Site icon Vistara News

Money Guide: ಹೊಸ ವರ್ಷದಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

insurence

insurence

ಬೆಂಗಳೂರು: ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. 2024 ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಭರದ ಸಿದ್ಧತೆ ನಡೆಯುತ್ತಿದೆ. ಈ ಹೊಸ ವರ್ಷ ನಮ್ಮ ಜೀವನದ ತಪ್ಪುಗಳನ್ನು ತಿದ್ದಿ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಲು ಉತ್ತಮ ಅವಕಾಶವೂ ಹೌದು. 2024ರಲ್ಲಿ ಕೈಗೊಳ್ಳಬೇಕಾದ ಸ್ಮಾರ್ಟ್ ಹಣಕಾಸು ನಿರ್ಧಾರಗಳ ವಿವರ ಇಂದಿನ ಮನಿಗೈಡ್‌(Money Guide)ನಲ್ಲಿದೆ.

ವಿಮೆ ಮಾಡಿಸಿ

ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಲ್ಲ ಎಂದಾದರೆ ಮೊದಲು ಇದನ್ನು ಮಾಡಿಸಿ. ಇದು ಅನಿವಾರ್ಯವೂ ಹೌದು. ಆರೋಗ್ಯ ವಿಮೆ ಕಠಿಣ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಈ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಜೀವ ವಿಮೆಯೂ ಪ್ರಮುಖವಾದುದು. ನಿಮ್ಮ ಜೀವ ವಿಮಾ ರಕ್ಷಣೆಯು ವಾರ್ಷಿಕ ಮನೆಯ ವೆಚ್ಚಗಳ ಮೂರು ಪಟ್ಟು ಇರುವಂತೆ ನೋಡಿಕೊಳ್ಳಿ.

ಇಎಂಐ ಪಾವತಿ

ಸಾಲಗಳನ್ನು ಸರಿಯಾಗಿ ನಿರ್ವಹಿಸುವುದನ್ನು ರೂಢಿಸಿಕೊಳ್ಳಿ. ಅಂದರೆ ನಿಯಮಿತವಾಗಿ ಇಎಂಐ ಪಾವತಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜತೆಗೆ 40% ಇಎಂಐ ನಿಯಮವನ್ನು ಪಾಲಿಸಿ. ಅಂದರೆ ನಿಮ್ಮ ಒಟ್ಟು ಮಾಸಿಕ ಇಎಂಐಗಳು ಆದಾಯದ 40% ಮೀರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅದಕ್ಕಿಂತ ಹೆಚ್ಚು ಸಾಲ ಮಾಡಬೇಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಎಮರ್ಜೆನ್ಸಿ ಫಂಡ್‌

ಜೀವನ ಎನ್ನುವುದು ಅನಿರೀಕ್ಷಿತಗಳ ಆಗರ. ಇಲ್ಲಿ ಯಾವಾಗ, ಏನು ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಎಮರ್ಜೆನ್ಸಿ ಫಂಡ್‌ ಹೊಂದಿರುವುದು ಅತ್ಯಗತ್ಯ. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಮ್ಮ ಸೇವಿಂಗ್ ಅಕೌಂಟ್‌ನಲ್ಲಿ ಯಾವತ್ತೂ ಇರಬೇಕು. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ. ತಕ್ಷಣ ದುಡ್ಡು ಕೈಗೆ ಬರುವಂತಿರಬೇಕು. ಇದರಿಂದ ಕಷ್ಟ ಕಾಲದಲ್ಲಿ ಸಾಲಕ್ಕಾಗಿ ಇತರರ ಮುಂದೆ ಕೈ ಚಾಚುವುದು ತಪ್ಪುತ್ತದೆ.

ಆದಾಯದ ಮೂಲ ಹೆಚ್ಚಿಸಿ

ನಿಮ್ಮ ಸಂಪತ್ತನ್ನು ಹೆಚ್ಚಿಸುವ ಬಗ್ಗೆ ಒಂದಷ್ಟು ಯೋಜನೆ ರೂಪಿಸಬಹುದು. ನಿಮ್ಮ ಆದಾಯದ 10% ಅನ್ನು ಹೂಡಿಕೆ ಮಾಡಿ. ಆದರೆ ಎಲ್ಲವನ್ನೂ ಒಂದೇ ಕಡೆ ಹೂಡಿಕೆ ಮಾಡಬೇಡಿ. ಇದಕ್ಕಾಗಿ ಈಕ್ವಿಟಿ, ಚಿನ್ನ, ಮ್ಯೂಚುವಲ್‌ ಫಂಡ್‌ನಂತಹ ವೈವಿಧ್ಯಮಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಿ. ಮ್ಯೂಚುವಲ್‌ ಫಂಡ್‌ ಎಂದರೆ ಸಾಮೂಹಿಕ ಹೂಡಿಕೆಯ ಸಾಧನ. ಹಲವಾರು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳ ನೆರವಿನಿಂದ ಈಕ್ವಿಟಿ, ಬಾಂಡ್‌, ಸರ್ಕಾರಿ ಸೆಕ್ಯುರಿಟೀಸ್‌, ಮನಿ ಮಾರ್ಕೆಟ್‌ ಸಾಧನಗಳಲ್ಲಿ ಹೂಡಿಕೆ ಮಾಡುವುದು.‌ ಪ್ರತಿ ಮ್ಯೂಚುವಲ್‌ ಫಂಡ್‌ ಯೋಜನೆಗೂ ಅದರದ್ದೇ ಆದ ಉದ್ದೇಶ ಇರುತ್ತದೆ. ಫಂಡ್‌ ನಿರ್ವಹಣೆಗೆ ತಗಲುವ ವೆಚ್ಚವನ್ನು ಕಳೆದು ಉಳಿಯುವ ಮೌಲ್ಯ ನೆಟ್‌ ಅಸೆಟ್‌ ವಾಲ್ಯೂ (Net Asset Value-NAV) ಎನ್ನುತ್ತಾರೆ. ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ತಮ್ಮ ಹಣವನ್ನು ಬೆಳೆಸಲು, ಸಿರಿವಂತಿಕೆ ಗಳಿಸಲು ಮ್ಯೂಚುವಲ್‌ ಫಂಡ್‌ ಹಲವು ರೀತಿಯಲ್ಲಿ ಸಹಕಾರಿ ಮತ್ತು ಲಾಭದಾಯಕವಾಗುತ್ತದೆ. ಸ್ಟಾಕ್‌ ಮಾರ್ಕೆಟ್‌ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದವರು ಹಾಗೂ ತಿಳಿಯಲು ಸಮಯದ ಅಭಾವ ಇರುವವರು ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಬಹುದು. ನೆನಪಿಡಿ ಹೂಡಿಕೆಯಲ್ಲಿ ತೊಡಗುವ ಮುನ್ನ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ: Money Guide: ಮನೆಯಲ್ಲಿ ಎಷ್ಟು ಕ್ಯಾಶ್​ ಇಟ್ಟುಕೊಳ್ಳಬಹುದು? ನಿಯಮ ಮೀರಿದರೆ ದಂಡ ಖಚಿತ

ತೆರಿಗೆಯ ಬಗ್ಗೆ ಗಮನ ಹರಿಸಿ

ತೆರಿಗೆಯನ್ನು ಮೊದಲೇ ಲೆಕ್ಕ ಹಾಕಿ. ಪರಿಣಾಮಕಾರಿ ತೆರಿಗೆ ನಿರ್ವಹಣೆ ಗಮನಾರ್ಹ ಪ್ರಮಾಣದ ಹಣವನ್ನು ಉಳಿಸಬಹುದು. ಮೊದಲೇ ಈ ಬಗ್ಗೆ ಯೋಜನೆ ರೂಪಿಸಿಕೊಂಡರೆ ಕೊನೆಯ ಕ್ಷಣದಲ್ಲಾಗುವ ಗೊಂದಲ ತಪ್ಪಿಸಬಹುದು. ಜತೆಗೆ ದಂಡದಿಂದಲೂ ಪಾರಾಗಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version