ಮುಂಬಯಿ: ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೈರ್ ಉತ್ಪಾದಕ ಎಂಆರ್‌ಎಫ್ (MRF share price) ಕಂಪನಿಯ ಷೇರು ದರ 1 ಲಕ್ಷ ರೂ.ಗೆ ಏರಿಕೆಯಾಗಿ ಇತಿಹಾಸ ನಿರ್ಮಿಸಿದೆ. ಬಿಎಸ್‌ಇನಲ್ಲಿ ಬೆಳಗ್ಗೆ ಪ್ರತಿ ಎಂಆರ್‌ಎಫ್ ಷೇರಿನ ದರ 100,300 ರೂ.ಗೆ ಏರಿತು. ಕಳೆದ 52 ವಾರಗಳಲ್ಲಿಯೇ ಇದು ಗರಿಷ್ಠ ಎತ್ತರವಾಗಿದೆ.
ಈ ಹಿಂದೆ ಮೇನಲ್ಲಿ ಎಂಆರ್‌ಎಫ್ (Madras Rubber Factory) ಷೇರಿನ ದರ 100,00 ರೂ.ಗಳ ಗಡಿಗೆ 66.50 ರೂ. ಕೊರತೆ ದಾಖಲಿಸಿತ್ತು. ಭಾರತದ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಷೇರು ಎಂಆರ್‌ಎಫ್‌ನದ್ದಾಗಿದೆ. ಹಾಗಾದರೆ ಎಂಆರ್‌ಎಫ್ ಷೇರು ದರ ಏಕೆ ದುಬಾರಿಯಾಗಿದೆ? ಸಾಮಾನ್ಯವಾಗಿ ಷೇರನ್ನು ವಿಭಜಿಸಿದಾಗ ಪ್ರತಿ ಷೇರಿನ ದರ ಕಡಿಮೆಯಾಗುತ್ತದೆ. ಆದರೆ ಎಂಆರ್‌ಎಫ್ ಎಂದೂ ತನ್ನ ಷೇರನ್ನು ವಿಭಜಿಸಿಲ್ಲ. ಹೀಗಾಗಿ ಅದು ದುಬಾರಿಯಾಗಿದೆ.
ಚೆನ್ನೈ ಮೂಲದ ಎಂಆರ್‌ಎಫ್ ಕಂಪನಿಯು ಒಟ್ಟು 42,41,143 ಷೇರುಗಳನ್ನು ಹೊಂದಿದೆ. ಇದರಲ್ಲಿ 30,60,312 ಷೇರುಗಳನ್ನು ಸಾರ್ವಜನಿಕ ಹೂಡಿಕೆದಾರರು ಹೊಂದಿದ್ದಾರೆ. ಅಂದರೆ 72.16% ಆಗುತ್ತದೆ. ಪ್ರವರ್ತಕರು 11,80,831 ಷೇರುಗಳನ್ನು ಹೊಂದಿದ್ದಾರೆ. ಒಟ್ಟು ಈಕ್ವಿಟಿಯಲ್ಲಿ 27.84% ಪಾಲು ಹೊಂದಿದ್ದಾರೆ. ಪ್ರತಿ ಷೇರಿನ ದರ ದುಬಾರಿಯಾಗಿರುವುದರಿಂದ ಎಂಆರ್‌ಎಫ್‌ನಲ್ಲಿ ರಿಟೇಲ್ ಹೂಡಿಕೆದಾರರ ಸಂಖ್ಯೆ 40,000 ಆಗಿದೆ. ಕಳೆದ ಮೂರು ತಿಂಗಳಿನಲ್ಲಿ ಎಂಆರ್‌ಎಫ್ ಷೇರು ದರ 20% ಏರಿಕೆಯಾಗಿದೆ.
ಹನಿವೆಲ್ ಆಟೊಮೇಶನ್ ಷೇರು ದರ 41,152 ರೂ,ನಷ್ಟಿದೆ. ಪೇಜ್ ಇಂಡಸ್ಟ್ರೀಸ್, ಶ್ರೀ ಸಿಮೆಂಟ್, 3ಎಂ ಇಂಡಿಯಾ, ಅಬೋಟ್ ಇಂಡಿಯಾ, ನೆಸ್ಲೆ, ಬಾಷ್ ಷೇರು ದರಗಳೂ ದುಬಾರಿಯಾಗಿವೆ.
10 ವರ್ಷದ ಹಿಂದೆ 10,000 ರೂ: ಎಂಆರ್‌ಎಫ್ ಷೇರು ದರ 2012ರ ಫೆಬ್ರವರಿ 21ರಂದು 10,000 ರೂ. ಇತ್ತು. ಅಂದು ಯಾರಾದರೂ 10 ಸಾವಿರಕ್ಕೆ ಒಂದು ಷೇರು ಖರೀದಿಸಿರುತ್ತಿದ್ದರೆ ಈಗ ಅದರ ಬೆಲೆ 1 ಲಕ್ಷ ರೂ. ಆಗಿರುತ್ತಿತ್ತು. ಆದರೆ ಎಂಆರ್‌ಎಫ್ ಷೇರು 90,000 ರೂ.ನಿಂದ 1 ಲಕ್ಷ ರೂ.ಗೆ ಏರಿಕೆಯಾಗಲು 2 ವರ್ಷ ತೆಗೆದುಕೊಂಡಿತ್ತು. 2021ರ ಜನವರಿ 20ರಂದು ಮೊದಲ ಬಾರಿಗೆ ಷೇರು 90,000 ರೂ.ಗೆ ಏರಿತ್ತು. ಎಂಆರ್‌ಎಫ್ ಷೇರುದಾರರಿಗೆ ಡಿವಿಡೆಂಡ್ ವಿತರಿಸಿದೆ. ಆದರೆ ಬೋನಸ್ ಷೇರು ಕೊಟ್ಟಿಲ್ಲ. 2022-23ರಲ್ಲಿ ಪ್ರತಿ ಷೇರಿಗೆ 175 ರೂ. ಡಿವಿಡೆಂಡ್ ನೀಡಿತ್ತು.
ಎಂಆರ್‌ಎಫ್ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 410 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 161% ಏರಿಕೆ ದಾಖಲಿಸಿತ್ತು. 2013-17ರ ತನಕ ಸತತ 5 ವರ್ಷ ಎಂಆರ್‌ಎಫ್ ಧನಾತ್ಮಕ ಫಲಿತಾಂಶ ಕೊಟ್ಟಿತ್ತು. ಅಂದರೆ ಲಾಭ ಗಳಿಸಿತ್ತು. ಎಂಆರ್‌ಎಫ್ ಟೈರ್ ಕಂಪನಿಯನ್ನು 77 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಸ್ಥಾಪಿಸಲಾಗಿತ್ತು. ಕಂಪನಿಯಲ್ಲಿ 18,000 ಮಂದಿ ಉದ್ಯೋಗಿಗಳು ಇದ್ದಾರೆ. ಕೊಟ್ಟಾಯಂ, ಪುದುಚೇರಿ, ಪೆರಂಬದೂರು, ತಿರುವೊಟ್ಟಿಯೂರ್, ಮೇದಕ್, ಅಂಕೇನಪಳ್ಳಿಯಲ್ಲಿ ಉತ್ಪಾದನಾ ಘಟಕ ಹೊಂದಿದೆ. 1997ರಲ್ಲಿ ಎಂಆರ್‌ಎಫ್ ತನ್ನ ಮೊದಲ ಫಾರ್ಮುಲಾ 3 ಕಾರನ್ನು ನಿರ್ಮಿಸಿತ್ತು.
ಇದನ್ನೂ ಓದಿ: UAE investment in India : ಭಾರತದಲ್ಲಿ 4ನೇ ದೊಡ್ಡ ಹೂಡಿಕೆದಾರನಾಗಿ ಹೊರಹೊಮ್ಮಿದ ಅರಬ್ ರಾಷ್ಟ್ರ ಯುಎಇ