ನೀವು ಮ್ಯೂಚುವಲ್ ಫಂಡ್ ಹೂಡಿಕೆ ಮಾಡುತ್ತಿದ್ದರೆ, ನೆಟ್ ಅಸೆಟ್ ವಾಲ್ಯೂ ( Net Asset Value -NAV) ಎಂಬ ಪರಿಕಲ್ಪನೆಯನ್ನು ಕೇಳಿರಬಹುದು. ಹೊಸತಾಗಿ ಹೂಡಿಕೆ ಮಾಡುವವರಿಗೆ ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯದೆಯೂ ಇರಬಹುದು. ಹಾಗಾದರೆ ಏನಿದು? ಒಂದು ನಿರ್ದಿಷ್ಟ ಅವಧಿಯಲ್ಲಿ ಮ್ಯೂಚುವಲ್ ಫಂಡ್‌ನ ನಿವ್ವಳ ಆಸ್ತಿ ಮೌಲ್ಯವೇ ಇದು. ಫಂಡ್‌ನ ಪರ್‌ಫಾರ್ಮೆನ್ಸ್ ಅನ್ನು ಎನ್‌ಎವಿ ಮೂಲಕ ಅಳೆಯುತ್ತಾರೆ. ಮ್ಯೂಚುವಲ್ ಫಂಡ್ ನ ಪ್ರತಿ ಯುನಿಟ್‌ನ ಮಾರುಕಟ್ಟೆ ಮೌಲ್ಯವನ್ನು ಹೇಳಬಹುದು.
ಉದಾಹರಣೆಗೆ ಒಂದು ಮ್ಯೂಚುವಲ್ ಫಂಡ್‌ನ ಸೆಕ್ಯುರಿಟಿಗಳ ಮಾರುಕಟ್ಟೆ ಮೌಲ್ಯವು 200 ಲಕ್ಷ ರೂ. ಆಗಿದ್ದು, ಮ್ಯೂಚುವಲ್ ಫಂಡ್ 10 ರೂ. ಮುಖಬೆಲೆಯ 10 ಲಕ್ಷ ಯುನಿಟ್‌ಗಳನ್ನು ಹೂಡಿಕೆದಾರರಿಗೆ ಬಿಡುಗಡೆ ಮಾಡಿದ್ದರೆ, ಆಗ ಪ್ರತಿ ಯುನಿಟ್‌ನ ಎನ್‌ಎವಿ 20 ರೂ. ಆಗಿರುತ್ತದೆ. ಮಾರುಕಟ್ಟೆಯಲ್ಲಿ ಸೆಕ್ಯುರಿಟೀಸ್‌ಗಳ ಮೌಲ್ಯಗಳು ದಿನ ನಿತ್ಯ ಬದಲಾಗುತ್ತಿರುತ್ತವೆ. ಮ್ಯೂಚುವಲ್ ಫಂಡ್‌ನಲ್ಲಿ ಸೆಕ್ಯುರಿಟೀಸ್ ಎಂದರೆ ಷೇರುಗಳು, ಬಾಂಡ್‌ಗಳು, ಸಾಲಪತ್ರಗಳು ಇತ್ಯಾದಿ. ಎನ್‌ಎವಿ ಕೂಡ ಬದಲಾಗುತ್ತಿರುತ್ತದೆ. ಮ್ಯೂಚುವಲ್ ಫಂಡ್‌ನ ಎನ್‌ಎವಿಗಳು ಆಯಾ ಮ್ಯೂಚುವಲ್ ಫಂಡ್‌ಗಳ ವೆಬ್ ಸೈಟ್‌ನಲ್ಲಿ ಹಾಗೂ ಎಎಂಎಫ್‌ಐನ ವೆಬ್ ಸೈಟ್‌ನಲ್ಲಿ ನಿತ್ಯ ಪ್ರಕಟವಾಗುತ್ತದೆ.
ಷೇರುಗಳ ದರ ಸ್ಟಾಕ್ ಮಾರ್ಕೆಟ್‌ನಲ್ಲಿ ಪ್ರತಿ ನಿಮಿಷ-ನಿಮಿಷಕ್ಕೂ ಬದಲಾಗುತ್ತಿರುತ್ತದೆ. ಆದರೆ ಮ್ಯೂಚುವಲ್ ಫಂಡ್‌ಗಳ ಎನ್‌ಎವಿ ಮಾರುಕಟ್ಟೆಯ ಆಯಾ ದಿನದ ವಹಿವಾಟು ಮುಗಿದ ಬಳಿಕ ಘೋಷಣೆಯಾಗುತ್ತದೆ. ಇದು ಸೆಬಿಯ ಮ್ಯೂಚುವಲ್ ಫಂಡ್ ರೆಗ್ಯುಲೇಶನ್ಸ್ ಪ್ರಕಾರ ನಡೆಯುತ್ತದೆ.
ಇದನ್ನೂ ಓದಿ: Money Guide : ಓಪನ್ ಎಂಡೆಡ್, ಕ್ಲೋಸ್ಡ್ ಎಂಡೆಡ್ ಮ್ಯೂಚುವಲ್ ಫಂಡ್ ಎಂದರೇನು, ಯಾವುದು ಬೆಸ್ಟ್?
ಎನ್‌ಎವಿ ಬಗ್ಗೆ ಕೆಲವು ಮಿಥ್ಯೆಗಳಿವೆ. ಆದ್ದರಿಂದ ಮಿಥ್ಯೆಗಳನ್ನು ನಂಬಬಾರದು. ತಪ್ಪು ಕಲ್ಪನೆಗಳನ್ನು ಹೊಂದಬಾರದು. ಉದಾಹರಣೆಗೆ ಕಡಿಮೆ ಎನ್‌ಎವಿ ಇದ್ದರೆ ಅಗ್ಗ ಎಂಬ ಮಿಥ್ಯೆ ಇದೆ. ಅದು ಸರಿಯಲ್ಲ. ಎನ್‌ಎವಿಯು ಮ್ಯೂಚುವಲ್ ಫಂಡ್‌ನ ಅಸೆಟ್‌ನ ಈಗಿನ ಮಾರುಕಟ್ಟೆ ಮೌಲ್ಯವನ್ನು ಬಿಂಬಿಸುತ್ತದೆ. ಅದೇ ರೀತಿ ಹೆಚ್ಚು ಎನ್‌ಎವಿ ಇರುವ ಮ್ಯೂಚುವಲ್ ಪಂಡ್ ಉತ್ತಮ ಪ್ರದರ್ಶನ ನೀಡುತ್ತದೆ ಎಂಬುದೂ ಸರಿಯಲ್ಲ. ಎನ್‌ಎವಿ ಎನ್ನುವುದು ಫಂಡ್‌ನ ಪರ್ ಫರ್ಮೆನ್ಸ್ ಅನ್ನು ಅಳತೆ ಮಾಡುವ ಮಾನದಂಡವಲ್ಲ. ಇದು ಬೇಡಿಕೆ ಮತ್ತು ಪೂರೈಕೆಯನ್ನೂ ಬಿಂಬಿಸುವುದಿಲ್ಲ.
ಭಾರತದಲ್ಲಿ 44 ಮ್ಯೂಚುವಲ್ ಫಂಡ್ ಹೌಸ್‌ಗಳಿವೆ. 2,500ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಇವೆ. ಹೀಗಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸಹಜ. ನೀವು ಕಾರು ಖರೀದಿಸಬೇಕು ಎಂದುಕೊಳ್ಳುವಾಗ ಹೇಗೆ ಹುಡುಕಾಟವನ್ನು ಆರಂಭಿಸುತ್ತೀರಿ? ಮೊಟ್ಟ ಮೊದಲು ಯಾವ ಕೆಟಗರಿಯ ಕಾರು ಎಂದು ನಿರ್ಧಾರ ಮಾಡುತ್ತೀರಿ. ಹ್ಯಾಚ್ ಬ್ಯಾಕ್, ಸೆಡಾನ್, ಎಸ್ ಯುವಿ, ಲಕ್ಸುರಿ ಕೆಟಗರಿಗಳಲ್ಲಿ ಯಾವುದು ನಿಮ್ಮ ಆಯ್ಕೆ ಎಂದು ತೀರ್ಮಾನಿಸುತ್ತೀರಿ. ಬಳಿಕ ನೀವು ಕೆಟಗರಿಯಲ್ಲಿರುವ ವಿಶೇಷತೆಗಳ ಬಗ್ಗೆ ಆಲೋಚಿಸುತ್ತೀರಿ. ಮ್ಯೂಚುವಲ್ ಫಂಡ್‌ಗಳಲ್ಲೂ ನಾವು ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಬಳಿಕ ಯೋಜನೆಯನ್ನು ಹುಡುಕುತ್ತೀರಿ. ಎನ್‌ಎವಿಗಿಂತಲೂ ಫಂಡ್‌ನ ಕೆಟಗರಿ ಹಾಗೂ ಇತರ ಅಂಶಗಳನ್ನು ಗಮನಿಸುವುದು ಸೂಕ್ತ.