Site icon Vistara News

Money Guide: ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಬೇಕೆ? ಹಾಗಾದರೆ ಈಗಲೇ ಹೀಗೆ ಮಾಡಿ

pention

pention

ಬೆಂಗಳೂರು: ನಿವೃತ್ತಿ ಜೀವನವನ್ನು ಯಾವುದೇ ಚಿಂತೆ ಇಲ್ಲದೆ ನೆಮ್ಮದಿಯಿಂದ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಆದರೆ ಈ ಸಮಯದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳು ಅಥವಾ ಅನಾರೋಗ್ಯ ಈ ಕನಸನ್ನು ಭಗ್ನಗೊಳಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಎದುರಾಗುವ ಆರ್ಥಿಕ ಹೊರೆ ಖಂಡಿತವಾಗಿಯೂ ನಿಮ್ಮನ್ನು ವಿಚಲಿತಗೊಳಿಸಲಿದೆ. ಮಾತ್ರವಲ್ಲ ಆ ಸಮಯದಲ್ಲಿ ವೈದ್ಯಕೀಯ ವೆಚ್ಚಗಳೂ ತುಲನಾತ್ಮಕವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮೊದಲೇ ಉತ್ತಮ ಯೋಜನೆ ರೂಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆರೋಗ್ಯ ವಿಮೆ (Health Insurance) ಮಾಡಿಸುವುದು, ಬಜೆಟ್‌ ತಯಾರಿಸುವುದು ಮುಂತಾದ ಮಾರ್ಗಗಳನ್ನು ಅನುಸರಿಸಬೇಕು. ಈ ಬಗ್ಗೆ ಇಂದಿನ ಮನಿಗೈಡ್‌(Money Guide) ವಿವರಿಸಲಿದೆ.

ನಿವೃತ್ತಿಯ ಸಮಯದಲ್ಲಿ ವಾಡಿಕೆಯ ಆರೋಗ್ಯ ವೆಚ್ಚಗಳು ಹೊರೆಯಾಗುತ್ತವೆ. ನಿಯಮಿತ ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆಗಳು ಮತ್ತು ಪ್ರಿಸ್ಕ್ರಿಪ್ಷನ್ ಔಷಧಗಳು ಆರ್ಥಿಕವಾಗಿ ಬಹು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಮಾತ್ರವಲ್ಲ ವಯಸ್ಸಾದ ಬಳಿಕ ಸಹಜವಾಗಿಯೇ ಕಾಡುವ ಆರೋಗ್ಯ ಸಮಸ್ಯೆಗೆ ತಜ್ಞರ ಸಮಾಲೋಚನೆ (Specialist consultations) ಬೇಕಾಗಬಹುದು. ಆಗ ಅದು ದುಬಾರಿಯಾಗಬಹುದು. ಸ್ಕ್ರೀನಿಂಗ್‌ಗಳು, ರಕ್ತ ಪರೀಕ್ಷೆಗಳು, ಎಕ್ಸ್-ರೇಗಳು ಮತ್ತು ಎಂಆರ್ ಐಗಳಂತಹ ವಾಡಿಕೆಯ ರೋಗನಿರ್ಣಯ ಪರೀಕ್ಷೆಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಇವೆಲ್ಲ ಸಾಮಾನ್ಯವಾಗಿ ಸಾಂಪ್ರದಾಯಿಕ ಆರೋಗ್ಯ ವಿಮೆಯ ವ್ಯಾಪ್ತಿಗೆ ಬರುವುದಿಲ್ಲ. ಇದಲ್ಲದೆ ದಂತ ಮತ್ತು ಕಣ್ಣಿನ ಆರೋಗ್ಯದ ಕಡೆಗೂ ಗಮನ ಹರಿಸುವುದು ಅನಿವಾರ್ಯ.

ಬಜೆಟ್‌ ತಯಾರಿಸಿ

ನಿಮ್ಮ ನಿವೃತ್ತಿ ಜೀವನದ ಹಣಕಾಸು ಸ್ಥಿತಿಯನ್ನು ಭದ್ರಪಡಿಸಲಿರುವ ಇನ್ನೊಂದು ಪ್ರಮುಖ ಮಾರ್ಗ ಎಂದರೆ ನಿರೀಕ್ಷಿತ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುವ ಬಜೆಟ್ ರಚಿಸುವುದು. ಈ ವೆಚ್ಚಗಳಿಗಾಗಿ ನೀವು ಆರಂಭದಿಂದಲೇ ನಿರ್ದಿಷ್ಟ ಮೊತ್ತವನ್ನು ತೆಗೆದಿರಿಸಬೇಕು. ಆರೋಗ್ಯಕ್ಕಾಗಿ ವೆಚ್ಚಗಳು ಹೆಚ್ಚಾದಷ್ಟೂ ನಿಮ್ಮ ನಿವೃತ್ತಿಯ ಉಳಿತಾಯವು ವೇಗವಾಗಿ ಕರಗುತ್ತದೆ ಎನ್ನುವುದು ಗಮನದಲ್ಲಿರಲಿ. ಹೀಗಾಗದಿರಲು ನೀವು ಆರೋಗ್ಯ ಉಳಿತಾಯ ಖಾತೆ(Health Savings Accounts-HSA)ಗಳಲ್ಲಿ ಹೂಡಿಕೆ ಮಾಡುವುದು ಒಂದು ಉಪಯುಕ್ತ ಆಯ್ಕೆಯಾಗಲಿದೆ. ಈ ಹಣವನ್ನು ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆಗಳು ಮತ್ತು ನಿವೃತ್ತಿಯ ಸಮಯದಲ್ಲಿ ಪ್ರಿಸ್ಕ್ರಿಪ್ಷನ್ ಔಷಧಗಳಿಗೆ ಬಳಸಿಕೊಳ್ಳಬಹುದು.

ಸೂಕ್ತ ಆರೋಗ್ಯ ವಿಮೆ ಆಯ್ಕೆ ಮಾಡಿ

ಆರೋಗ್ಯ ವಿಮೆ ಅಥವಾ ಆರೋಗ್ಯ ಹಣಕಾಸು ಆಯ್ಕೆಗಳನ್ನು (Health financing options) ಆರಿಸುವಾಗ ಒಪಿಡಿ ವೆಚ್ಚಗಳನ್ನು (OPD Expenses) ಅದು ಒಳಗೊಂಡಿದೆಯಾ ಎನ್ನುವುದನ್ನು ಗಮನಿಸಿ. ಇವುಗಳಲ್ಲಿ ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆ ಮತ್ತು ಪ್ರಿಸ್ಕ್ರಿಪ್ಷನ್ ಔಷಧ ಸೇರಿರಬೇಕು. ಯಾಕೆಂದರೆ ಇವು ನಿವೃತ್ತಿಯ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಅತಿ ಮುಖ್ಯವಾದ ಘಟಕ ಎಂದು ಪರಿಗಣಿಸಲಾಗುತ್ತದೆ. ಜತೆಗೆ ದಂತ ಮತ್ತು ದೃಷ್ಟಿ ಆರೈಕೆಯ ಸಮಗ್ರ ವ್ಯಾಪ್ತಿಯನ್ನು ಒದಗಿಸುವ ವಿಮಾ ಯೋಜನೆಗಳನ್ನು ಆಯ್ಕೆ ಮಾಡಿ. ಇದಕ್ಕಾಗಿ ವಿವಿಧ ವಿಮಾ ಯೋಜನೆಗಳನ್ನು ಪರಸ್ಪರ ಹೋಲಿಸಿ ನೋಡುವುದನ್ನು ಮರೆಯಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Money Guide: ಡಿಮ್ಯಾಟ್ ಖಾತೆದಾರರ ಗಮನಕ್ಕೆ; ವರ್ಷಾಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್‌ ಸ್ಥಗಿತ!

Exit mobile version