ಹಣವೇ ದೇವರು. ಸಿರಿ ಸಂಪತ್ತನ್ನು ಲಕ್ಷ್ಮೀ ದೇವಿಗೆ ಹೋಲಿಸುವುದು ( Money Guide ) ಭಾರತೀಯ ಸನಾತನ ಸಂಪ್ರದಾಯವೂ ಆಗಿದೆ. ಪ್ರತಿಯೊಬ್ಬರಿಗೂ ಧನ-ಕನಕ ಅವಶ್ಯಕ. ಆದರೆ ಅದನ್ನು ನೀವು ಹೇಗೆ ಸಂಪಾದಿಸುತ್ತೀರಿ, ಹೇಗೆ ಖರ್ಚು ಮಾಡುತ್ತೀರಿ ಎಂಬುದು ನಿರ್ಣಾಯಕವಾಗುತ್ತದೆ. ಬಹಳಷ್ಟು ಮಂದಿ ಹಣ ಅಗತ್ಯವಾಗಿ ಬೇಕು ಎನ್ನಿಸುವ ತನಕ ಅದರ ಬಗ್ಗೆ ಆಲೋಚಿಸುವುದಿಲ್ಲ.
ಸಾಮಾನ್ಯವಾಗಿ ಎಳೆಯರಾಗಿದ್ದಾಗ ಮಕ್ಕಳಿಗೆ ದುಡ್ಡಿನ ಅವಶ್ಯಕತೆ ಇರುವುದಿಲ್ಲ. ತಂದೆ ತಾಯಿಗಳೇ ಅವರ ಸಣ್ಣ ಪುಟ್ಟ ಬೇಕು ಬೇಡಗಳನ್ನು ಈಡೇರಿಸಬಲ್ಲರು. ಆದರೆ ಬಾಲ್ಯ ಕಳೆದು ಪ್ರೌಢರಾಗುವ ವೇಳೆಗೆ ಮಕ್ಕಳ ಲೈಫ್ ಸ್ಟೈಲ್ ಬದಲಾಗುತ್ತದೆ. ದುಬಾರಿ ವಸ್ತುಗಳು ಬೇಕು ಎಂದು ಅನ್ನಿಸತೊಡಗುತ್ತದೆ. ಬ್ರಾಂಡೆಡ್ ಬಟ್ಟೆ ಬರೆಗಳು, ವಾಚು, ಐಪೋನ್ ಬೇಕು ಎನ್ನಿಸುತ್ತದೆ. ಹಾಗೂ ಅದಕ್ಕೆ ಪೋಷಕರು ಅಡ್ಡಗಾಲು ಹಾಕಿದಾಗ ಮಕ್ಕಳಿಗೆ ಹೊಸ ಜ್ಞಾನೋದಯವಾಗುತ್ತದೆ. ಹೆತ್ತವರು ಎಟಿಎಂನಂತೆ ದುಡ್ಡು ಕೊಡುತ್ತಿದ್ದರೂ, ಅದಕ್ಕೆ ಮಿತಿ ಇದೆ. ಒಂದು ಹಂತದ ಬಳಿಕ ಅದು ಸಿಗದು ಎಂಬುದು ಅರಿವಿಗೆ ಬರುತ್ತದೆ. ಎರಡನೆಯದಾಗಿ ಶಿಕ್ಷಣ ಮುಗಿಸಿ ಯಾವುದಾದರೂ ಉದ್ಯೋಗ ಹಿಡಿದು ಬೇರೊಂದು ನಗರದಲ್ಲಿ ಸ್ವಂತ ಸಂಬಳದಲ್ಲಿ ಜೀವನ ನಡೆಸುವಾಗ, ಪ್ರತಿಯೊಂದು ರೂಪಾಯಿಯ ಬೆಲೆ ಗೊತ್ತಾಗುತ್ತದೆ. ಆಗ ದಿಢೀರನೆ ಮನೆಯಲ್ಲೇ ಅಡುಗೆ ಮಾಡುವುದರ ಮಹತ್ವ ಗೊತ್ತಾಗುತ್ತದೆ.
ನಿಮ್ಮ ಸಂಬಳದ ಹಣವನ್ನು ಪ್ರತಿ ತಿಂಗಳಿನ ಕೊನೆಯ ತನಕ ಖರ್ಚಿಗೆ ಸಾಕಾಗುವಂತೆ ಹೊಂದಿಸಬೇಕಾಗುತ್ತದೆ. ಯಾರಿಗೆ ಸಾಲುತ್ತೆ ಸಂಬಳ ಎನ್ನುವಂತೆ ನಿರೀಕ್ಷೆಗಳನ್ನೆಲ್ಲ ಪೂರೈಸಲು ವೇತನ ಸಾಲುವುದಿಲ್ಲ. ಒಂದು ವೇಳೆ ಅಕಸ್ಮಾತ್ ಉದ್ಯೋಗ ನಷ್ಟವಾದರೆ ಮತ್ತೆ ಅತಂತ್ರ ಪರಿಸ್ಥಿತಿ ಉಂಟಾಗುತ್ತದೆ. ಅದೇ ವೇಳೆ ಆರೋಗ್ಯ ಸಮಸ್ಯೆಯೂ ಎದುರಾದರೆ ಆಸ್ಪತ್ರೆ ಬಿಲ್ ಕಟ್ಟಲೂ ಪರದಾಡುವ ಪ್ರಸಂಗ ಎದುರಾಗಬಹುದು.
ಇದನ್ನೂ ಓದಿ: Money Guide: ಹೋಮ್‌ಲೋನ್ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ
ಒಂದು ವೇಳೆ ಹೊಸ ಮನೆ ಖರೀದಿಸುವ ಪ್ಲಾನ್ ಹಾಕಿಕೊಂಡಿದ್ದರೆ, ಗೃಹ ಸಾಲದ ಡೌನ್ ಪೇಮೆಂಟ್ ಮಾಡಲು ಹಣದ ಕೊರತೆ ಉಂಟಾಗಬಹುದು. ಮಾಸಿಕ ಸಮಾನ ಕಂತು (ಇಎಂಐ) ಹೊರೆಯಾಗಬಹುದು. ಬಳಿಕ ನಿವೃತ್ತಿಯಾಗುವಾಗ, ಇಳಿಗಾಲದ ಬದುಕಿಗೆ ಆರ್ಥಿಕ ಭದ್ರತೆ ಅಗತ್ಯ ಮತ್ತು ಅದಕ್ಕಾಗಿ ಏನು ಮಾಡುವುದು ಎಂಬ ಪ್ರಶ್ನೆ ಮೂಡುತ್ತದೆ. ದೇಶದ ಇತಿಹಾಸ ಗಮನಿಸಿದರೆ, ಬಹುತೇಕ ಕುಟುಂಬಗಳಲ್ಲಿ ಜನರು ಹಣದ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿರಲಿಲ್ಲ. ಅದರ ಬಗ್ಗೆ ಮಾತನಾಡುವುದು ಎಂದರೆ ಹಿಂಜರಿಕೆಯ ಭಾವ. ಆದರೆ ಇದೆಲ್ಲವೂ ಗತಕಾಲದ ಪರಿಸ್ಥಿತಿಯಾಗಿದೆ. ಬದಲಾದ ಕಾಲ ಘಟ್ಟದಲ್ಲಿ ಮಾರುಕಟ್ಟೆಯೂ ಮೊದಲಿನಂತಿಲ್ಲ. ಭಾರತೀಯರು ಈಗಲೂ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಜೀವ ವಿಮೆ, ರಿಯಲ್ ಎಸ್ಟೇಟ್‌ನಲ್ಲಿ ಹೂಡುತ್ತಿದ್ದಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಈಗಲೂ ಕಡಿಮೆ. ಆದರೆ ಬ್ಯಾಂಕ್ ಎಫ್‌ಡಿಗಿಂತ ಹೆಚ್ಚು ಆದಾಯವನ್ನು ಮ್ಯೂಚುವಲ್ ಫಂಡ್‌ಗಳು ನೀಡುತ್ತವೆ. ಹಣ ಸಂಪಾದನೆಯನ್ನು ಗಳಿಸಲು ರಿಸ್ಕ್ ಅನ್ನೂ ತೆಗೆದುಕೊಳ್ಳಬೇಕು. ರಿಸ್ಕ್ ಇದ್ದಲ್ಲಿ ರಿವಾರ್ಡ್ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ.