ತುಂಬ ಜನ ದುಡ್ಡನ್ನು ದುಡಿಯುತ್ತಾರೆ, ಆದರೆ ದುಡ್ಡನ್ನು ದುಡಿಸುವುದಿಲ್ಲ. ಸೋಮಾರಿಯಾಗಲು ಬಿಡುತ್ತಾರೆ. ದುಡ್ಡನ್ನು ಸೇವಿಂಗ್ಸ್ ಅಕೌಂಟ್‌ನಲ್ಲಿ ಇಟ್ಟು ಅದು ಹೆಚ್ಚು ಬೆಳೆಯದಿರಲು ಅವರೇ (Money plus ) ಕಾರಣವಾಗುತ್ತಾರೆ. ನಿಮ್ಮ ದುಡ್ಡು ನಿಮಗಾಗಿ ದುಡಿಯುವಂತೆ ಮಾಡಿ. ನಿಮ್ಮ ದುಡ್ಡು ನಿಮಗಾಗಿ ಎಲ್ಲಿ ಹೆಚ್ಚು ದುಡಿಯಬಲ್ಲುದೋ ಅಲ್ಲಿ ಹಾಕಿ ಎನ್ನುತ್ತಾರೆ ವಿಸ್ತಾರ ನ್ಯೂಸ್ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್. ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸ್ಥಾಪಕ ಉದಯ್ ಕೋಟಕ್ ಹೀಗೆನ್ನುತ್ತಾರೆ- ನಿಮ್ಮ ದುಡ್ಡು ನಿಮಗಾಗಿ ದುಡಿಯುವಂತೆ ಮಾಡಿ. ಹೆಚ್ಚು ಲಾಭ ಕೊಡುವ ಹೂಡಿಕೆಗಳಲ್ಲಿ ದುಡ್ಡು ಬೆಳೆಸಿ, ಸಂಪತ್ತು ಸೃಷ್ಟಿಸಲು ಇರುವ ಅತ್ಯುತ್ತಮ ಮಾರ್ಗ ಇದಾಗಿದೆ ಎನ್ನುತ್ತಾರೆ ಅವರು.
ದುಡ್ಡನ್ನು ನಾವು ಮಾತ್ರ ಗಳಿಸಿದ್ರೆ ಸಾಕಾಗುವುದಿಲ್ಲ, ಅದನ್ನು ಚೆನ್ನಾಗಿ ದುಡಿಸಿದರೆ ಮಾತ್ರ ಧನಿಕರಾಗಬಹುದು. ಟಾಟಾ ಗ್ರೂಪ್‌ನ ವಿಶ್ರಾಂತ ಚೇರ್ಮನ್ ರತನ್ ಟಾಟಾ ಹೀಗೆನ್ನುತ್ತಾರೆ- ತುರ್ತು ನಿಧಿ ನಿಮ್ಮ ಆದ್ಯತೆಯಾಗಿರಲಿ. ಧುತ್ತೆಂದು ಬರುವ ಹಣಕಾಸಿನ ಅನಿಶ್ಚಿತತೆಗಳಿಗೆ ತುರ್ತು ನಿಧಿ (ಎಮರ್ಜೆನ್ಸಿ ಫಂಡ್) ನೆರವಾಗುತ್ತದೆ. ಉದ್ಯೋಗ ಕಡಿತವಾಗಬಹುದು ಅಥವಾ ಅನಾರೋಗ್ಯದ ಸಂದರ್ಭ ಇರಬಹುದು, ಕಷ್ಟಕಾಲದಲ್ಲಿ ನಿಮ್ಮ ಆಪ್ತ ಮಿತ್ರ ಯಾರೆಂದರೆ ತುರ್ತು ನಿಧಿ ಎನ್ನುತ್ತಾರೆ ರತನ್ ಟಾಟಾ. ಕಷ್ಟಪಟ್ಟು ಹೂಡಿಕೆ ಮಾಡುತ್ತೀರಿ, ಆದರೆ ನಿಮ್ಮ ಬಳಿ ಎಮರ್ಜೆನ್ಸಿ ಫಂಡ್ ಇರದಿದ್ದಾಗ, ಅನಿಶ್ಚಿತತೆಗಳ ಸಂದರ್ಭದಲ್ಲಿ ಹೂಡಿಕೆಯನ್ನೇ ಹಿಂಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ಹೂಡಿಕೆಯ ಹಳಿ ತಪ್ಪದಿರಲು ಎಮರ್ಜೆನ್ಸಿ ನಿಧಿ ಅಗತ್ಯ. ನಿಮ್ಮ ಆರು ತಿಂಗಳು ಅಥವಾ ಒಂದು ವರ್ಷದ ಸಂಬಳವನ್ನು ಎಮರ್ಜೆನ್ಸಿ ಫಂಡ್ ಆಗಿ ಇಡಬಹುದು.
ನಿಮ್ಮ ಖರ್ಚುಗಳ ಮೇಲೆ ಹಿಡಿತವಿರಲಿ, ಆದಾಯ- ಉಳಿತಾಯ = ಖರ್ಚು ಎನ್ನುವ ಸೂತ್ರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ. ಹೂಡಿಕೆಯ ಮೂಲ ಅಗತ್ಯ ಯಾವುದು ಎಂದರೆ ಉಳಿತಾಯ. ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಬೇಕು ಎಂಬ ರಾಕೇಶ್ ಜುಂಜುನ್ ವಾಲಾ ಮಾತು ಮಹತ್ವದ್ದು.
ವಿಪ್ರೊ ಸ್ಥಾಪಕ ಅಜೀಂ ಪ್ರೇಮ್‌ಜಿ ಅವರು, ನೀವು ದೊಡ್ಡದಾಗಿ ಯೋಚಿಸಿ, 10 ಲಕ್ಷ ಸಂಪಾದಿಸಬೇಕು ಎಂಬ ಇಂಗಿತ ಇದ್ದರೆ, 10 ಕೋಟಿ ರೂ. ಗಳಿಸುವ ಗುರಿ ಇರಬೇಕು ಎನ್ನುತ್ತಾರೆ ಅವರು. ನಿಮ್ಮ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಅಜೀಂ ಪ್ರೇಮ್‌ಜಿ ಸೂಚ್ಯವಾಗಿ ತಿಳಿಸಿದ್ದಾರೆ. ಮಹೀಂದ್ರಾ & ಮಹೀಂದ್ರಾದ ಮುಖ್ಯಸ್ಥ ಆನಂದ ಮಹೀಂದ್ರಾ ಅವರು, ಕಾಲಕಾಲಕ್ಕೆ ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಪರಾಮರ್ಶಿಸಿ ಎನ್ನುತ್ತಾರೆ. ಹಣಕಾಸು ಗುರಿಗಳನ್ನು ಮುಟ್ಟಬೇಕಾದರೆ ನಿಮ್ಮ ಸದ್ಯದ ಆರ್ಥಿಕ ಪರಿಸ್ಥಿತಿಗಳನ್ನು ಆಗಾಗ ಪರಾಮರ್ಶಿಸಬೇಕು. ಹೀಗೆ ಮಾಡಿದಾಗ ನಿಗದಿತ ಗುರಿ ಮುಟ್ಟಲು ಇನ್ನು ಎಷ್ಟು ಹಣ ಬೇಕು ಎನ್ನುವುದು ಅರಿವಿಗೆ ಬರುತ್ತದೆ.
ಇದನ್ನೂ ಓದಿ:Money Guide: ಈಗ 210 ರೂ. ಉಳಿಸಿ, ನಿವೃತ್ತಿ ಬಳಿಕ ಪ್ರತಿ ತಿಂಗಳು 5 ಸಾವಿರ ರೂ. ಗಳಿಸಿ; ಯಾವುದು ಈ ಯೋಜನೆ?
ನೀವು ಎಷ್ಟು ಬೇಕಾದರೂ ದುಡ್ಡು ಮಾಡಿ, ಆದರೆ ಅದು ಒಳ್ಳೆಯ ಮಾರ್ಗದಲ್ಲಿ ಇರಲಿ ಎನ್ನುತ್ತಾರೆ ಬಾಲಿವುಡ್ ತಾರೆ ಶಾರುಖ್ ಖಾನ್. ದುಡ್ಡಿನ ಬಗ್ಗೆ ತಿರಸ್ಕಾರದ ಭಾವನೆ ಬೇಡ. ಮೈಕ್ರೊಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಹೀಗೆನ್ನುತ್ತಾರೆ- ದುಡ್ಡಿದ್ದರಷ್ಟೇ ನೀವು ಪ್ರಸ್ತುತ. ನಿನ್ನ ಕೈಯಲ್ಲಿ ದುಡ್ಡಿದ್ದಾಗ ನೀನ್ಯಾರು ಎನ್ನುವುದನ್ನು ನೀನು ಮರೆಯುತ್ತೀಯ. ಆದರೆ ನಿನ್ನ ಕೈಯಲ್ಲಿ ಯಾವುದೇ ದುಡ್ಡಿಲ್ಲದಿದ್ದಾಗ ಇಡೀ ಜಗತ್ತು ನೀನ್ಯಾರು ಎನ್ನುವುದನ್ನು ಮರೆತು ಬಿಡುತ್ತದೆ.