ನವ ದೆಹಲಿ: ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ 20 ವರ್ಷಗಳು ಭರ್ತಿಯಾಗಿವೆ. ಅವರ ನಾಯಕತ್ವದಲ್ಲಿ ಕಂಪನಿಯು ಕಳೆದ ಎರಡು ದಶಕಗಳಲ್ಲಿ ಆದಾಯ, ಲಾಭ ಮತ್ತು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಸ್ಥಿರವಾದ ಎರಡಂಕಿಯ ಬೆಳವಣಿಗೆ ದರವನ್ನು ಸಾಧಿಸಿದೆ. ಈ ಅವಧಿಯಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 42 ಪಟ್ಟು ಮತ್ತು ಲಾಭದ (Mukesh Ambani) ಪ್ರಮಾಣವು ಸುಮಾರು 20 ಪಟ್ಟು ಹೆಚ್ಚಾಗಿದೆ.
ಮುಕೇಶ್ ಅಂಬಾನಿ ಅವರ ನಾಯಕತ್ವದಲ್ಲಿ ಕಳೆದ 20 ವರ್ಷಗಳಲ್ಲಿ ಕಂಪನಿಯಲ್ಲಿ ಹೂಡಿಕೆದಾರರಿಗೆ ಸಾಕಷ್ಟು ಲಾಭ ಲಭಿಸಿದೆ. ವಾರ್ಷಿಕ 87 ಸಾವಿರ ಕೋಟಿ ರೂಪಾಯಿಯಂತೆ ಹೂಡಿಕೆದಾರರ ಖಜಾನೆಗೆ 17.4 ಲಕ್ಷ ಕೋಟಿ ರೂಪಾಯಿ ಹರಿದಿದೆ. ಈ ಮಧ್ಯೆ, ರಿಲಯನ್ಸ್ ಪ್ರಪಂಚದಾದ್ಯಂತದ ದೊಡ್ಡ ಕಂಪನಿಗಳಿಂದ ಹೂಡಿಕೆಯನ್ನು ಪಡೆದಿದೆ. ಫೇಸ್‌ಬುಕ್, ಗೂಗಲ್ ಮತ್ತು ಬ್ರಿಟಿಷ್ ಪೆಟ್ರೋಲಿಯಂನಂಥ ಬೃಹತ್ ಕಂಪನಿಗಳು ರಿಲಯನ್ಸ್ ಜತೆ ಪಾಲುದಾರಿಕೆಗೆ ಮುಂದಾದವು.
ರಿಲಯನ್ಸ್ ಇಂಡಸ್ಟ್ರೀಸ್ ತೈಲದಿಂದ ಪ್ರಾರಂಭಿಸಿ, ಟೆಲಿಕಾಂ ಮತ್ತು ರೀಟೇಲ್ ತನಕ ನಾನಾ ವಲಯಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಅಂದ ಹಾಗೆ ಡೇಟಾವನ್ನು ‘ಹೊಸ ತೈಲ’ ಎಂದು ಕರೆದ ಮೊದಲ ವ್ಯಕ್ತಿ ಮುಕೇಶ್ ಅಂಬಾನಿ. ಮತ್ತು ಡೇಟಾವು ದೇಶದ ಸಾಮಾನ್ಯ ಮನುಷ್ಯರ ದೈನಂದಿನ ಜೀವನವನ್ನು ಎಷ್ಟು ಬದಲಾಯಿಸಿದೆ ಎಂದು ಹೇಳಬೇಕಾಗಿಲ್ಲ.
ರಿಲಯನ್ಸ್ ಜಿಯೋವನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ ಅಂಬಾನಿ. ಜಿಯೋ ಬಂದ ನಂತರ ಡಿಜಿಟಲ್ ಲೋಕದಲ್ಲಿ ದೇಶ ಮಾಡಿದ ಕ್ರಾಂತಿಗೆ ಇಡೀ ಜಗತ್ತೇ ಬೆರಗಾಗಿದೆ. ಗರಿಷ್ಠ ಸಂಖ್ಯೆಯ ಡಿಜಿಟಲ್ ವಹಿವಾಟಿನ ದಾಖಲೆ ಇಂದು ಭಾರತದ ಹೆಸರಿನಲ್ಲಿದೆ. ಈಗಂತೂ ಡಿಜಿಟಲ್ ಪಾವತಿ ಸೌಲಭ್ಯ ಸಾರ್ವತ್ರಿಕವಾಗಿದೆ. ಪ್ರತಿ ಜಿಬಿಗೆ 250 ರೂಪಾಯಿ ಇದ್ದ ಡೇಟಾ ಜಿಯೋ ಬಂದ ನಂತರ ಸುಮಾರು 10 ರೂಪಾಯಿಗೆ ಇಳಿದಿದೆ.
ರೀಟೇಲ್ ವಲಯದಲ್ಲೂ ರಿಲಯನ್ಸ್ ವಿಶ್ವದ ಪ್ರಮುಖ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಆನ್‌ಲೈನ್ ಅಥವಾ ಆಫ್‌ಲೈನ್, ರೀಟೇಲ್ ಅಥವಾ ಸಗಟು ಹೀಗೆ ಮುಕೇಶ್ ಅಂಬಾನಿ ನಾಯಕತ್ವದಲ್ಲಿ ರಿಲಯನ್ಸ್ ಎಲ್ಲದರಲ್ಲೂ ತನ್ನ ಹಿಡಿತ ಸಾಧಿಸಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್‌ನಂತಹ ಕಂಪನಿಗಳು ರಿಲಯನ್ಸ್ ಅನ್ನು ಪ್ರತಿಸ್ಪರ್ಧಿ ಎಂದು ಪರಿಗಣಿಸುತ್ತವೆ.