Site icon Vistara News

Money Guide: ಸಿಬಿಲ್‌ ಸ್ಕೋರ್‌ ಕಡಿಮೆ ಇದ್ದರೂ ಚಿಂತೆ ಬೇಡ; ಸಾಲ ಪಡೆಯಲು ಇಲ್ಲಿದೆ ದಾರಿ

loan

loan

ಬೆಂಗಳೂರು: ಜೀವನದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಮಾತ್ರವಲ್ಲ ವರ್ಷದಿಂದ ವರ್ಷಕ್ಕೆ ಜೀವನ ದುಬಾರಿಯಾಗುತ್ತಿದೆ. ಮನೆ ನಿರ್ಮಾಣ, ವಾಹನ ಖರೀದಿ, ಕೃಷಿ ಚಟುವಟಿಕೆ, ಮಕ್ಕಳ ಶಿಕ್ಷಣ ಹೀಗೆ ವಿವಿಧ ಕಾರಣಗಳಿಗೆ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಬ್ಯಾಂಕ್‌ನಿಂದ ಸಾಲ ಪಡೆಯಲು ಉತ್ತಮ ಸಿಬಿಲ್‌ ಸ್ಕೋರ್‌ (CIBIL Score) ಹೊಂದಿರುವುದು ಅಗತ್ಯ. ಸಿಬಿಲ್‌ ಸ್ಕೋರ್‌ ಕಡಿಮೆ ಇದ್ದರೆ ಸಾಲ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಅಧಿಕ ಬಡ್ಡಿದರ ವಿಧಿಸಲಾಗುತ್ತದೆ. ಆದರೆ ಇನ್ನು ಮುಂದೆ ಸಿಬಿಲ್‌ ಸ್ಕೋರ್‌ ಕಡಿಮೆ ಇದ್ದರೆ ಚಿಂತೆ ಮಾಡಬೇಕಿಲ್ಲ. ಭಾರತೀಯ ಜೀವ ವಿಮಾ ನಿಗಮ (LIC-ಎಲ್‌ಐಸಿ) ಗ್ರಾಹಕರಿಗೆ ನೀಡುವ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ (Money Guide).

300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಹೆಚ್ಚಿನ ಸಿಬಿಲ್ ಸ್ಕೋರ್ ವ್ಯಕ್ತಿಯು ಉತ್ತಮವಾಗಿ ಸಾಲ ತೆಗೆದುಕೊಳ್ಳುವ ಮತ್ತು ಅಷ್ಟೇ ಜವಾಬ್ದಾರಿಯುತವಾಗಿ ತೆಗೆದುಕೊಂಡ ಸಾಲವನ್ನು ವಾಪಸ್ ತೀರಿಸುವ ನಡವಳಿಕೆಯನ್ನು ಪ್ರದರ್ಶಿಸಿದ್ದಾನೆ ಎನ್ನುವುದನ್ನು ತೋರಿಸುತ್ತದೆ. ಕನಿಷ್ಠ 6 ತಿಂಗಳ ವ್ಯವಹಾರವನ್ನು ಗಣನೆಗೆ ತೆಗೆದುಕೊಂಡು ವ್ಯಕ್ತಿಯ ಸಿಬಿಲ್ ಸ್ಕೋರ್ ಅನ್ನು ಲೆಕ್ಕ ಹಾಕಲಾಗುತ್ತದೆ.

ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. ಆದರೆ ಎಲ್‌ಐಸಿಗೆ ಸಿಬಿಲ್‌ ಸ್ಕೋರ್‌ ಅಗತ್ಯವಿಲ್ಲ. ಹೀಗಾಗಿ ನೀವು ಜೀವ ರಕ್ಷಣೆಯ ಜತೆಗೆ ಆವಶ್ಯ ಸಂದರ್ಭದಲ್ಲಿ ಸಾಲ ಪಡೆದುಕೊಳ್ಳಲೂ ಎಲ್‌ಐಸಿ ಪಾಲಿಸಿ ಮಾಡಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಅಂದರೆ ಎಲ್‌ಐಸಿಯಲ್ಲಿ ನಿಮ್ಮ ಹೆಸರಿನಲ್ಲಿ ಪಾಲಿಸಿಯಿದ್ದರೆ ಅದರ ಆಧಾರದಲ್ಲಿ ಲೋನ್‌ ಪಡೆಯಬಹುದಾಗಿದೆ. ಬಡ್ಡಿದರವು ಕೂಡಾ ವೈಯಕ್ತಿಕ ಸಾಲಕ್ಕೆ ಹೋಲಿಕೆ ಮಾಡಿದರೆ ಅತೀ ಕಡಿಮೆ ಎನ್ನುವುದು ಗಮನಿಸಬೇಕಾದ ಸಂಗತಿ.

ಅರ್ಹತೆ ಏನು?

ಎಲ್‌ಐಸಿ ಪಾಲಿಸಿಯನ್ನು ಅಡಮಾನವಾಗಿಟ್ಟು ಪಡೆಯುವ ಸಾಲ ಇದಾಗಿದೆ. ಪಾಲಿಸಿ ಖರೀದಿಸಿದ ಕೂಡಲೇ ಸಾಲ ದೊರೆಯುವುದಿಲ್ಲ. ನಿಗದಿತ ಅವಧಿಯ ಬಳಿಕ ಸಾಲವನ್ನು ಪಡೆಯಲು ಅವಕಾಶ ಸಿಗುತ್ತದೆ. ಜತೆಗೆ ಸಾಲ ಪಡೆಯುವವರಿಗೆ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಎನ್ನುವುದು ಕಡ್ಡಾಯ. ಮೂರು ವರ್ಷಗಳ ಅವಧಿಯ ವಾರ್ಷಿಕ ಪ್ರೀಮಿಯಂ ಪಾವತಿಸಿದವರು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಎಲ್‌ಐಸಿ ಪಾಲಿಸಿ ಮೊತ್ತದ ಶೇ. 90ರಷ್ಟು ಮೊತ್ತ ಸಾಲದ ರೂಪದಲ್ಲಿ ಲಭಿಸುತ್ತದೆ.

ಬಡ್ಡಿದರ ಎಷ್ಟು?

ಎಲ್‌ಐಸಿ ಪಾಲಿಸಿಯಡಿ ಪಡೆಯುವ ಸಾಲದ ಬಡ್ಡಿದರವು ಸಾಮಾನ್ಯವಾಗಿ ಶೇ. 10ರಿಂದ ಶೇ. 13ರ ನಡುವೆ ಇರುತ್ತದೆ. ಪ್ರತಿ ತಿಂಗಳು ಇಎಂಐ ಪಾವತಿಸುವ ತಲೆಬಿಸಿಯೂ ಇಲ್ಲಿಲ್ಲ. ನಿಮಗೆ ಹೇಗೆ ಸಾಧ್ಯವಾಗುತ್ತದೋ ಹಾಗೆ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಸಾಲವನ್ನು ಮರುಪಾವತಿ ಮಾಡಬಹುದು. ಒಂದು ವೇಳೆ ಸಾಲ ಮರುಪಾವತಿ ಮಾಡದಿದ್ದರೆ ಪಾಲಿಸಿ ಮೆಚ್ಯೂರ್ ಆದಾಗ ಬಡ್ಡಿದರವನ್ನು ಕಡಿತಗೊಳಿಸಲಾಗುತ್ತದೆ. ಸಾಲದ ಮೊತ್ತ ಕಡಿತ ಮಾಡಿ ಪಾಲಿಸಿ ಹಣವನ್ನು ನೀಡಲಾಗುತ್ತದೆ.

ಸಾಲ ಪಡೆಯುವುದು ಹೇಗೆ?

ಇನ್ನೊಂದು ಮುಖ್ಯ ವಿಚಾರ ಎಂದರೆ ಎಲ್‌ಐಸಿಯಿಂದ ಸಾಲ ಪಡೆಯುವ ವಿಧಾನ ಸರಳವಾಗಿದೆ. ಆನ್‌ಲೈನ್‌ ಮೂಲಕ ನೀವು ಕುಳಿತಲ್ಲಿಂದಲೇ ಮೊಬೈಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version