Site icon Vistara News

Energy Conservation Award | ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕಕ್ಕೆ ಇಂಧನ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿ

green award

ಬೆಂಗಳೂರು: ಕೇಂದ್ರ ಇಂಧನ ಸಚಿವಾಲಯದ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2022ಕ್ಕೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕೆಆರ್ ಇಡಿಎಲ್) ಪಾತ್ರವಾಗಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ, ದಿಲ್ಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇಂಧನ ಕ್ಷೇತ್ರದ ಕಾರ್ಯಕ್ಷಮತೆ ಮತ್ತು ದಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡುತ್ತಿದೆ.

ಕೆಆರ್ ಇಡಿಎಲ್ ಪರವಾಗಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಅವರು ಪ್ರಶಸ್ತಿ ಸ್ವೀಕರಿಸಿದರು. ಕೆಆರ್ ಇಡಿಎಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ ಕೆ.ಪಿ. ಜತೆಗಿದ್ದರು. ಇದೇ ಸಂದರ್ಭದಲ್ಲಿ ಇಂಧನ ಸಂರಕ್ಷಣೆ ಕ್ಷೇತ್ರದಲ್ಲಿ ಕೆಆರ್ ಇಡಿಎಲ್ ಸಾಧನೆ ಬಗ್ಗೆ ರಾಷ್ಟ್ರಪತಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ರಾಜ್ಯಗಳಲ್ಲಿ ಇಂಧನ ದಕ್ಷತೆಗೆ ರಾಜ್ಯಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಂತೆ ಆಯಾ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಇಂಧನ ದಕ್ಷತೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ್ದಕ್ಕಾಗಿ, ಕೆಆರ್ ಇಡಿಎಎಲ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Exit mobile version