ನವ ದೆಹಲಿ: ಕೇಂದ್ರ ಸರ್ಕಾರ ಗಣಿಗಳು ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ-1957 ಗೆ ತಿದ್ದುಪಡಿ ತರಲು ಉದ್ದೇಶಿಸಿದೆ. (Mining Act) ಇದರಿಂದ ಭೂಗರ್ಭದ ತಳದಲ್ಲಿರುವ ಚಿನ್ನ, ಬೆಳ್ಳಿ, ತಾಮ್ರ, ಸತು ( Mines and Minerals development and regulation act) ಮೊದಲಾದ ಅಮೂಲ್ಯ ಹಾಗೂ ಅಪರೂಪದ ಲೋಹಗಳ ಶೋಧ ಮತ್ತು ಗಣಿಗಾರಿಕೆಗೆ ಅನುಕೂಲವಾಗಲಿದೆ.
ಕೇಂದ್ರ ಸಚಿವ ಸಂಪುಟ ಸಭೆ ತಿದ್ದುಪಡಿ ವಿಧೇಯಕ ಮಂಡನೆಗೆ ಅನುಮೋದನೆ ನೀಡುವ ನಿರೀಕ್ಷೆ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಉದ್ದೇಶಿತ ತಿದ್ದುಪಡಿಯ ಪ್ರಕಾರ ಅಪರೂಪದ ಖನಿಜಗಳ ಶೋಧ ಮತ್ತು ಗಣಿಗಾರಿಕೆಗೆ ಲೈಸೆನ್ಸ್ ವಿತರಣೆಯಾಗಲಿದೆ. ಇದಕ್ಕಾಗಿ ನಿಕ್ಷೇಪಗಳ ಹರಾಜು ನಡೆಯಲಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಉದ್ಯೋಗ ಸೃಷ್ಟಿಸಲಿದೆ. ಇದು 2014ರ ಬಳಿಕ ಗಣಿಗಾರಿಕೆ ಕಾಯಿದೆಯ 5ನೇ ತಿದ್ದುಪಡಿಯಾಗಲಿದೆ.
ತಾಮ್ರ, ಟೆಲ್ಯೂರಿಯಂ, ಸೀಸ, ಸತು, ಕ್ಯಾಡ್ಮಿಯಂ, ಚಿನ್ನ, ಬೆಳ್ಳಿ, ವಜ್ರ, ರಾಕ್ ಫೋಸ್ಪೇಟ್, ಅಪಟೈಟ್, ಪೊಟ್ಯಾಶ್ ಇತ್ಯಾದಿ ಅಮೂಲ ಲೋಹ ಮತ್ತು ಖನಿಜಗಳ ಗಣಿಗಾರಿಕೆಗೆ ಇದರಿಂದ ಹಾದಿ ಸುಗಮವಾಗಲಿದೆ. ನಿರ್ಣಾಯಕ ಖನಿಜಗಳಾಗಿರುವ ಲಿಥಿಯಂ, ಕೊಬಾಲ್ಟ್, ಮೊಲಿಬ್ಡಿನಮ್, ರಿನಿಯುಮ್, ಟಂಗ್‌ಸ್ಟನ್, ಗ್ರಾಫೈಟ್, ವನಡಿಯುಮ್, ನಿಕ್ಕೆಲ್, ಟಿನ್, ಪ್ಲಾಟಿನಮ್, ಲೆಪಿಡೊಲೈಟ್, ಸ್ಕೀಲೈಟ್ ಇತ್ಯಾದಿ ಖನಿಜಗಳೂ ಪಟ್ಟಿಯಲ್ಲಿವೆ. ಪೂರ್ಣಪ್ರಮಾಣದ ಗಣಿಗಾರಿಕೆಗೆ ಅವಕಾಶ ಸಿಗಲಿದೆ. ಕಂಪನಿಗಳಿಗೆ ಯಾವ ಗಣಿಗಾರಿಕೆ ಮಾಡಬಹುದು ಎಂಬ ಸಲಹೆ ನೀಡಲು ಅವಕಾಶ ಸಿಗಲಿದೆ.
ಖಾಸಗಿ ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ
ಉದ್ದೇಶಿತ ತಿದ್ದುಪಡಿಯ ಪರಿಣಾಮ ಖಾಸಗಿ ವಲಯದ ಕಂಪನಿಗಳಿಗೆ ಸಮಗ್ರ ಗಣಿಗಾರಿಕೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಅಮೂಲ್ಯ ಮತ್ತು ನಿರ್ಣಾಯಕ ಖನಿಜಗಳ ಶೋಧ ಮತ್ತು ಗಣಿಗಾರಿಕೆಯಲ್ಲಿ ಖಾಸಗಿ ಕಂಪನಿಗಳೂ ಪಾಲ್ಗೊಳ್ಳಲಿವೆ. ಸಮೀಖ್ಷೆಯ ಅಂಕಿ ಅಂಶಗಳನ್ನು ಆಧರಿಸಿ ಗಣಿಗಾರಿಕೆಯ ಹಕ್ಕುಗಳನ್ನು ಪಡೆಯಲಿವೆ.
ಭಾರತ ಈಗ ಸುಮಾರು 688,000 ಚದರ ಕಿ.ಮೀ ಸಂಭವನೀಯ ಗಣಿಗಾರಿಕೆ ಪ್ರದೇಶಗಳನ್ನು ಹೊಂದಿದೆ. ಇದರಲ್ಲಿ 197,000 ಚದರ ಕಿ.ಮೀ ಅತಿ ಸಂಭವನೀಯ ಗಣಿಗಾರಿಕೆ ಪ್ರದೇಶಗಳಾಗಿವೆ ಎಂದು ಭಾರತೀಯ ಭೌಗೋಳಿಕ ಸರ್ವೇಕ್ಷಣಾಲಯ ಇಲಾಖೆ (Geological survey of India) ತಿಳಿಸಿದೆ. ಗಣಿಗಾರಿಕೆ ಕುರಿತ ಜಾಗತಿಕ ಬಜೆಟ್‌ನ ಕೇವಲ 1% ಅನ್ನು ಮಾತ್ರ ಭಾರತದಲ್ಲಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಗಣಿಗಾರಿಕೆಯ ಪ್ರಯೋಜನ ಪಡೆಯಲು ಇಲ್ಲಿ ಹೇರಳವಾದ ಅವಕಾಶಗಳು ಇವೆ ಎನ್ನುತ್ತಾರೆ ತಜ್ಞರು.
ವಜ್ರದ ಗಣಿಗಾರಿಕೆಗೆ ಪ್ರಸಿದ್ಧವಾಗಿದ್ದ ಭಾರತ
ಭಾರತವು ಪ್ರಾಚೀನ ಕಾಲದಲ್ಲೇ ವಜ್ರದ ಗಣಿಗಾರಿಕೆಗೆ ಹೆಸರಾಗಿತ್ತು. ಜಗತ್ತಿನ ಎಲ್ಲ ಬಗೆಯ ವಜ್ರಗಳಿಗೂ ಭಾರತ ಮೂಲವಾಗಿತ್ತು. 1896ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಜ್ರ ಪತ್ತೆಯಾಗುವ ತನಕ ಭಾರತದಲ್ಲಿ ಮಾತ್ರವೇ ವಜ್ರದ ಗಣಿಗಾರಿಕೆ ನಡೆಯುತ್ತಿತ್ತು ಎಂಬುದು ವಿಶೇಷ. 1900ರಿಂದ ಭಾರತ ವಜ್ರದ ಉತ್ಪಾದನೆಯಲ್ಲಿ ಹಿಂದುಳಿಯಿತು.
ಮಂಗೋಲಿಯಾದಲ್ಲಿ ಭಾರತದ ನೆರವಿನಲ್ಲಿ ತೈಲ ಸಂಸ್ಕರಣೆ ಘಟಕ
ಪೂರ್ವ ಏಷ್ಯಾದ ದೇಶವಾಗಿರುವ, ರಷ್ಯಾ ಹಾಗೂ ಚೀನಾ ಜತೆ ಗಡಿ ಹಂಚಿಕೊಂಡಿರುವ ಮಂಗೋಲಿಯಾದಲ್ಲಿ ಭಾರತದ ನೆರವಿನೊಂದಿಗೆ ಮೊದಲ ತೈಲ ಸಂಸ್ಕರಣೆ ಘಟಕ ನಿರ್ಮಾಣವಾಗುತ್ತಿದ್ದು, 2025ರ ವೇಳೆಗೆ ಸಿದ್ಧವಾಗಲಿದೆ. (Mongol Oil Refinery) ಈ ಘಟಕ ನಿಮಿಸಲು ಭಾರತವು 120 ಕೋಟಿ ಡಾಲರ್ (9840 ಕೋಟಿ ರೂ.) ಸಾಲ ನೀಡಿದೆ. ಮಂಗೋಲಿಯಾ ಗಣಿಗಾಗಾರಿಕೆಗೆ ಭಾರತದ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ. 2024ರಲ್ಲಿ ಭಾರತಕ್ಕೆ ಕಲ್ಲಿದ್ದಲು ಸೇರಿ ಖನಿಜಗಳ ರಫ್ತಿಗೂ ಬಯಸಿದೆ. ಮಂಗೋಲಿಯಾ ಹಲವು ಅಪರೂಪದ ಖನಿಜಗಳನ್ನೂ ಹೊಂದಿದ್ದು, ಸೆಮಿಕಂಡಕ್ಟರ್ ಮತ್ತು ಗ್ರೀನ್ ಮೊಬಿಲಿಟಿ ವಲಯದಲ್ಲಿ ಭಾರತದ ತಂತ್ರಜ್ಞಾನ ಆಧರಿತ ಉದ್ದಿಮೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ.