Site icon Vistara News

Moodys report : ಅಧಿಕ ಸಾಲದಿಂದ ಭಾರತದ ಆರ್ಥಿಕತೆಗೆ ಅಪಾಯ ಇದೆಯೆ? ಮೂಡೀಸ್‌ ಹೇಳಿದ್ದೇನು?

cash

ನವ ದೆಹಲಿ: ಭಾರತದ ಆರ್ಥಿಕತೆಗೆ ಪ್ರಸಕ್ತ ಸಾಲಿನಲ್ಲಿ ಅಧಿಕ ಸಾಲದ ಹೊರೆ ಮತ್ತು ವಿತ್ತೀಯ ಕೊರತೆಯಿಂದಾಗಿ ಅಪಾಯ ಎದುರಾಗಬಹುದು ಎಂದು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಮೂಡೀಸ್‌ ಎಚ್ಚರಿಸಿದೆ. ( Moodys report) ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವೀಸ್‌ ಅಸೋಸಿಯೇಟ್‌ನ ಎಂಡಿ ಗೆನ್‌ ಫಾಂಗ್‌ ನೀಡಿರುವ ಸಂದರ್ಶನದಲ್ಲಿ, ಭಾರತ ಸರ್ಕಾರದ ಮಟ್ಟದಲ್ಲಿ (general government debt) ಜಿಡಿಪಿಯ 81.8% ಸಾಲವನ್ನು ಹೊಂದಿದೆ. ಜನರಲ್‌ ಗವರ್ನಮೆಂಟ್‌ ಡೆಟ್‌ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತಗಳು ಹೊಂದಿರುವ ಸಾಲವನ್ನು ಒಳಗೊಂಡಿದೆ. ಹೀಗಾಗಿ ಸಾಲ ಪಡೆಯುವ ಸಾಮರ್ಥ್ಯ ಕಡಿಮೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಭಾರತವು 2023ರ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 6-6.3% ಜಿಡಿಪಿ ದಾಖಲಿಸುವ ಅಂದಾಜು ಇದೆ. ಕಳೆದ ಜನವರಿ-ಮಾರ್ಚ್‌ಗೆ (6.1%) ಹೋಲಿಸಿದರೆ ಯಥಾಸ್ಥಿತಿಯಲ್ಲಿ ಇರಲಿದೆ. ಹಣದುಬ್ಬರ, ಅಧಿಕ ಬಡ್ಡಿ ದರದ ಪರಿಣಾಮಗಳು ಬಂಡವಾಳ ಕ್ರೋಡೀಕರಣಕ್ಕೆ ಪ್ರತಿಕೂಲ ಪ್ರಭಾವ ಬೀರಬಹುದು ಎಂದು ಫಾಂಗ್‌ ವಿವರಿಸಿದ್ದಾರೆ.

ಸರ್ಕಾರ ದೀರ್ಘಕಾಲೀನ ವಿತ್ತೀಯ ಸ್ಥಿರತೆ ಮತ್ತು ಬೆಳವಣಿಗೆಗೆ ಬದ್ಧವಾಗಿದ್ದರೂ, ಅಧಿಕ ಹಣದುಬ್ಬರದ ನಡುವೆ ಆರ್ಥಿಕತೆಯನ್ನು ಬೆಂಬಲಿಸಬೇಕಾದ ಅಗತ್ಯತೆ, ಅಧಿಕ ಹಣದುಬ್ಬರ, ದುರ್ಬಲ ಜಾಗತಿಕ ಬೇಡಿಕೆ, 2024ರ ಮೇನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿತ್ತೀಯ ಕೊರತೆ ಉಂಟಾಗಬಹುದು. ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಸಂಗ್ರಹ ಆಗದೆ ಸಮಸ್ಯೆಯಾಗುವ ಆತಂಕವೂ ಇದೆ ಎಂದು ಮೂಡೀಸ್‌ ಹೇಳಿದೆ.

ಮೂಡೀಸ್‌ ರೇಟಿಂಗ್‌ ಏಜೆನ್ಸಿಯ ಪ್ರಕಾರ ಭಾರತದ ಸಾವರಿನ್ ಕ್ರೆಡಿಟ್‌ ರೇಟಿಂಗ್‌ ಸದ್ಯಕ್ಕೆ Baa3 ಆಗಿದೆ. ರೇಟಿಂಗ್‌ ಪೈಕಿ ಇದು ಉತ್ತಮ ದರ್ಜೆಯದ್ದಾಗಿದ್ದು, ಭಾರತದ ಆರ್ಥಿಕತೆಯ ವೈವಿಧ್ಯತೆ, ಬೆಳವಣಿಗೆಯ ಸಾಧ್ಯತೆಯನ್ನು ಒಳಗೊಂಡಿದೆ. ಕಳೆದ ಎರಡು ವರ್ಷಗಳಿಂದ ಆರ್ಥಿಕ ನೀತಿಯ ಮಾನದಂಡಗಳನ್ನು ಭಾರತ ಪೂರೈಸಿ ಬೆಳವಣಿಗೆ ಕಂಡಿದೆ. ವಿತ್ತೀಯ ಕೊರತೆ ನಿಯಂತ್ರಣದಲ್ಲೂ ಸುಧಾರಿಸಿದೆ. ಹೀಗಿದ್ದರೂ, ಅಧಿಕ ಸಾಲದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. (Fiscal deficit) ವಿತ್ತೀಯ ಕೊರತೆ ಎಂದರೆ ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸ. ಇದು 2022-23ರಲ್ಲಿ ಜಿಡಿಪಿಯ 6.4%ಕ್ಕೆ ಇಳಿದಿದೆ. 2021-22ರಲ್ಲಿ ಜಿಡಿಪಿಯ 6.7% ರಷ್ಟಿತ್ತು ಎಂದು ಮೂಡೀಸ್‌ ತಿಳಿಸಿದೆ.

ಇದನ್ನೂ ಓದಿ: India GDP Q4 Growth : 2022-23ರಲ್ಲಿ ಭಾರತದ ಜಿಡಿಪಿ 7.2%ಕ್ಕೆ ಏರಿಕೆ

Exit mobile version