ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಯನ್ನು (Post Office Savings Account-SB) ತೆರೆಯುವುದು ಹಲವು ದೃಷ್ಟಿಗಳಿಂದ ಲಾಭದಾಯಕ. ಇದು ಎಳೆಯರಲ್ಲಿ ಹಾಗೂ ಇತರ ಎಲ್ಲ ವಯೋಮಾನದ ಜನರಲ್ಲೂ ಉಳಿತಾಯದ ಅಭ್ಯಾಸವನ್ನು ಹೆಚ್ಚಿಸುತ್ತದೆ. ಇದರ ನಿರ್ವಹಣೆ ಅತ್ಯಂತ ಸುಲಭ. ಅಲ್ಪ ಹೂಡಿಕೆಯಿಂದ ಈ ಖಾತೆಯನ್ನು ಮುಂದುವರಿಸಬಹುದು. ಹನಿಗೂಡಿ ಹಳ್ಳ ಎಂಬಂತೆ ಇದು ನಿಮ್ಮ ಸಣ್ಣ ಮೊತ್ತದ ಇನ್ವೆಸ್ಟ್‌ಮೆಂಟ್ ಅನ್ನೂ ಭವಿಷ್ಯದಲ್ಲಿ ದೊಡ್ಡ ಮೊತ್ತವಾಗಿಸುತ್ತದೆ. ಆದ್ದರಿಂದಲೇ ಇವತ್ತಿಗೂ ದೊಡ ಸಂಖ್ಯೆಯಲ್ಲಿ ಜನತೆ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದಕ್ಕೆ ಸರ್ಕಾರವೇ ಖಾತರಿ ನೀಡುವುದರಿಂದ ಸಂಪೂರ್ಣ ಸುರಕ್ಷಿತ.
ಬಡ್ಡಿ ಎಷ್ಟು ಸಿಗುತ್ತದೆ?
ಅಂಚೆ ಇಲಾಖೆಯ ಉಳಿತಾಯ ಯೋಜನೆಗೆ ವಾರ್ಷಿಕ 4% ಬಡ್ಡಿ ಸಿಗುತ್ತದೆ. ಕನಿಷ್ಠ 500 ರೂ. ಮೂಲಕ ಅಕೌಂಟ್ ತೆರೆಯಲು ಸಾಧ್ಯವಿದೆ. ಆದರೆ ಇಲ್ಲೊಂದು ವಿಷಯ ನೆನಪಿಟ್ಟುಕೊಳ್ಳಿ. ಹಣದುಬ್ಬರ 4% ಗಿಂತ ಹೆಚ್ಚು ಇದ್ದಾಗ ಇಲ್ಲಿ ದೀರ್ಘಕಾಲೀನವಾಗಿ ದೊಡ್ಡ ಮೊತ್ತ ಹೂಡಿದರೆ ನಿಮ್ಮ ಹೂಡಿಕೆಯ ಮೌಲ್ಯ ನಷ್ಟವಾದೀತು. ಆದ್ದರಿಂದ ಹೆಚ್ಚು ಬಡ್ಡಿ ಕೊಡುವ ಅಂಚೆ ಇಲಾಖೆಯ ಇತರ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಆದರೆ ಎಸ್‌ಬಿ ಖಾತೆಯಿಂದ ಕೆಲ ಪ್ರಯೋಜನಗಳೂ ಇವೆ.
ಯಾರು ತೆರೆಯಬಹುದು?
18 ವರ್ಷ ಮೇಲಿನ ವಯಸ್ಕರು ತೆರೆಯಬಹುದು. ಇಬ್ಬರು ವಯಸ್ಕರು ಜಂಟಿಯಾಗಿ ತೆರೆಯಬಹುದು. ಅಪ್ರಾಪ್ತರ ಪರವಾಗಿ ಪೋಷಕರು ತೆರೆಯಬಹುದು. ಅಪ್ರಾಪ್ತರ ವಯಸ್ಸಯ 10 ವರ್ಷ ಆಗಿರಬೇಕು. ಜಂಟಿ ಖಾತೆದಾರ ಮೃತಪಟ್ಟರೆ ಬದುಕಿರುವ ಖಾತೆದಾರ ಏಕೈಕ ಖಾತೆದಾರ ಆಗುತ್ತಾರೆ. ಸಿಂಗಲ್ ಖಾತೆಯನ್ನು ಜಂಟಿ ಖಾತೆಗೆ ಹಗೂ ಜಂಟಿ ಖಾತೆಯನ್ನು ಸಿಂಗಲ್ ಖಾತೆಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
ಅಂಚೆ ಉಳಿತಾಯ ಖಾತೆ ತೆರೆಯಲು ನಾಮಿನೇಶನ್ ಕಡ್ಡಾಯವಾಗಿರುತ್ತದೆ. ಅಪ್ರಾಪ್ತರು ವಯಸ್ಕರಾದ ಬಳಿಕ ಹೊಸತಾಗಿ ಖಾತೆ ತೆರೆಯಲು ಅರ್ಜಿ ಸಲಲಿಸಬಹುದು. ಕೆವೈಸಿ ದಾಖಲೆ ನೀಡಬಹುದು.
ಮೊದಲ ಸಲ ಕನಿಷ್ಠ ಹೂಡಿಕೆ 500 ರೂ. ಬಳಿಕ 10 ರೂ.ಗೆ ಕಡಿಮೆ ಇಲ್ಲದಂತೆ ಹೂಡಿಕೆ ಮಾಡಬಹುದು. ಕನಿಷ್ಠ ವಿತ್ ಡ್ರಾವಲ್ ಮೊತ್ತ 50 ರೂ. ವಿಶೇಷವೇನೆಂದರೆ ಈ ಅಕೌಂಟ್‌ನಲ್ಲಿ ಗರಿಷ್ಢ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಎಷ್ಟು ಬೇಕಾದರೂ ಡಿಪಾಸಿಟ್ ಇಡಬಹುದು. ಒಂದು ವೇಳೆ ಆರ್ಥಿಕ ವರ್ಷದ ಕೊನೆಯ ವೇಳೆಗೆ 500 ರೂ. ಬ್ಯಾಲೆನ್ಸ್ ಇರದಿದ್ದರೆ ನಿರ್ವಹಣೆ ಶುಲ್ಕವಾಗಿ 50 ರೂ. ಕಡಿತವಾಗುತ್ತದೆ.
ಬಡ್ಡಿ ಲೆಕ್ಕಾಚಾರ ಹೇಗೆ?
ಪ್ರತಿ ತಿಂಗಳಿನ 10ನೇ ತಾರೀಖು ತಿಂಗಳಿನ ಕೊನೆಯ ದಿನದ ನಡುವೆ ಕನಿಷ್ಠ ಬ್ಯಾಲೆನ್ಸ್ ಆಧರಿಸಿ ಬಡ್ಡಿ ಲೆಕ್ಕಾಚಾರ ಆಗುತ್ತದೆ. ಆರ್ಥಿಕ ವರ್ಷದ ಕೊನೆಯ ವೇಳೆಗೆ ಬಡ್ಡಿಯನ್ನು ಜಮೆ ಮಾಡಲಾಗುತ್ತದೆ. ಹಣಕಾಸು ಸಚಿವಾಲಯ ಬಡ್ಡಿ ನಿಗದಿಪಡಿಸುತ್ತದೆ. ಅಕೌಂಟ್ ಕ್ಲೋಸ್ ಮಾಡುವಾಗ ಬಡ್ಡಿ ನೀಡಲಾಗುತ್ತದೆ. 10,000 ರೂ. ತನಕದ ಬಡ್ಡಿಗೆ ತೆರಿಗೆ ಇರುವುದಿಲ್ಲ. ಸತತ ಮೂರು ವರ್ಷ ಯಾವುದೇ ಠೇವಣಿ ವರ್ಗಾವಣೆ ಆಗದಿದ್ದರೆ ಖಾತೆ ನಿಷ್ಕ್ರಿಯ ಎನ್ನಿಸುತ್ತದೆ.
ಅಂಚೆ ಇಲಾಖೆ ಉಳಿತಾಯ ಖಾತೆ ಜತೆಗೆ ಸಿಗುವ ಸೌಲಭ್ಯಗಳು: ಚೆಕ್ ಬುಕ್, ಎಟಿಎಂ ಕಾರ್ಡ್, ಇ ಬ್ಯಾಂಕಿಂಗ್, ಆಧಾರ್ ಸೀಡಿಂಗ್, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜೀವನ್ ಜ್ಯೋತಿ ಬಿಮಾ ಯೋಜನೆ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Saving scheme : ಹಿರಿಯ ನಾಗರಿಕರಿಗೆ ಅತಿ ಹೆಚ್ಚು ಬಡ್ಡಿ ನೀಡುವ ಉಳಿತಾಯ ಯೋಜನೆ ಯಾವುದು?