Site icon Vistara News

E20 Fuel : ಮೋದಿ ಬಿಡುಗಡೆಗೊಳಿಸಿದ E20 ಫ್ಯುಯೆಲ್‌, ಏನಿದು? ಯಾವೆಲ್ಲ ವಾಹನಗಳು ಬಳಸಬಹುದು?

F20 FUEL

F20 FUEL

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್‌ಗೆ 20% ಎಥೆನಾಲ್‌ ಮಿಶ್ರಣ (E20 Fuel) ಮಾಡಿ ತಯಾರಿಸುವ E20 ಫ್ಯುಯೆಲ್‌ಗೆ ಚಾಲನೆ ನೀಡಿದ್ದಾರೆ. ಭಾರತ ಇಂಧನ ಸಪ್ತಾಹದ (India Energy Week) ಭಾಗವಾಗಿ ಡಬಲ್‌ ಬರ್ನರ್‌ ಸೋಲಾರ್‌ ಒಲೆ ಹಾಗೂ E20 ಫ್ಯುಯೆಲ್‌ ಅನ್ನು ಲೋಕಾರ್ಪಣೆಗೊಳಿಸಿದರು. E20 ಅಥವಾ flex-fuel ವಾಹನಗಳು ಪರಿಸರ ಮಾಲಿನ್ಯವನ್ನು ನಿಯಂತ್ರಿಸುತ್ತವೆ. ಹಂತಗಳಲ್ಲಿ E20 ಫ್ಯುಯೆಲ್‌ ಅನ್ನು ವ್ಯಾಪಕವಾಗಿ ಬಿಡುಗಡೆಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಏನಿದು E20 ಫ್ಯುಯೆಲ್?

E20 ಪದದಲ್ಲಿ 20 ಎಂಬುದು ಪೆಟ್ರೋಲ್‌ನಲ್ಲಿ ಎಥೆನಾಲ್‌ನ ಶೇಕಡಾವಾರು ಮಿಶ್ರಣದ ಪ್ರಮಾಣವನ್ನು ತೋರಿಸುತ್ತದೆ. ಉಳಿದ 80% ಪಾಲು ಪೆಟ್ರೋಲ್‌ ಆಗಿರಲಿದೆ. ಭಾರತ ಪ್ರಸ್ತುತ 10% ಎಥೆನಾಲ್‌ ಮಿಶ್ರಣ ಮಾಡುತ್ತಿದೆ. ಜೈವಿಕ ತ್ಯಾಜ್ಯಗಳಿಂದ ಇದನ್ನು ತಯಾರಿಸುವುದರಿಂದ ಇದಕ್ಕೆ ಕಚ್ಚಾ ತೈಲ ಬೇಕಾಗುವುದಿಲ್ಲ. ಜೋಳ ಮತ್ತು ಕಬ್ಬಿನ ಬೆಳೆಯಿಂದ ಎಥೆನಾಲ್‌ ಅನ್ನು ಮುಖ್ಯವಾಗಿ ಉತ್ಪಾದಿಸಲಾಗುತ್ತದೆ. ಭಾರತ ಈಗಾಗಲೇ ಆಹಾರ ಧಾನ್ಯ ಹಾಗೂ ಕಬ್ಬನ್ನು ಬೆಳೆಯುತ್ತಿದೆ. ಹೀಗಾಗಿ ಎಥೆನಾಲ್‌ ತಯಾರಿಕೆಗೆ ಅವಕಾಶಗಳೂ ವ್ಯಾಪಕವಾಗಿದೆ.

E20 ಫ್ಯುಯೆಲ್‌ನ ಪ್ರಯೋಜನವೇನು?

E20 ಬಳಕೆಯಿಂದ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು. ಭಾರತ ತನ್ನ ಬೇಡಿಕೆಯಲ್ಲಿ 85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ 20% ಎಥೆನಾಲ್‌ ಮಿಶ್ರಣದಿಂದ ದೇಶಕ್ಕೆ ಗಣನೀಯ ಉಳಿತಾಯ ಸಾಧ್ಯ. ಒರಿಜಿನಲ್‌ ಎಕ್ವಿಪ್‌ಮೆಂಟ್‌ ಮಾನ್ಯುಫಾಕ್ಚರಿಂಗ್‌ ಪೂರೈಕೆ ವಿಭಾಗದಲ್ಲಿ, ಸರ್ವೀಸ್‌ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಸರ್ಕಾರದ ನಿರೀಕ್ಷೆ ಪರಕಾರ ರೈತರ ಆದಾಯ ವೃದ್ಧಿಗೆ ಇದು ಸಹಕರಿಸಲಿದೆ.

ಯಾವೆಲ್ಲ ಕಾರುಗಳಲ್ಲಿ E20 ಬಳಸಬಹುದು?

ಭಾರತದಲ್ಲಿ ಹುಂಡೈ ಮೋಟಾರ್‌ನ ಕ್ರೆಟಾ, ವೆನ್ಯೂ, ಆಲ್ಕಜಾರ್‌ ಎಸ್‌ಯುವಿಗಳು E20 ಬಳಸುವ ಸಾಮರ್ಥ್ಯವನ್ನು ಹೊಂದಿವೆ. ಟಾಟಾ ಮೋಟಾರ್ಸ್‌ 4 ಮೀಟರ್‌ಗಿಂತ ಉದ್ದ ಇರದ ವಾಹನಗಳನ್ನು E20 ಗೆ ಹೊಂದಿಕೆಯಾಗುವಂತೆ ತಯಾರಿಸಲು ಆರಂಭಿಸಿದೆ. ಮಹೀಂದ್ರಾ, ಮಾರುತಿ ಸುಜುಕಿ, ಕಿಯಾ ಮತ್ತು ಇತರ ಆಟೊಮೊಬೈಲ್‌ ಕಂಪನಿಗಳೂ E20 ಗೆ ಪೂರಕವಾಗಿ ವಾಹನಗಳನ್ನು ತಯಾರಿಸಲು ಸಜ್ಜಾಗಿವೆ.

ಏಪ್ರಿಲ್‌ 1ರಿಂದ ವಿತರಣೆ ಆರಂಭ

2022ರ ಏಪ್ರಿಲ್‌ 1ರಿಂದ E20 ತೈಲ ವಿತರಣೆ ಆರಂಭವಾಗಲಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಇದಕ್ಕಾಗಿ ಕಾರಿನ ಎಂಜಿನ್‌ ಬದಲಿಸಬೇಕಾದ ಅಗತ್ಯ ಇರುವುದಿಲ್ಲ. ಆದರೆ ಕೆಲವೊಂದು ತಾಂತ್ರಿಕ ಮಾರ್ಪಾಟುಗಳನ್ನು ಮಾಡಬೇಕಾಗುತ್ತದೆ. ಆರಂಭದಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಗಲಿದೆ. ಬಳಿಕ ದೇಶವ್ಯಾಪಿ ಸಿಗಲಿದೆ. ಪೆಟ್ರೋಲ್‌ಗೆ 10% ಎಥೆನಾಲ್‌ ಮಿಶ್ರಣದಿಂದ ಭಾರತ 53,894 ಕೋಟಿ ರೂ. ವಿದೇಶಿ ವಿನಿಮಯವನ್ನು ಉಳಿತಾಯ ಮಾಡಿತ್ತು. ಮುಂದಿನ ಎರಡು ದಶಕಗಳಲ್ಲಿ ಭಾರತದಲ್ಲಿ ಇಂಧನಕ್ಕೆ ಭಾರಿ ಬೇಡಿಕೆ ಸಿಗಲಿದೆ. ೨೦೨೫ರ ಗಡುವಿನೊಳಗೆ ಎಲ್ಲ ಕಾರುಗಳೂ E20 ಫ್ಯುಯೆಲ್‌ ಅನ್ನು ಬಳಸಲು ಯೋಗ್ಯವಾಗಿರಬೇಕಾಗಿರುತ್ತದೆ.

ಭಾರತ 2021-22ರಲ್ಲಿ 120.7 ಶತಕೋಟಿ ಡಾಲರ್‌ (9.77 ಲಕ್ಷ ಕೋಟಿ ರೂ.) ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. 2022ರಲ್ಲಿ 440 ಕೋಟಿ ರೂ. ಎಥೆನಾಲ್‌ ಅನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡಲಾಗಿತ್ತು. ಸಾರ್ವಜನಿಕ ವಲಯದ ತೈಲ ಕಂಪನಿಗಳು 2023ರ ಜನವರಿ 30 ತನಕ 80.09 ಕೋಟಿ ಲೀಟರ್‌ ಎಥೆನಾಲ್‌ ಅನ್ನು ಖರೀದಿಸಿತ್ತು.

Exit mobile version