Site icon Vistara News

Money Guide: ಮನೆಯಲ್ಲಿ ಎಷ್ಟು ಕ್ಯಾಶ್​ ಇಟ್ಟುಕೊಳ್ಳಬಹುದು? ನಿಯಮ ಮೀರಿದರೆ ದಂಡ ಖಚಿತ

500 rs

500 rs

ನವದೆಹಲಿ: ಇತ್ತೀಚಿಗೆ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಧೀರಜ್ ಸಾಹು (Congress MP Dheeraj Sahu) ಅವರ ಮದ್ಯ ಕಂಪನಿಗಳ ಮೇಲೆ ದಾಳಿ ನಡೆಸಿದ ಐಟಿ ಇಲಾಖೆ ಅಧಿಕಾರಿಗಳು 353 ಕೋಟಿ ರೂ. ಜಪ್ತಿ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಧೀರಜ್ ಪ್ರಸಾದ್ ಸಾಹು, ಈ ಹಣ ಮದ್ಯ ವ್ಯವಹಾರದಿಂದ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದರು. ಮಾಧ್ಯಮದ ಜತೆ ಮಾತನಾಡಿದ್ದ ಅವರು, “ನನ್ನ ರಾಜಕೀಯ ಜೀವನದ 30-35 ವರ್ಷಗಳಲ್ಲಿ, ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು. ವಶಪಡಿಸಿಕೊಳ್ಳಲಾದ ಹಣವು ನನ್ನ ಸಂಸ್ಥೆಗೆ ಸೇರಿದ್ದು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಇದು ಮದ್ಯ ಮಾರಾಟದಿಂದ ಬಂದ ಆದಾಯʼʼ ಎಂದು ಹೇಳಿದ್ದರು. ಈ ಘಟನೆಯ ಬಳಿಕ ಮನೆಯಲ್ಲಿ ಇರಿಸಬಹುದಾದ ನಗದಿನ ಮೌಲ್ಯಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಆರ್ಥಿಕ ವ್ಯವಹಾರಗಳ ಬಗ್ಗೆ ಕಾನೂನು ಏನು ಹೇಳುತ್ತದೆ ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಆದಾಯ ತೆರಿಗೆ ಕಾಯ್ದೆ (Income Tax Act)ಯ ಪ್ರಕಾರ, ಮನೆಯಲ್ಲಿ ಸಂಗ್ರಹಿಸಿಡಬಹುದಾದ ಮೊತ್ತದ ಮೇಲೆ ಯಾವುದೇ ನಿರ್ದಿಷ್ಟ ನಿರ್ಬಂಧವಿಲ್ಲ. ಆದಾಗ್ಯೂ, ಆದಾಯ ತೆರಿಗೆ ಇಲಾಖೆಯ ದಾಳಿಯ ಸಮಯದಲ್ಲಿ, ಹಣದ ಮೂಲವನ್ನು ದೃಢೀಕರಿಸುವುದು ಮುಖ್ಯ. ಲೆಕ್ಕವಿಲ್ಲದ ಹಣ ದಂಡ ಪಾವತಿಗೆ ಕಾರಣವಾಗಬಹುದು. ಸೂಕ್ತ ದಾಖಲೆಗಳಿಲ್ಲದ ಹಣವನ್ನು ವಶಪಡಿಸಿಕೊಳ್ಳುವ ಅಧಿಕಾರ ತೆರಿಗೆ ಅಧಿಕಾರಿಗಳಿಗೆ ಇದೆ. ಒಟ್ಟು ಮೊತ್ತದ ಶೇ. 137ರ ವರೆಗೆ ದಂಡ ವಿಧಿಸಬಹುದಾದ ಅಧಿಕಾರವಿದೆ.

ಇದನ್ನು ನೆನಪಿಡಿ

ಯಾವುದೇ ವ್ಯಕ್ತಿಯು ಸಾಲ ಅಥವಾ ಠೇವಣಿಗಳಿಗಾಗಿ 20,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸುವುದನ್ನು ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಾಗಿ ನಿಷೇಧಿಸಿದೆ. 50,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಪ್ಯಾನ್ ಸಂಖ್ಯೆಗಳು (PAN Numbers) ಕಡ್ಡಾಯ. ಕೇಂದ್ರ ನೇರ ತೆರಿಗೆ ಮಂಡಳಿಯ ಪ್ರಕಾರ, ಒಮ್ಮೆಗೆ 50,000 ರೂ.ಗಿಂತ ಹೆಚ್ಚಿನ ಠೇವಣಿ ಹೂಡಿಕೆ ಮಾಡುವಾಗ ಅಥವಾ ವಿತ್‌ಡ್ರಾ ಮಾಡುವಾಗ ಪ್ಯಾನ್ ಸಂಖ್ಯೆಗಳನ್ನು ಒದಗಿಸಲೇಬೇಕು.

ನಗದು ವಹಿವಾಟುಗಳ ಪರಿಶೀಲನೆ

30 ಲಕ್ಷ ರೂ.ಗಿಂತ ಹೆಚ್ಚಿನ ನಗದು ಮೂಲಕ ಆಸ್ತಿಗಳ ಖರೀದಿ ಅಥವಾ ಮಾರಾಟದಲ್ಲಿ ತೊಡುವವರನ್ನು ತನಿಖೆಗೆ ಒಳಪಡಿಸುವ ಅಧಿಕಾರ ತನಿಖಾ ಸಂಸ್ಥೆಗಳಿಗಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇದು ಮುಖ್ಯ. ಇನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಮೂಲಕ ಒಂದು ಲಕ್ಷ ರೂ.ಗಿಂತ ಹೆಚ್ಚಿನ ಪಾವತಿಯನ್ನು ಪರಿಶೀಲಿಸುವ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭಗಳಲ್ಲಿ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು.

2% ಟಿಡಿಎಸ್

ಒಂದು ವರ್ಷದಲ್ಲಿ ಬ್ಯಾಂಕ್‌ನಿಂದ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವ ವ್ಯಕ್ತಿಗಳು 2% ಟಿಡಿಎಸ್ ಪಾವತಿಸಬೇಕಾಗುತ್ತದೆ. ಅಲ್ಲದೆ ಒಂದು ವರ್ಷದಲ್ಲಿ ನಡೆಸುವ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ದಂಡ ವಿಧಿಸುವ ಸಾಧ್ಯತೆಯೂ ಇದೆ. ಪ್ಯಾನ್ ಮತ್ತು ಆಧಾರ್ ವಿವರಗಳಿಲ್ಲದೆ ಯಾವುದೇ ಖರೀದಿಗಾಗಿ 2 ಲಕ್ಷ ರೂ.ಗಿಂತ ಹೆಚ್ಚು ನಗದು ಪಾವತಿಸಬಾರದು. ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳೊಂದಿಗೆ 1 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಕಾನೂನು ವಿವರಿಸುತ್ತದೆ.

ಕುಟುಂಬ ವ್ಯವಹಾರದ ಮಿತಿ

ಅದೇ ರೀತಿ ಒಂದೇ ದಿನದಲ್ಲಿ ಸಂಬಂಧಿಕರಿಂದ 2 ಲಕ್ಷ ರೂ.ಗಿಂತ ಹೆಚ್ಚು ನಗದು ಸ್ವೀಕರಿಸುವುದು ಅಥವಾ ಇತರರಿಂದ 20,000 ರೂ.ಗಿಂತ ಹೆಚ್ಚಿನ ನಗದನ್ನು ಸಾಲದ ರೂಪದಲ್ಲಿ ಪಡೆಯುವುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಈ ಎಲ್ಲ ನಿಯಮಗಳ ಉಲ್ಲಂಘನೆ ಕಾನೂನು ಕ್ರಮ ಕೈಗೊಳ್ಳಲು ಕಾರಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

Exit mobile version