ಬೆಂಗಳೂರು: ವಿಸ್ತಾರ ಮನಿ ಪ್ಲಸ್‌ನಲ್ಲಿ ( Vistara money plus) ಇತ್ತೀಚೆಗೆ ಒಂದು ವಿಡಿಯೊ ಪ್ರಸಾರವಾಗಿತ್ತು. 1 ಸಾವಿರ ರೂಪಾಯಿಗೆ 1 ಕೋಟಿ ರೂ. ಇನ್ಷೂರೆನ್ಸ್ ಪಡೆಯುವುದು ಹೇಗೆ ಎಂಬುದು (Term Insurance) ಅದಾಗಿತ್ತು. ಲಕ್ಷಾಂತರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ವಿಡಿಯೊ ಸಂಚಲನ ಮೂಡಿಸಿತ್ತು. 200ಕ್ಕೂ ಹೆಚ್ಚು ಮಂದಿ ಮತ್ತಷ್ಟು ಮಾಹಿತಿಯನ್ನು ಬಯಸಿದ್ದರು. ಕಮೆಂಟ್ ಬಾಕ್ಸ್‌ನಲ್ಲಿ ವೀಕ್ಷಕರು ಟೈಪಿಸಿದ ಪ್ರಮುಖ 12 ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್ ಅವರು ಉತ್ತರಿಸಿದ್ದಾರೆ. ಹಾಗಾದರೆ ವೀಕ್ಷಕರ ಪ್ರಶ್ನೆಗಳು ಯಾವುದಾಗಿತ್ತು ? ಉತ್ತರವೇನು ? ಇಲ್ಲಿದೆ ವಿವರ.
ಟರ್ಮ್ ಇನ್ಷೂರೆನ್ಸ್ ನಲ್ಲಿ ಯಾವೆಲ್ಲಾ ರೀತಿಯ ಸಾವುಗಳಿಗೆ ಕವರೇಜ್ ಸಿಗುತ್ತದೆ? ಯಾವುದಕ್ಕೆ ಸಿಗಲ್ಲ? ಟರ್ಮ್ ಇನ್ಷೂರೆನ್ಸ್ ರೈಡರ್ಸ್ ಅಗತ್ಯವೇ? ಟರ್ಮ್ ಇನ್ಷೂರೆನ್ಸ್ ಪಡೆಯಲು ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು? ಟರ್ಮ್ ಇನ್ಷೂರೆನ್ಸ್ ಪಡೆಯಲು ಕನಿಷ್ಠ ವಿದ್ಯಾರ್ಹತೆ ಏನು? ಟರ್ಮ್ ಇನ್ಷೂರೆನ್ಸ್ ಪಡೆಯಲು ವ್ಯಕ್ತಿಯ ಆರ್ಥಿಕ ಸ್ಥಿತಿ ಎಷ್ಟು ಮುಖ್ಯವಾಗುತ್ತದೆ? ಟರ್ಮ್ ಇನ್ಷೂರೆನ್ಸ್ ಪಡೆಯುವಾಗ ಆರೋಗ್ಯ ಪರೀಕ್ಷೆ ಎಷ್ಟು ಮುಖ್ಯವಾಗುತ್ತದೆ? ನಾವು ಮಾಡುವ ಉದ್ಯೋಗ ಎಷ್ಟು ಮುಖ್ಯವಾಗುತ್ತದೆ? ಭಾರತೀಯ ಪ್ರಜೆಯಾಗಿರಬೇಕೆ? ಯಾವೆಲ್ಲ ದಾಖಲೆಗಳು ಬೇಕು? ರಿಟರ್ನ್ ಆನ್ ಪ್ರೀಮಿಯಂ ಪಾಲಿಸಿ ಅಥವಾ ನಾನ್ ರಿಟರ್ನೆಬಲ್ ಪಾಲಿಸಿ ಖರೀದಿಸುವುದು ಸೂಕ್ತವೇ? ಕೊನೆಯದಾಗಿ ಟರ್ಮ್ ಇನ್ಷೂರೆನ್ಸ್ ಕ್ಲೇಮ್ ಪ್ರಕ್ರಿಯೆ ಹೇಗೆ?
ಮೊದಲಿಗೆ ಟರ್ಮ್ ಇನ್ಷೂರೆನ್ಸ್ ನಲ್ಲಿ ಯಾವೆಲ್ಲಾ ರೀತಿಯ ಸಾವುಗಳಿಗೆ ಕವರೇಜ್ ಸಿಗುತ್ತದೆ?
ಟರ್ಮ್ ಇನ್ಷೂರೆನ್ಸ್‌ನಲ್ಲಿ ಎಲ್ಲ ರೀತಿಯ ಸಾವುಗಳಿಗೆ ವಿಮೆ ಪರಿಹಾರ ಸಿಗುತ್ತದೆಯೇ ಎಂದು ಕೇಳಿದ್ದಾರೆ. ಆತ್ಮಹತ್ಯೆ ಮಾಡಿದರೆ ಸಿಗುತ್ತದೆಯೇ ಎಂದು ಕೆಲವರು ಕೇಳುತ್ತಾರೆ. ಈ ವಿಷಯವನ್ನು ಎರಡು ಭಾಗಗಳಲ್ಲಿ ಚರ್ಚಿಸೋಣ. ಮೊದಲನೆಯದಾಗಿ ಯಾವ ರೀತಿಯ ಸಾವಿಗೆ ಟರ್ಮ್ ಇನ್ಷೂರೆನ್ಸ್‌ನಲ್ಲಿ ವಿಮೆ ಪರಿಹಾರ ಸಿಗುತ್ತದೆ? ಸಹಜ ಸಾವು. ಒಬ್ಬ ವ್ಯಕ್ತಿ ಮೂವತ್ತನೇ ವಯಸ್ಸಿನಲ್ಲಿ ಟರ್ಮ್ ಇನ್ಷೂರೆನ್ಸ್ ತೆಗೆದುಕೊಂಡಿರುತ್ತಾನೆ. 65 ನೇ ವಯಸ್ಸಿನ ತನಕ 1 ಕೋಟಿ ರೂ. ಕವರೇಜ್ ಇರುವ ವಿಮೆ ಇದಾಗಿರುತ್ತದೆ. ಆತ ತನ್ನ 63ನೇ ವಯಸ್ಸಿಗೆ ಸಹಜ ಸಾವಿಗೀಡಾಗುತ್ತಾನೆ. ಆಗ ಅವರ ನಾಮಿನಿಗೆ 1 ಕೋಟಿ ರೂ. ಟರ್ಮ್ ಇನ್ಶೂರೆನ್ಸ್ ಸಿಗುತ್ತದೆ. ಅನಾರೋಗ್ಯದಿಂದ ಅಥವಾ ಅಪಘಾತದಿಂದ ಸತ್ತರೂ ಒಂದು ಕೋಟಿ ರೂ. ಇನ್ಶೂರೆನ್ಸ್ ಲಭಿಸುತ್ತದೆ. ಹೃದಯಾಘಾತ, ಅಪಘಾತ, ವಯೋ ಸಹಜ ಸಾವು, ಗಂಭೀರ ಅನಾರೋಗ್ಯದಿಂದ ಉಂಟಾದ ಮರಣಕ್ಕೂ ಟರ್ಮ್ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ.
ಟರ್ಮ್ ಇನ್ಷೂರೆನ್ಸ್ ಯಾವ ರೀತಿಯ ಸಾವಿಗೆ ಲಭಿಸುವುದಿಲ್ಲ? ಬಹಳ ಜನ ಸುಸೈಡ್ ಮಾಡಿದರೆ ಸಿಗುತ್ತದೆಯೇ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಬರ್ತ್ ಡೇಟ್ ತಪ್ಪಾಗಿದ್ದಕ್ಕೆ 5 ಕೋಟಿ ರೂ. ವಿಮೆ ಪಾವತಿಗೆ ನಿರಾಕರಣೆ! 4 ಕೋಟಿ ಬಡ್ಡಿ ಸೇರಿಸಿ 9 ಕೋಟಿ ರೂ. ನೀಡಲು ಆಯೋಗ ಆದೇಶ!
ಆದರೆ ಗಮನಿಸಿ, ಯಾವುದೇ ವಿಮೆ ಕಂಪನಿ ನೀವು ಚೆನ್ನಾಗಿ ಬದುಕಿ, ಬಾಳಿ, ಅನಿವಾರ್ಯ ಸಂದರ್ಭದಲ್ಲಿ ವಿಪತ್ತು ಸಂಭವಿಸಿದಾಗ ವಿಮೆ ಕವರೇಜ್ ಕೊಡುತ್ತದೆಯೇ ಹೊರತು, ಸುಸೈಡ್ ಮಾಡಿದರೆ ವಿಮೆ ಕವರೇಜ್ ಸಿಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯ ಕಾರಣಗಳನ್ನು ಗಮನಿಸಿ, ವಿಮೆ ಕಂಪನಿ ತನ್ನ ವಿವೇಚನೆಯನ್ನು ಬಳಸಿಕೊಳ್ಳಬಹುದು. ಆದರೆ ಬಹುತೇಕ ಕಂಪನಿಗಳು ಸುಸೈಡ್‌ಗೆ ವಿಮೆ ಕವರೇಜ್ ಕೊಡುವುದಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿದರೆ ವಿಮೆ ಸಿಗುತ್ತದೆ ಎಂಬ ಭ್ರಮೆಯನ್ನು ಇಟ್ಟುಕೊಳ್ಳುವುದು ಬೇಡ.
ಮದ್ಯಪಾನ ಮಾಡಿ ವಾಹನ ಚಾಲನೆಯಿಂದ ಅಪಘಾತವಾಗಿ ವ್ಯಕ್ತಿ ಸಾವಿಗೀಡಾದರೆ, ಅಂಥವರಿಗೆ ವಿಮೆ ಪರಿಹಾರ ಸಿಗುವುದಿಲ್ಲ. ಅತಿಯಾದ ಡ್ರಗ್ಸ್ ಸೇವಿಸಿ ಮೃತಪಟ್ಟರೆ ಕೂಡ ಸಿಗದು. ಇರುವ ಕಾಯಿಲೆಯನ್ನು ಮುಚ್ಚಿಟ್ಟರೆ ವಿಮೆ ಪರಿಹಾರ ಸಿಗದು. ಆದರೆ ಈ ಸಾಧ್ಯತೆ ಕಡಿಮೆ. ಏಕೆಂದರೆ ಟರ್ಮ್ ವಿಮೆ ಕೊಡುವುದಕ್ಕೆ ಮುನ್ನ ಆರೋಗ್ಯ ತಪಾಸಣೆ ಮಾಡುತ್ತಾರೆ. ಪ್ರೆಗ್ನೆನ್ಸಿ ವೇಳೆ ತಾಯಿ ಸಾವಿಗೀಡಾದರೆ ಬಹುಪಾಲು ಕಂಪನಿಗಳು ವಿಮೆ ಕವರೇಜ್ ಕೊಡುವುದಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಸಿಗುವುದಿಲ್ಲ. ಪಾಲಿಸಿ ಹಣಕ್ಕಾಗಿ ಪಾಲಿಸಿದಾರರನ್ನು ಕೊಂದರೆ ಕವರೇಜ್ ಸಿಗುವುದಿಲ್ಲ. ಬಂಗಿ ಜಂಪ್ , ಮೋಟಾರ್ ಸ್ಪೋರ್ಟ್ಸ್ ಇತ್ಯಾದಿ ಅಡ್ವೆಂಚರ್ ಸ್ಪೋರ್ಟ್ಸ್‌ಗೆ ಬಹುತೇಕ ಕಂಪನಿಗಳು ವಿಮೆ ಕವರೇಜ್ ನೀಡುವುದಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮೃತಪಟ್ಟರೆ (ಉದಾಹರಣೆಗೆ ಗುಡ್ಡ ಕುಸಿತ, ಭೂಕಂಪ, ನೆರೆ ಇತ್ಯಾದಿ) ಟರ್ಮ್ ಇನ್ಷೂರೆನ್ಸ್ ಸಿಗುವುದಿಲ್ಲ. ಸ್ವಯಂ ಹಾನಿ ಮಾಡಿಕೊಂಡರೆ ಸಿಗಲ್ಲ. ಏಕೆಂದರೆ ಇವುಗಳೆಲ್ಲ ಅನಿರೀಕ್ಷಿತ. ಉದಾಹರಣೆಗೆ ಭೂಕಂಪ ಸಂಭವಿಸಿ ಲಕ್ಷಾಂತರ ಜನ ಒಟ್ಟಿಗೆ ಮೃತಪಟ್ಟರೆ, ಹಾಗೂ ಅವರಿಗೆಲ್ಲ ವಿಮೆ ಪರಿಹಾರ ಕೊಡಬೇಕು ಎಂದರೆ, ವಿಮೆ ಕಂಪನಿಗಳೇ ದಿವಾಳಿಯಾಗಬಹುದು.
ಟರ್ಮ್ ಇನ್ಷೂರೆನ್ಸ್ ರೈಡರ್ಸ್ ಎಂದರೇನು? ಜನ ಸಾಮಾನ್ಯರಿಗೆ ಅಗತ್ಯವೇ?
ಟರ್ಮ್ ಇನ್ಷೂರೆನ್ಸ್ ಜತೆಗೆ ಹೆಚ್ಚುವರಿ ವಿಮೆ ಕವರೇಜ್ ಅನ್ನು ಪಡೆಯಲು ಇನ್ಷೂರೆನ್ಸ್ ರೈಡರ್ಸ್ ಪಡೆಯಬಹುದು. ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ ಅನ್ನು ಪಡೆದರೆ ಅನುಕೂಲ. ಉದಾಹರಣೆಗೆ ಯಾರಾದರೂ ಒಬ್ಬ ವ್ಯಕ್ತಿ 50 ಲಕ್ಷ ರೂ. ಟರ್ಮ್ ಇನ್ಷೂರೆನ್ಸ್ ಪಡೆದಿರುತ್ತಾನೆ. ಅದರ ಜತೆಗೆ 50 ಲಕ್ಷ ಆಕ್ಸಿಡೆಂಟಲ್ ಬೆನಿಫಿಟ್ ರೈಡರ್ ಪಡೆದಿದ್ದಾರೆ ಎಂದಿಟ್ಟುಕೊಳ್ಳಿ. ಆ ವ್ಯಕ್ತಿ ಅಪಘಾತದಿಂದ ಮೃತಪಟ್ಟರೆ, ಆತನ ಕುಟುಂಬಕ್ಕೆ 50 ಲಕ್ಷ ರೂ. ಟರ್ಮ್ ಇನ್ಷೂರೆನ್ಸ್ ಹಾಗೂ ಅಪಘಾತದಿಂದ ಮೃತಪಟ್ಟಿದ್ದಕ್ಕೆ ಹೆಚ್ಚುವರಿ 50 ಲಕ್ಷ ರೂ. ಸಿಗುತ್ತದೆ. ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ಕವರೇಜ್ ಪಡೆಯಲು ಹೆಚ್ಚಿನ ಪ್ರೀಮಿಯಂ ಕಟ್ಟಬೇಕಾಗಿರುವುದಿಲ್ಲ. ಟರ್ಮ್ ವಿಮೆ ತೆಗೆದುಕೊಳ್ಳುವವರು ಒಂದೆರಡು ಸಾವಿರ ರೂ. ವೆಚ್ಚವಾದರೂ ಆಕ್ಸಿಡೆಂಟಲ್ ಡೆತ್ ಕವರೇಜ್ ಪಡೆಯುವುದು ಸೂಕ್ತ.
ಒಬ್ಬ 25 ವರ್ಷ ವಯಸ್ಸಿನ ಯುವಕ ಟರ್ಮ್ ಇನ್ಷೂರೆನ್ಸ್ ತೆಗೆದುಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ವರ್ಷಕ್ಕೆ 13 ಸಾವಿರ ರೂ. ಟರ್ಮ್ ಇನ್ಷೂರೆನ್ಸ್ ಪ್ರೀಮಿಯಂ ಕಟ್ಟುತ್ತಿದ್ದಾನೆ ಎಂದು ಭಾವಿಸಿ. ವರ್ಷಕ್ಕೆ 3ರಿಂದ 3.5 ಸಾವಿರ ರೂ. ರೈಡರ್ ತೆಗೆದುಕೊಂಡರೆ ಅನುಕೂಲಕರ.
ಕ್ರಿಟಿಕಲ್ ಇಲ್‌ನೆಸ್ ರೈಡರ್ :
ಸಾಮಾನ್ಯ ಟರ್ಮ್ ಇನ್ಷೂರೆನ್ಸ್ ಜತೆಗೆ ಹೆಚ್ಚುವರಿಯಾಗಿ ತೆಗೆದುಕೊಳ್ಳಬಹುದಾದ ವಿಮೆಯಿದು. ಕ್ರಿಟಿಕಲ್ ಇಲ್ ನೆಸ್ ರೈಡರ್ ಹೇಗೆ ಉಪಯುಕ್ತ ಎಂಬುದನ್ನು ನೋಡೋಣ. ಯಾರಿಗಾದರೂ ವಯಸ್ಸಾದ ಬಳಿಕ ಕ್ಯಾನ್ಸರ್, ಹೃದಯದ ಸಮಸ್ಯೆ ಇತ್ಯಾದಿ ಕಾಯಿಲೆಗಳು ಬರಬಹುದು. ಆಗ ಆರ್ಥಿಕ ನೆರವಿಗೆ ಈ ಹೆಚ್ಚುವರಿ ವಿಮೆ ಪಡೆಯಬಹುದು. ಇದು ದುಬಾರಿಯಾದ್ದರಿಂದ ಆರ್ಥಿಕತೆ ಗಮನಿಸಿ ಪಡೆಯಿರಿ.
ಆಕ್ಸಿಡೆಂಟಲ್ ಪರ್ಮನೆಂಟ್ ಡಿಸೆಬಲಿಟಿ ಬೆನಿಫಿಟ್ ರೈಡರ್:
ಒಬ್ಬ ವ್ಯಕ್ತಿ ಅಫಘಾತಕ್ಕೀಡಾಗಿ ಜೀವನೋಪಾಯಕ್ಕೆ ಕುತ್ತು ಉಂಟಾದರೆ, ಶಾಶ್ವತ ಅಂಗ ವೈಕಲ್ಯಕ್ಕೀಡಾದರೆ ಆಗ ಈ ವಿಮೆ ನೆರವಿಗೆ ಬರುತ್ತದೆ. ಅಪಘಾತಕ್ಕೀಡಾದ ಮೇಲೆ 10-15 ವರ್ಷ ತನಕ ಈ ರೈಡರ್ ಸಿಗುತ್ತದೆ.
ಟರ್ಮ್ ಇನ್ಷೂರೆನ್ಸ್ ಪಡೆಯಲು ಕನಿಷ್ಠ ವಯಸ್ಸು ಎಷ್ಟು? ಹಿರಿಯರಿಗೆ ಸಿಗುತ್ತಾ?
18 ವರ್ಷ ಮೇಲ್ಪಟ್ಟವರು ಟರ್ಮ್ ಇನ್ಷೂರೆನ್ಸ್ ಪಡೆಯಬಹುದು. ಗರಿಷ್ಠ ವರ್ಷ 65 ವರ್ಷ. ಆದರೆ ಟರ್ಮ್ ಇನ್ಷೂರೆನ್ಸ್‌ನಲ್ಲಿ ಕಿರಿಯ ವಯಸ್ಸಿನಲ್ಲಿ ಇದ್ದಾಗ ಕಡಿಮೆ ಪ್ರೀಮಿಯಂ ಹಾಗೂ ವಯಸ್ಸಾಗುತ್ತಾ ಹೆಚ್ಚು ಪ್ರೀಮಿಯಂ ಕೊಡಬೇಕಾಗುತ್ತದೆ. ಉದಾಹರಣೆಗೆ 65 ವರ್ಷದ ವ್ಯಕ್ತಿ 75 ವರ್ಷದ ತನಕ ಅನ್ವಯಿಸುವ 10 ವರ್ಷಗಳ ಅವಧಿಗೆ ಟರ್ಮ್ ಇನ್ಷೂರೆನ್ಸ್ ತೆಗೆದುಕೊಳ್ಳಬೇಕಿದ್ದರೆ ತಿಂಗಳಿಗೆ 5,596 ರೂ. ಕಟ್ಟಬೇಕು. ಆದರೆ 25 ವರ್ಷದ ವ್ಯಕ್ತಿ 75 ವರ್ಷಕ್ಕೆ ಟರ್ಮ್ ಇನ್ಷೂರೆನ್ಸ್ ತೆಗೆದುಕೊಳ್ಳಲು ತಿಂಗಳಿಗೆ 629 ರೂ. ಪ್ರೀಮಿಯಂ ಸಾಕಾಗುತ್ತದೆ. ಹೀಗಾಗಿ ವಯಸ್ಸನ್ನು ಆಧರಿಸಿ ಪ್ರೀಮಿಯಂ ದುಬಾರಿಯಾಗುತ್ತದೆ. ವಯಸ್ಸಾದ ಮೇಲೆ ಆರೋಗ್ಯ ಸ್ಥಿತಿ ಕೂಡ ಕುಸಿಯಬಹುದು. ಆರ್ಥಿಕ ಪರಿಸ್ಥಿತಿ, ಆರೋಗ್ಯ ಗಮನಿಸಿ ಟರ್ಮ್ ಇನ್ಷೂರೆನ್ಸ್ ಸಿಗುತ್ತದೆ.
ಟರ್ಮ್ ಇನ್ಷೂರೆನ್ಸ್ ಪಡೆಯಲು ವಿದ್ಯಾರ್ಹತೆ ಬೇಕೆ? ಇದಕ್ಕೆ ನಿಗದಿತ ನಿಯಮಗಳು ಇಲ್ಲ. ಆದರೆ ಬಹುತೇಕ ವಿಮೆ ಕಂಪನಿಗಳು ಡಿಗ್ರಿಯನ್ನು ಪರಿಗಣಿಸುತ್ತವೆ. ಕೆಲ ಕಂಪನಿಗಳು ಪಿಯುಸಿಯನ್ನು ಹಾಗೂ ಎಸ್ಸೆಸ್ಸೆಲ್ಸಿಯನ್ನು ಪರಿಗಣಿಸುತ್ತವೆ. 20-25 ಲಕ್ಷ ರೂ.ಗೆ ಶೈಕ್ಷಣಿಕ ಅರ್ಹತೆ ಅಷ್ಟಾಗಿ ಪರಿಗಣನೆಯಾಗುವುದಿಲ್ಲ. ಆದರೆ ಒಂದು-ಎರಡು ಕೋಟಿ ರೂ. ವಿಮೆ ಬೇಕಿದ್ದರೆ, ಶೈಕ್ಷಣಿಕ ಮಟ್ಟ ಕೂಡ ಒಂದು ಮಾನದಂಡವಾಗಿರುತ್ತದೆ. ನಿಮ್ಮ ಆದಾಯ, ಸ್ಥಿರ ಆದಾಯ, ಶಾರೀರಿಕ ಆರೋಗ್ಯ ಎಲ್ಲವನ್ನೂ ಕಂಪನಿ ಗಮನಿಸುತ್ತದೆ. ಬಿಸಿನೆಸ್ ಮಾಡುವವರು ತಮ್ಮ ಆದಾಯದ ಮೂಲವನ್ನು ಖಾತರಿಪಡಿಸಬೇಕಾಗುತ್ತದೆ.
ಆರೋಗ್ಯ ಪರೀಕ್ಷೆ ಎಷ್ಟು ಮುಖ್ಯ?
ಟರ್ಮ್ ಇನ್ಷೂರೆನ್ಸ್‌ನಲ್ಲಿ ಪಡೆಯುವವರಿಗೆ ವಯಸ್ಸು ಕಿರಿದಾಗಿದ್ದು, ಪ್ರೀಮಿಯಂ ಕೂಡ ಕಡಿಮೆಯಾಗಿದ್ದಾಗ, ವಿಮೆ ಕಂಪನಿಗಳು ಅಷ್ಟಾಗಿ ಆರೋಗ್ಯ ತಪಾಸಣೆಯನ್ನು ಕೇಳುವುದಿಲ್ಲ. ಕೆಲವರು ಟೆಲಿಫೋನ್ ಮೂಲಕ ಕೇಳಿಕೊಳ್ಳುತ್ತಾರೆ. ಕೆಲವರು ಮೆಡಿಕಲ್ ರಿಪೋರ್ಟ್ ಕೇಳುತ್ತಾರೆ. ಕೆಲವರು ತೂಕ, ಎತ್ತರ, ಲಿಪಿಡ್ ಪ್ರೊಫೈಲ್, ಬಾಡಿ ಮಾಸ್ ಇಂಡೆಕ್ಸ್, ಬಿಪಿ, ಹೃದಯ ಬಡಿತ ಎಲ್ಲವನ್ನೂ ಚೆಕ್ ಮಾಡ್ತಾರೆ. ಅನಾರೋಗ್ಯ ಇದ್ದರೆ ಅದನ್ನು ಗಮನಕ್ಕೆ ತಂದರೆ ಪ್ರೀಮಿಯಂ ಹೆಚ್ಚಿಸಿ ವಿಮೆ ಕವರೇಜ್ ಕೊಡುತ್ತವೆ.
ಉದ್ಯೋಗ ಪರಿಗಣನೆಯಾಗುತ್ತದೆಯೇ?
ವಿಮೆ ಕಂಪನಿಗಳು ಸಾಮಾನ್ಯವಾಗಿ ಸೇನೆಯಲ್ಲಿ ಇರುವವರಿಗೆ ವಿಮೆ ಕವರೇಜ್ ನೀಡುವುದಿಲ್ಲ. ಮೈನಿಂಗ್ , ಅಡ್ವೆಂಚರ್ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡುವವರಿಗೆ ಕೊಡುವುದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೇನೆ, ಮೈನಿಂಗ್‌ನಲ್ಲಿ ಇರುವವರಿಗೆ ಕೊಡುತ್ತವೆ. ಏಕೆಂದರೆ ಇಲ್ಲಿ ಸಾಮಾನ್ಯವಾಗಿ ರಿಸ್ಕ್ ಹೆಚ್ಚು ಇರುತ್ತದೆ.
ಭಾರತೀಯರಿಗೆ ಮಾತ್ರವೇ? ಐಆರ್‌ಡಿಎ ಪ್ರಕಾರ ವಿಮೆ ಮಾಡುವಾಗ ಭಾರತೀಯ ಪ್ರಜೆಯಾಗಿರಬೇಕು. ಪ್ಯಾನ್ ಕಾರ್ಡ್, ಆಧಾರ್, ಬರ್ತ್ ಸರ್ಟಿಫಿಕೇಟ್, ಬೇಸಿಕ್ ಕೆವೈಸಿ ದಾಖಲಾತಿಗಳು ಸಾಕಾಗುತ್ತದೆ.
ರಿಟರ್ನ್ ಆನ್ ಪ್ರೀಮಿಯಂ ಎಂದರೇನು? ಟರ್ಮ್ ಇನ್ಷೂರೆನ್ಸ್‌ನಲ್ಲಿ ಹಾಕಿದ ದುಡ್ಡು ವಾಪಸ್ ಬರಲ್ಲ. ಆದರೂ ರಿಟರ್ನ್ ಆನ್ ಪ್ರೀಮಿಯಂ ಆಫರ್ ನೀಡುವ ಕಂಪನಿಗಳು ಇವೆ. ಅಂದರೆ ನೀವು ಕಟ್ಟಿದ ಪ್ರೀಮಿಯಂ ಅನ್ನು ಕಂಪನಿ ವಾಪಸ್ ಕೊಡುವುದು. ಕಂಪನಿಗಳು ಇಂಥ ಆಫರ್‌ನಲ್ಲಿ ಪ್ರೀಮಿಯಂ ದುಬಾರಿಯಾಗುತ್ತದೆ. 50 ಲಕ್ಷ ಕವರೇಜ್‌ಗೆ 10 ಸಾವಿರ ರೂ. ಪ್ರೀಮಿಯಂ ಬದಲಿಗೆ 20 ಸಾವಿರ ರೂ. ಸಂಗ್ರಹಿಸುತ್ತಾರೆ. ಅದನ್ನು ಇನ್ವೆಸ್ಟ್ ಮಾಡಿ ಬರುವ ಲಾಭದಲ್ಲಿ ಒಂದಷ್ಟು ಪಾಲನ್ನು ಹಿಂತಿರುಗಿಸುತ್ತಾರೆ.
ಕ್ಲೇಮ್ ಸೆಟ್ಲ್ ಮೆಂಟ್ ರೇಶಿಯೊ ಎಷ್ಟಿದ್ದರೆ ಬೆಸ್ಟ್?
ಕ್ಲೇಮ್ ಸೆಟ್ಲ್ ಮೆಂಟ್ ರೇಶಿಯೊ 98-99% ಇರುವ ವಿಮೆ ಕಂಪನಿಗಳ ವಿಮೆ ಖರೀದಿಸುವುದು ಸೂಕ್ತ. ಐಆರ್‌ಡಿಎ ವೆಬ್ ಸೈಟ್‌ನಲ್ಲಿ ಈ ವಿವರ ಪಡೆಯಬಹುದು. ಟರ್ಮ್ ಇನ್ಷೂರೆನ್ಸ್ ತೆಗೆದುಕೊಂಡಿದ್ದರೆ, ಕುಟುಂಬದ ಸದಸ್ಯರಿಗೆ ತಿಳಿಸಬೇಕು. ಪಾಲಿಸಿದಾರ ಮೃತಪಟ್ಟಾಗ ನಾಮಿನಿಯೇ ವಿಮೆ ಕಂಪನಿಗೆ ತಿಳಿಸಬೇಕೆಂದೇನಿಲ್ಲ. ಆನ್‌ಲೈನ್ ಮೂಲಕವೂ ಕ್ಲೇಮ್ ಸೆಟ್ಲ್ ಮೆಂಟ್ ಮಾಡಬಹುದು. ಇಲ್ಲಿ ಮುಖ್ಯವಾಗಿ ಜೀವ ಹಾನಿಯಾಗಿದೆ ಎಂಬುದನ್ನು ಆದಷ್ಟು ಬೇಗ ಕಂಪನಿಗೆ ತಿಳಿಸಬೇಕು. ಒಂದೊಂದು ಕಂಪನಿಯ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಬೇಕು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ