Site icon Vistara News

Most populous country : ಜನಸಂಖ್ಯೆಯಲ್ಲಿ ಭಾರತ ಈಗ ನಂ.1, ಆರ್ಥಿಕ ಪ್ರಗತಿಗೆ ದುಡಿಯುವ ಯುವಜನರೇ ನಿರ್ಣಾಯಕ

workers

workers

ನವ ದೆಹಲಿ: ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು (Most populous country) ಅಲಂಕರಿಸಿದೆ. ಚೀನಾಕ್ಕಿಂತ 29 ಲಕ್ಷ ಹೆಚ್ಚು ಜನ ಭಾರತದಲ್ಲಿ ಇದ್ದಾರೆ. ದೇಶದಲ್ಲಿ 15ರಿಂದ 64 ವರ್ಷ ವಯಸ್ಸಿನ ವಯೋಮಿತಿಯ ಜನರು 68% ಇದ್ದಾರೆ. ದೇಶದಲ್ಲಿ ಯುವ ಜನತೆಯ ಸಂಖ್ಯೆ ಹೆಚ್ಚು ಎಂಬುದನ್ನು ಅಂಕಿ ಅಂಶಗಳು ಬಿಂಬಿಸಿವೆ. (UNFPA Report) ಯುವಜನತೆ ಎಂದರೆ ದುಡಿಯುವ ಮತ್ತು ಗಳಿಸುವ ಸಾಮರ್ಥ್ಯ ಇರುವವರು. ಅವರೇ ಗ್ರಾಹಕರು. ಅವರಿಂದಾಗಿಯೇ ದೇಶದ ಎಕಾನಮಿ ಗ್ರಾಹಕ ಕೇಂದ್ರಿತವಾಗಿದೆ. ಮತ್ತು ಆರ್ಥಿಕ ಅಭಿವೃದ್ಧಿಗೆ ಚಾಲಕ ಶಕ್ತಿಯಾಗಿದ್ದಾರೆ.

ದುಡಿಯುವ ಕಾರ್ಮಿಕ ಜನ ಸಂಪನ್ಮೂಲ ಹೇರಳವಾಗಿ ಇರುವುದರಿಂದ ಜಾಗತಿಕ ಉತ್ಪಾದಕ ಕಂಪನಿಗಳು ಭಾರತದಲ್ಲಿ ತಮ್ಮ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮುಂದಾಗಿವೆ. ಜತೆಗೆ ದೇಶದ ಉತ್ಪಾದಕ ಶಕ್ತಿ ವೃದ್ಧಿಸುತ್ತದೆ. ಅದು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತಿದೆ ಎನ್ನುತ್ತಾರೆ ವೆಲ್ತ್‌ ಮ್ಯಾನೇಜ್‌ಮೆಂಟ್‌ ತಜ್ಞ ರಾಘವೇಂದ್ರ ನಾಥ್.‌ ಎಸ್‌ &ಪಿ ಗ್ಲೋಬಲ್‌ ವರದಿಯ ಪ್ರಕಾರ ಭಾರತವು 2030ರ ವೇಳೆಗೆ ಜರ್ಮನಿ ಮತ್ತು ಜಪಾನನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ.

ಕಳವಳಕ್ಕೆ ಕಾರಣವೇನು?

ಕೋವಿಡ್-‌19 ಬಿಕ್ಕಟ್ಟಿನ ಬಳಿಕ ಜಾಗತಿಕ ಎಕಾನಮಿ (Global economy) ಕ್ರಮೇಣ ಚೇತರಿಸುತ್ತಿದೆ. ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲೊಂದಾಗಿದೆ. ಹೀಗಿದ್ದರೂ, ಆರ್ಥಿಕ ಅಸಮಾನತೆ ಹೆಚ್ಚಬಹುದು ಎಂಬ ಆತಂಕ ಬಹಳಷ್ಟು ಮಂದಿಯಲ್ಲಿ ಕಾಡುತ್ತಿದೆ ಎಂದು ಇತ್ತೀಚಿನ ಸಮೀಕ್ಷೆ ತಿಳಿಸಿದೆ. (UN World population) ಕೆಳ ಮತ್ತು ಮಧ್ಯಮ ವರ್ಗದ ಆದಾಯದ ಜನತೆಗೆ ಆರ್ಥಿಕ ಮಂದಗತಿಯ ಬಿಸಿ ತಟ್ಟಿದ್ದು, ಕುಟುಂಬಗಳ ಉಳಿತಾಯ ಮೂರು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇದು ಕಳವಳಕಾರಿ ಎನ್ನುತ್ತಾರೆ ತಜ್ಞರು.

ಔದ್ಯೋಗಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗಿರುವುದು ಕೂಡ ಕಳವಳಕಾರಿ ಎನ್ನುತ್ತಾರೆ ಆರ್ಥಿಕ ತಜ್ಞರು.

ಶ್ರೀಮಂತರಿಗೆ ಕ್ಯಾಪಿಟಲ್‌ ಗೇನ್ಸ್‌ ತೆರಿಗೆ ಹೆಚ್ಚಳ ಇಲ್ಲ: ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ತಗ್ಗಿಸಲು ಶ್ರೀಮಂತರಿಗೆ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ (capital gain tax) ಅನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಬ್ಲೂಮ್‌ ಬರ್ಗ್‌ ವರದಿಯಲ್ಲಿ ಆದಾಯ ತೆರಿಗೆ ಇಲಾಖೆ ನಿರಾಕರಿಸಿದೆ.

ವಿಶ್ವಸಂಸ್ಥೆಯ UNFPA ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ 25% ಪಾಲು 0-14 ವರ್ಷದವರಾಗಿದ್ದಾರೆ. 10-19 ವರ್ಷ ವಯೋಮಿತಿಯವರು 18% ಮಂದಿ ಇದ್ದಾರೆ. 10ರಿಂದ 24 ವರ್ಷ ವಯೋಮಿತಿಯವರು 26% ಇದ್ದಾರೆ. 15-64 ವರ್ಷ ವಯೋಮಿತಿಯವರು 68% ಇದ್ದಾರೆ. 65 ವರ್ಷಕ್ಕಿಂತ ಮೇಲಿನವರು 7% ಇದ್ದಾರೆ.

ಭಾರತದ ಜನಸಂಖ್ಯೆ ಮುಂಬರುವ ಮೂರು ದಶಕಗಳಲ್ಲಿ 165 ಕೋಟಿಗೆ ಏರಿಕೆಯಾಗಲಿದ್ದು, ಬಳಿಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯಲ್ಲಿ ಅಮೆರಿಕ ಮೂರನೇ ಸ್ಥಾನದಲ್ಲಿದ್ದು, 34 ಕೋಟಿಯಷ್ಟಿದೆ.

ಭಾರತವು ಇದೀಗ 142.86 ಕೋಟಿ ಜನರೊಂದಿಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ ( Most populous nation ) ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ. ಚೀನಾದ ಜನಸಂಖ್ಯೆ 142.57 ಕೋಟಿಯಾಗಿದ್ದರೆ, ಭಾರತದ ಜನಸಂಖ್ಯೆ ಅದಕ್ಕಿಂತ ತುಸು ಮೇಲಿದ್ದು, 142.866 ಕೋಟಿಗೆ ವೃದ್ಧಿಸಿದೆ. ಅಂದರೆ ಚೀನಾಕ್ಕಿಂತ 29 ಲಕ್ಷ ಹೆಚ್ಚಿನ ಜನಸಂಖ್ಯೆ ಭಾರತದಲ್ಲಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ಅಂಕಿ ಅಂಶಗಳನ್ನು ಉಲ್ಲೇಖಿಸಿ ಬ್ಲೂಮ್‌ ಬರ್ಗ್‌ ವರದಿ ಮಾಡಿದೆ.

Exit mobile version