ಬೆಂಗಳೂರು: ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಮುಖ್ಯವಾಗುತ್ತದೆ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯವಹುದು. ಹೀಗಾಗಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಸಿಬಿಲ್ ಸ್ಕೋರ್ ಇಲ್ಲದಿದ್ದರೆ ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಹಾಗಾದರೆ ಕಡಿಮೆ ಸಿಬಿಲ್ ಸ್ಕೋರ್‌ಗೆ ಕಾರಣಗಳೇನು? ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಅದನ್ನು ಹೇಗೆ ಸುಧಾರಿಸಬಹುದು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).
ಹೆಚ್ಚಿನ ಸಿಬಿಲ್ ಸ್ಕೋರ್ ವ್ಯಕ್ತಿಯು ಉತ್ತಮವಾಗಿ ಸಾಲ ತೆಗೆದುಕೊಳ್ಳುವ ಮತ್ತು ಅಷ್ಟೇ ಜವಾಬ್ದಾರಿಯುತವಾಗಿ ತೆಗೆದುಕೊಂಡ ಸಾಲವನ್ನು ವಾಪಾಸ್ ತೀರಿಸುವ ನಡವಳಿಕೆಯನ್ನು ಪ್ರದರ್ಶಿಸಿದ್ದಾನೆ ಎನ್ನುವುದನ್ನು ತೋರಿಸುತ್ತದೆ. ಕನಿಷ್ಠ 6 ತಿಂಗಳಿನಿಂದ ವ್ಯವಹಾರವನ್ನು ಗಣನೆಗೆ ತೆಗೆದುಕೊಂಡು ವ್ಯಕ್ತಿಯ ಸಿಬಿಲ್ ಸ್ಕೋರ್ ಅನ್ನು ಲೆಕ್ಕ ಹಾಕಲಾಗುತ್ತದೆ.
ಕಡಿಮೆ ಸಿಬಿಲ್ ಸ್ಕೋರ್‌ಗೆ ಕಾರಣಗಳು
ಅನಿಯಮಿತ ಪಾವತಿ: ನಿಯಮಿತವಾಗಿ ಸಾಲದ ಕಂತು ಪಾವತಿಸದಿದ್ದರೆ ಅಥವಾ ಸಾಲದ ಡೀಫಾಲ್ಟ್ ತಪ್ಪಿಹೋಗುವುದರಿಂದ ನಿಮ್ಮ ಸ್ಕೋರ್ ಕಡಿಮೆಯಾಗುತ್ತದೆ.
ಹೆಚ್ಚಿನ ಸಾಲದ ಬಳಕೆ: ಸಾಮಾನ್ಯವಾಗಿ ಪೂರ್ಣ ಸಾಲ ಮಿತಿ ಬಳಕೆಯು ಆರ್ಥಿಕ ಒತ್ತಡಕ್ಕೆ ಪ್ರಮುಖ ಕಾರಣ.
ಬಹು ಸಾಲ ಅರ್ಜಿಗಳು: ಪದೇ ಪದೆ ಸಾಲಕ್ಕಾಗಿ ಸಲ್ಲಿಸುವ ಅರ್ಜಿ ಕಡಿಮೆ ಸಿಬಿಲ್ ಸ್ಕೋರ್‌ಗೆ ಇನ್ನೊಂದು ಮುಖ್ಯ ಕಾರಣ
ಸಾರ್ವಜನಿಕ ದಾಖಲೆಗಳು: ತೆರಿಗೆ ಸಮಸ್ಯೆಗಳು ಕೂಡ ನಿಮ್ಮ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹಣದ ವರ್ಗಾವಣೆ: ಪದೇ ಪದೆ ಬ್ಯಾಲನ್ಸ್ ಹಣವನ್ನು ವರ್ಗಾಯಿಸುವುದು ಕೂಡ ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾಸ ಸ್ಥಳ: ವಾಸಿಸುವ ಸ್ಥಳ / ಕೆಲಸದ ಸ್ಥಳವು ಸ್ಕೋರ್‌ಗೆ ಹಾನಿ ಮಾಡಬಹುದು (ನಕಾರಾತ್ಮಕ ಪಟ್ಟಿ ಇತ್ಯಾದಿ).
ಪ್ರಯೋಜನಗಳೇನು?
ಹೆಚ್ಚಿನ ಸ್ಕೋರ್ ಇದ್ದಾಗ ನೀವು ಬ್ಯಾಂಕ್ ಜತೆಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆಯಲು ಚೌಕಾಸಿ ಮಾಡಬಹುದು. ಬ್ಯಾಂಕ್‌ಗಳೂ ಹೆಚ್ಚಿನ ಸ್ಕೋರ್ ಇರುವವರಿಗೆ ಸಾಲ ಕೊಡಲು ಮುಂದಾಗುತ್ತವೆ. ಬ್ಯಾಂಕ್ ಬಾಜಾರ್ ಪ್ರಕಾರ, ಗೃಹ ಸಾಲ ಮತ್ತು ಕಾರು ಸಾಲಗಳ ಬಡ್ಡಿ ದರಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿದ್ದರೂ, ಗರಿಷ್ಠ ಸಿಬಿಲ್ ಸ್ಕೋರ್ ಇದ್ದರೆ ನೀವು ಬಡ್ಡಿ ದರದಲ್ಲಿ ರಿಯಾಯಿತಿ ಪಡೆಯುವ ಸಾಧ್ಯತೆ ಇದೆ. ಉತ್ತಮ ಕ್ರೆಡಿಟ್ ಸ್ಕೋರ್ ಇರುವವರಿಗೆ ಉತ್ತಮ ಕ್ರೆಡಿಟ್ ಕಾರ್ಡ್ ಆಫರ್‌ಗಳೂ ಲಭಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್‌ಗಳು ನೀವು ಈ ಹಿಂದೆ ಯಾವುದಾದರೂ ಸಾಲವನ್ನು ಮರು ಪಾವತಿಸದೆ ಸುಸ್ತಿ ಸಾಲಗಾರರಾಗಿದ್ದೀರಾ ಎಂಬುದನ್ನು ಸಿಬಿಲ್ ಮೂಲಕ ತಿಳಿದುಕೊಳ್ಳುತ್ತವೆ. ಆದ್ದರಿಂದ ಸಿಬಿಲ್ ಸ್ಕೋರ್ ಚೆನ್ನಾಗಿರುವಂತೆ ನೋಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಜತೆಗೆ ಈ ಕೆಳಗಿನ ಅನುಕೂಲಗಳು ಸಿಗುತ್ತವೆ.
- ಸಾಲಗಳ ಮೇಲಿನ ಕಡಿಮೆ ಬಡ್ಡಿ ದರಗಳು
- ಹೆಚ್ಚಿನ ಸಾಲದ ಮೊತ್ತಗಳು
- ದೀರ್ಘ ಅಥವಾ ಹೆಚ್ಚು ಹೊಂದಿಕೊಳ್ಳುವ ಮರುಪಾವತಿ ಅವಧಿಯಂತಹ ನಿಯಮಗಳು
- ತ್ವರಿತ ಸಾಲ ಮಂಜೂರಾತಿ ಪ್ರಕ್ರಿಯೆ
- ಸಾಲ ನೀಡುವ ಸಂಸ್ಥೆಗಳ ಹೆಚ್ಚಿನ ಆಯ್ಕೆ
ಸ್ಕೋರ್ ಹೆಚ್ಚಿಸುವುದು ಹೇಗೆ?
- ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸಿ. ಇದರಿಂದ ನೀವು ಯಾವ ಮಟ್ಟದಲ್ಲಿದ್ದೀರಿ ಎಂಬುದು ತಿಳಿಯುತ್ತದೆ.
- ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ನಿಯಮಿತವಾಗಿ ಪಾವತಿಸಿ; ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮತ್ತು ವಿಳಂಬ ಮಾಡಬೇಡಿ.
- ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚು ಬಳಸಬೇಡಿ ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು (ಸಿಯುಆರ್ ) 30% ಒಳಗೆ ಇರಿಸಿಕೊಳ್ಳಲು ಪ್ರಯತ್ನಿಸಿ.
- ಕಡಿಮೆ ಅವಧಿಯಲ್ಲಿ ಬೇರೆ ಬೇರೆ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬೇಡಿ
- ಅನಿವಾರ್ಯ ಆಗಿರದಿದ್ದರೆ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ಗಳನ್ನು ರದ್ದುಗೊಳಿಸಬೇಡಿ
- ಚೆಕ್ ಬೌನ್ಸ್ ಆಗದಂತೆ ನೋಡಿಕೊಳ್ಳಿ
ಪರಿಶೀಲಿಸುವ ವಿಧಾನ
- ಅಧಿಕೃತ ಸಿಬಿಲ್ ವೆಬ್ಸೈಟ್ https://www.cibil.com/ಗೆ ಭೇಟಿ ನೀಡಿ
- ‘Get your CIBIL Score’ ಆಯ್ಕೆ ಮೇಲಿ ಕ್ಲಿಕ್ ಮಾಡಿ
- ‘Click here’ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ. ಗುರುತಿನ ಪುರಾವೆಯನ್ನು ಲಗತ್ತಿಸಿ (ಪಾಸ್ಪೋರ್ಟ್ / ಪ್ಯಾನ್ ಕಾರ್ಡ್ / ಆಧಾರ್ ಅಥವಾ ಮತದಾರರ ಐಡಿ ನಂಬರ್). ನಂತರ ನಿಮ್ಮ ಪಿನ್ ಕೋಡ್, ಹುಟ್ಟಿದ ದಿನಾಂಕ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ
- ‘Accept and continue’ ಆಪ್ಶನ್ ಆಯ್ಕೆ ಮಾಡಿ
- ಮೊಬೈಲ್ಗೆ ಬರುವ ಒಟಿಪಿಯನ್ನು ನಮೂದಿಸಿ
- ‘Go to dashboard’ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ: Money Investment : ಶ್ರೀಮಂತರಾಗಲು ಹಣವನ್ನು ಹೂಡಿಕೆ ಮಾಡೋದು ಹೇಗೆ?