Site icon Vistara News

Ambani | 639 ಕೋಟಿ ರೂ.ಗೆ ದುಬೈನ ಅತ್ಯಂತ ದುಬಾರಿ ವಿಲ್ಲಾ ಖರೀದಿಸಿದ ಮುಕೇಶ್ ಅಂಬಾನಿ

palm jumeriah

ದುಬೈ: ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ ದುಬೈನಲ್ಲಿ ಅತ್ಯಂತ ( Ambani) ದುಬಾರಿಯಾದ ವಿಲ್ಲಾವನ್ನು ೮೦ ದಶಲಕ್ಷ ಡಾಲರ್‌ ಕೊಟ್ಟು (ಅಂದಾಜು ೬೩೯ ಕೋಟಿ ರೂ.) ಖರೀದಿಸಿದ್ದಾರೆ.

ದುಬೈನ ಸಮುದ್ರ ತಟದಲ್ಲಿ ನಿರ್ಮಾಣವಾಗಿರುವ, ತಾಳೆ ಮರದ ಆಕಾರದಲ್ಲಿರುವ ಕೃತಕ ದ್ವೀಪ ಸ್ತೋಮ ಪಾಮ್‌ ಜುಮೇರಾ ( Palm jumeirah) ಈ ಐಷಾರಾಮಿ ವಿಲ್ಲಾವನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.

ಅಂಬಾನಿಯವರ ಕಿರಿಯ ಪುತ್ರ ಅನಂತ್‌ ಸಲುವಾಗಿ ಈ ಐಷಾರಾಮಿ ವಿಲ್ಲಾವನ್ನು ಖರೀದಿಸಲಾಗಿದೆ. ಪಾಮ್‌ ಜ್ಯುಮೆರಾ ದ್ವೀಪಸ್ತೋಮದ ಉತ್ತರ ಭಾಗದಲ್ಲಿರುವ ಈ ವೈಭವೋಪೇತ ವಿಲ್ಲಾದಲ್ಲಿ ೧೦ ಬೆಡ್‌ ರೂಮ್‌ಗಳಿವೆ. ಖಾಸಗಿ ಸ್ಪಾ, ಒಳಾಂಗಣ, ಹೊರಾಂಗಣ ಈಜುಕೊಳ ಮತ್ತಿತರ ಐಷಾರಾಮಿ ಅನುಕೂಲಗಳಿವೆ.

ದುಬೈ ಈಗ ಆಗರ್ಭ ಶ್ರೀಮಂತರ ನೆಚ್ಚಿನ ಮಾರುಕಟ್ಟೆಯಾಗಿದೆ. ಅಲ್ಲಿನ ಸರ್ಕಾರ ಅವರಿಗೆ ಗೋಲ್ಡನ್‌ ವೀಸಾ ನೀಡುತ್ತದೆ. ವಿದೇಶಿಯರಿಗೆ ಮನೆ ಖರೀದಿಸಲು ನಿಯಮಾವಳಿಗಳನ್ನು ಸಡಿಲಗೊಳಿಸುತ್ತಿದೆ.

ಬ್ರಿಟಿಷ್‌ ಫುಟ್ಬಾಲ್‌ ತಾರೆ ಡೇವಿಡ್ ಬೇಕಮ್‌, ಅವರ ಪತ್ನಿ ವಿಕ್ಟೋರಿಯಾ, ಬಾಲಿವುಡ್‌ ತಾರೆ ಶಾರುಖ್‌ ಖಾನ್ ಅವರ ವಿಲ್ಲಾಗಳೂ ಇಲ್ಲಿ ಇವೆ. ೬೫ ವರ್ಷ ವಯಸ್ಸಿನ ಮುಕೇಶ್‌ ಅಂಬಾನಿ ಅವರು ರಿಲಯನ್ಸ್‌ ಸಾಮ್ರಾಜ್ಯದ ಉತ್ತರಾಧಿಕಾರವನ್ನು ಹಂತಗಳಲ್ಲಿ ತಮ್ಮ ಮೂವರು ಮಕ್ಕಳಿಗೆ ಹಸ್ತಾಂತರಿಸುತ್ತಿದ್ದಾರೆ.

ಮುಕೇಶ್‌ ಅಂಬಾನಿ ಜತೆ ಪುತ್ರ ಅನಂತ್‌ ಅಂಬಾನಿ

ದುಬೈನಲ್ಲಿ ಖರೀದಿಸಿರುವ ಈ ವಿಲ್ಲಾದ ನವೀಕರಣ ಮತ್ತು ಭದ್ರತೆಗೋಸ್ಕರ ಮತ್ತಷ್ಟು ಹಣವನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ವ್ಯಯಿಸಲಿದೆ. ಐಷಾರಾಮಿ ಹೋಟೆಲ್‌, ಕ್ಲಬ್‌, ಸ್ಪಾ, ರೆಸ್ಟೊರೆಂಟ್‌ಗಳು ಈ ಕೃತಕ ದ್ವೀಪಸ್ತೋಮದಲ್ಲಿ ಇದೆ. ಜತೆಗೆ ಪರ್ಶಿಯನ್‌ ಕೊಲ್ಲಿ ಸಮುದ್ರದ ಜಲರಾಶಿಯ ಸೌಂದರ್ಯವನ್ನು ಆಸ್ವಾದಿಸಬಹುದು. ೨೦೦೧ರಲ್ಲಿ ಆರಂಭವಾದ ಈ ಪಾಮ್‌ ಜುಮೇರಾ ನಿರ್ಮಾಣ ತ್ವರಿತವಾಗಿ ನಡೆದಿದೆ. ೨೦೦೭ರಲ್ಲಿ ಮೊದಲ ಹಂತದಲ್ಲಿ ನಿವಾಸಿಗಳು ಅಲ್ಲಿಗೆ ತೆರಳಿದ್ದಾರೆ.

ಮುಂಬಯಿನಲ್ಲಿ ಅಂಬಾನಿ ಕುಟುಂಬದ ೨೭ ಅಂತಸ್ತುಗಳ ಅಂಟಿಲಾ ನಿವಾಸ ಇದೆ. ಇದರಲ್ಲಿ ಮೂರು ಹೆಲಿಪ್ಯಾಡ್‌, ೧೬೮ ಕಾರುಗಳಿಗೆ ಪಾರ್ಕಿಂಗ್‌ ಸ್ಪೇಸ್‌, ೫೦ ಸೀಟುಗಳ ಮೂವಿ ಥಿಯೇಟರ್‌ ಇದೆ.

Exit mobile version