ಬೆಂಗಳೂರು: ಹವಾಮಾನ ಬದಲಾವಣೆಯ ಪರಿಣಾಮ ಭಾರತದಲ್ಲಿ ಮುಂಗಾರು ಪ್ರಬಲ ಹಾಗೂ ಅನಿರ್ದಿಷ್ಟವಾಗಿರಲಿದೆ ಎಂದು ತಜ್ಞರ ವರದಿ ಎಚ್ಚರಿಸಿದೆ. (Mansoon 2023 ) ಪೋಸ್ಟ್‌ಡಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ (PIK) ಸಂಸ್ಥೆಯ ತಜ್ಞರು ನಡೆಸಿದ ಅಧ್ಯಯನ ವರದಿಯ ಪ್ರಕಾರ ತಾಪಮಾನದಲ್ಲಿ ಉಂಟಾಗುವ ಪ್ರತಿ ಒಂದು ಡಿಗ್ರಿ ಸೆಲ್ಶಿಯಸ್ ಏರಿಕೆಯಿಂದಲೂ ಮುಂಗಾರು ಮಳೆಯ ಪ್ರಮಾಣದಲ್ಲಿ ಐದು ಪರ್ಸೆಂಟ್ ಏರಿಕೆಯಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ಆಹಾರ, ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಹವಾಮಾನ ಬದಲಾವಣೆಯ ಮಾದರಿಗಳನ್ನು ಭಾರತದ ಮುಂಗಾರಿನ ಜತೆಗೆ ಹೋಲಿಸಿ ಅಧ್ಯಯನ ನಡೆಸಲಾಗಿದೆ. ಭಾರತದಲ್ಲಿ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರಿನ ಅವಧಿಯಾಗಿದೆ. ಈ ಹಿಂದಿನ ಮಾನ್ಸೂನ್ ಸೀಸನ್‌ನಲ್ಲಿ ಕಂಡು ಬಂದಂಥ ಬದಲಾವಣೆಯ ಟ್ರೆಂಡ್ ಅನ್ನು ವರದಿಯಲ್ಲಿ ದೃಢಪಡಿಸಲಾಗಿದೆ ಎಂದು ಲುಡ್‌ವಿಂಗ್ ಮ್ಯಾಕ್ಸಿಮಿಲನ್ ಯೂನಿವರ್ಸಿಟಿಯ ಲೇಖಕಿ ಅಂಜಾ ಕಟ್ಜೆನ್‌ಬರ್ಗರ್ ತಿಳಿಸಿದ್ದಾರೆ. 21ನೇ ಶತಮಾನದಲ್ಲಿ ಮಾನ್ಸೂನ್ ಬದಲಾವಣೆಗಳು ಪ್ರಬಲವಾಗಿರಲಿದೆ. ಹೀಗಾಗಿ ಅತಿವೃಷ್ಟಿಯಿಂದ ಭತ್ತದ ಬೆಳೆ ಹಾನಿಯೂ ಸಂಭವಿಸಬಹುದು. ಒಟ್ಟಾರೆಯಾಗಿ ಭಾರತೀಯ ಸಮಾಜ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು. ಇದು ಕೃಷಿ ಮಾತ್ರವಲ್ಲದೆ ಸಾಮಾಜಿಕ ಜನಜೀವನದ ಮೇಲೆ ಪ್ರತಿಕೂಲ ಪ್ರಭಾವ ಬೀರಬಹುದು ಎಂದು ಕೊಲಂಬಿಯಾ ಯೂನಿವರ್ಸಿಟಿಯ ಆಂಡ್ರೂಸ್ ಲೆವರ್‌ಮ್ಯಾನ್ ತಿಳಿಸಿದ್ದಾರೆ.
ಎರಡನೆಯದಾಗಿ ಮಾನ್ಸೂನ್ ಪ್ರಬಲವಾಗಿದ್ದರೂ, ಅನಿರ್ದಿಷ್ಟವಾಗಿ ಮಳೆ ಸುರಿಯಬಹುದು ಎಂದು ಜರ್ನಲ್ ಅರ್ತ್ ಸಿಸ್ಟಮ್‌ನಲ್ಲಿ ಪ್ರಕಟವಾಗಿರುವ ಲೆವರ್‌ಮ್ಯನ್ ಲೇಖನ ತಿಳಿಸಿದೆ. ರಸ್ತೆಗಳು, ರೈಲ್ವೆ ಹಳಿಗಳು ಜಲಾವೃತಗೊಂಡರೆ ಸಾರಿಗೆ ವ್ಯವಸ್ಥೆ, ಆರ್ಥಿಕ ಉತ್ಪಾದಕತೆಯ ಚಟುವಟಿಕೆಗಳು ಅಸ್ತವ್ಯಸ್ತವಾಗಬಹುದು. ಸಾಮಾಜಿಕ ಜನಜೀವನದ ಮೇಲೆ ಇದು ಪರಿಣಾಮ ಬೀರಬಹುದು.
20ನೇ ಶತಮಾನದ ಮಧ್ಯ ಭಾಗದಿಂದ ವಾಯು ಮಾಲಿನ್ಯ, ಜಲ ಮಾಲಿನ್ಯದ ಪರಿಣಾನ ಜಾಗತಿಕ ಹವಾಮಾಮದ ಮೇಲೆ ಪ್ರತಿಕೂಲ ಪ್ರಭಾವ ಶುರುವಾಗಿತ್ತು. ಆರಂಭದಲ್ಲಿ ಅತಿಯಾದ ವಾಯು ಮಾಲಿನ್ಯದಿಂದ ಪರಿಸರ ಏರುಪೇರಾಗಲು ಶುರುವಾಯಿತು. ಆದರೆ 1980ರಲ್ಲಿ ವಾಯು ಮಾಲಿನ್ಯ ಮತ್ತಷ್ಟು ಏರಿಕೆಯಾಗಿ ಗ್ರೀನ್ ಹೌಸ್ ಗ್ಯಾಸ್ ದುಷ್ಪರಿಣಾಮಕ್ಕೆ ತಿರುಗಿತು. ಇದು ಮುಂಗಾರು ಮಾರುತಗಳಲ್ಲಿ ಏರುಪೇರಿಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ. 19ನೇ ಶತಮಾನಕಕೆ ಹೋಲಿಸಿದರೆ ಭೂಮಿಯ ತಾಪಮಾನದಲ್ಲಿ ಸರಾಸರಿ 1.1 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗಿದೆ. ಕಳೆದ ಅರ್ಧ ಶತಮಾನದಲ್ಲಿ ತಾಪಮಾನದ ಏರುಗತಿ ತೀವ್ರತೆ ಪಡೆದಿದೆ.
2015ರ ಪ್ಯಾರಿಸ್ ಒಪ್ಪಂದವು ಹವಾಮಾನ ಬದಲಾವಣೆ ಕುರಿತ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ. ಯುನೈಟೆಡ್ ನೇಶನ್ಸ್ ಫ್ರೇಮ್‌ವರ್ಕ್ ಕನ್ವೆನ್ಷನ್ ಆಣ್ ಕ್ಲೈಮೇಟ್ ಚೇಂಜಸ್ ನಲ್ಲಿ ಎಲ್ಲ 195 ಸದಸ್ಯ ರಾಷ್ಟ್ರಗಳು ಇವೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ, ಮುಖ್ಯವಾಗಿ ಏಷ್ಯಾದ ಹವಾಮಾನದಲ್ಲಿ ಭಾರಿ ಬದಲಾವಣೆ ದಾಖಲಾಗಿತ್ತು. ಚೀನಾ ಮತ್ತು ಭಾರತದಲ್ಲಿ ನೆರೆಯ ಪರಿಸ್ಥಿತಿ ಉಂಟಾಗಿತ್ತು. ಸತತ ಎರಡನೇ ವರ್ಷ ಮುಂಗಾರು ಪ್ರಬಲ, ಆದರೆ ಅನಿರ್ದಿಷ್ಟವಾಗಿತ್ತು.
2013ರಲ್ಲಿ ಭಾರಿ ಪ್ರವಾಹದ ಪರಿಣಾಮ 6,000 ಮಂದಿ ಪ್ರಾಣ ಕಳೆದುಕೊಂಡಿದ್ದರು. ಉತ್ತರಾಖಂಡ್‌ನ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿತ್ತು. ಹಲವಾರು ಗ್ರಾಮಗಳು ಮುಳುಗಡೆಯಾಗಿತ್ತು.
ಇದನ್ನೂ ಓದಿ: Monsoon Drinks: ಜಿಟಿಜಿಟಿ ಮಳೆಗೆ ಈ ಸಾಂಪ್ರದಾಯಿಕ ಬಿಸಿಬಿಸಿ ಪೇಯಗಳನ್ನು ಮರೆಯದಿರಿ!