ನವ ದೆಹಲಿ: ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ (Mobile Export) ಮೊಬೈಲ್ ಹ್ಯಾಂಡ್‌ಸೆಟ್ ರಫ್ತಾಗಿದೆ ಎಂದು ಶನಿವಾರ ಬಿಡುಗಡೆಯಾದ ಇಂಡಿಯಾ ಸೆಲ್ಯುಲಾರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್‌ನ (India Cellular and Electronics Association) ಅಂಕಿ ಅಂಶಗಳು ತಿಳಿಸಿವೆ.
ಕಳೆದ 2021-22ರ ಸಾಲಿನಲ್ಲಿ 46,980 ಕೋಟಿ ರೂ. ಮೌಲ್ಯದ ಮೊಬೈಲ್ ಹ್ಯಾಂಡ್‌ಸೆಟ್ ರಫ್ತಾಗಿತ್ತು. ಉತ್ಪಾದಕರು ಮೊಬೈಲ್ ಉತ್ಪಾದನೆ ಮತ್ತು ರಫ್ತನ್ನು ವೃದ್ಧಿಸಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಮೊಬೈಲ್ ಫೋನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳು (production linked incentive) ಫಲ ನೀಡುತ್ತಿವೆ. ಆ್ಯಪಲ್‌ನ ಉತ್ಪಾದನೆಯಲ್ಲಿ ಉಂಟಾಗಿರುವ ಹೆಚ್ಚಳ, ಸ್ಯಾಮ್‌ಸಂಗ್ ಸೇರಿದಂತೆ ಇತರ ಕಂಪನಿಗಳೂ ಹ್ಯಾಂಡ್ ಸೆಟ್ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತ 2027ರ ವೇಳೆಗೆ ಐಫೋನ್‌ನ 47% ಪಾಲನ್ನು ತಯಾರಿಸುವ ನಿರೀಕ್ಷೆ ಇದೆ.
ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲ ರಾಜ್ಯಗಳ ಐಟಿ ಸಚಿವರುಗಳ ಜತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ.
ಭಾರತವು ಮೊಬೈಲ್ ಫೋನ್‌ಗಳನ್ನು ಯುಎಇ, ಅಮೆರಿಕ, ನೆದರ್ಲೆಂಡ್, ಬ್ರಿಟನ್, ಇಟಲಿಗೆ ರಫ್ತು ಮಾಡುತ್ತಿದೆ ಎಂದು ಐಸಿಇಎ ವರದಿ ತಿಳಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ 97% ಸ್ಥಳೀಯವಾಗಿ ಉತ್ಪಾದನೆಯಾಗುತ್ತಿವೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ಈಗ ಭಾರತವಾಗಿದೆ.
2023ರಲ್ಲಿ ಭಾರತವು 1 ಲಕ್ಷ ಕೋಟಿ ಸ್ಮಾರ್ಟ್ ಫೋನ್‌ಗಳನ್ನು ರಫ್ತು ಮಾಡಿ ಹೊಸ ದಾಖಲೆ ಸೃಷ್ಟಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ಸಹಾಯಕ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸ್ಮಾರ್ಟ್‌ಫೋನ್ ಪೂರೈಕೆಯ ಸರಣಿ ಚೀನಾದಿಂದ ಸ್ಥಳಾಂತರವಾಗುವುದರ ಪ್ರಯೋಜನವನ್ನು ಭಾರತ ಮತ್ತು ವಿಯೆಟ್ನಾಂ ಪಡೆಯಲಿದೆ.