Site icon Vistara News

Money Guide: ಕೋಟ್ಯಧಿಪತಿಗಳಾಗಬೇಕೆ? ಹಾಗಾದರೆ ಈ ತಪ್ಪುಗಳನ್ನು ಮಾಡದಿರಿ!

pigg bank

pigg bank

ಬೆಂಗಳೂರು: ಹಣಕಾಸಿನ ಬಗ್ಗೆ ಯುವಜನತೆ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ಆರ್ಥಿಕ ಸ್ಥಿರತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಯಶಸ್ಸಿಗೆ ದಾರಿ ಮಾಡಿ ಕೊಡುತ್ತವೆ. ಆದರೆ ಬಹುತೇಕರು ಈ ಹಂತದಲ್ಲಿಯೇ ಎಡವುತ್ತಾರೆ. ಚಿಕ್ಕ ವಯಸ್ಸಿನಲ್ಲಿ ನಾವು ಆರ್ಥಿಕತೆಗೆ ಸಂಬಂಧಪಟ್ಟು ಮಾಡುವ ತಪ್ಪುಗಳೇನು? ಅದನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ಕ್ರೆಡಿಟ್‌ ಕಾರ್ಡ್‌ನ ಅತಿಯಾದ ಬಳಕೆ

ಡಿಜಿಟಲ್‌ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟು ಯುಪಿಐ ಮತ್ತು ಮೊಬೈಲ್‌ ವ್ಯಾಲೆಟ್‌ಗಳು ಜನಪ್ರಿಯತೆ ಗಳಿಸುತ್ತಿದ್ದರೂ, ಕ್ರೆಡಿಟ್‌ ಕಾರ್ಡ್‌ಗಳು ಈಗಲೂ ದೊಡ್ಡ ಮೊತ್ತದ ಖರೀದಿ ಮತ್ತು ರಿವಾರ್ಡ್‌ ಪಾಯಿಂಟ್‌ಗಳಿಗಾಗಿ ಆಕರ್ಷಣೆ ಉಳಿಸಿಕೊಂಡಿವೆ. ಜತೆಗೆ ಕ್ರೆಡಿಟ್‌ ಸ್ಕೋರ್‌ ಹೆಚ್ಚಿಸಿಕೊಳ್ಳಲೂ ಕ್ರೆಡಿಟ್‌ ಕಾರ್ಡ್‌ ಉಪಯುಕ್ತ. ಆದಾಗ್ಯೂ ಅನಗತ್ಯ ಖರೀದಿಗಳಿಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ವಿವೇಚನೆಯಿಲ್ಲದೆ ಬಳಸಿದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಅತಿಯಾದ ಬಳಕೆಯು ಸಾಲ ಸಂಗ್ರಹಣೆಗೆ ಕಾರಣವಾಗುತ್ತದೆ.

ಇತರರೊಂದಿಗೆ ಹೋಲಿಕೆ

ಬಟ್ಟೆ, ಮೇಕಪ್ ಮತ್ತು ಇತರ ಐಷಾರಾಮಿ ವಸ್ತುಗಳ ಮೇಲೆ ಅತಿಯಾಗಿ ಖರ್ಚು ಮಾಡುವ ಗೆಳೆಯರ ಪ್ರಭಾವಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ದರ್ಬಲಗೊಳಿಸಬಲ್ಲವು. ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಂಡು ಅವರಂತೆ ಖರ್ಚು ಮಾಡಲು ಮುಂದಾಗಬೇಡಿ. ʼಹಾಸಿಗೆ ಇದ್ದಷ್ಟೇ ಕಾಲು ಚಾಚುʼ ಎನ್ನವುದು ನಮ್ಮ ಧ್ಯೇಯ ವಾಕ್ಯವಾಗಬೇಕೇ ಹೊರತು ʼಸಾಲ ಮಾಡಿಯಾದರೂ ತುಪ್ಪ ತಿನ್ನುʼ ಎನ್ನುವ ಪರಿಸ್ಥಿತಿ ಬರಬಾರದು.

ಐಷರಾಮಿ ವಸ್ತುಗಳಿಗಾಗಿ ಅನಗತ್ಯ ಖರ್ಚು

ಐಷಾರಾಮಿ ವಸ್ತುಗಳ ಮೇಲಿನ ಹೂಡಿಕೆ ನಿಮ್ಮ ಮೇಲಿನ ಬಹುದೊಡ್ಡ ಹೊರೆಯಾಗಿ ಬದಲಾಗಬಹುದು. ಯಾವುದೇ ವಸ್ತು ಖರೀದಿಸುವ ಮುನ್ನ ಅದು ತೀರಾ ಅಗತ್ಯವೇ ಎನ್ನುವುದನ್ನ ಮತ್ತೆ ಮತ್ತೆ ಆಲೋಚಿಸಿ. ಅಪರೂಪಕ್ಕೆ ಬಳಸ್ಪಡುವ ವಸ್ತು ಆಗಿದ್ದರೆ ಖರೀದಿಸಬೇಡಿ. ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾಗಿ ಅನಗತ್ಯ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಗುಡ್ಡೆ ಹಾಕುವ ಅಭ್ಯಾಸವನ್ನು ಬಿಟ್ಟು ಬಿಡಿ. ಅತೀ ಅಗತ್ಯದ ದುಬಾರಿ ವಸ್ತುಗಳನ್ನು ರಿಯಾಯಿತಿ ಇದ್ದಾಗಲೇ ಖರೀದಿಸಿ.

ಉಳಿತಾಯದತ್ತ ಗಮನ ಹರಿಸದೇ ಇರುವುದು

ಯುವ ವೃತ್ತಿಪರರು ಐಷಾರಾಮಿ ವಸ್ತುಗಳ ಮೇಲೆ ಅತಿಯಾದ ಖರ್ಚು ಮಾಡುವ ಬದಲು ಉಳಿತಾಯಕ್ಕೆ ಆದ್ಯತೆ ನೀಡಬೇಕು ಎಂದು ಆರ್ಥಿಕ ತಜ್ಞರು ಕಿವಿ ಮಾತು ಹೇಳುತ್ತಾರೆ. ಆರಂಭದಲ್ಲಿ ನಿಯಮಿತವಾಗಿ ಉಳಿತಾಯದ ಕಡೆಗೆ ಗಮನ ಹರಿಸಬೇಕು. ಬಳಿಕ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಅಥವಾ ಚಿನ್ನದಂತಹ ಆಯ್ಕೆಗಳಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು. ಇದರಿಂದ ಭದ್ರವಾದ ಹಣಕಾಸು ಅಡಿಪಾಯವನ್ನು ನಿರ್ಮಿಸಬಹುದು.

ವಿಮೆ ಮಾಡಿಸದೇ ಇರುವುದು

ಇಂದಿನ ಕಾಲದಲ್ಲಿ ವಿಮೆ ಎನ್ನುವುದು ಆಯ್ಕೆಯಲ್ಲ, ಅನಿವಾರ್ಯ ಎಂದು ಆರ್ಥಿಕ ತಜ್ಞರು ಯಾವಾಗಲೂ ಹೇಳುತ್ತಾರೆ. ದಿನದಿಂದ ದಿನಕ್ಕೆ ವಸ್ತುಗಳ ಬೆಲೆ ಏರಿಕೆಯ ಜತೆಗೆ ಔಷಧ, ಚಿಕಿತ್ಸೆ ವೆಚ್ಚಗಳು ಹೆಚ್ಚುತ್ತಾ ಹೋಗುತ್ತವೆ. ಹೀಗಾಗಿ ಇದರಿಂದ ಪಾರಾಗಲು ಜೀವ ವಿಮೆ ಜತೆಗೆ ಆರೋಗ್ಯ ವಿಮೆಯನ್ನೂ ಮಾಡಿಸಬೇಕು. ನಿಮ್ಮ ಜತೆಗೆ ಕುಟುಂಬವನ್ನೂ ಒಳಗೊಳ್ಳುವ ವಿಮೆ ಮಾಡಿಸುವತ್ತ ಗಮನ ಹರಿಸಿ. ಇದು ಅನಿರೀಕ್ಷಿತ ಆಘಾತದ ಸಂದರ್ಭದಲ್ಲಿ ಆರ್ಥಿಕವಾಗಿ ನೀವು ಕುಗ್ಗದಂತೆ ತಡೆಯುತ್ತದೆ.

ಇದನ್ನೂ ಓದಿ: Money Guide: ಕಡಿಮೆ ಬಡ್ಡಿ ದರದ ಸಾಲ ಬೇಕೆ? ಮೊದಲು ಈ ಕೆಲಸ ಮಾಡಿ

Exit mobile version