Site icon Vistara News

Muhurat Trading: ದೀಪಾವಳಿ ಮುಹೂರ್ತ ಟ್ರೇಡಿಂಗ್‌ನಲ್ಲಿ ಹೂಡಿಕೆದಾರರಿಗೆ 2.22 ಲಕ್ಷ ಕೋಟಿ ಲಾಭ!

Muhurat Trading, Sensex jumps and investors richer by rs 2.22 lakh crore

ನವದೆಹಲಿ: ದೀಪಾವಳಿಯ ಮುಹೂರ್ತ ಟ್ರೇಡಿಂಗ್ (Muhurat Trading) ಹೂಡಿಕೆದಾರರಿಗೆ ಲಾಭವನ್ನು ತಂದುಕೊಟ್ಟಿದೆ. ನವೆಂಬರ್ 12ರಂದು ಮುಂಬೈ ಷೇರು ಪೇಟೆಯು (Sensex) 355 ಅಂಕ ಜಿಗಿತ ಕಂಡು, ಹೂಡಿಕೆದಾರರಿಗೆ 2.22 ಲಕ್ಷ ಕೋಟಿ ರೂ. ಲಾಭವಾಗಿದೆ. ದೀಪಾವಳಿಯ (Diwali 2023) ಈ ಪವಿತ್ರ ದಿನದಂದು ನಡೆಸಲಾದ ಈ ಟ್ರೇಡಿಂಗ್‌ನಿಂದಾಗಿ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸಿದೆ. ಬಿಎಸ್‌ಇ ಸೆನ್ಸೆಕ್ಸ್ 354.77 ಪಾಯಿಂಟ್‌ಗಳು ಅಥವಾ 0.55 ಶೇಕಡಾ ಏರಿಕೆ ಕಂಡು 65,259.45ರಲ್ಲಿ ಅಂತ್ಯವಾಯಿತು. ಅದೇ ರೀತಿ ಎನ್‌ಎಸ್‌ಇ ನಿಫ್ಟಿ 50 (Nifty 50) ಸೂಚ್ಯಂಕವು 0.52 ಶೇಕಡಾ ಅಥವಾ 100.20 ಪಾಯಿಂಟ್‌ ಏರಿಕೆ ದಾಖಲಿಸಿ 19,525.55ಕ್ಕೆ ತಲುಪಿತು(Stock Market).

60 ನಿಮಿಷಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿಗೆ 2.22 ಲಕ್ಷ ಕೋಟಿ ರೂಪಾಯಿಗಳನ್ನು ಸೇರಿಸುವ ಮೂಲಕ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು 322.52 ಲಕ್ಷ ಕೋಟಿ ರೂ.ಗೆ ಏರಿದೆ. ಅಂದರೆ ವಹಿವಾಟಿನ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು ಪ್ರತಿ ಸೆಕೆಂಡಿಗೆ 62 ಕೋಟಿ ರೂ. ಹೆಚ್ಚಾಗಿದೆ. ನಿಫ್ಟಿ ಕೂಡ ಮೇಲುಗೈ ಸಾಧಿಸಿದೆ. ನಿಫ್ಟಿ ಸ್ಮಾಲ್‌ಕ್ಯಾಪ್ 1.14 ಪ್ರತಿಶತ ಸೇರಿಸಿದರೆ, ನಿಫ್ಟಿ ಮಿಡ್‌ಕ್ಯಾಪ್ ಶೇಕಡಾ 0.61 ರಷ್ಟು ಏರಿಕೆ ಕಂಡಿದೆ.

ಮುಹೂರ್ತ ಟ್ರೇಡಿಂಗ್‌ನಲ್ಲಿ ನಿಫ್ಟಿ ಮೀಡಿಯಾ ಮತ್ತು ನಿಫ್ಟಿ ಐಟಿ ಹೆಚ್ಚು ಲಾಭ ಪಡೆದುಕೊಂಡು ಷೇರುಗಳಾಗಿವೆ. ಪ್ರತಿ ಷೇರು ಶೇ.0.7ರಷ್ಟು ಏರಿಕೆಯಾಗಿದೆ. ನಿಫ್ಟಿ ಕನ್ಸೂಮರ್ ಮತ್ತು ನಿಫ್ಟಿ ಮೆಟಲ್ ಕಂಪನಿ ಷೇರುಗಳು ಕೂಡ ಲಾಭವನ್ನು ದಾಖಲಿಸಿವೆ.

ನಿಫ್ಟಿ 50 ಷೇರು ಸೂಚ್ಯಂಕದಲ್ಲಿ ಕೋಲ್ ಇಂಡಿಯಾ ಅತಿ ಹೆಚ್ಚು ಲಾಭ ಪಡೆದ ಷೇರುಗಳಾಗಿವೆ. ಶೇ.3ರಷ್ಟು ಏರಿಕೆಯನ್ನು ದಾಖಲಿಸಿವೆ. ಎರಡನೇ ತ್ರೈಮಾಸಿಕ ಆದಾಯಗಳ ಏರಿಕೆಯೂ ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳಿವೆ. ಯುಪಿಎಲ್, ಇನ್ಫೋಸಿಸ್, ಐಸಸ್ ಮೋಟರ್ಸ್, ವಿಪ್ರೋ ಮತ್ತು ಎನ್‌ಟಿಪಿಸಿ ಲಾಭ ಮಾಡಿದ ಇತರ ಕಂಪನಿಗಳಾಗಿವೆ. ಈ ಕಂಪನಿಗಳ ಷೇರುಗಳು ಶೇ.2ರಷ್ಟು ಏರಿಕೆಯನ್ನು ದಾಖಲಿಸಿವೆ. ಆದರೆ, ಬ್ರಿಟಾನಿಯಾ, ಅಪೋಲೋ ಹಾಸ್ಪಿಟಲ್ ಮತ್ತು ಎಟಿಐಮೈಂಡ್‌ಟ್ರೀ ಹಾಗೂ ಸನ್ ಫಾರ್ಮಾಗಳು ಏರಿಕೆಯನ್ನು ದಾಖಲಿಸಿಲ್ಲ.

ಈ ಸುದ್ದಿಯನ್ನೂ ಓದಿ: Muhurat Trading: ದೀಪಾವಳಿ ಹಿನ್ನೆಲೆ ಇಂದು ಸಂಜೆ ‘ಮುಹೂರ್ತ ಟ್ರೇಡಿಂಗ್’;‌ ಏನಿದರ ವೈಶಿಷ್ಟ್ಯ?

Exit mobile version