Site icon Vistara News

GOOD NEWS: ಶೀಘ್ರದಲ್ಲಿಯೇ ನಿಮ್ಮ ಹಕ್ಕಾಗಲಿದೆ , ಮೊಬೈಲ್, ಲ್ಯಾಪ್‌ಟಾಪ್‌, ಟಿ.ವಿ ರಿಪೇರಿ!

repair

ನವ ದೆಹಲಿ: ನೀವು ನಿಮ್ಮ ಬೆಲೆಬಾಳುವ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಅಥವಾ ಟಿ.ವಿ ಕೆಟ್ಟಾಗ, ಅದರ ಬಿಡಿಭಾಗಗಳ ದರಗಳನ್ನು ಕೇಳಿಯೇ ಶಾಕ್‌ ಆಗಿರಬಹುದು. ಅದನ್ನು ಬದಲಿಸಿ ದುರಸ್ತಿಪಡಿಸುವುದು ಹೇಗಪ್ಪಾ ಎಂದು ಚಿಂತಾಕ್ರಾಂತರಾಗಿರಬಹುದು. ಕೆಲವು ಮೊಬೈಲ್‌ಗಳನ್ನು ರಿಪೇರಿ ಮಾಡಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ದುಬಾರಿಯಾಗಿ ಜೇಬನ್ನು ಸುಡಬಹುದು. ಆಗ ಅನಿವಾರ್ಯವಾಗಿ ಹೊಸ ಮೊಬೈಲ್‌ ಖರೀದಿಸಬೇಕಾದ ಸಂದರ್ಭವೇ ಬರಬಹುದು. ಆದರೆ ಇನ್ನು ಮುಂದೆ ಇಂಥ ಬಿಕ್ಕಟ್ಟಿನಿಂದ ನಿಮ್ಮನ್ನು ಪಾರು ಮಾಡಿಸಲು ಶೀಘ್ರದಲ್ಲಿಯೇ ನಿಮ್ಮದಾಗಲಿದೆ “ರಿಪೇರಿ ಮಾಡುವ ಹಕ್ಕುʼ!

ನೂತನ ಹಾಗೂ ಕ್ರಾಂತಿಕಾರಕ “ರಿಪೇರಿ ಮಾಡುವ ಹಕ್ಕುʼ ಒಂದು ಸಲ ಜಾರಿಯಾದ ಬಳಿಕ, ಉತ್ಪಾದಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು ದುರುದ್ದೇಶಪೂರ್ವಕವಾಗಿ ರಿಪೇರಿಪಡಿಸಲು ಸಾಧ್ಯವಾಗದಂತೆ ನಿರ್ಮಿಸಲು ಸಾಧ್ಯವಾಗುವುದಿಲ್ಲ.

ಗ್ರಾಹಕ ವ್ಯವಹಾರಗಳ ಇಲಾಖೆಯು ಜುಲೈ ೧೩ರಂದು ಈ ಸಂಬಂಧ ನಡೆಸಿದ ಮೊದಲ ಸಭೆಯಲ್ಲಿ, ರಿಪೇರಿ ಮಾಡುವ ಹಕ್ಕು ಚೌಕಟ್ಟನ್ನು ಜಾರಿಗೆ ತರಬಹುದಾದ ವಲಯಗಳನ್ನು ಗುರುತಿಸಿದೆ. ಮೊಬೈಲ್‌ ಫೋನ್‌, ಟಾಬ್ಲೆಟ್‌, ಲ್ಯಾಪ್‌ಟಾಪ್‌, ಕನ್‌ಸ್ಯೂಮರ್‌ ಡ್ಯೂರೆಬಲ್ಸ್‌, ಆಟೊಮೊಬೈಲ್‌ ಬಿಡಿಭಾಗಗಳು ಈ ಗ್ರಾಹಕಸ್ನೇಹಿ ಹಕ್ಕಿನ ವ್ಯಾಪ್ತಿಗೆ ಬರಲಿದೆ. ರಿಪೇರಿ ಹಕ್ಕನ್ನು ಅಂತಿಮಪಡಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.

ಏನಿದು ರಿಪೇರಿ ಹಕ್ಕು?

ಗ್ರಾಹಕಸ್ನೇಹಿಯಾಗಿರುವ ರಿಪೇರಿ ಹಕ್ಕಿನ ಅಡಿಯಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳ ದುರಸ್ತಿಗೆ ಸಂಬಂಧಿಸಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ಉತ್ಪನ್ನವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ದುರಸ್ತಿ ಮತ್ತು ಮರುಬಳಕೆಗೆ ಸಂಬಂಧಿತ ವ್ಯವಸ್ಥೆಗಳ ಸಮಗ್ರ ವಿವರಗಳನ್ನು ಒದಗಿಸಬೇಕಾಗುತ್ತದೆ. ಹೀಗಾಗಿ ಗ್ರಾಹಕರು ತಾವು ಖರೀದಿಸುವ ಉತ್ಪನ್ನ ಕೆಟ್ಟು ಹೋದರೆ, ಮೂಲ ಉತ್ಪಾದಕರನ್ನೇ ಅವಲಂಬಿಸಬೇಕಾದ ಅಗತ್ಯ ಬರುವುದಿಲ್ಲ.

ಒಂದು ವಸ್ತುವನ್ನು ಗ್ರಾಹಕ ಖರೀದಿಸಿದ ಬಳಿಕ, ಅದರ ದುರಸ್ತಿ ಹಾಗೂ ಸೂಕ್ತ ದರದಲ್ಲಿ ಸುಧಾರಣೆಗೆ ತರುವ ಅವಕಾಶವನ್ನೂ ಹೊಂದಿರಬೇಕು. ಇದಕ್ಕೂ ಉತ್ಪಾದಕರನ್ನೇ ಅವಲಂಬಿಸಬೇಕಾಗಿ ಬರಕೂಡದು ಎಂಬ ಉದ್ದೇಶದಿಂದ ರಿಪೇರಿ ಹಕ್ಕನ್ನು ಜಾರಿಗೊಳಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ. ರಿಪೇರಿಗೆ ತಗಲುವ ಭಾರಿ ವೆಚ್ಚವನ್ನು ನಿಯಂತ್ರಿಸಲು ಕೂಡ ಈ ಹಕ್ಕು ಸಹಕಾರಿಯಾಗಲಿದೆ.

ವಿದೇಶಗಳಲ್ಲಿ ಇದೆ ರಿಪೇರಿ ಹಕ್ಕು

ಅಮೆರಿಕ, ಬ್ರಿಟನ್‌, ಐರೋಪ್ಯ ಒಕ್ಕೂಟ ಮುಂತಾದ ವಿದೇಶಗಳಲ್ಲೂ ರಿಪೇರಿ ಹಕ್ಕುಗಳನ್ನು ಜಾರಿಗೊಳಿಸಲಾಗಿದೆ. ಬ್ರಿಟನ್‌ನಲ್ಲಿ ಎಲೆಕ್ಟ್ರಾನಿಕ್‌ ಉತ್ಪಾದಕರು ಗ್ರಾಹಕರಿಗೆ ರಿಪೇರಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಕೊಡಬೇಕು ಅಥವಾ ತಾವೇ ರಿಪೇರಿ ವ್ಯವಸ್ಥೆಯನ್ನು ಒದಗಿಸಬೇಕು ಎಂಬ ನಿಯಮವಿದೆ. ಆಸ್ಟ್ರೇಲಿಯಾದಲ್ಲಿ ರಿಪೇರಿ ಕೆಫೆಗಳಿದ್ದು, ಅಲ್ಲಿ ತಂತ್ರಜ್ಞರು ತಮ್ಮ ಕೌಶಲಗಳನ್ನು ಉಚಿತವಾಗಿ ಹೇಳಿಕೊಡಬಹುದು.

ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆ

ಭಾರತದಲ್ಲಿ ರಿಪೇರಿ ಹಕ್ಕು ಜಾರಿಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯೂ ಇದೆ. ಮೋದಿಯವರು “ಪರಿಸರ ಸಂರಕ್ಷಣೆಗಾಗಿ ಜೀವನಶೈಲಿಯ ವಿಕಾಸʼ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಅಂದರೆ ವಸ್ತುಗಳ ಮರು ಬಳಕೆ ಮತ್ತು ದುರಸ್ತಿಯನ್ನು ಉತ್ತೇಜಿಸುವುದು. ಇದು ಪರಿಸರಸ್ನೇಹಿಯೂ ಹೌದು.

Exit mobile version