ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಮೇ 26ರಂದು ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 8 ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇನಲ್ಲಿ ನೋಂದಾಯಿತ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 3 ಪಟ್ಟು ಹೆಚ್ಚಳ ಆಗಿದೆ. 1,450 ಷೇರುಗಳ ಮೌಲ್ಯ ಇಮ್ಮಡಿಗೂ ಹೆಚ್ಚು ವೃದ್ಧಿಸಿದೆ.
ಮೋದಿ ಸರಕಾರದ ಆರ್ಥಿಕ ಸುಧಾಣಾ ಕ್ರಮಗಳು, ಮಾರುಕಟ್ಟೆಯ ಅಚ್ಚುಕಟ್ಟಾದ ನಿಯಂತ್ರಕ ವ್ಯವಸ್ಥೆ ಸಕಾರಾತ್ಮಕ ಪ್ರಭಾವ ಬೀರಿದೆ. ಕಾರ್ಪೊರೇಟ್ ಕಂಪನಿಗಳ ಆದಾಯ ವೃದ್ಧಿಗೆ ಸಹಕರಿಸಿದೆ. ಇದು ಅವುಗಳ ಷೇರುಗಳು ಲಾಭ ಗಳಿಸಲೂ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬಿಎಸ್ಇ ಮಾರುಕಟ್ಟೆ ಬಂಡವಾಳ ಮೌಲ್ಯ 8 ವರ್ಷಗಳ ಹಿಂದೆ 85.20 ಲಕ್ಷ ಕೋಟಿ ರೂ.ಗಳಾಗಿತ್ತು. ಈಗ 253.79 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2.98 ಪಟ್ಟು ವೃದ್ಧಿಸಿದೆ. ಈ ಅವಧಿಯಲ್ಲಿ 220 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಐಪಿಒ ಮೂಲಕ 3.2 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳವನ್ನು ಪಡೆದಿವೆ.
1,450 ಷೇರುಗಳಲ್ಲಿ ಹೂಡಿಕೆದಾರರ ಲಾಭ ಡಬಲ್
ಅಂಕಿ ಅಂಶಗಳ ಪ್ರಕಾರ ಬಿಎಸ್‌ಇಯಲ್ಲಿ ನೋಂದಣಿಯಾಗಿರುವ 1,450 ಷೇರುಗಳಲ್ಲಿ ಹೂಡಿಕೆದಾರರಿಗೆ ಲಾಭ ಇಮ್ಮಡಿಯಾಗಿದೆ.
ಬಜಾಜ್ ಫೈನಾನ್ಸ್ ಮೌಲ್ಯ 34 ಪಟ್ಟು ಹೆಚ್ಚಳ
ಮಿಡ್ ಕ್ಯಾಪ್ ಮೌಲ್ಯದ ಕಂಪನಿಗಳ ಪೈಕಿ ಬಜಾಜ್ ಫೈನಾನ್ಸ್‌ನ ಮಾರುಕಟ್ಟೆ ಮೌಲ್ಯ ಕಳೆದ 8 ವರ್ಷಗಳಲ್ಲಿ 3,309 ಪರ್ಸೆಂಟ್ ಹೆಚ್ಚಳವಾಗಿದೆ. ಅಂದರೆ 10,135 ಕೋಟಿ ರೂ.ಗಳಿಂದ 3,45,548 ಕೋಟಿ ರೂ.ಗೆ ವೃದ್ಧಿಸಿದೆ. ಬಜಾಜ್ ಫಿನ್ ಸರ್ವ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ 14 ಪಟ್ಟು ಹೆಚ್ಚಳವಾಗಿದೆ. 14,171 ಕೋಟಿ ರೂ.ಗಳಿಂದ 1,97,468 ಕೋಟಿ ರೂ.ಗೆ ಏರಿಕೆಯಾಗಿದೆ.
ಮೈಂಡ್ ಟ್ರೀ (7.34 ಪಟ್ಟು), ಬ್ರಿಟಾನಿಯಾ ಇಂಡಸ್ಟ್ರೀಸ್ ( 7.71ಪಟ್ಟು), ಪೇಜ್ ಇಂಡಸ್ಟ್ರೀಸ್ (7.34 ಪಟ್ಟು), ಬರ್ಜರ್ ಪೇಂಟ್ಸ್ ( 7.24ಪಟ್ಟು), ಬಾಲಕೃಷ್ಣ ಇಂಡಸ್ಟ್ರೀಸ್ (7.22 ಪಟ್ಟು), ಟಾಟಾ ಕನ್‌ಸ್ಯೂಮರ್ ಪ್ರಾಡಕ್ಟ್ಸ್ (6.87 ಪಟ್ಟು) ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ವೃದ್ಧಿಸಿವೆ.
ಇದನ್ನೂ ಓದಿ: Bulls Return: ಗೂಳಿಯ ಅಬ್ಬರಕ್ಕೆ ಶುಭ ಶುಕ್ರವಾರ, ಸೆನ್ಸೆಕ್ಸ್ 1,500 ಅಂಕ ಜಿಗಿತ
ಟೈಟನ್, ಅದಾನಿ ಪವರ್ ಮೌಲ್ಯ 5 ಪಟ್ಟು ಏರಿಕೆ
ಟೈಟನ್ ಇಂಡಸ್ಟ್ರೀಸ್, ಅದಾನಿ ಪವರ್, ಹ್ಯಾವೆಲ್ಸ್ ಇಂಡಿಯಾ, ಪಿಡಿಲೈಟ್ ಇಂಡಸ್ಟ್ರೀಸ್, ಮುತ್ತೂಟ್ ಫೈನಾನ್ಸ್, ಇನ್ಫೋ ಎಡ್ಜ್, ಏಷ್ಯನ್ ಪೇಂಟ್ಸ್, ಎಂಪಸಿಸ್, ಟಿವಿಎಸ್ ಮೋಟಾರ್, ಕೋಟಕ್ ಮಹೀಂದ್ರಾ ಬ್ಯಾಂಕ್, ವೋಲ್ಟಾಸ್ ಕಂಪನಿಯ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಕಳೆದ 8 ವರ್ಷಗಳಲ್ಲಿ 5 ಪಟ್ಟು ಹೆಚ್ಚಳವಾಗಿದೆ.
ಷೇರು ಪೇಟೆಯಲ್ಲಿ ಮೋದಿ ಮ್ಯಾಜಿಕ್ ಗೆ ಕಾರಣ
- ಮೋದಿ ಸರಕಾರ ತೆಗೆದುಕೊಂಡಿರುವ ಹಲವಾರು ಆರ್ಥಿಕ ಸುಧಾರಣೆಯ ಕ್ರಮಗಳು ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ.
- ನೋಟು ಅಮಾನ್ಯತೆ, ಜಿಎಸ್ಟಿ, ಅಫರ್ಡಬಲ್ ಹೌಸಿಂಗ್, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಗತಿ ಶಕ್ತಿ ಯೋಜನೆ, ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾ ಇತ್ಯಾದಿ ಯೋಜನೆಗಳು ಷೇರು ಹೂಡಿಕೆದಾರರನ್ನು ಉತ್ತೇಜಿಸಿವೆ.
- ಮೋದಿ ನಾಯಕತ್ವದ ಭಾಜಪ ಚುನಾವಣೆಗಳಲ್ಲಿ ಗೆದ್ದಾಗ ಷೇರು ಪೇಟೆ ಚೇತರಿಸಿದೆ.
8 ವರ್ಷಗಳಲ್ಲಿ ಸೆನ್ಸೆಕ್ಸ್ ಡಬಲ್ ಆಗಿದ್ದು ಹೀಗೆ
2014 ಮೇ 16 | 25,000 |
2017 ಅ.25 | 33,000 |
2018 ಆ.9 | 38,000 |
2019 ಏ.1 | 39,000 |
2020 ಡಿ.9 | 46,000 |
2021 ಸೆ.24 | 60,000 |
2022 ಮೇ 25 | 53,749 |