ರಿಚ್ ಡ್ಯಾಡ್ ಪೂರ್ ಡ್ಯಾಡ್ ಎಂಬ ಜನಪ್ರಿಯ ಕೃತಿಯ ಲೇಖಕ ರಾಬರ್ಟ್ ಕಿಯೊಸಾಕಿ (Money Guide )ಹೀಗೆ ಬರೆಯುತ್ತಾರೆ- ನಿಮ್ಮ ಮನೆ ಆಸ್ತಿಯಲ್ಲ. ಅರೆ, ಇವರೇಕೆ ಹೀಗೆ ಎನ್ನುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಈಗ ಉಂಟಾಗಿರಬಹುದು. ಅದಕ್ಕೆ ಉತ್ತರವನ್ನೂ ರಾಬರ್ಟ್ ಕಿಯೊಸಾಕಿ ಕೊಟ್ಟಿದ್ದಾರೆ. ಈಗ ಅವರ ಉತ್ತರವನ್ನು ವಿವರವಾಗಿ ನೋಡೋಣ.
ಹಲವಾರು ಹಣಕಾಸು ತಜ್ಞರು ನಿಮ್ಮ ಮನೆ ನಿಮ್ಮ ಆಸ್ತಿ ಎಂದೇ ಹೇಳಬಹುದು. ಆದರೆ ಅದು ನಿಜಕ್ಕೂ ಆಸ್ತಿಯಲ್ಲ ಎನ್ನುತ್ತಾರೆ ರಾಬರ್ಟ್ ಕಿಯೊಸಾಕಿ. ಅವರು ಹೀಗೆನ್ನುತ್ತಾರೆ- ಅಸೆಟ್ (Asset) ಮತ್ತು ಲಾಯಬಿಲಿಟಿ (Liability) (ಬಾಧ್ಯತೆ) ಎರಡು ವಿಚಾರಗಳ ನಡುವಣ ವ್ಯತ್ಯಾಸವನ್ನು ನೀವು ತಿಳಿಯಬೇಕು. ಇದರಿಂದ ನಿಮ್ಮ ಮನೆ ನಿಜವಾದ ಹೂಡಿಕೆಯಲ್ಲ ಎಂಬುದು ಗೊತ್ತಾಗುತ್ತದೆ. ಇನ್ವೆಸ್ಟ್‌ಮೆಂಟ್ ಪ್ರಾಪರ್ಟಿಗಳು ನಿಮ್ಮ ಜೇಬಿಗೆ ಹಣ ಕೊಡತ್ತವೆ, ಬದಲಿಗೆ ಜೇಬಿನಿಂದ ಹಣ ತೆಗೆದುಕೊಳ್ಳುವುದಿಲ್ಲ.
ರಾಬರ್ಡ್ ಕಿಯೊಸಾಕಿ ಹೀಗೆ ಬರೆಯುತ್ತಾರೆ- 2008ರಲ್ಲಿ ಸುಮಾರು ಒಂದು ಕೋಟಿ ಜನರಿಗೆ ಮನೆ ಎಂದರೆ ಅಸೆಟ್ (ಆಸ್ತಿ) ಅಲ್ಲ ಎಂಬುದು ಮನವರಿಕೆಯಾಯಿತು. ಆಗ ಆರ್ಥಿಕ ಹಿಂಜರಿತದ ಪರಿಣಾಮ ರಿಯಲ್ ಎಸ್ಟೇಟ್ ಮಾರುಕಟ್ಟೆ ಪತನವಾಗಿತ್ತು. ಮನೆಯ ರಿಸೇಲ್ ಮೌಲ್ಯಕ್ಕಿಂತಲೂ, ಅವರು ಪಡೆದಿದ್ದ ಗೃಹ ಸಾಲದ ಮೊತ್ತವೇ ಜಾಸ್ತಿಯಾಗಿತ್ತು.
ಸಾಮಾನ್ಯವಾಗಿ ಸ್ವಂತ ಮನೆ ಖರೀದಿಸುವುದು ಎಂದರೆ ಸರಿಯೇ ಆಗಿರುತ್ತದೆ. ಅನೇಕ ಮಂದಿಗೆ ಅದು ದೊಡ್ಡ ಕನಸು. ಸ್ವಂತ ಮನೆಯ ಕೀಲಿ ಕೈ ಎಂದು ಕೈ ಸೇರುವುದೋ ಎಂದು ಹಗಲಿರುಳೆನ್ನದೆ ಪರಿತಪಿಸುತ್ತಾರೆ. ಲಕ್ಷಾಂತರ ರೂ. ಗೃಹ ಸಾಲ ಪಡೆದು ಸ್ವಗೃಹ ಪ್ರವೇಶಿಸುತ್ತಾರೆ. ನಿವೃತ್ತಿಯ ಕಾಲಕ್ಕೆ ಸ್ವಂತ ಮನೆಯೇ ದೊಡ್ಡ ಅಸೆಟ್ ಆಗುತ್ತದೆ ಎಂದು ಭಾವಿಸುವುದು ಸಹಜ. ಆದರೆ ಅಸೆಟ್ ಮತ್ತು ಲಾಯಬಿಲಿಟಿ ನಡುವೆ ವ್ಯತ್ಯಾಸ ಇದೆ ಎಂಬುದನ್ನು ಅರಿತುಕೊಳ್ಳಬೇಕು.
ಇದನ್ನೂ ಓದಿ : Koppala News: ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಜಾಗೃತಿಗಾಗಿ ವಿನೂತನ ಅಭಿಯಾನ
ಮನೆ ಯಾಕೆ ಆಸ್ತಿಯಲ್ಲ: ನಿಮ್ಮ ಫೈನಾನ್ಷಿಯಲ್ ಪ್ಲಾನರ್ ಮತ್ತು ಅಕೌಂಟೆಂಟ್ ನಿಮ್ಮ ಮನೆಯನ್ನು ಅಸೆಟ್ ಎಂದು ಕರೆಯಬಹುದು. ಆದರೆ ವಾಸ್ತವವಾಗಿ ಅಸೆಟ್ ಎಂದರೆ ಅದು ನಿಮ್ಮ ಜೇಬಿಗೆ ಹಣವನ್ನು ಇಡಬೇಕು. ಆದರೆ ಏನಾಗುತ್ತಿದೆ? ಜನರು ಮನೆಯನ್ನು ಗೃಹ ಸಾಲದ ಮೂಲಕ ಖರೀದಿಸುತ್ತಾರೆ. ನಿಮ್ಮ ಗೃಹ ಸಾಲಕ್ಕೆ ನಿಮ್ಮದೇ ಜೇಬಿನಿಂದ ಹಣ ಖರ್ಚಾಗುತ್ತದೆ. ಬಳಿಕ ಮನೆಯ ನಿರ್ವಹಣೆಗೆ, ತೆರಿಗೆ ಪಾವತಿಗೆ, ಯುಟಿಲಿಟಿ ಪೇಮೆಂಟ್‌ಗೆ ಹಣ ಖರ್ಚಾಗುತ್ತದೆ. ಇದೆಲ್ಲವೂ ಲಾಯಬಿಲಿಟಿ ಆಗುತ್ತದೆ. ನಿಮ್ಮ ಗೃಹ ಸಾಲ ತೀರುವ ತನಕ ಮನೆಯು ಬ್ಯಾಂಕ್‌ನ ಆಸ್ತಿಯಾಗಿರುತ್ತದೆ. ಅಂದರೆ ನಿಮೆಗೆ ಸಾಲ ಕೊಟ್ಟು, ನಿಮ್ಮ ಜೇಬಿನಿಂದಲೇ ಹಣ ಪಡೆಯುತ್ತದೆ. ಆದ್ದರಿಂದ ಬ್ಯಾಂಕಿಗೆ ನಿಮ್ಮ ಮನೆ ಆಸ್ತಿಯಾಗುತ್ತದೆಯೇ ವಿನಾ ನಿಮಗಲ್ಲ ಎನ್ನುತ್ತಾರೆ ರಾಬರ್ಟ್ ಕಿಯೊಸಾಕಿ.
ಹಾಗಾದರೆ ಅಸೆಟ್‌ಗೆ ಉದಾಹರಣೆಗಳು ಯಾವುದು? ಆರ್ಥಿಕ ತಜ್ಞ ಜಾನ್ ವಿಲಿಯಮ್ಸ್ ಹೀಗೆನ್ನುತ್ತಾರೆ- ನಿಮ್ಮ ಉಪಸ್ಥಿತಿಯ ಅಗತ್ಯ ಇಲ್ಲದೆ ನಡೆಸುವ ಬಿಸಿನೆಸ್, ಸ್ಟಾಕ್ಸ್, ಬಾಂಡ್, ಮ್ಯೂಚುವಲ್ ಫಂಡ್, ಉತ್ಪನ್ನಗಳು, ಆದಾಯ ಸೃಷ್ಟಿಸುವ ರಿಯಲ್ ಎಸ್ಟೇಟ್ ಆಸ್ತಿಗಳಾಗುತ್ತದೆ. ಹಾಗಾದರೆ ಲಾಯಬಿಲಿಟಿಗಳೆಂದರೆ ಯಾವುದು? ಸರಳವಾಗಿ ಹೇಳುವುದಿದ್ದರೆ ನಿಮ್ಮ ಜೇಬಿನಿಂದ ದುಡ್ಡು ಖರ್ಚು ಮಾಡುವಂಥದ್ದು. ಕಾರು, ಮನೆ, ಪೀಠೋಪಕರಣ, ವೆಕೇಶನ್ಸ್, ಬಟ್ಟೆ ಬರೆಗಳು, ಕ್ರೆಡಿಟ್ ಕಾರ್ಡ್ ಸಾಲ ಎಲ್ಲವೂ ಲಾಯಬಿಲಿಟಿಗೆ ಉದಾಹರಣೆಗಳು. ಶ್ರೀಮಂತರು ಆಸ್ತಿಗಳನ್ನು ಖರೀದಿಸಿದರೆ ಬಡವರು ಕೇವಲ ಖರ್ಚುಗಳನ್ನು ಮಾಡುತ್ತಾರೆ. ಮಧ್ಯಮ ವರ್ಗದವರು ಲಾಯಬಿಲಿಟಿಗಳನ್ನೇ ಖರೀದಿಸಿ, ಅದನ್ನೇ ಆಸ್ತಿ ಎಂದು ಭಾವಿಸುತ್ತಾರೆ ಎನ್ನುತ್ತಾರೆ ರಾಬರ್ಟ್ ಕಿಯೊಸಾಕಿ.