ಮುಂಬಯಿ: ಮುಂಬಯಿ ವಿಮಾನ ನಿಲ್ದಾಣದಲ್ಲಿ (Gold smuggling) ಕೇವಲ 11 ತಿಂಗಳುಗಳಲ್ಲಿ 604 ಕೆ.ಜಿ ಚಿನ್ನ ಕಳ್ಳ ಸಾಗಣೆಯಾಗಿದೆ. ಇದರ ಮೌಲ್ಯ 360 ಕೋಟಿ ರೂ.ಗಳಾಗಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ 374 ಕೆಜಿ ಮತ್ತು ಚೆನ್ನೈ ಏರ್ ಪೋರ್ಟ್‌ನಲ್ಲಿ 306 ಕೆ.ಜಿ ಬಂಗಾರವನ್ನು ಕಸ್ಟಮ್ಸ್ ಇಲಾಖೆ ಜಪ್ತಿ ಮಾಡಿದೆ.
ಮುಂಬಯಿ ಏರ್‌ಪೋರ್ಟ್‌ನಲ್ಲಿ 2022ರ ಏಪ್ರಿಲ್ ಮತ್ತು 2023ರ ಫೆಬ್ರವರಿ ನಡುವೆ 604 ಕೆ.ಜಿ ಕಳ್ಳ ಸಾಗಣೆಯ ಚಿನ್ನವನ್ನು ಜಪ್ತಿ ಮಾಡಲಾಗಿದೆ. 2022-23ರಲ್ಲಿ 91 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿತ್ತು. ಚಿನ್ನ ಕಳ್ಳ ಸಾಗಣೆಗೆ ಮುಂಬಯಿ ವಿಮಾನ ನಿಲ್ದಾಣ ಕುಖ್ಯಾತವಾಗುತ್ತಿದೆ.
ಭಾರತದಲ್ಲಿ ಚಿನ್ನಕ್ಕೆ ದೊಡ್ಡ ಮಾರುಕಟ್ಟೆ ಇದೆ. ಹೀಗಾಗಿ ಕಳ್ಳ ಸಾಗಣೆಯ ಜಾಲವೂ ಸಕ್ರಿಯವಾಗಿದೆ. ದಿಲ್ಲಿ, ಕೋಲ್ಕೊತಾ ಮತ್ತು ಚೆನ್ನೈ ಕೂಡ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಹೆಸರುವಾಸಿಯಾಗಿದೆ. ಇಲ್ಲೂ ಕಳ್ಳ ಸಾಗಣೆ ನಡೆಯುತ್ತಿದೆ. ಹೈದರಾಬಾದ್‌ನಲ್ಲೂ 124 ಕೆ.ಜಿ ಬಂಗಾರ ಪತ್ತೆಯಾಗಿತ್ತು.
2019-20ಕ್ಕೂ ಮುನ್ನ ದಿಲ್ಲಿ ಏರ್‌ಪೋರ್ಟ್‌ನಲ್ಲಿ 494 ಕೆ.ಜಿ ಬಂಗಾರ ಜಪ್ತಿಯಾಗಿತ್ತು. ಮುಂಬಯಿನಲ್ಲಿ 403 ಕೆ.ಜಿ ಸ್ವರ್ಣವನ್ನು ವಶಪಡಿಸಿಕೊಳ್ಳಲಾಗಿತ್ತು. 2022ರ ಅಕ್ಟೋಬರ್‌ನಿಂದೀಚೆಗೆ 20ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಮುಂಬಯಿನಲ್ಲಿ ಬಂಧಿಸಲಾಗಿದೆ. ಫೆಬ್ರವರಿ 10ರಂದು ಕೀನಾದ ಇಬ್ಬರು ಪ್ರಜೆಗಳನ್ನು ಮುಂಬಯಿನಲ್ಲಿ ಬಂಧಿಸಲಾಗಿತ್ತು. 18 ಕೆ.ಜಿ ಚಿನ್ನದ ಕಳ್ಳ ಸಾಗಣೆಗೆ ಅವರು ಯತ್ನಿಸಿದ್ದರು. ಇದರ ಮೌಲ್ಯ 9 ಕೋಟಿ ರೂ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ 2022ರಲ್ಲಿ 160 ಟನ್ ಬಂಗಾರವನ್ನು ಕಳ್ಳ ಸಾಗಣೆ ಮಾಡಲಾಗಿದೆ. 33% ಏರಿಕೆಯಾಗಿದೆ. ಚಿನ್ನದ ದರ ಏರಿಕೆಯಾಗುತ್ತಿರುವಂತೆ ಕಳ್ಳ ಸಾಗಣೆ ಕೂಡ ಏರುತ್ತಿದೆ. ಚಿನ್ನದ ಕಳ್ಳ ಸಾಗಣೆಯಿಂದ ಬರುವ ಲಾಭ 15%ರಿಂದ 20% ರಷ್ಟು ಹೆಚ್ಚಳವಾಗಿದೆ.
ಎಷ್ಟು ಚಿನ್ನ ತರಬಹುದು?
ವಿದೇಶಗಳಿಂದ ಭಾರತಕ್ಕೆ ಬರುವ ಪುರುಷರು 20 ಗ್ರಾಮ್ ಹಾಗೂ ಮಹಿಳೆಯರು 40 ಗ್ರಾಮ್ ಚಿನ್ನವನ್ನು ಕಾನೂನುಬದ್ಧವಾಗಿ ತರಬಹುದು. ಪ್ರತಿ ವರ್ಷ ಭಾರತ ಸರಾಸರಿ 720 ಟನ್ ಬಂಗಾರವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ 380 ಟನ್ ಕಾನೂನುಬದ್ಧವಾಗಿ ಬರುತ್ತದೆ. 15% ಆಮದು ಸುಂಕ ಮತ್ತು 3% ಐಜಿಎಸ್‌ಟಿ ಅನ್ವಯವಾಗುತ್ತದೆ. 340 ಟನ್ ಕಳ್ಳ ಸಾಗಣೆಯಾಗುತ್ತದೆ.