ನೀವು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದರೆ ಮಲ್ಟಿ ಬ್ಯಾಗರ್ ಸ್ಟಾಕ್‌ಗಳ ಬಗ್ಗೆ ಕೇಳಿರಬಹುದು. ಹೂಡಿಕೆಯ ಜಗತ್ತಿನಲ್ಲಿ ದಂತಕತೆಯಾಗಿರುವ ಅಮೆರಿಕದ ಹೂಡಿಕೆದಾರ ಪೀಟರ್ ಲಿಂಚ್ ಈ ಮಲ್ಟಿ ಬ್ಯಾಗರ್ ಷೇರುಗಳ ಬಗ್ಗೆ ಮೊದಲ ಬಾರಿಗೆ 1989ರಲ್ಲಿ ತಮ್ಮ ಒನ್ ಅಪ್ ಆನ್ ವಾಲ್ ಸ್ಟ್ರೀಟ್ ಕೃತಿಯಲ್ಲಿ ಬರೆದರು. ಪೀಟರ್ ಲಿಂಚ್ ಅವರು ಎಷ್ಟು ಪ್ರತಿಭಾವಂತರೆಂದರೆ ಫಿಡಿಲಿಟಿ ಇನ್ವೆಸ್ಟ್‌ಮೆಂಟ್‌ನಲ್ಲಿ ಫಂಡ್ ಮ್ಯಾನೇಜರ್ ಆಗಿದ್ದಾಗ 1977-1990 ರ ಅವಧಿಯಲ್ಲಿ ವಾರ್ಷಿಕ 29.2 % ಆದಾಯ ಗಳಿಸಿದ್ದರು. ಇದು ಎಸ್ &ಪಿ 500 ಸ್ಟಾಕ್ ಮಾರ್ಕೆಟ್ ಇಂಡೆಕ್ಸ್ ನೀಡಿದ ರಿಟರ್ನ್‌ಗೆ ಹೋಲಿಸಿದರೆ ಎರಡು ಪಟ್ಟಿಗೂ ಹೆಚ್ಚು. ಅವರ ಕಂಪನಿಯ ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್ 18 ದಶಲಕ್ಷ ಡಾಲರಿಗಿಂತ 14 ಶತಕೋಟಿ ಡಾಲರಿಗೆ ಏರಿಕೆಯಾಗಿತ್ತು.
ಮಲ್ಟಿ ಬ್ಯಾಗರ್ ಸ್ಟಾಕ್‌ಗಳೆಂದರೆ ಮೂಲಭೂತವಾಗಿ ಒಳ್ಳೆಯ ಬೆಳವಣಿಗೆಯ ಸಾಧ್ಯತೆ ಇರುವ ಹಾಗೂ ಹೂಡಿಕೆದಾರರಿಗೆ ಭವಿಷ್ಯದಲ್ಲಿ ಹಲವು ಪಟ್ಟು ಆದಾಯ ನೀಡಬಲ್ಲ ಷೇರುಗಳು. ಇವುಗಳ ಫಂಡಮೆಂಟಲ್ ಪ್ರಬಲವಾಗಿದ್ದರೂ, ಮಾರುಕಟ್ಟೆಯಲ್ಲಿ ಅವುಗಳು ಅಂಡರ್ ವಾಲ್ಯೂಡ್ ಆಗಿರುತ್ತವೆ. ಅಂದರೆ ಅವುಗಳ ಮಾರುಕಟ್ಟೆ ಮೌಲ್ಯ ಕಡಿಮೆ ದಾಖಲಾಗಿರುತ್ತದೆ. ಅಂಥ ಕಂಪನಿಗಳ ಕಾರ್ಪೊರೇಟ್ ಆಡಳಿತ ಪ್ರಬಲವಾಗಿರುತ್ತದೆ. ತ್ವರಿತ ಅವಧಿಯಲ್ಲಿ ಅವುಗಳ ಬಿಸಿನೆಸ್, ಆದಾಯ ಬೆಳೆಯುವ ಲಕ್ಷಣ ಇರುತ್ತದೆ. ಯಾವುದಾದರೂ ಒಂದು ಷೇರಿನ ದರ ಎರಡು ಪಟ್ಟು ವೃದ್ಧಿಸಿದರೆ ಟೂ-ಬ್ಯಾಗರ್ ಸ್ಟಾಕ್ ಎಂದು ಕರೆಯಲಾಗುತ್ತದೆ. 10 ಪಟ್ಟು ಬೆಳೆದರೆ 10 ಬ್ಯಾಗರ್ ಎಂದು ಕರೆಯಲಾಗುತ್ತದೆ.
ನೀವು 1993ರಲ್ಲಿ ಇನ್ಫೋಸಿಸ್‌ನ ಷೇರುಗಳಲ್ಲಿ 10,000 ರೂ. ಹೂಡಿಕೆ ಮಾಡಿರುತ್ತಿದ್ದರೆ ಈಗ ಅದರ ಬೆಲೆ 4 ಕೋಟಿ ರೂ. ಆಗಿರುತ್ತಿತ್ತು. ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹೂಡಿರುತ್ತಿದ್ದರೆ 1995ರಲ್ಲಿ 8 ಕೋಟಿ ರೂ. ಆಗಿರುತ್ತಿತ್ತು. ಆದರೆ ನೀವು ಮಲ್ಟಿ ಬ್ಯಾಗರ್ ಸ್ಟಾಕ್‌ಗಳಲ್ಲಿ ಉತ್ತಮ ಆದಾಯ ಪಡೆಯಬಹುದಾದರೂ, ರಿಸ್ಕ್ ಕೂಡ ಇರುತ್ತವೆ.
ಹಲವಾರು ಪೆನ್ನಿ ಸ್ಟಾಕ್‌ಗಳು ಕೂಡ ಮಲ್ಟಿ ಬ್ಯಾಗರ್ ಷೇರುಗಳಾಗುತ್ತವೆ. ಈ ಪೆನ್ನಿ ಷೇರುಗಳು ಕಡಿಮೆ ಬೆಲೆಗೂ ಸಿಗುತ್ತವೆ. ಆದರೆ ಅವುಗಳಲ್ಲಿ ಹೂಡಿಕೆ ಹೆಚ್ಚು ರಿಸ್ಕ್ ಅನ್ನೂ ಒಳಗೊಂಡಿರುತ್ತವೆ. ಕಲ್ಲಿದ್ದಲು ವ್ಯಾಪಾರ ಹಾಗೂ ನಿರ್ಮಾಣ ವಲಯದ ಕಂಪನಿ ಹೇಮಾಂಗ್ ರಿಸೋರ್ಸ್ ಲಿಮಿಟೆಡ್ ಕಂಪನಿಯ ಷೇರು ದರ 2022ರಲ್ಲಿ 20 ಪಟ್ಟು ವೃದ್ಧಿಸಿತ್ತು. 2022ರ ಆರಂಭದಲ್ಲಿ 3 ರೂ.ಗಳಿದ್ದ ಷೇರು ದರ ವರ್ಷದೊಳಗೆ 70 ರೂ.ಗೆ ಏರಿಕೆಯಾಗಿತ್ತು. ಕಂಪನಿಯು ಆಮದು ಮಾಡಿದ ಹಾಗೂ ಇಲ್ಲಿಯೇ ತೆಗೆದ ಕಲ್ಲಿದ್ದಲನ್ನು ಮಾರಾಟ ಮಾಡುತ್ತದೆ. ನಿರ್ಮಾಣ, ಲಾಜಿಸ್ಟಿಕ್ಸ್ ವಲಯದಲ್ಲೂ ತೊಡಗಿಸಿಕೊಂಡಿದೆ.
ಇದನ್ನೂ ಓದಿ: Money Guide : ಓಪನ್ ಎಂಡೆಡ್, ಕ್ಲೋಸ್ಡ್ ಎಂಡೆಡ್ ಮ್ಯೂಚುವಲ್ ಫಂಡ್ ಎಂದರೇನು, ಯಾವುದು ಬೆಸ್ಟ್?
ಕೈಸರ್ ಕಾರ್ಪೊರೇಷನ್ ಪ್ರಿಂಟಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಣ್ಣ ಮತ್ತು ಮಧ್ಯಮ ಕಾರ್ಪೊರೇಟ್ ಲೇಬಲ್ಸ್ ಮತ್ತು ಕಾರ್ಟೂನ್ ಮುದ್ರಣದಲ್ಲಿ ತೊಡಗಿಸಿಕೊಂಡಿದೆ. 2022ರ ಜನವರಿಯಲ್ಲಿ 3 ರೂ. ಆಸುಪಾಸಿನಲ್ಲಿದ್ದ ಷೇರು ದರ ಬಳಿಕ 52 ರೂ. ಆಸುಪಾಸಿಗೆ ಏರಿತ್ತು. ಅಲೈನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್ ಷೇರು ದರ ಜನವರಿ 3ರಂದು 2 ರೂ. ಇತ್ತು. ಬಳಿಕ 42 ರೂ.ಗೆ ಏರಿತ್ತು. ಕೆಮ್‌ಕ್ರುಕ್ಸ್ ಎಂಟರ್‌ಪ್ರೈಸ್ 2017ರಿಂದೀಚೆಗೆ ಹೂಡಿಕೆದಾರರಿಗೆ 40 ಪಟ್ಟು ಆದಾಯ ಕೊಟ್ಟಿತ್ತು. ಲ್ಯಾನ್ಸರ್ ಕಂಟೈನರ್ 2017-21ರಲ್ಲಿ 9 ಪಟ್ಟು ಆದಾಯ ನೀಡಿತ್ತು. ಇಂಥ ಹಲವಾರು ನಿದರ್ಶನಗಳನ್ನು ಗಮನಿಸಬಹುದು.