Site icon Vistara News

Cyrus Mistry Death | ಟಾಟಾ ಸನ್ಸ್‌ ವಿರುದ್ಧದ ಹೋರಾಟದಲ್ಲಿ ಮರೆಯಾದ ಮಿಸ್ತ್ರಿ ಸಾಧನೆ

cyrus mistry

ಗಿರಿಪ್ರಕಾಶ್‌ ಕೃಷ್ಣಮೂರ್ತಿ, ಬೆಂಗಳೂರು.

ಮುಂಬಯಿಗೆ ಸಮೀಪ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿರುವ ಸೈರಸ್‌ ಮಿಸ್ತ್ರಿ (54) ಅವರು ತಮ್ಮ ಬಂಧು ಬಳಗ, ಸ್ನೇಹಿತರ ವಲಯದಲ್ಲಿ ಮೃದು ಭಾಷಿ ಹಾಗೂ ಅಂತರ್ಮಖಿ (Cyrus Mistry Death) ಎಂದು ಗುರುತಿಸಿಕೊಂಡಿದ್ದರು.

ಸೈರಸ್‌ ಮಿಸ್ತ್ರಿ ಅವರು 2016ರ ಅಕ್ಟೋಬರ್‌ 24ರಂದು ಟಾಟಾ ಸನ್ಸ್‌ ಮತ್ತು ಟಾಟಾ ಸಮೂಹದ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾದಾಗ, ಅವರು ರಾತ್ರೋರಾತ್ರಿ ಕಠಿಣ ಹೋರಾಟಗಾರರಾಗಿ ಬದಲಾಗುತ್ತಾರೆ ಎಂದು ಯಾರೊಬ್ಬರೂ ಭಾವಿಸಿರಲಿಲ್ಲ.

ಸೈರಸ್‌ ಮಿಸ್ತ್ರಿಯವರ ಈ ಹೋರಾಟ 137,848 ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯದ ಟಾಟಾ ಸಾಮ್ರಾಜ್ಯವನ್ನು ಅಲುಗಾಡಿಸಿತ್ತು. (ಮಾರುಕಟ್ಟೆ ಬಂಡವಾಳ ಎಂದರೆ ಷೇರು ಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಷೇರುಗಳ ಒಟ್ಟು ದರ) ಮಿಸ್ತ್ರಿ ವಿರುದ್ಧ ಹಲವಾರು ಕೋರ್ಟ್‌ ಆದೇಶಗಳು ಪ್ರಕಟವಾಗುವ ತನಕ ಮತ್ತು ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರು ಟಾಟಾ ಸಮೂಹದ ನಿಯಂತ್ರಣವನ್ನು ಮತ್ತೆ ತಮ್ಮ ಕೈಗೆ ತೆಗೆದುಕೊಳ್ಳುವ ತನಕ ಅನಿಶ್ಚಿತತೆ ಕವಿದಿತ್ತು. ಟಾಟಾ ಸಮೂಹದ ಟಿಸಿಎಸ್‌, ಟಾಟಾ ಮೋಟಾರ್ಸ್‌ ಸೇರಿದಂತೆ 29 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿವೆ. ೬ ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ. ಇದರ ಒಟ್ಟು ಆದಾಯವು ಅಂದಾಜು 128 ಶತಕೋಟಿ ಡಾಲರ್‌ (10.11 ಲಕ್ಷ ಕೋಟಿ ರೂ.)

ಟಾಟಾ-ಮಿಸ್ತ್ರಿ ಕುಟುಂಬದ ಬಾಂಧವ್ಯ

ರತನ್‌ ಟಾಟಾ ಅವರ ಮಲ ಸೋದರ ನೋಯೆಲ್‌ ಟಾಟಾ ಅವರು ಸೈರಸ್‌ ಮಿಸ್ತ್ರಿ ಅವರ ಸೋದರಿಯನ್ನು ವಿವಾಹವಾದ ಬಳಿಕ, ಮಿಸ್ತ್ರಿ ಮತ್ತು ರತನ್‌ ಟಾಟಾ ಆಪ್ತರಾಗಿದ್ದರು. ಮಿಸ್ತ್ರಿ ಅವರ ಕುಟುಂಬವು ಟಾಟಾ ಸನ್ಸ್‌ನಲ್ಲಿ ಏಕೈಕ ಅತಿ ದೊಡ್ಡ ಷೇರುದಾರ ಎನ್ನಿಸಿತ್ತು. 18.4 % ಷೇರುಗಳನ್ನು ಮಿಸ್ತ್ರಿ ಕುಟುಂಬದ ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್ ಹೊಂದಿತ್ತು.‌ ಹೀಗಾಗಿ ರತನ್‌ ಟಾಟಾ ಸಹಜವಾಗಿ ತಮ್ಮ ಉತ್ತರಾಧಿಕಾರಿಯಾಗಿ ಸೈರಸ್‌ ಮಿಸ್ತ್ರಿಯವರನ್ನು ಆಯ್ಕೆ ಮಾಡಿದ್ದರು.

ಟಾಟಾ ಸಮೂಹದ ಅಧ್ಯಕ್ಷರಾದ ಬಳಿಕ ಬಿಕ್ಕಟ್ಟು, ಪದಚ್ಯುತಿ

2012ರ ಮಾರ್ಚ್‌ 16ರಂದು ಮಿಸ್ತ್ರಿ ಅವರು ಟಾಟಾ ಸನ್ಸ್‌ ಅದ್ಯಕ್ಷರಾಗಿ ನೇಮಕವಾದರು. ಆದರೆ ಮೂರು ವರ್ಷದೊಳಗೆ ಸಂಬಂಧ ಹುಳಿಯಾಯಿತು. 2013ರಲ್ಲಿ ರತನ್‌ ಟಾಟಾ ಅವರು ಸೈರಸ್‌ ಮಿಸ್ತ್ರಿಗೆ ಬರೆದ ಪತ್ರದಲ್ಲಿ, ಟಾಟಾ ಸಮೂಹದ ಕಂಪನಿಗಳು ಮಿಸ್ತ್ರಿ ಕುಟುಂಬದ ಕಂಪನಿಗಳ ಜತೆಗೆ ನಡೆಸುತ್ತಿರುವ ವ್ಯವಹಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ವ್ಯವಹಾರಗಳಲ್ಲಿ ಸೈರಸ್‌ ಮಿಸ್ತ್ರಿ ಅವರಿಗೆ 50% ಮಾಲಿಕತ್ವದ ಲಾಭ ಸಿಗುತ್ತಿತ್ತು. ಇದರ ಪರಿಣಾಮ ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗುತ್ತಿತ್ತು. ಜತೆಗೆ ಇತರ ವಿವಾದಗಳೂ ಜತೆಗೂಡಿತು. ಉದಾಹರಣೆಗೆ ಟಾಟಾ ಮೋಟಾರ್ಸ್‌ಗೆ ಬಂಡವಾಳ ಪಡೆಯಲು ಆಡಳಿತ ಮಂಡಳಿಯ ಅನುಮತಿಯ ಅಗತ್ಯ ಇದ್ದರೂ, ಪಡೆಯಲಿಲ್ಲ. ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಟಾಟಾ ಸಮೂಹ ಸ್ವತಂತ್ರ ಘಟಕಗಳಾಗಿ ವಿಭಜನೆಯಾಗಬಹುದು ಎಂಬ ಕಳವಳ ಟಾಟಾ ಮನೆತನದಲ್ಲಿ ಉಂಟಾಯಿತು. ಈ ವಿದ್ಯಮಾನಗಳು ಟಾಟಾ ಅವರ ಆಪ್ತರ ವಲಯದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು. ಅಂತಿಮವಾಗಿ ಟಾಟಾ ಸನ್ಸ್‌ ಈಗಿನ ಸ್ಥಿತಿಯಲ್ಲಿ ಉಳಿಯಬೇಕಿದ್ದರೆ ಸೈರಸ್‌ ಮಿಸ್ತ್ರಿಯವರನ್ನು ಕೈಬಿಡಬೇಕು ಎಂದು ತೀರ್ಮಾನವಾಯಿತು. ಷೇರುದಾರರ ಹಿತಾಸಕ್ತಿ ದೃಷ್ಟಿಯಿಂದ ಮಿಸ್ತ್ರಿ ನಿರ್ಗಮನ ಅವಶ್ಯಕ ಎಂದು ನಿರ್ಧರಿಸಲಾಯಿತು. ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಮಿಸ್ತ್ರಿಯವರಿಗೆ ತಿಳಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ತಮ್ಮ ಪದಚ್ಯುತಿಯನ್ನು ಸಹಿಸದ ಸೈರಸ್‌ ಮಿಸ್ತ್ರಿ, ಸುಮ್ಮನಿರುವುದಕ್ಕಿಂತ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಂಡರು. ಆಡಳಿತ ಮಂಡಳಿಯ 2016ರ ಅಕ್ಟೋಬರ್‌ 24ರ ಸಭೆಯಲ್ಲಿ 9ರಲ್ಲಿ ಇಬ್ಬರು ಗೈರು ಹಾಜರಾಗಿದ್ದರು. ಉಳಿದವರು ಮಿಸ್ತ್ರಿ ಪದಚ್ಯುತಿಗೆ ಮತ ಚಲಾಯಿಸಿದ್ದರು.

ಸೈರಸ್‌ ಮಿಸ್ತ್ರಿ- ಟಾಟಾ ಸಂಘರ್ಷ

ಈ ಪ್ರಕರಣ ಕಂಪನಿಗಳ ನ್ಯಾಯಾಧೀಕರಣಕ್ಕೆ ತಲುಪಿತು. (ಎನ್‌ಸಿಎಲ್‌ಟಿ) ಅದು ಮಿಸ್ತ್ರಿ ಪದಚ್ಯುತಿಯನ್ನು ಎತ್ತಿ ಹಿಡಿಯಿತು. ಬಳಿಕ ಎನ್‌ಸಿಎಲ್‌ಎಟಿ ( National company law appellate tribunal) ಎನ್‌ಸಿಎಲ್‌ಟಿಯ ನಿರ್ಧಾರವನ್ನು ಬದಿಗೊತ್ತಿತು. ಅಂತಿಮವಾಗಿ ಸುಪ್ರೀಂಕೋರ್ಟ್‌ನಲ್ಲಿ 2021ರ ಮಾರ್ಚ್ 26ರಂದು ಎನ್‌ಸಿಎಲ್‌ಟಿ ಪರ ತೀರ್ಪು ಪ್ರಕಟವಾಯಿತು. ಅಲ್ಲಿಗೆ ಸೈರಸ್‌ ಮಿಸ್ತ್ರಿಯವರ ಹೋರಾಟ ಅಂತ್ಯವಾಗಿತ್ತು.

ಟಾಟಾ ಗ್ರೂಪ್‌ ಇತ್ತೀಚೆಗೆ ಟಾಟಾ ಸನ್ಸ್‌ ಮತ್ತು ಟಾಟಾ ಟ್ರಸ್ಟ್‌ ಅಧ್ಯಕ್ಷ ಹುದ್ದೆಗೆ ಒಬ್ಬರೇ ನೇಮಕವಾಗುವುದನ್ನು ತಡೆಯಲು ಕಂಪನಿಯ ನಿಯಮಾವಳಿಗೆ (ಆರ್ಟಿಕಲ್ಸ್‌ ಆಫ್‌ ಅಸೋಸಿಯೇಶನ್‌ನ ಸೆಕ್ಷನ್‌ 118) ತಿದ್ದುಪಡಿ ತಂದಿತ್ತು. ಅದಕ್ಕೆ ಷೇರುದಾರರ ಅನುಮೋದನೆಯೂ ಲಭಿಸಿತ್ತು. ಭವಿಷ್ಯದಲ್ಲಿ ಯಾವುದೇ ವಿವಾದ ಮರುಕಳಿಸದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಟಾಟಾ ಮೋಟಾರ್ಸ್‌ಗೆ ಕಾಯಕಲ್ಪ ನೀಡಿದ್ದ ಮಿಸ್ತ್ರಿ

ಸೈರಸ್‌ ಮಿಸ್ತ್ರಿ ಅವರು ಟಾಟಾ ಸಮೂಹದ ಅಧ್ಯಕ್ಷರಾಗಿದ್ದಾಗ ಟಾಟಾ ಮೋಟಾರ್ಸ್‌ ಅನ್ನು ಪುನರುತ್ಥಾನಗೊಳಿಸಿದರು ಎಂದೇ ಹೇಳಲಾಗುತ್ತಿದೆ. ಆಗ ಷೇರುದಾರರ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಹಲವಾರು ಕಂಪನಿಗಳಲ್ಲಿ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಹಲವು ಯೋಜನೆಗಳನ್ನು ಯೋಜಿಸಿದ್ದರೂ, ಹಿರಿಯರ ಜತೆಗಿನ ಸಂಘರ್ಷದ ಪರಿಣಾಮ ಕಾರ್ಯಗತವಾಗಿರಲಿಲ್ಲ.

ಟಾಟಾ ಸಮೂಹದ ಅಧ್ಯಕ್ಷರಾಗಿ ಸೈರಸ್‌ ಮಿಸ್ತ್ರಿ ಅವರ ವೈಫಲ್ಯವೇನು ಎಂಬುದರ ಜತೆಗೆ ಟಾಟಾ ಸಮೂಹದ ಮೇಲಿನ ತಮ್ಮ ನಿಯಂತ್ರಣವನ್ನು ಗಳಿಸಲು ಅವರು ನಡೆಸಿದ ಹೋರಾಟಕ್ಕೂ ನೆನಪಿನಲ್ಲಿ ಉಳಿದುಬಿಡುತ್ತಾರೆ.

( ಲೇಖಕರು ವಿಸ್ತಾರ ನ್ಯೂಸ್‌ನ ಬಿಸಿನೆಸ್‌ & ಎಕಾನಮಿ ವಿಭಾಗದ ಕನ್ಸಲ್ಟಿಂಗ್‌ ಎಡಿಟರ್‌.)

ಇದನ್ನೂ ಓದಿ:Cyrus Mistry | ಟಾಟಾ ಸಂಸ್ಥೆ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ವಿಧಿವಶ, ಮೋದಿ ಸಂತಾಪ

Exit mobile version