Site icon Vistara News

Money Guide : ಸಮೃದ್ಧವಾಗಿದ್ದ ಭಾರತದಲ್ಲಿ ಹಣದ ಬಗ್ಗೆ ನಕಾರಾತ್ಮಕ ಧೋರಣೆ ಉಂಟಾಗಿದ್ದು ಹೇಗೆ?

notes new

notes new

ಭಾರತಕ್ಕೆ ವಿದೇಶಿ ಮೂಲದ ಅತಿಕ್ರಮಣಕಾರರ ದಾಳಿ ಶುರುವಾದ ಬಳಿಕ, ಚಾರಿತ್ರಿಕವಾಗಿ ಶ್ರೀಮಂತವಾಗಿದ್ದ ರಾಷ್ಟ್ರ ನಿಧಾನವಾಗಿ ಬಡತನದ ಕಡೆಗೆ ಹೊರಳಿತು. (Money Guide ) ಅತ್ಯಂತ ಸಮೃದ್ಧವಾಗಿದ್ದ ಭಾರತದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಕುಸಿಯಲು ಶತಮಾನಗಳೇ ಬೇಕಾಗಿತ್ತು. ಆಗಿನ ಆರ್ಥಿಕತೆ ದೇವಾಲಯಗಳ ಸುತ್ತ ಕೇಂದ್ರೀಕೃತವಾಗಿತ್ತು. ಬ್ರಿಟಿಷರ ಆಡಳಿತದ ಕಾಲದಲ್ಲಿ ಭಾರತ ತೀವ್ರ ಬಡತನದ ದವಡೆಗೆ ಸಿಲುಕಿತು. ಇನ್ನೆಂದಿಗೂ ಚೇತರಸಿಕೊಳ್ಳಲಾರದೋ ಎಂಬಷ್ಟರಮಟ್ಟಿಗೆ ಆರ್ಥಿಕತೆಗೆ ಹೊಡೆತ ಬಿತ್ತು. 1943ರಲ್ಲಿ ಬಂಗಾಳದಲ್ಲಿ ಭೀಕರ ಬರಗಾಲ ಸಂಭವಿಸಿತು. ಸುಮಾರು 30 ಲಕ್ಷ ಜನ ಹಸಿವಿನಿಂದ ಕಂಗೆಟ್ಟು ಸಾವಿಗೀಡಾದರು. ಭಾರತ ಆ ವೇಳೆಗೆ ಆಹಾರ ಧಾನ್ಯಗಳ ತೀವ್ರ ಕೊರತೆ ಎದುರಿಸುತ್ತಿತ್ತು. ಬಡತನವೇ ವಿಧಿ, ಇದರಿಂದ ಸುಧಾರಿಸಲಾಗದು ಎಂದು ಜನತೆ ಹತಾಶರಾಗಿದ್ದರು.

ಯಾವುದಾದರನ್ನಾದರೂ ಪಡೆಯಲು ಸಾಧ್ಯವಾಗದಿದ್ದಾಗ, ಅದನ್ನು ತಿರಸ್ಕಾರ ದೃಷ್ಟಿಯಿಂದ ಕಾಣುವುದು ಮನುಷ್ಯ ಸಹಜ ಸ್ವಭಾವ. ಹಸಿವು ನೀಗಿಸಲು ಆಹಾರಕ್ಕೇ ಕೊರತೆ ವ್ಯಾಪಕವಾಗಿ ಇದ್ದುದರಿಂದ, ಶ್ರೀಮಂತರನ್ನು ಕಂಡಾಗ ತಿರಸ್ಕಾರದ ಭಾವನೆ ಮೂಡುತ್ತಿತ್ತು. ಏನನ್ನೂ ಮಾಡದೆಯೇ ಸಿರಿವಂತರಾಗುವವರ ಬಗ್ಗೆ ಈಗಲೂ ಅಸಹನೀಯ ದೃಷ್ಟಿಕೋನವಿದೆ.

ಸ್ವತಂತ್ರ ಭಾರತದಲ್ಲಿ, ಐವತ್ತರ ದಶಕದ ಬಳಿಕ ಸಿನಿಮಾಗಳನ್ನು ಗಮನಿಸಿದರೆ, ಶ್ರೀಮಂತರನ್ನು ಖಳ ನಾಯಕರಂತೆಯೂ, ಬಡವರನ್ನು ಸಾಧು ಸಜ್ಜನರಂತೆಯೂ ಚಿತ್ರಿಸಲಾಗುತ್ತಿತ್ತು. ಆಗಿನ ಕಾಲದ ಸಿನಿಮಾಗಳ ಕಥೆಗಳನ್ನು ಗಮನಿಸಿದರೆ, ಶ್ರೀಮಂತರು ಬಡವರನ್ನು ಶೋಷಣೆಗೆ ಒಳಪಡಿಸಿಯೋ, ಕಳ್ಳ ಸಾಗಣೆಯಿಂದಲೋ ಸಿರಿವಂತರಾಗಿರುತ್ತಿದ್ದರು. ಬಡತನ ಎಂದರೆ ಗೌರವದಾಯಕ ಹಾಗೂ ಶ್ರೀಮಂತರೇ ಭ್ರಷ್ಟರು ಎಂಬಂತೆ ಬಹುತೇಕ ಸಿನಿಮಾಗಳೂ ಬಿಂಬಿಸುತ್ತಿತ್ತು. ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಸಮಾಜವಾದ ರಾಜಕಾರಣ ಮತ್ತಷ್ಟು ಎಡಕ್ಕೆ ವಾಲಿತು. 1976ರಲ್ಲಿ ಸೆಕ್ಯುಲರ್‌ ಮತ್ತು ಸಮಾಜವಾದಿ ಪದಗಳು ಸಂವಿಧಾನದ ಪ್ರಸ್ತಾವನೆಗೆ ಸೇರ್ಪಡೆಯಾಯಿತು. ನಂತರದ ದಶಕಗಳಲ್ಲಿ ಪ್ರಾಫಿಟ್‌ (ಲಾಭ) ಅಂದರೆ ಕೆಟ್ಟ ಪದ ಎಂದೂ, ಉದ್ಯಮಿಗಳು ಎಂದರೆ ಖಳ ನಾಯಕರಂತೆ ಬಿಂಬಿಸಲಾಯಿತು. ಬ್ಯಾಂಕ್‌ಗಳು, ವಿಮೆ ಕಂಪನಿಗಳು, ಕಲ್ಲಿದ್ದಲು ಗಣಿಗಳು, ಏರ್‌ಲೈನ್‌ಗಳು ರಾಷ್ಟ್ರೀಕರಣವಾಯಿತು. ಬಹು ರಾಷ್ಟ್ರೀಯ ಕಂಪನಿಗಳಿಗೆ ಭಾರತದ ಮಾರುಕಟ್ಟೆಯ ಬಾಗಿಲು ಬಂದ್‌ ಆಯಿತು. 1991ರ ವೇಳೆಗೆ ಭಾರತ ದಿವಾಳಿಯಾಗುವ ಹಂತಕ್ಕೆ ಕುಸಿದಿತ್ತು. ಕೊನೆಗೂ ಆರ್ಥಿಕ ಉದಾರೀಕರಣ ನೀತಿಗೆ ದೇಶ ಮಗ್ಗುಲು ಬದಲಿಸಿತು. ನಿಧಾನವಾಗಿ ಹಣ, ಶ್ರೀಮಂತಿಕೆಯ ಬಗ್ಗೆ ಇರುವ ನಕಾರಾತ್ಮಕ ಧೋರಣೆ ಬದಲಾಗುತ್ತಿದೆ. ಅದು ಅಭ್ಯುದಯಕ್ಕೆ ಅವಶ್ಯಕ ಎಂಬ ಜಾಗೃತಿ ಮೂಡುತ್ತಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಆತ್ಮನಿರ್ಭರತೆಯ ಸಂಕೇತ;‌ ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಹೀಗಿದ್ದರೂ, ಹಣಕಾಸು ತಿಳುವಳಿಕೆಯ ನಿಟ್ಟಿನಲ್ಲಿ ಸಾಗಬೇಕಿರುವ ಹಾದಿ ಸುದೀರ್ಘವಾಗಿದೆ. ಈಗಲೂ ಭಾರತೀಯರು ಬ್ಯಾಂಕ್‌ ಫಿಕ್ಸೆಡ್‌ ಡೆಪಾಸಿಟ್‌ (ಎಫ್‌ಡಿ), ಚಿನ್ನ, ಜೀವ ವಿಮೆ, ರಿಯಲ್‌ ಎಸ್ಟೇಟ್‌ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಕಡಿಮೆ. ವಾಸ್ತವವಾಗಿ ರಿಟೇಲ್‌ ಹೂಡಿಕೆದಾರರಿಗೆ ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚು ಲಾಭದಾಯಕವಾಗಿ ಮ್ಯೂಚುವಲ್‌ ಫಂಡ್‌ ಯೋಜನೆಗಳು ಇವೆ. ಆದರೆ ಬಳಕೆ ಕಡಿಮೆ. ಶಾಲಾ-ಕಾಲೇಜುಗಳ ಪಠ್ಯಕ್ರಮಗಳಲ್ಲೂ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಪಠ್ಯಗಳೇ ಇಲ್ಲ. ಹೀಗಾಗಿ ಜನರಿಗೆ ಫೈನಾನ್ಸ್‌ ವಿಚಾರಗಳ ತಿಳುವಳಿಕೆ ಅತ್ಯಲ್ಪವಾಗಿದೆ. ಇದರ ಪ್ರತಿಕೂಲ ಪರಿಣಾಮಗಳನ್ನು ದೇಶ ಅನುಭವಿಸಿದೆ.

Exit mobile version