ನವದೆಹಲಿ: ಕೋವಿಡ್ ಬಿಕ್ಕಟ್ಟಿನ ಬಳಿಕ ಭಾರತದಿಂದ ಹೊರ ದೇಶಗಳಿಗೆ ವಲಸೆ ಹೋಗುತ್ತಿರುವ ಆಗರ್ಭ ಶ್ರೀಮಂತರ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ 8,000 ಮಂದಿ ಸ್ಥಳಾಂತರವಾಗಲಿದ್ದಾರೆ. ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಇವರ ವಲಸೆ ನಡೆಯುತ್ತಿದೆ.
ಹೀಗೆ ಆಗರ್ಭ ಶ್ರೀಮಂತರು ( High net worth individuals-HNWI) ದೇಶ ಬಿಡಲು ಮುಖ್ಯ ಕಾರಣ ಕೋವಿಡ್ ಬಿಕ್ಕಟ್ಟು ಎಂದು ಹೇಳಲಾಗುತ್ತಿದೆ. ಆದರೆ ಕೋವಿಡ್ ಬರುವುದಕ್ಕಿಂತಲೂ ಮೊದಲೇ ಅತಿ ಸಿರಿವಂತರು ಇತರ ದೇಶಗಳಿಗೆ ಗುಳೆ ಹೋಗುವ ಟ್ರೆಂಡ್ ಶುರುವಾಗಿತ್ತು.
ಭಾರತೀಯರು ಅಮೆರಿಕ ಮತ್ತು ಕೆನಡಾ ಹೊರತುಪಡಿಸಿಯೂ ಇತರ ಕೆಲ ರಾಷ್ಟ್ರಗಳಲ್ಲಿ ನೆಲೆಸಲು ಬಯಸುತ್ತಿದ್ದಾರೆ. ಟೆಕ್ ಉದ್ಯಮಿಗಳು ಸಿಂಗಾಪುರದಲ್ಲಿ ಸೆಟ್ಲ್ ಆಗಲು ಆಶಿಸುತ್ತಿದ್ದಾರೆ ಎಂದು ಹೆನ್ಲೆ ಗ್ಲೋಬಲ್ ಸಿಟಿಜನ್ಸ್ ರಿಪೋರ್ಟ್ ತಿಳಿಸಿದೆ.
ರಷ್ಯಾದಿಂದ ಅತಿ ಹೆಚ್ಚು ಶ್ರೀಮಂತರ ನಿರ್ಗಮನ
ರಷ್ಯಾದಿಂದ ಈ ವರ್ಷ 15,000 ಶ್ರೀಮಂತರು ನಿರ್ಗಮಿಸಲಿದ್ದಾರೆ. ಚೀನಾದಿಂದ 10,000 ಮಂದಿ ವಲಸೆ ಹೋಗಲಿದ್ದಾರೆ. ಚಾರಿತ್ರಿಕವಾಗಿ ಅಮೆರಿಕ ಮತ್ತು ಕೆನಡಾವನ್ನು ಭಾರತೀಯರು ಬಯಸುತ್ತಿದ್ದರು. ಆದರೆ ಈಗ ಗ್ರೀಸ್, ಮಾಲ್ಟಾ, ಪೋರ್ಚುಗಲ್ ಮತ್ತಿತರ ಯುರೋಪ್‌ನ ದೇಶಗಳಿಗೂ ಗೋಲ್ಡನ್ ವೀಸಾ ಪಡೆದು ವಲಸೆ ಹೋಗುತ್ತಾರೆ ಎಂದು ವರದಿ ತಿಳಿಸಿದೆ.ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ ಚಾಲ್ತಿಯಲ್ಲಿರುವುದು, ಇಂಗ್ಲಿಷ್ ಕಲಿಕೆಗೆ ವ್ಯವಸ್ಥೆ ಇರುವುದು ಕಾರಣ. ಕೆಲವರು ಬಿಸಿನೆಸ್ ನಡೆಸಲು, ವಿಶ್ರಾಂತಿಯ ತಾಣವನ್ನಾಗಿಸಲು ಯುರೋಪಿನಲ್ಲಿ ನೆಲೆಸುತ್ತಾರೆ. ಅಲ್ಲಿನ ಲೈಫ್ ಸ್ಟೈಲ್ ಎಂಜಾಯ್ ಮಾಡುತ್ತಾರೆ.
ಟೆಕ್ಕಿಗಳಿಗೆ ಸಿಂಗಾಪುರ ಇಷ್ಟ
ಸಿಂಗಾಪುರದಲ್ಲಿ ಟೆಕ್ ಉದ್ಯಮಿಗಳು, ಟೆಕ್ಕಿಗಳು ನೆಲೆಸಲು ಇಷ್ಟಪಡುತ್ತಾರೆ. ಅಲ್ಲಿನ ಪ್ರಬಲ ಕಾನೂನು ಸುವ್ಯವಸ್ಥೆ ಅವರಿಗೆ ಇಷ್ಟವಾಗುತ್ತಿದೆ. ವಿಶ್ವದರ್ಜೆಯ ಸೌಲಭ್ಯಗಳೂ ಆಕರ್ಷಣೆಯಾಗಿದೆ. ಯುಎಇಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.