ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆಗೆ ಸಂಬಂಧಿಸಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಚಿವರುಗಳ ಸಮಿತಿ (Group of ministers) ಸಭೆಯಲ್ಲಿ ಒಮ್ಮತ ಉಂಟಾಗಿಲ್ಲ. ಹೀಗಾಗಿ ಜೂನ್ 28-29ರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಮಿತಿ ತನ್ನ ವರದಿ ಸಲ್ಲಿಸುವ ಸಾಧ್ಯತೆ ಇಲ್ಲ.
ಜಿಎಸ್‌ಟಿ ದರ ಪರಿಷ್ಕರಣೆಗೆ ಒಮ್ಮತ ಮೂಡದಿರುವ ಹಿನ್ನೆಲೆಯಲ್ಲಿ ಸಮಿತಿಯು ತನ್ನ ವರದಿ ಸಲ್ಲಿಕೆಗೆ ಮತ್ತೆ 4-6 ತಿಂಗಳುಗಳ ಕಾಲಾವಕಾಶ ಕೋರುವ ನಿರೀಕ್ಷೆ ಇದೆ. ಹೀಗಿದ್ದರೂ, ಜಿಎಸ್‌ಟಿಯಿಂದ ವಿನಾಯಿತಿ ಪಡೆಯುವ ವಸ್ತುಗಳ ಪಟ್ಟಿ ಮುಂದಿನ ವಾರ ಅಂತಿಮವಾಗುವ ಸಾಧ್ಯತೆ ಇದೆ.
ಕೇಂದ್ರ ಹಾಗೂ ರಾಜ್ಯಗಳ ಹಣಕಾಸು ಸಚಿವರುಗಳನ್ನು ಒಳಗೊಂಡ ೭ ಮಂದಿ ಸದಸ್ಯರನ್ನು ಹೊಂದಿದೆ. ಈ ಹಿಂದೆ 2021ರ ನವೆಂಬರ್‌ನಲ್ಲಿ ಸಮಿತಿ ಸಭೆ ಸೇರಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಿತಿಯ ನೇತೃತ್ವ ವಹಿಸಿದ್ದಾರೆ. ಪಶ್ಚಿಮ ಬಂಗಾಳ, ಕೇರಳ, ಗೋವಾ, ಬಿಹಾರ, ಉತ್ತರಪ್ರದೇಶ, ರಾಜಸ್ಥಾನದ ಹಣಕಾಸು ಸಚಿವರು ಸಮಿತಿಯಲ್ಲಿದ್ದಾರೆ.
ಜಿಎಸ್‌ಟಿ ಅಡಿಯಲ್ಲಿ ೫%, 12%, 18% ಮತ್ತು 28% ಎಂಬ ನಾಲ್ಕು ದರಗಳ ಶ್ರೇಣಿ ಇದೆ. ಸಗಟು ಹಣದುಬ್ಬರ 15.88%ಕ್ಕೆ ಏರಿಕೆಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಜಿಎಸ್‌ಟಿ ತೆರಿಗೆ ಶ್ರೇಣಿಗಳ ಬದಲಾವಣೆಗೆ ಅವಕಾಶಗಳು ಉಂಟಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.
ಈ ನಡುವೆ ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯಗಳಿಗೆ ನೀಡುತ್ತಿರುವ ನಷ್ಟ ಪರಿಹಾರವನ್ನು ಇನ್ನೂ 3-5 ವರ್ಷ ವಿಸ್ತರಿಸಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರಾ ಒತ್ತಾಯಿಸಿದ್ದಾರೆ.