ಬೆಂಗಳೂರು: ಹಣವನ್ನು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ನಿರ್ಣಾಯಕ ಘಟಕ. ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಬಹಳ ಮುಖ್ಯ. ವಿಶೇಷವಾಗಿ ನಿವೃತ್ತಿಯ ಸಮಯದಲ್ಲಿ ಚಿಂತೆ ಇಲ್ಲದೆ ಆರಾಮವಾಗಿ ಜೀವನ ಕಳೆಯಲು ಇದು ನೆರವಾಗುತ್ತದೆ. ವಿವಿಧ ಜವಾಬ್ದಾರಿ ಮತ್ತು ಸಾಲ ಮರುಪಾವತಿಗಳ ನಡುವೆಯೂ ಹೂಡಿಕೆ ಮಾಡಲು ಮತ್ತು ಹಣವನ್ನು ಉಳಿತಾಯ ಮಾಡಲು ಆರಂಭಿಸಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ನೆಮ್ಮದಿಯ ನಿವೃತ್ತಿ ಜೀವನಕ್ಕಾಗಿ ಈಗಿನಿಂದಲೇ ಯಾವ ರೀತಿ ಯೋಜನೆ ರೂಪಿಸಬೇಕು ಎನ್ನುವ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಹೂಡಿಕೆಗಳನ್ನು ಮಾಡುವ ಮೊದಲು ಸ್ವಲ್ಪ ಮಟ್ಟದ ಅಪಾಯವನ್ನು ಎದುರಿಸಲು ಸಿದ್ಧರಾಗಿರಬೇಕು. ಇದರಿಂದ ಹೆಚ್ಚಿನ ಆದಾಯವನ್ನು ನೀಡುವ ಹೂಡಿಕೆಗಳನ್ನು ಆಯ್ಕೆ ಮಾಡಬಹುದು. ಇದಕ್ಕಾಗಿ ಈಕ್ವಿಟಿ ಆಧಾರಿತ ಹೂಡಿಕೆಗಳ ಮೇಲೆ ಗಮನ ಹರಿಸಬಹುದು. ಹೂಡಿಕೆಯ ಒಂದು ಭಾಗವನ್ನು ಅಂತಾರಾಷ್ಟ್ರೀಯ ಈಕ್ವಿಟಿ ನಿಧಿಗಳು ಮತ್ತು ಚಿನ್ನಕ್ಕೆ ಹಂಚಿಕೆ ಮಾಡುವುದನ್ನು ಮರೆಯಬೇಡಿ. ಆದಾಗ್ಯೂ ಗಣನೀಯ ಆದಾಯವನ್ನು ಪಡೆಯಲು ಕನಿಷ್ಠ ಹತ್ತು ವರ್ಷಗಳವರೆಗೆ ಈ ಹೂಡಿಕೆಗಳಿಗೆ ಬದ್ಧರಾಗಿರಬೇಕಾಗುತ್ತದೆ.
ರಿಸ್ಕ್ ಬೇಡ ಎಂದರೆ ಇಲ್ಲಿದೆ ಪರ್ಯಾಯ ಮಾರ್ಗ
ಒಂದು ವೇಳೆ ನೀವು ಅಪಾಯವನ್ನು ಎದುರಿಸಲು ಸಿದ್ಧರಿಲ್ಲ ಎಂದಾದರೆ ಅದಕ್ಕೂ ಪರಿಹಾರವಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರು, ಅಪಾಯ ಎದುರಿಸಲು ಇಷ್ಟಪಡದವರು ಮತ್ತು ಅಲ್ಪಾವಧಿಯ ಗುರಿಗಳನ್ನು ಹೊಂದಿದ್ದರೆ ಕ್ಯಾಪ್ ವಿಭಾಗದಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ. ನಿಮ್ಮಲ್ಲಿರುವ ಹಣವನ್ನು ಮೊದಲು ವಿಭಾಗಿಸಿ. ಬಳಿಕ ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ ಶೇ. 50ರಷ್ಟು, ಮಲ್ಟಿ ಕ್ಯಾಪ್ ಫಂಡ್‌ಗಳಲ್ಲಿ ಶೇ. 40ರಷ್ಟು ಹಾಗೂ ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಶೇ. 10ರಷ್ಟು ಹಣವನ್ನು ಹೂಡಿಕೆ ಮಾಡಿ. ಹೆಚ್ಚುವರಿಯಾಗಿ ಹೂಡಿಕೆದಾರರು ಅಲ್ಪಾವಧಿಯ ಸ್ಥಿರ ಠೇವಣಿಗಳು (FDs) ಮತ್ತು ಅಂಚೆ ಕಚೇರಿ ಯೋಜನೆಗಳಂತಹ ಸಾಂಪ್ರದಾಯಿಕ ಮಾರ್ಗಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.
ಮ್ಯೂಚುವಲ್ ಫಂಡ್
ಮ್ಯೂಚುವಲ್ ಫಂಡ್ ಎಂದರೆ ಹಲವರು ಒಟ್ಟಾಗಿ ಮಾಡುವ ಹಣದ ಹೂಡಿಕೆ. ಈ ಹೂಡಿಕೆಯನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಣೆ ಮಾಡುತ್ತಾರೆ. ಈ ರೀತಿ ಸಂಗ್ರಹಿಸುವ ಹಣವನ್ನು ಷೇರು, ಬಾಂಡ್, ಹಣಕಾಸು ಮಾರುಕಟ್ಟೆಯ ಸಾಧನಗಳು, ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಲ್ಲಿ ಬರುವ ಆದಾಯ ಹೂಡಿಕೆದಾರರಿಗೆ ಸಿಗುತ್ತದೆ. ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣದ ಕೊರತೆ ಇರುವವರು, ಮಾರುಕಟ್ಟೆ ಸಂಶೋಧನೆಗೆ ಸಮಯದ ಅಭಾವ ಇರುವವರು, ತಮ್ಮ ಸಂಪತ್ತನ್ನು ಬೆಳೆಸಲು ಬಯಸುವವರು ಮ್ಯೂಚುವಲ್ ಫಂಡ್ ಹೂಡಿಕೆದಾರರಾಗಬಹುದು. ಹೀಗೆ ಸಂಗ್ರಹವಾಗುವ ಹಣವನ್ನು ಪ್ರೊಫೆಷನಲ್ ಫಂಡ್ ಮ್ಯಾನೇಜರ್‌ಗಳು ಯೋಜನೆಯ ಉದ್ದೇಶಕ್ಕೆನುಗುಣವಾಗು ಹೂಡಿಕೆ ಮಾಡುತ್ತಾರೆ. ಇದು ಕೂಡ ಅತ್ಯುತ್ತಮ ಆಯ್ಕೆಗಳಲ್ಲಿ ಒಂದು.
ಇದನ್ನೂ ಓದಿ: Money Guide: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಚಿಂತೆ ಬೇಡ; ಸಾಲ ಪಡೆಯಲು ಇಲ್ಲಿದೆ ದಾರಿ
ಇನ್ನೊಂದು ಮುಖ್ಯ ವಿಚಾರ ಎಂದರೆ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು. ಯಾವಾಗ, ಯಾವ ರೀತಿ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎನ್ನುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಮೊದಲೇ ಆರೋಗ್ಯ ವಿಮೆ ಮಾಡಿಸುವುದರತ್ತ ಗಮನ ಹರಿಸಿ. ಇದರ ಜತೆಗೆ ಒಪಿಡಿ ವೆಚ್ಚಗಳನ್ನು (OPD Expenses) ಅದು ಒಳಗೊಂಡಿದೆಯಾ ಎನ್ನುವುದನ್ನು ಗಮನಿಸಿ. ಇವುಗಳಲ್ಲಿ ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆ ಮತ್ತು ಪ್ರಿಸ್ಕ್ರಿಪ್ಷನ್ ಔಷಧ ಸೇರಿರುವುದು ಮುಖ್ಯ. ಯಾಕೆಂದರೆ ಇವು ನಿವೃತ್ತಿಯ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಅತಿ ಮುಖ್ಯವಾದ ಘಟಕ ಎಂದು ಪರಿಗಣಿಸಲಾಗುತ್ತದೆ. ಜತೆಗೆ ದಂತ ಮತ್ತು ದೃಷ್ಟಿ ಆರೈಕೆಯ ಸಮಗ್ರ ವ್ಯಾಪ್ತಿಯನ್ನು ಒದಗಿಸುವ ವಿಮಾ ಯೋಜನೆಗಳನ್ನು ಆಯ್ಕೆ ಮಾಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ