
ಇದರೊಂದಿಗೆ ದೇಶದ 5ನೇ ಅತಿ ದೊಡ್ಡ ಕಂಪನಿ ಉದಯವಾಗಲಿದೆ.
ವಿಲೀನಗೊಂಡ ಬಳಿಕ ಹೊಸ ಕಂಪನಿಯ ಹೆಸರು “ಎಲ್‍ಟಿಐ ಮೈಂಡ್ ಟ್ರಿ’ ( LTI Mindtree) ಎಂದು ಗುರುತಿಸಿಕೊಳ್ಳುವ ನಿರೀಕ್ಷೆ ಇದೆ. ಇದರ ಮಾರುಕಟ್ಟೆ ಮೌಲ್ಯ 350 ಶತಕೋಟಿ ಡಾಲರ್ (26,250 ಕೋಟಿ ರೂ.) ದಾಟಲಿದೆ. ಮಾರುಕಟ್ಟೆ ಮೌಲ್ಯದಲ್ಲಿ ಈಗ ಟಿಸಿಎಸ್ ಮೊದಲ ಸ್ಥಾನದಲ್ಲಿದೆ. ಇನ್ಫೋಸಿಸ್, ಎಚ್‍ಸಿಎಲ್ ಟೆಕ್, ವಿಪ್ರೊ ನಂತರದ ಸ್ಥಾನಗಳಲ್ಲಿವೆ.
ಹೆಚ್ಚು ಸೇವಾ ಕೇಂದ್ರಿತವಾಗುವ ಕಾರ್ಯತಂತ್ರದ ಭಾಗವಾಗಿ ಉಭಯ ಕಂಪನಿಗಳನ್ನು ಎಲ್‍ಆ್ಯಂಡ್‍ಟಿ ಸಮೂಹವು ವಿಲೀನಗೊಳಿಸುತ್ತಿದೆ. ಹೊಸ ಕಂಪನಿ 80,000 ಉದ್ಯೋಗಿಗಳಿಗೆ ಉದ್ಯೋಗ ನೀಡಲಿದೆ. ಹಾಗೂ ನೂತನ ಕಂಪನಿಯಲ್ಲಿ ಎಲ್ ಆ್ಯಂಡ್‍ಟಿಯು ಶೇ.68.73 ಷೇರುಗಳನ್ನು ಒಳಗೊಳ್ಳಲಿದೆ.
ಎಲ್‍ಆ್ಯಂಡ್‍ಟಿ ಇನ್ಫೋಟೆಕ್ ಮತ್ತು ಮೈಂಡ್‍ಟ್ರಿಯ ನಿರ್ದೇಶಕರುಗಳ ಆಡಳಿತ ಮಂಡಳಿ ಸಭೆ ಸೇರಿ ವಿಲೀನ ಪ್ರಸ್ತಾಪಕ್ಕೆ ಸಮ್ಮತಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಲೀನದ ಭಾಗವಾಗಿ ಮೈಂಡ್ ಟ್ರಿಯ ಎಲ್ಲ ಷೇರುದಾರರಿಗೆ ಪ್ರತಿ 100 ಷೇರಿಗೆ ಪ್ರತಿಯಾಗಿ 73 ಎಲ್‍ಟಿಐ ಷೇರುಗಳು ಸಿಗಲಿವೆ.
ನೂತನ ಎಲ್‍ಟಿಐಮೈಂಡ್ ಟ್ರಿಯ ನಾಯಕತ್ವವನ್ನು ಮೈಂಡ್ ಟ್ರಿಯ ಸಿಇಒ ದೇಬಶೀಷ್ ಚಟರ್ಜಿ ವಹಿಸಿಕೊಳ್ಳಲಿದ್ದಾರೆ. ಎಲ್ ಆ್ಯಂಡ್ ಟಿ ಇನ್ಫೋಟೆಕ್ ಸಿಇಒ ಸಂಜಯ್ ಜಲೊನಾ ವೈಯಕ್ತಿಕ ಕಾರಣಕ್ಕೋಸ್ಕರ ರಾಜೀನಾಮೆ ನೀಡಿದ್ದಾರೆ.
ಉಭಯ ಕಂಪನಿಗಳ ವಿಲೀನದಿಂದ ಹೆಚ್ಚು ಬದ್ಧತೆಯಿಂದ ಐಟಿ ಸೇವೆಯನ್ನು ಮಾಡಲು ಸಾಧ್ಯವಾಗಲಿದೆ ಎಂದು ಎಲ್‍ಆ್ಯಂಡ್‍ಟಿ ಸಮೂಹದ ಅಧ್ಯಕ್ಷ ಎಎಂ ನಾಯಕ್ ತಿಳಿಸಿದ್ದಾರೆ.
ಬೆಂಗಳೂರಿನ ಮೈಂಡ್ ಟ್ರಿ
ಈಗ ಎಲ್‍ಆ್ಯಂಡ್‍ಟಿಯ ಭಾಗವಾಗಿರುವ ಮೈಂಡ್ ಟ್ರಿ 22 ವರ್ಷಗಳ ಹಿಂದೆ, 1999ರ ಆಗಸ್ಟ್ 18ರಂದು ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಅಶೋಕ್ ಸೂಟಾ, ಸುಬ್ರತೊ ಬಗ್ಚಿ, ಪಾರ್ಥಸಾರಥಿ ಎನ್‍ಎಸ್, ಜಾನಕಿರಾಮನ್ ಸೇರಿದಂತೆ 10 ಮಂದಿ ಐಟಿ ಉದ್ಯೋಗಿಗಳು ಸೇರಿ ಸ್ಥಾಪಿಸಿದ ಕಂಪನಿಯಿದು. ಅವರಲ್ಲಿ ಮೂವರು ಮಾರಿಷಸ್‍ನಲ್ಲಿ ನೋಂದಣಿಯಾಗಿದ್ದ ಕಂಪನಿಯ ಮೂಲಕ ಹೂಡಿಕೆ ಮಾಡಿದ್ದರು. ವಾಲ್ಡನ್ ಇಂಟರ್‍ನ್ಯಾಷನಲ್ ಮತ್ತು ಸಿವಾನ್ ಸೆಕ್ಯುರಿಟೀಸ್ ಆರಂಭಿಕ ಹಂತದಲ್ಲಿ ಮೈಂಡ್ ಟ್ರೀಯಲ್ಲಿ ಹೂಡಿಕೆ ಮಾಡಿತ್ತು. 23,814 ಉದ್ಯೋಗಿಗಳನ್ನು ಹೊಂದಿದೆ.
ಸುಬ್ರತೊ ಬಗ್ಚಿ
ಮೈಂಡ್ ಟ್ರೀಯ ಸಹ ಸಂಸ್ಥಾಪಕರಲ್ಲೊಬ್ಬರಾದ ಸುಬ್ರತೊ ಬಗ್ಚಿ ಅವರು ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುವ ಹಲವು ಕೃತಿಗಳನ್ನು ರಚಿಸಿದ್ದಾರೆ. ಗೋ ಕಿಸ್ ದ ವಲ್ರ್ಡ್ ಅವರ ಆತ್ಮಕಥೆ. ಮೈಂಡ್ ಟ್ರೀ ಆರಂಭವಾದಾಗ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಸುಬ್ರತೊ ಬಗ್ಚಿ ಕಾರ್ಯ ನಿರ್ವಹಿಸಿದ್ದರು. ಕಂಪನಿಯ ಬೆಳವಣಿಗೆಯಲ್ಲಿ ನಿರ್ಣಾಯಕಡ ಪಾತ್ರ ವಹಿಸಿದ್ದರು. 1999 ಮತ್ತು 2007ರ ನಡುವೆ ಮೈಂಡ್ ಟ್ರೀಯ ಯೋಜನೆ, ಮೌಲ್ಯಗಳನ್ನು ರೂಪಿಸಿದವರು ಸುಬ್ರತೊ ಬಗ್ಚಿ. ಮೈಂಡ್ ಟ್ರಿಯ ಐಪಿಒದಲ್ಲೂ ಅವರು ಸಕ್ರಿಯ ಪಾತ್ರ ವಹಿಸಿದ್ದರು.
ಎಲ್‍ಟಿಐ ಹಿನ್ನೆಲೆ
ಲಾರ್ಸನ್ ಆ್ಯಂಡ್ ಟೂಬ್ರೊ ಇನ್ಫೋಟೆಕ್ (ಎಲ್‍ಟಿಐ) 25 ವರ್ಷಗಳ ಹಿಂದೆ (1996) ಸ್ಥಾಪನೆಯಾಗಿರುವ ಬಹುರಾಷ್ಟ್ರೀಯ ಸಾಫ್ಟ್‍ವೇರ್ ಸಂಸ್ಥೆ. 2017ರಲ್ಲಿ ನಾಸ್ಕಾಮ್ ಕಂಫನಿಯನ್ನು ರಫ್ತು ಆದಾಯದ ದೃಷ್ಟಿಯಿಂದ ದೇಶದ 6ನೇ ಅತಿ ದೊಡ್ಡ ಐಟಿ ಕಂಪನಿ ಎಂದು ಗುರುತಿಸಿತ್ತು. 2017ರಲ್ಲಿ ಟಾಪ್ 15 ಐಟಿ ಸೇವಾ ರಫ್ತುದಾರ ಕಂಪನಿಗಳಲ್ಲಿ ಒಂದಾಗಿತ್ತು. ಎ.ಎಂ ನಾಯಕ್ ಇದರ ಅಧ್ಯಕ್ಷರಾಗಿದ್ದಾರೆ. 12,644 ಕೋಟಿ ರೂ. ಆದಾಯವನ್ನು ಒಳಗೊಂಡಿದೆ. 35,991 ಉದ್ಯೋಗಿಗಳು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಅಮೆರಿಕ, ಉರೋಪ್, ಕೊಲ್ಲಿ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಚೀನಾ ಮೊದಲಾದ ಕಡೆಗಳಲ್ಲಿ ಅಸ್ತಿತ್ವವನ್ನು ಹೊಂದಿದೆ.