ಕೇಶವ ಪ್ರಸಾದ್ ಬಿ. ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯ ಪರಿಣಾಮ ಭಾರತವು ಮುಂಬರುವ 2026 ಮತ್ತು 2030ರ ಅವಧಿಯಲ್ಲಿ ನಿರ್ಣಾಯಕ ಶಸ್ತ್ರಾಸ್ತ್ರಗಳಿಗೆ ಕೊರತೆ ಎದುರಿಸಲಿದೆ. ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳಿಗೆ ತೀವ್ರ ಕೊರತೆ ಉಂಟಾಗಲಿದೆ. ವಾಯುಪಡೆ ಮತ್ತು ನೌಕಾಪಡೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಆಮದು ಕಷ್ಟವಾಗಬಹುದು. ಚೀನಾ ಮತ್ತು ಪಾಕಿಸ್ತಾನ ಮೂಲದ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಸವಾಲು ಎದುರಾಗಬಹುದು ಎಂದು ಬ್ಲೂಮ್‌ಬರ್ಗ್ ವರದಿ ಇದೀಗ ಚರ್ಚೆಗೀಡಾಗಿದೆ. (Defence industry) ಹಾಗಾದರೆ ವಾಸ್ತವವೇನು? ಇಲ್ಲಿದೆ ವಿವರ.
ಬ್ಲೂಮ್ ಬರ್ಗ್ ವರದಿಯ ಮುಖ್ಯಾಂಶಗಳು
- ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ವಲಯದ ಸಾಧನಗಳನ್ನು ಭಾರತದಲ್ಲಿ ಉತ್ಪಾದಿಸಲು ಉತ್ತೇಜಿಸುತ್ತಿದ್ದಾರೆ. ಆದರೆ ಇದರ ಪರಿಣಾಮ ಶಸ್ತ್ರಾಸ್ತ್ರಗಳ ಆಮದು ಕೊರತೆ ಆಗಲಿದ್ದು, ಗಡಿಯಲ್ಲಿ ಚೀನಾ, ಪಾಕಿಸ್ತಾನದ ಬೆದರಿಕೆಗಳನ್ನು ಎದುರಿಸಲು ಕಷ್ಟವಾಗಬಹುದು.
- ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗೆ ಕೆಲವು ಹಳೆ ಆಯುಧಗಳನ್ನು ಬದಲಿಸಲು ಹಾಗೂ ಹೊಸತನ್ನು ಖರೀದಿಸಲು ಕಷ್ಟವಾಗಬಹುದು. 2026ರ ವೇಳೆಗೆ ಹೆಲಿಕಾಪ್ಟರ್ ಹಾಗೂ 2030ರ ವೇಳೆಗೆ ನೂರಾರು ಯುದ್ಧ ವಿಮಾನಗಳ ಕೊರತೆ ಆಗಬಹುದು.
- 2014ರಲ್ಲಿ ಮೋದಿಯವರು ಮೇಕ್ ಇನ್ ಇಂಡಿಯಾ ನೀತಿಯನ್ನು ಘೋಷಿಸಿದರು. ಮೊಬೈಲ್ನಿಂದ ಯುದ್ಧ ವಿಮಾನದ ತನಕ ಎಲ್ಲವನ್ನೂ ಇಲ್ಲಿಯೇ ಉತ್ಪಾದಿಸಿ ಆಮದು ವೆಚ್ಚ ಉಳಿಸಲು ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಯತ್ನಿಸಿದರು. ಆದರೆ ಎಂಟು ವರ್ಷಗಳ ಬಳಿಕವೂ ಭಾರತ ಜಗತ್ತಿನ ಅತಿ ದೊಡ್ಡ ಮಿಲಿಟರಿ ಹಾರ್ಡ್ವೇರ್ ಆಮದುದಾರ ರಾಷ್ಟ್ರ.
- ಸರ್ಕಾರ ಮಿಲಿಟರಿ ಖರೀದಿಯಲ್ಲಿ 30ರಿಂದ 60 ಪರ್ಸೆಂಟ್ ಸ್ವದೇಶಿ ನಿರ್ಮಿತ ಸಾಧನ ಕಡ್ಡಾಯವಾಗಿ ಇರಬೇಕು ಎಂದು ನಿಯಮ ರೂಪಿಸಿದೆ. ಈ ಹಿಂದೆ ಇಂಥ ನಿಯಮ ಇದ್ದಿರಲಿಲ್ಲ.
- ಶಸ್ತ್ರಾಸ್ತ್ರಗಳ ಕೊರತೆಯಿಂದ ವಾಯುಪಡೆ ದುರ್ಬಲವಾದರೆ ಹಿಮಾಲಯದ ಗಡಿಯಲ್ಲಿ ಚೀನಾದ ಬೆದರಿಕೆ ಎದುರಿಸುವುದು ಕಷ್ಟಕರವಾಗಬಹುದು.
- ದೇಶ ಇನ್ನೂ ಡೀಸೆಲ್ ಎಲೆಕ್ಟ್ರಿಕ್ ಸಬ್ಮೆರೀನ್ಸ್ ಮತ್ತು ಟ್ವಿನ್ ಎಂಜಿನ್ ಯುದ್ಧ ವಿಮಾನಗಳನ್ನು ತಯಾರಿಸಿಲ್ಲ.
- ಯುದ್ಧ ವಿಮಾನಗಳನ್ನು ವಿದೇಶಿ ಉತ್ಪಾದಕರಿಂದ ಖರೀದಿಸುವ ಯೋಜನೆಗಳು ಮಂದಗತಿಯಲ್ಲಿವೆ. ಏಕೆಂದರೆ ಮೋದಿ ಸರ್ಕಾರ ಸ್ಥಳೀಯವಾಗಿ ನಿರ್ಮಿಸಿದ ಸಿಂಗಲ್ ಎಂಜಿನ್ ಯುದ್ಧ ವಿಮಾನಗಳನ್ನು ಕೊಳ್ಳಲು ಬಯಸಿದೆ. ಆದರೆ ಅವುಗಳಿಗೆ ಕೊರತೆ ಇದೆ. ಅವಳಿ ಎಂಜಿನ್ಗಳ ಯುದ್ಧ ವಿಮಾನ ಇನ್ನೂ ಉತ್ಪಾದನೆಯಾಗುತ್ತಿಲ್ಲ.
ಹಾಗಾದರೆ ವಾಸ್ತವವೇನು?
ಸಶಸ್ತ್ರ ಪಡೆಗಳಿಗೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ತಯಾರಿಸುವ ಹಾಗೂ ರಫ್ತನ್ನೂ ಮಾಡುವ ಮಹತ್ವದ ಬದಲಾವಣೆಗೆ ಕಳೆದ ಎಂಟು ವರ್ಷಗಳಲ್ಲಿ ಮುನ್ನುಡಿ ಬರೆಯಲಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿಶ್ವದರ್ಜೆಯ ಶಸ್ತ್ರಾಸ್ತ್ರಗಳನ್ನು ಕಡಿಮೆ ದರದಲ್ಲಿ ತಯಾರಿಸಿ ರಫ್ತು ಮಾಡುವ ದಿಸೆಯಲ್ಲಿ ಭಾರತ ಇದೀಗ ದಾಪುಗಾಲಿಡುತ್ತಿರುವುದು ಗಮನಾರ್ಹ.
ಈಗಾಗಲೇ ಬಾಹ್ಯಾಕಾಶ ಉದ್ದಿಮೆಯಲ್ಲಿ ಇಸ್ರೋ ಸಾರಥ್ಯದಲ್ಲಿ ಭಾರತ ಇಡೀ ಜಗತ್ತೇ ಬೆರಗಾಗುವಂತೆ ಬೆಳೆದಿದೆ. ವಿದೇಶಿ ಉಪಗ್ರಹಗಳನ್ನು ಭಾರತ ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸುತ್ತಿದೆ. ಅದೂ ಕಡಿಮೆ ಖರ್ಚಿನಲ್ಲಿ. 2022ರ ಜೂನ್ ವೇಳೆಗೆ ಭಾರತ 36 ದೇಶಗಳ 346 ಉಪಗ್ರಹಗಳನ್ನು ( satellites) ಉಡಾವಣೆಗೊಳಿಸಿದೆ. 2017ರ ಫೆಬ್ರವರಿ 15 ಕ್ಕೆ 104 ಉಪಗ್ರಹಗಳನ್ನು ಒಂದೇ ಸಲ ಉಡಾವಣೆಗೊಳಿಸಿ ತನ್ನ ಸಾಮರ್ಥ್ಯವನ್ನು ಇಸ್ರೋ ಜಗತ್ತಿಗೆ ಸಾಬೀತುಪಡಿಸಿತ್ತು. ಈ ಮೂಲಕ ಭಾರತ ಆದಾಯವನ್ನೂ ಗಳಿಸುತ್ತಿದೆ. ಈಗ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲೂ ಸ್ವಾವಲಂಬಿಯಾಗುವ ದೃಷ್ಟಿಯಿಂದ ಮುನ್ನಡಿ ಇಟ್ಟಿದೆ.
ಈ ನಿಟ್ಟಿನಲ್ಲಿ ಭಾರತ ಆಟೊಮ್ಯಾಟಿಕ್ ರೂಟ್‌ನಲ್ಲಿ ರಕ್ಷಣಾ ಉತ್ಪಾದನೆಗೆ 74% ವಿದೇಶಿ ನೇರ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಿದೆ. ಕಳೆದ ವರ್ಷ 780 ಸಬ್ ಸಿಸ್ಟಮ್‌ಗಳ ಬಿಡಿ ಭಾಗಗಳ ಆಮದನ್ನು ನಿಷೇಧಿಸಿತ್ತು. ಈ ಮೂಲಕ ಸ್ವದೇಶಿ ಉತ್ಪಾದನೆಗೆ ವಿಫುಲ ಉತ್ತೇಜನ ನೀಡಿತ್ತು.
ಭಾರತಕ್ಕೆ ೧.೭೫ಲಕ್ಷ ಕೋಟಿ ರೂ. ಶಸ್ತ್ರಾಸ್ತ್ರ ಉತ್ಪಾದನೆಯ ಗುರಿ: ಒಂದು ಕಾಲದಲ್ಲಿ ಸಣ್ಣ ಪುಟ್ಟ ಆಯುಧ, ಮದ್ದುಗುಂಡುಗಳಿಗೂ ರಷ್ಯಾದ ಮೇಲೆ ಭಾರಿ ಅವಲಂಬಿಸಿದ್ದ ಭಾರತ ಈಗ ಸ್ವತಃ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದೆ. 2021-22ರಲ್ಲಿ ಭಾರತ 12,815 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿತ್ತು. 2022ರ ಏಪ್ರಿಲ್-ಜೂನ್‌ನಲ್ಲಿ 1,387 ಕೋಟಿ ರೂ. ರಫ್ತಾಗಿತ್ತು. ಈ ಅಂಕಿ ಅಂಶಗಳನ್ನು ರಕ್ಷಣಾ ಇಲಾಖೆಯ ಸಹಾಯಕ ಸಚಿವ ಅಜಯ್ ಭಟ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತ 2025ರ ವೇಳೆಗೆ 1.75 ಲಕ್ಷ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಹಾಗೂ 35,000 ಕೋಟಿ ರೂ. ರಫ್ತು ಮಾಡುವ ಗುರಿಯನ್ನೂ ಹೊಂದಿದೆ. ಮೊದಲ ಹಂತದಲ್ಲಿ ರಕ್ಷಣಾ ಪಡೆಗಳಲ್ಲಿ ಬಳಕೆಯಾಗುವ 2,851 ವಸ್ತುಗಳ ಸ್ವದೇಶಿ ಉತ್ಪಾದನೆಗೆ ಪಟ್ಟಿ ಸಿದ್ಧಪಡಿಸಿದೆ. ಈ ಪೈಕಿ 2,500 ವಸ್ತುಗಳು ಈಗಾಗಲೇ ಭಾರತದಲ್ಲಿ ತಯಾರಾಗುತ್ತಿವೆ.
ಭಾರತದ ಶಸ್ತ್ರಾಸ್ತ್ರಗಳ ರಫ್ತು ಮೌಲ್ಯ
2021-22 | 12,815 ಕೋಟಿ ರೂ. |
2020-21 | 8,434 ಕೋಟಿ ರೂ. |
2019-20 | 9,115 ಕೋಟಿ ರೂ. |
2015-16 | 2,059 ಕೋಟಿ ರೂ. |
ಖಾಸಗಿ ಉದ್ದಿಮೆಗಳಿಗೆ ತೆರೆದ ಬಾಗಿಲು
ಇದುವರೆಗೂ ಭಾರತದಲ್ಲಿ ರಕ್ಷಣಾ ವಲಯದ ಉತ್ಪಾದನೆ ಸಾರ್ವಜನಿಕ ಉದ್ದಿಮೆಗಳನ್ನು ಅವಲಂಬಿಸಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಖಾಸಗಿ ವಲಯಕ್ಕ ಬಾಗಿಲು ತೆರೆಯಲಾಗಿದೆ. ಇದರ ಪರಿಣಾಮ ಕಳೆದ ಐದು ವರ್ಷಗಳಲ್ಲಿ ಗಳಭಾರತದ ಶಸ್ತ್ರಾಸ್ತ್ರಗಳ ರಫ್ತು ಎಂಟು ಪಟ್ಟು ವೃದ್ಧಿಸಿದೆ. ಯುದ್ಧ ಟ್ಯಾಂಕರ್‌ಗಳು, ಹೆಲಿಕಾಪ್ಟರ್, ಲಘು ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಸಾರ್ವಜನಿಕ ಉದ್ದಿಮೆಗಳೇ ಪ್ರಾಬಲ್ಯ ಹೊಂದಿದ್ದವು. ಆದರೆ 2021-22ರ ವೇಳೆಗೆ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಖಾಸಗಿ ಉದ್ದಿಮೆಗಳ ಪಾಲು 70%ಕ್ಕೆ ಏರಿಕೆಯಾಗಿರುವುದು ಗಮನಾರ್ಹ.
ಗ್ಲೋಬಲ್ ಸಪ್ಲೈ ಚೈನ್‌ನಲ್ಲಿ ಭಾರತದ ಹೆಜ್ಜೆ ಗುರುತು: ಮೊಟ್ಟ ಮೊದಲ ಬಾರಿಗೆ ಭಾರತದ ರಕ್ಷಣಾ ಉದ್ದಿಮೆ ಗ್ಲೋಬಲ್ ಸಪ್ಲೈ ಚೈನ್‌ನಲ್ಲಿ ಗಮನಾರ್ಹವಾಗಿ ಕಾಣಿಸಿಕೊಂಡಿದೆ. ಅಂದರೆ ಶಸ್ತ್ರಾಸ್ತ್ರಗಳ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಜಗತ್ತಿನಾದ್ಯಂತ ಒರಿಜಿನಲ್ ಎಕ್ವಿಪ್‌ಮೆಂಟ್ ಉತ್ಪಾದಕರಿಗೆ ( Original Equipment Manufacturers) ಬಿಡಿ ಭಾಗಗಳನ್ನು ಒದಗಿಸುತ್ತಿದೆ. ಒಇಎಂ ಎಂದರೆ ಮತ್ತೊಂದು ಕಂಪನಿಯ ಉತ್ಪನ್ನಕ್ಕೆ ಬೇಕಾಗುವ ಮೂಲ ಸಿಸ್ಟಮ್‌ಗಳನ್ನು ಒದಗಿಸುವವರು. ಉತ್ಪಾದನೆ ಮಾತ್ರವಲ್ಲದೆ, ರಕ್ಷಣಾ ಸಂಶೋಧನೆಯಲ್ಲೂ ಭಾರತ ಮುಂದುವರಿಯುತ್ತಿದೆ. ಡಿಆರ್‌ಡಿಒ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಕೂಡ ಡಿಆರ್‌ಡಿಒ ಪ್ರೋಗ್ರಾಮ್‌ಗಳಲ್ಲಿ ಆಸಕ್ತಿ ವಹಿಸಿವೆ.
ಭಾರತ ಇತ್ತೀಚೆಗೆ ಸ್ವದೇಶದಲ್ಲಿಯೇ ನಿರ್ಮಾಣವಾಗಿರುವ ಮೊಟ್ಟ ಮೊದಲ ಏರ್ ಕ್ರಾಫ್ಟ್ ಕ್ಯಾರಿಯರ್ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ನಿರ್ಮಿಸಿದೆ. 20,000 ಕೋಟಿ ರೂ. ವೆಚ್ಚದಲ್ಲಿ 45 ಸಾವಿರ ಟನ್ ತೂಕದ ಭವ್ಯ ಯುದ್ಧ ನೌಕೆಯನ್ನು ನಿರ್ಮಿಸಿರುವುದು ಸಾಧಾರಣ ಮಾತಲ್ಲ. ಇದರೊಂದಿಗೆ ಸ್ವದೇಶಿ, ದೈತ್ಯ ಮತ್ತು ಸಂಕೀರ್ಣವಾದ ಏರ್ ಕ್ರಾಫ್ಟ್ ಕ್ಯಾರಿಯರ್ ಸಮರ ನೌಕೆಗಳನ್ನು ತಯಾರಿಸುವ ಸಾಮರ್ಥ್ಯ ಇರುವ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ ಮತ್ತು ಜಪಾನ್ ಸಾಲಿಗೆ ಭಾರತ ಕೂಡ ಸೇರಿದೆ.
ಉತ್ಪಾದನೆಯಲ್ಲಿ ಸ್ವಾವಲಂಬನೆ ಏಕೆ ಅಗತ್ಯ?
ಭಾರತ ಮೊದಲಿನಿಂದಲೂ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಹಿಂದುಳಿದಿತ್ತು. ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಸರ್ಕಾರಗಳ ನೀತಿಗಳೂ ಅದಕ್ಕೆ ಪೂರಕವಾಗಿ ಇದ್ದಿರಲಿಲ್ಲ. ಅದಕ್ಕೆ ಮಹತ್ವ ನೀಡಿರಲಿಲ್ಲ. ಇದರ ಪರಿಣಾಮ ನಂತರದ ದಶಕಗಳಲ್ಲಿ ಚೀನಾ, ಪಾಕಿಸ್ತಾನ ಕಡೆಯಿಂದ ಗಡಿಯಲ್ಲಿ ಬೆದರಿಕೆಯನ್ನು ಹತ್ತಿಕ್ಕಲು ಬೇಕಾಗುವ ಶಸ್ತ್ರಾಸ್ತ್ರಗಳಿಗೆ ಆಮದನ್ನು ಅವಲಂಬಿಸುವಂತಾಯಿತು. ಈಗ ಜಗತ್ತಿನಲ್ಲಿ ಭಾರತ, ಸೌದಿ ಅರೇಬಿಯಾ, ಈಜಿಪ್ತ್, ಆಸ್ಟ್ರೇಲಿಯಾ ಮತ್ತು ಚೀನಾ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುತ್ತಿವೆ. ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ ಮತ್ತು ಜರ್ಮನಿ ಅತಿ ಹೆಚ್ಚು ರಫ್ತು ಮಾಡುತ್ತಿವೆ. ಹೀಗಾಗಿ ಭಾರತ ತನ್ನಲ್ಲಿಯೇ ಉತ್ಪಾದನೆಯನ್ನು ಹೆಚ್ಚಿಸಿ ಸ್ವಾವಲಂಬಿಯಾಗುವುದು ನಿರ್ಣಾಯಕ. 2021-22ರಲ್ಲಿ ಭಾರತ ಒಟ್ಟಾರೆ ರಕ್ಷಣಾ ವೆಚ್ಚವಾಗಿ 3.62 ಲಕ್ಷ ಕೋಟಿ ರೂ.ಗಳನ್ನು ಮುಡಿಪಾಗಿಟ್ಟಿತ್ತು. ಹೀಗಾಗಿ ದೇಶದಲ್ಲಿಯೇ ಉತ್ಪಾದನೆ-ರಫ್ತು ಚುರುಕಾದರೆ, ಆರ್ಥಿಕತೆ, ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ.
ಸವಾಲುಗಳೇನು?
ಭಾರತದ ಜಿಡಿಪಿ ಪ್ರತಿ ವರ್ಷ ಸುಧಾರಿಸುತ್ತಿರುವುದರಿಂದ ಹಣಕಾಸು ಮತ್ತು ಹೂಡಿಕೆ ದೃಷ್ಟಿಯಿಂದ ಸವಾಲುಗಳಾಗದು. ಆದರೆ ಸಂಶೋಧನೆ ಮತ್ತು ಅಭಿವೃದ್ಧಿ ಚುರುಕಾಗುವುದು ಮುಖ್ಯ ಎನ್ನುತ್ತಾರೆ ರಕ್ಷಣಾ ವಲಯದ ತಜ್ಞರು. ಇದರ ಅಭಾವದ ಪರಿಣಾಮ ಸೇನಾ ಪಡೆಗೆ ಅವಶ್ಯವರಿಉ ಉತ್ಪನ್ನಗಳ ತಯಾರಿಕೆಯ ಯೋಜನೆಗಳಲ್ಲಿ ವಿಳಂಬವಾಗುತ್ತಿರುವುದೂ ಹೌದು. ಆದರೆ ಈ ಸವಾಲುಗಳು ಆರಂಭಿಕ ಹಂತದಲ್ಲಿ ಸಾಮಾನ್ಯವಾದ್ದರಿಂದ ಸುಧಾರಣೆಗೆ ಅವಕಾಶ ಇದೆ.
ಭಾರತದ ವಿದೇಶಾಂಗ ನೀತಿ, ರಕ್ಷಣಾ ಕಾರ್ಯತಂತ್ರಗಳಲ್ಲಿ ಕಳೆದ ಕೆಲ ದಶಕಗಳಿಂದ ಗಮನಾರ್ಹ ಬದಲಾವಣೆಯಾಗಿದೆ. ಇಂಡೊ-ಪೆಸಿಫಿಕ್ ವಲಯದಲ್ಲಿ ಭದ್ರತೆ ಹೆಚ್ಚಿಸಲು ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ಕೈ ಜೋಡಿಸಿವೆ. ಭಾರತ ಜಾಗತಿಕ ಮಟ್ಟದಲ್ಲಿ ಯಾರೂ ಕಡೆಗಣಿಸಲಾಗದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ. ಹೀಗಾಗಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ರಫ್ತಿನ ಹೊಸ ನೀತಿಯ ಬದಲಾವಣೆಗಳ ಆರಂಭಿಕ ಸವಾಲುಗಳನ್ನು ಎದುರಿಸಲೂ ಸಶಕ್ತವಾಗಿದೆ ಎನ್ನುತ್ತಾರೆ ತಜ್ಞರು.