ಬೆಂಗಳೂರು: ಮೊದಲೆಲ್ಲ ಅಂಚೆ ಕಚೇರಿ ಎಂದರೆ ಥಟ್ಟನೆ ನೆನಪಿಗೆ ಬರುತ್ತಿದ್ದುದು ಪತ್ರ ವ್ಯವಹಾರ. ಆದರೀಗ ಅಂಚೆ ಕಚೇರಿಗಳು ಬ್ಯಾಂಕ್‌ಗಳಾಗಿಯೂ ಮಾರ್ಪಾಡಾಗಿವೆ. ಉಳಿತಾಯ ಎಂದಾಗ ಈಗ ಬ್ಯಾಂಕ್ ಜತೆಗೆ ಅಂಚೆ ಕಚೇರಿಯೂ ನೆನಪಿಗೆ ಬರುತ್ತದೆ. ಯಾಕೆಂದರೆ ಪೋಸ್ಟ್ ಆಫೀಸ್ ಬ್ಯಾಂಕ್‌ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನರು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಇಂದಿನ ಮನಿಗೈಡ್ (Money Guide)ನಲ್ಲಿ ಪೋಸ್ಟ್ ಆಫೀಸ್‌ನ ನಿಷ್ಕ್ರಿಯ ಖಾತೆಯನ್ನು ಹೇಗೆ ಪುನಃ ಸಕ್ರೀಯಗೊಳಿಸುವುದು ಎನ್ನುವುದನ್ನು ನೋಡೋಣ.
ಯಾವಾಗ ನಿಷ್ಕ್ರಿಯವಾಗುತ್ತದೆ?
ನಿರ್ದಿಷ್ಟ ಅವಧಿಯವರೆಗೆ ಖಾತೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿದ್ದಾಗ ಅಂಚೆ ಕಚೇರಿಯಲ್ಲಿ ಖಾತೆಯನ್ನು ನಿಷ್ಕ್ರೀಯವೆಂದು ಪರಿಗಣಿಸಲಾಗುತ್ತದೆ. ಅಂದರೆ ಸತತ ಮೂರು ಹಣಕಾಸು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿ ಯಾವುದೇ ಠೇವಣಿ ಹೂಡಿಕೆ ಅಥವಾ ವಿತ್‌ಡ್ರಾ ನಡೆಯದಿದ್ದರೆ ಆ ಖಾತೆಯನ್ನು ಸುಪ್ತ (ನಿಷ್ಕ್ರಿಯ) ಎಂದು ಕರೆಯಲಾಗುತ್ತದೆ.
ಪುನಃ ಸಕ್ರಿಯಗೊಳಿಸಲು ಸಾಧ್ಯವೇ?
ಖಂಡಿತ ಸಾಧ್ಯವಿದೆ. ಕೆಲವೊಂದು ಡಾಕ್ಯುಮೆಂಟ್ ಸಲ್ಲಿಸುವ ಮೂಲಕ ಖಾತೆಯನ್ನು ಮತ್ತೆ ಚಾಲ್ತಿಗೆ ತರಬಹುದು. ಹೊಸ ಕೆವೈಸಿ ದಾಖಲೆಗಳು ಮತ್ತು ಪಾಸ್‌ಬುಕ್‌ನೊಂದಿಗೆ ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ನಿಮ್ಮ ಪೋಸ್ಟ್ ಆಫೀಸ್‌ನ ಖಾತೆ ಮತ್ತೆ ಕಾರ್ಯ ನಿರ್ವಹಿಸಲಿದೆ.
ಖಾತೆ ತೆರೆಯುವುದು ಸುಲಭ
ಪೋಸ್ಟ್ ಆಫೀಸ್‌ನ ಖಾತೆಯ ಮುಖ್ಯ ಅನುಕೂಲವೆಂದರೆ ಇಲ್ಲಿ ಅಕೌಂಟ್ ತೆರೆಯುವುದು ಬಹಳ ಸುಲಭ. ಅಗತ್ಯ ದಾಖಲೆ ನೀಡಿ, ಕೇವಲ 500 ರೂ. ಡೆಪಾಸಿಟ್ ಮಾಡಿದರೆ ಉಳಿತಾಯ ಖಾತೆ ತೆರೆಯಲಾಗುತ್ತದೆ. ಇನ್ನು ಚೆಕ್‌ಬುಕ್, ಎಟಿಎಂ ಕಾರ್ಡ್, ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳೂ ಇವೆ. ವರ್ಷಕ್ಕೆ ಶೇ. 4ರಷ್ಟು ಬಡ್ಡಿಯೂ ಸಿಗುತ್ತದೆ.
ಯಾರೆಲ್ಲ ತೆರೆಯಬಹುದು?
- ವಯಸ್ಕರು (18 ವರ್ಷ ಪ್ರಾಯ ಪೂರ್ತಿಯಾದವರು)
- ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು
- ಮಾನಸಿಕ ಅಸ್ವಸ್ಥರ ಪರವಾಗಿ ಪಾಲಕರು
ಠೇವಣಿ ಮತ್ತು ವಿತ್‌ಡ್ರಾ ವಿವರ
- ಕನಿಷ್ಠ ಹೂಡಿಕೆ ಮೊತ್ತ 500 ರೂ.
- ಕನಿಷ್ಠ ವಿತ್‌ಡ್ರಾ ಮೊತ್ತ 50 ರೂ.
- ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ
- ಕನಿಷ್ಠ ಬ್ಯಾಲೆನ್ಸ್ 500 ರೂ. ಇರಲೇ ಬೇಕು.
- ಖಾತೆಯ ಬ್ಯಾಲೆನ್ಸ್ ಶೂನ್ಯವಾದರೆ ಖಾತೆ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?
ಬಡ್ಡಿದರ
- ತಿಂಗಳ 10ನೇ ತಾರೀಕಿನಿಂದ ತಿಂಗಳ ಅಂತ್ಯದವರೆಗೆ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.
- 10ನೇ ತಾರೀಕಿನಿಂದ ಕೊನೆಯ ದಿನದ ನಡುವಿನ ಬ್ಯಾಲೆನ್ಸ್ 500 ರೂ.ಗಿಂತ ಕಡಿಮೆಯಿದ್ದರೆ ಯಾವುದೇ ಬಡ್ಡಿ ಲಭಿಸುವುದಿಲ್ಲ
- ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹಣಕಾಸು ಸಚಿವಾಲಯ ಸೂಚಿಸಿದ ಬಡ್ಡಿದರವನ್ನು ಖಾತೆಗೆ ಜಮಾ ಮಾಡಲಾಗುತ್ತದೆ
- ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಆರ್‌ಡಿ ಖಾತೆ
ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ (Recurring Deposit) ಖಾತೆ ತೆಗೆಯುವುದು ಉಳಿತಾಯ ಖಾತೆ ತೆರೆದಷ್ಟೇ ಸುಲಭ. ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದವರು ಆರ್‌ಡಿ ಮಾಡಬಹುದಾಗಿದೆ. ಐದು ವರ್ಷದ ಅವಧಿಗೆ ಮಾಸಿಕ ಇಂತಿಷ್ಟು ಹಣ ಕಟ್ಟುತ್ತ ಹೋದರೆ ಐದು ವರ್ಷಕ್ಕೆ ಶೇ. 6.2ರಷ್ಟು ಬಡ್ಡಿಯ ಲಾಭ ದೊರೆಯಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ