ನಿಮ್ಮಲ್ಲಿ ಅರ್ಹತೆ ಇದ್ದರೆ ಬ್ಯಾಂಕ್‌ಗಳು ಸುಲಭವಾಗಿ (Money Guide) ಮತ್ತು ಫಟಾಫಟ್ ಅಂತ ಕೊಡುವ ಸಾಲ ಯಾವುದು ಎಂದರೆ ವೈಯಕ್ತಿಕ ಸಾಲ (Personal loan) ಅಥವಾ ಪರ್ಸನಲ್ ಲೋನ್. ಒಂದೇ ಸಲ ಇಡಿಯಾಗಿ ಇದನ್ನು ಪಡೆಯಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಲೂ ಇದು ಸಹಕಾರಿ. ಕ್ರೆಡಿಟ್ ಕಾರ್ಡಿಗಿಂತ ಹೆಚ್ಚಿನ ಸಾಲದ ಮಿತಿ ಇಲ್ಲಿ ಇರುತ್ತದೆ. ಬಡ್ಡಿ ದರ ಕೂಡ ಕ್ರೆಡಿಟ್ ಕಾರ್ಡಿಗೆ ಹೋಲಿಸಿದರೆ ಕಡಿಮೆ.
ವೈಯಕ್ತಿಕ ಸಾಲವನ್ನು ಒಟ್ಟಿಗೇ ಪಡೆಯಬಹುದು. ಹಾಗೂ ಅದನ್ನು ನಿಮ್ಮ ಇಷ್ಟದಂತೆ ಬಳಸಿಕೊಳ್ಳಬಹುದು. ಇಂಥದ್ದಕ್ಕೇ ಬಳಸಬೇಕು ಅಂತ ಏನೂ ಇಲ್ಲ. ನೀವು ನಿವೇಶನ ಖರೀದಿಸಲು ಅಥವಾ ಮನೆ ಕಟ್ಟಲು ಅಥವಾ ಬಿಸಿನೆಸ್ ಶುರು ಮಾಡಲು, ಇಲ್ಲವೇ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಪಡೆದರೆ, ಅದೇ ಉದ್ದೇಶಗಳಿಗೆ ಬಳಸಬೇಕು. ಆದರೆ ಪರ್ಸನಲ್ ಲೋನ್ ಪಡೆದರೆ, ಆ ಹಣವನ್ನು ಯಾವುದಕ್ಕೆ ಬೇಕಾದರೂ ಖರ್ಚು ಮಾಡಬಹುದು. ಅದನ್ನು ಬ್ಯಾಂಕ್ ಕೇಳುವುದಿಲ್ಲ. ಕೆಲವೇ ದಿನಗಳಲ್ಲಿ ಸಾಲ ವಿತರಣೆ ಪ್ರಕ್ರಿಯೆ ಪೂರ್ಣವಾಗುತ್ತದೆ. ನೀವು ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ 50 ಲಕ್ಷ ರೂ. ತನಕವೂ ವೈಯಕ್ತಿಕ ಸಾಲವನ್ನು ಪಡೆಯಬಹುದು. ಈಗ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಎಷ್ಟು ಮೊತ್ತದ ಪರ್ಸನಲ್ ಲೋನ್ ಪಡೆಯಬಹುದು, ಬಡ್ಡಿ ಎಷ್ಟು ಎಂಬುದನ್ನು ನೋಡೋಣ.
ಇದನ್ನೂ ಓದಿ: Money plus : ಮಲ್ಟಿ ಬ್ಯಾಗರ್ ಷೇರುಗಳಲ್ಲಿ ಹೂಡಿಕೆಯ ಸವಾಲುಗಳೇನು?
ಎಸ್‌ಬಿಐನಲ್ಲಿ 20 ಲಕ್ಷ ರೂ. ಸಾಲ, 11.15% ಬಡ್ಡಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಗರಿಷ್ಠ 20 ಲಕ್ಷ ರೂ. ತನಕ ಸಾಲ ಪಡೆಯಬಹುದು. 6 ವರ್ಷಗಳ ಮರು ಪಾವತಿ ಅವಧಿ ಇರುತ್ತದೆ. ಬಡ್ಡಿ ದರ 11.15-15.30% ಶ್ರೇಣಿಯಲ್ಲಿ ಇರುತ್ತದೆ.
ಐಸಿಐಸಿಐ ಬ್ಯಾಂಕ್‌ನಲ್ಲಿ 50 ಲಕ್ಷ ರೂ. ತನಕ ಸಾಲ: ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್‌ನಲ್ಲಿ ಗರಿಷ್ಠ 50 ಲಕ್ಷ ರೂ. ತನಕ ಸಾಲ ಪಡೆಯಬಹುದು. ಸಾಲದ ಬಡ್ಡಿ ದರ 12.5% ಆಗಿರುತ್ತದೆ. ನೀವು ಐಸಿಐಸಿಐ ಬ್ಯಾಂಕ್‌ನಲ್ಲಿ 50 ಲಕ್ಷ ರೂ. ಪರ್ಸನಲ್ ಲೋನ್ ಅನ್ನು ಪಡೆದು 60 ತಿಂಗಳಿನಲ್ಲಿ ಮರು ಪಾವತಿಸುತ್ತೀರಿ, ಹಾಗೂ 12.5% ಬಡ್ಡಿ ದರ ಇದೆ ಎಂದಿಟ್ಟುಕೊಳ್ಳಿ. ಇಎಂಐ ಎಷ್ಟಿರುತ್ತದೆ ಮತ್ತು ಬಡ್ಡಿ ದರದ ಒಟ್ಟು ಮೊತ್ತ ಎಷ್ಟಿರುತ್ತದೆ? ಈ ಕೆಳಗಿನ ವಿವರ ಗಮನಿಸಿ.
ಐಸಿಐಸಿಐ ಪರ್ಸನಲ್ ಲೋನ್ ಮೊತ್ತ | 50,00,000/- |
ಅವಧಿ | 60 ತಿಂಗಳು |
ಬಡ್ಡಿ ದರ | 12.5% |
ಮಾಸಿಕ ಇಎಂಐ: 1,12,490/- | ಕೊಡಬೇಕಾದ ಬಡ್ಡಿ ಮೊತ್ತ: 17,49,381/- |
ಹೀಗಿದ್ದರೂ, ಬಡ್ಡಿ ದರ ಉನ್ನತ ಮಟ್ಟದಲ್ಲಿ ಇರುವುದರಿಂದ ತೀರ ಅಗತ್ಯ ಇದ್ದರೆ ಮಾತ್ರ ಪರ್ಸನಲ್ ಲೋನ್ ಬಳಸಿ. ಇಲ್ಲದಿದ್ದರೆ ಅದು ಹೊರೆಯಾಗಿ ಪರಿಣಮಿಸಬಹುದು.