ಬೆಂಗಳೂರು: ವೈಯಕ್ತಿಕ ಡಿಮ್ಯಾಟ್ ಖಾತೆದಾರರು (Demat account holders) ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರ (Mutual fund investors) ಗಮನಕ್ಕೆ… ಡಿಸೆಂಬರ್ 31ರೊಳಗೆ ಘೋಷಣೆ ಫಾರ್ಮ್ ಸಲ್ಲಿಸುವ ಮೂಲಕ ನಾಮನಿರ್ದೇಶಿತ(Nominate a beneficiary-ನಾಮಿನಿ)ರ ಹೆಸರನ್ನು ಘೋಷಿಸಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡಲು ಸರ್ಕಾರ ತಿಳಿಸಿದೆ. ಒಂದು ವೇಳೆ ಸರ್ಕಾರ ವಿಧಿಸಿದ ಗಡುವಿನೊಳಗೆ ಈ ಪ್ರಕ್ರಿಯೆ ನಡೆಸದಿದ್ದರೆ ಏನಾಗುತ್ತದೆ ಎನ್ನುವುದರ ವಿವರ ಮನಿಗೈಡ್ (Money Guide)ನಲ್ಲಿದೆ.
ವರ್ಷಾಂತ್ಯದ ವೇಳೆಗೆ ಡಿಮ್ಯಾಟ್ ಖಾತೆದಾರರು ನಾಮನಿರ್ದೇಶನ ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡದಿದ್ದರೆ ಅಂತಹವರ ಡಿಮ್ಯಾಟ್ ಖಾತೆ ಮತ್ತು ಫೋಲಿಯೊ ಸ್ಥಗಿತಗೊಳಿಸಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಚ್ಚರಿಸಿದೆ. ಈ ಆದೇಶವು ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಅನ್ವಯವಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗೆ ನಾಮಿನೇಶನ್ ಮಾಡುವಾಗ ಸಾಕ್ಷಿಯ ಅಗತ್ಯ ಇರುವುದಿಲ್ಲ. ಇ-ಸೈನ್ ಬಳಸಿ ನಾಮಿನೇಶನ್ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ಮಾಡಬಹುದು. ಆಫ್‌ಲೈನ್‌ನಲ್ಲೂ ಮಾಡಬಹುದಾದ ಆಯ್ಕೆ ಇದೆ. ನಿಮ್ಮ ಡಿಮ್ಯಾಟ್ ಖಾತೆಯ ಪೂರೈಕೆದಾರ DP ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಾಮಿನೇಶನ್ ಮಾಡಬಹುದು. NSDL DP ವೆಬ್‌ಸೈಟ್ ಮೂಲಕವೂ ಬದಲಿಸಬಹುದು. ನಿಮ್ಮ ಡಿಮ್ಯಾಟ್ ಖಾತೆಗೆ ಮೂರು ನಾಮಿನಿಗಳನ್ನು ಹೆಸರಿಸಬಹುದು. ನಿಮ್ಮ ತಂದೆ, ತಾಯಿ, ಸಂಗಾತಿ, ಮಕ್ಕಳು ಅಥವಾ ಬೇರೆ ಯಾರಾದರೂ ನಾಮಿನಿ ಆಗಬಹುದು. ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಈ ಹಿಂದೆ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಆಯ್ಕೆಯನ್ನು ಒದಗಿಸುವಂತೆ ಜುಲೈ 2021ರಲ್ಲಿಯೇ ಸೆಬಿ ಹೇಳಿತ್ತು. ಮಾರ್ಚ್ 31, 2022ರ ಗಡುವು ನೀಡಿತ್ತು. ನಂತರ ಅದನ್ನು ಇನ್ನೂ ಒಂದು ವರ್ಷ ಅಂದರೆ ಮಾರ್ಚ್ 31, 2023ರವರೆಗೆ ನಂತರ ಮತ್ತೆ ಸೆಪ್ಟೆಂಬರ್ 30, 2023ರವರೆಗೆ ಬಳಿಕ ಡಿಸೆಂಬರ್ 31, 2023ರವರೆಗೆ ವಿಸ್ತರಿಸಿತ್ತು. ಇನ್ನು ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: Money Guide: ಆಧಾರ್ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು
ಯಾಕಾಗಿ ಈ ಕ್ರಮ?
ಮುಖ್ಯವಾಗಿ ಎರಡು ಕಾರಣಕ್ಕಾಗಿ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಮೊದಲನೆಯದ್ದು ಈ ಹಿಂದೆ ಹೇಳಿದಂತೆ ಹೂಡಿಕೆದಾರರ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು. ಇನ್ನು ಎರಡನೇ ಕಾರಣ ಎಂದರೆ, ಈ ಹಿಂದೆ ಅನೇಕ ಖಾತೆದಾರರು ತಮಗೆ ಏನಾದರೂ ಸಂಭವಿಸಿದರೆ ಆಸ್ತಿಗಳನ್ನು ಯಾರಿಗೆ ವರ್ಗಾಯಿಸಬೇಕು ಎಂಬುದನ್ನು ನಾಮನಿರ್ದೇಶನ ಮಾಡದೆ ಅನೇಕ ಹೂಡಿಕೆ ಖಾತೆಗಳನ್ನು ತೆರೆದಿದ್ದರು. ಇದರಿಂದಾಗಿ ನಿಜವಾದ ವಾರಸುದಾರರನ್ನು ಕಂಡುಕೊಳ್ಳಲು ಬಹಳ ಶ್ರಮ ಪಡಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಅಲ್ಲದೆ ಕೆಲವೊಮ್ಮೆ ಬೇರೆ ಯಾರಿಗೋ ಅನುಕೂಲ ಲಭಿಸಿ ನಿಜವಾದ ವಾರಸುದಾರರಿಗೆ ಅನ್ಯಾಯವಾದ ಘಟನೆಯೂ ನಡೆದಿತ್ತು. ಈ ಎಲ್ಲ ಕಾರಣಗಳಿಂದ ನಾಮಿನಿ ಹೆಸರನ್ನು ಸೂಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರ್ಥಿಕ ತಜ್ಞರು ವಿವರಿಸುತ್ತಾರೆ.