Site icon Vistara News

Money Investment : ಶ್ರೀಮಂತರಾಗಲು ಹಣವನ್ನು ಹೂಡಿಕೆ ಮಾಡೋದು ಹೇಗೆ?

cash

ಜೀವನದಲ್ಲಿ ಎಲ್ಲರೂ ಶ್ರೀಮಂತರಾಗಿಯೇ ಹುಟ್ಟುವುದಿಲ್ಲ. (Money Investment) ಆದರೆ ಎಲ್ಲರೂ ಬಡವರಾಗಿಯೇ ಬದುಕನ್ನು ಮುಗಿಸುವುದಿಲ್ಲ. ಆದರೆ ಅನೇಕ ಮಂದಿ ಬಡವರಾಗಿ ಹುಟ್ಟಿ, ಬಡವರಾಗಿಯೇ ಕೊನೆಯುಸಿರೆಳೆಯುತ್ತಾರೆ. ಒಂದು ಮಾತಿದೆ. ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು ಅಂತ. ಹಾಗಾದರೆ ಶ್ರೀಮಂತರಾಗಲು ಹಣವನ್ನು ಹೂಡಿಕೆ ಮಾಡುವುದು ಹೇಗೆ? ಈ ಪ್ರಶ್ನೆಗೆ ಹಣಕಾಸು ಸಲಹೆಗಾರರು ನೀಡುವ ಸರಳ ಉತ್ತರ ಏನೆಂದರೆ-ಆದಷ್ಟು ಬೇಗ ಹೂಡಿಕೆ ಮಾಡಲು ಆರಂಭಿಸಿ ಎಂಬುದು.

ಹೂಡಿಕೆ ಎಂದರೆ ನಿಮಗೆ ಆದಾಯ ತರಬಲ್ಲ ನಿರ್ದಿಷ್ಟ ಸಾಧನಗಳಲ್ಲಿ ಹಣವನ್ನು ಇನ್ವೆಸ್ಟ್‌ ಮಾಡುವುದು. ಈಗ ಹೂಡಿಕೆದಾರರಿಗೆ ಹಲವಾರು ದಾರಿಗಳು ಇವೆ. ಆದರೆ ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತ ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯಕ. ಹಲವು ಸಾಧನಗಳಲ್ಲಿ ಹೂಡಿಕೆಯನ್ನು ವೈವಿಧ್ಯಮಯಗೊಳಿಸಿ ಅನುಕೂಲ ಪಡೆಯುವುದು ಹೇಗೆ ಎನ್ನುವುದನ್ನೂ ಅರಿತುಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಆಯ್ಕೆ ಎಂದಾಗ ಕಾಡುವ ಪ್ರಶ್ನೆಯಿದು. ದೀರ್ಘಕಾಲೀನ ಅಸೆಟ್‌ಗಳಲ್ಲಿ ಹೂಡಿಕೆ ಮಾಡಬೇಕೆ ಅಥವಾ ಅಲ್ಪಕಾಲೀನ ಹೂಡಿಕೆ ಮಾಡಬೇಕೆ ಎನ್ನುವುದು. ಹೆಚ್ಚು ರಿಸ್ಕ್‌ ಮತ್ತು ಹೆಚ್ಚು ಆದಾಯ ತರುವ ಹೂಡಿಕೆ ಮಾಡಬೇಕೇ? ಅಲ್ಪ ಆದಾಯ, ಹೆಚ್ಚು ಸುರಕ್ಷೆಯ ಸಾಧನಗಳಲ್ಲಿ ಹೂಡಿಕೆ ಮಾಡಬೇಕೆ? ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕೆ- ಮ್ಯೂಚುವಲ್ ಫಂಡ್‌ ಒಳ್ಳೆಯದೇ? ಫಿಕ್ಸೆಡ್‌ ಡಿಪಾಸಿಟ್‌ ಉತ್ತಮವೇ-ಷೇರು ಸೂಕ್ತವೇ ಎನ್ನುವಂಥದ್ದು.

ಆದರೆ ಪ್ರತಿಯೊಂದು ಹೂಡಿಕೆಯ ಸಾಧನವೂ ಅದರದ್ದೇ ಆದ ಅನುಕೂಲ ಮತ್ತು ಅನಾನುಕೂಲವನ್ನು ಒಳಗೊಂಡಿರುತ್ತದೆ. ಅರಿವು ಇಲ್ಲದ ಬಡ ಹೂಡಿಕೆದಾರ ಸರಿಯಾದ ಆಯ್ಕೆ ಮಾಡಿಕೊಳ್ಳದೆ ಹಣವನ್ನು ಕಳೆದುಕೊಳ್ಳುತ್ತಾನೆ. ಆದ್ದರಿಂದ ಸರಿಯಾದ ಹೂಡಿಕೆಯ ವಿಧಾನದಲ್ಲಿ ಒಂದು ಅಚ್ಚುಕಟ್ಟಾದ ಪ್ಲಾನಿಂಗ್‌ ಅಥವಾ ಕ್ರಮಬದ್ಧವಾದ ಯೋಜನೆ ಇರುತ್ತದೆ.

ಇದನ್ನೂ ಓದಿ :Term Insurance : 1 ಸಾವಿರಕ್ಕೆ 1 ಕೋಟಿ ಇನ್ಷೂರೆನ್ಸ್!‌ ಫುಲ್‌ ಡಿಟೇಲ್ಸ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌

ಒಬ್ಬ ವ್ಯಕ್ತಿಯ ಹೂಡಿಕೆಯ ಖಾತೆಯು ಆತ ಎಷ್ಟರ ಮಟ್ಟಿಗೆ ರಿಸ್ಕ್‌ ತೆಗೆದುಕೊಳ್ಳುತ್ತಾನೆ ಎಂಬುದರ ಮೇಲೆ ಬೆಳೆಯುತ್ತಿರುತ್ತದೆ. ಹೆಚ್ಚರಿ ರಿಸ್ಕ್‌ ಬೇಡ ಎನ್ನುವ ಕೆಟಗರಿಯಲ್ಲಿ ಇರುವವರು ಫಿಕ್ಸೆಡ್‌ ಡಿಪಾಸಿಟ್‌ಗಳಲ್ಲಿ, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು, ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ರಿಸ್ಕ್‌ ತೆಗೆದುಕೊಳ್ಳಲು ಬಯಸುವವರು ಷೇರು, ಕ್ರಿಪ್ಟೊ ಕರೆನ್ಸಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಮಧ್ಯಮ ಮಾರ್ಗದಲ್ಲಿ ಹೋಗುವವರು ಷೇರುಗಳ ಬದಲು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ‌

ಬಂಗಾರದ ಮೇಲೆ ಹೇಚ್ಚಿನ ಹೂಡಿಕೆ ಮಾಡುವುದು ಭಾರತೀಯರ ವಿಶೇಷತೆಯೇ ಸರಿ. ಜತೆಗೆ ಸ್ವಂತ ಮನೆ-ಕಾರು ಖರೀದಿಸುವುದು ಕೂಡ ಜನರ ಅಚ್ಚುಮೆಚ್ಚಿನ ಕನಸು ಆಗಿರುತ್ತದೆ. ತೆರಿಗೆ ಉಳಿತಾಯದ ಸಲುವಾಗಿ ಕೂಡ ಜನ ಹೂಡಿಕೆ ಮಾಡುತ್ತಾರೆ.

ರಿಸ್ಕ್‌ ವರ್ಸಸ್‌ ರಿಟರ್ನ್:‌ ಅನೇಕ ಮಂದಿಗೆ ರಿಸ್ಕ್‌ ಮತ್ತು ರಿಟರ್ನ್‌ ನಡುವಣ ಸಂಬಂಧ ಎಂಥದ್ದು ಎಂಬುದು ತಿಳಿದಿರುತ್ತದೆ. ಹೆಚ್ಚು ಆದಾಯ ತರುವ ಸಾಧನ ಅಥವಾ ಕೆಲಸದಲ್ಲಿ ರಿಸ್ಕ್‌ ಕೂಡ ಹೆಚ್ಚೇ ಇರುತ್ತದೆ. ಕಡಿಮೆ ರಿಸ್ಕ್‌ ಇರುವಲ್ಲಿ ಆದಾಯ ಕೂಡ ಕಡಿಮೆಯೇ ಇರುತ್ತದೆ ಎಂಬುದು. ಇದು ವಾಸ್ತವ ಕೂಡ. ಆದರೆ ಈ ಸೂತ್ರ ಅನೇಕ ಮಂದಿಯನ್ನು ಕಂಗೆಡಿಸುತ್ತದೆ. ಗೊಂದಲಕ್ಕೆ ಕಾರಣವಾಗುತ್ತದೆ. ಆಸೆಯ ಪರಿಣಾಮ ಹೆಚ್ಚು ಲಾಭದ ಮೇಲೆ ಕಣ್ಣಿರುತ್ತದೆ. ಆದರೆ ಅದು ಅಷ್ಟೇ ಅಪಾಯವನ್ನೂ ಒಳಗೊಂಡಿರುತ್ತದೆ. ಆದ್ದರಿಂದ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡುವ ಸಂದರ್ಭದಲ್ಲಿ ಸರಿಯಾಗಿ ಆಲೋಚಿಸುವುದು ಮುಖ್ಯ. ನಿಮ್ಮ ಹೂಡಿಕೆಯಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದು ನಿರ್ಣಾಯಕ. ಹೂಡಿಕೆಯ ಬಳಿಕ ನೀವು ಚೆನ್ನಾಗಿ ತಿನ್ನಲಿ, ಉಂಡು ನೆಮ್ಮದಿಯಿಂದ ಮಲಗಲು ಬಯಸುತ್ತೀರೋ ಇಲ್ಲವೋ ಎಂಬುದನ್ನು ಕೂಡ ಹೂಡಿಕೆ ಆಧರಿಸಿದೆ.

ಹಣದುಬ್ಬರ: ಹಣದುಬ್ಬರ ಅಥವಾ ಬೆಲೆ ಏರಿಕೆಯ ಪರಿಣಾಮ ಹೇಗೆ ಹಣದ ಮೌಲ್ಯ ಕಾಲಾಂತರದಲ್ಲಿ ಕಡಿಮೆಯಾಗುತ್ತದೆ ಎಂಬುದನ್ನು ಹೂಡಿಕೆ ಮಾಡುವವರು ತಿಳಿದುಕೊಳ್ಳಬೇಕು. ಮುಖ್ಯವಾಗಿ ನಿವೃತ್ತರು ಅರಿತುಕೊಳ್ಳಬೇಕು.

ಸಾಮಾನ್ಯವಾಗಿ ಹಣದುಬ್ಬರದಿಂದ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಉಳಿತಾಯ ಕರಗುತ್ತದೆ. ಅಮೆರಿಕ, ಯುರೋಪ್‌ ಇತ್ಯಾದಿ ಕಡೆಗಳಲ್ಲಿ ಇದೇ ಕಾರಣಕ್ಕಾಗಿ ಉಳಿತಾಯದ ಮಟ್ಟ ಕಡಿಮೆಯಾಗಿರುತ್ತದೆ.

ಹೂಡಿಕೆಗೆ ಮುನ್ನ ಅರಿಯಬೇಕಾದ ಮೂರು ಮಾನದಂಡಗಳು: ಯಾವುದೇ ಬಗೆಯ ಹೂಡಿಕೆಗೆ ಮುನ್ನ ಮೂರು ಮಾನದಂಡಗಳನ್ನು ಅರಿತುಕೊಳ್ಳಬೇಕು. ಸುರಕ್ಷತೆ, ಲಿಕ್ವಿಡಿಟಿ ಮತ್ತು ಹೂಡಿಕೆಗೆ ಸಿಗುವ ಆದಾಯ ಎಷ್ಟು ಎಂಬುದನ್ನು ತಿಳಿದುಕೊಳ್ಳಬೇಕು. ಇನ್ನೊಂದು ವಿಚಾರವನ್ನೂ ಮರೆಯಬಾರದು. ಜೀವ ವಿಮೆ ಎನ್ನುವುದು ಮೂಲತಃ ಹೂಡಿಕೆ ಮತ್ತು ಉಳಿತಾಯಕ್ಕೆ ಇರುವ ಸಾಧನವಲ್ಲ. ಆದರೆ ಉಳಿತಾಯ ಮತ್ತು ವಿಮೆ ಎರಡನ್ನೂ ಒದಗಿಸುವ ಯುನಿಟ್‌ ಲಿಂಕ್ಡ್‌ ಇನ್ಷೂರೆನ್ಸ್‌ ಪಾಲಿಸಿಗಳು (ಯುಲಿಪ್)‌ ಮಾರುಕಟ್ಟೆಯಲ್ಲಿ ಸಿಗುತ್ತವೆ.

Exit mobile version