ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಶಶಿ ಎಂಬ ನಾಯಕಿಯ ಪಾತ್ರವನ್ನು ಹಿರಿಯ ನಟಿ ಶ್ರೀದೇವಿ ಅವರು ಸೊಗಸಾಗಿ ಅಭಿನಯಿಸಿದ್ದಾರೆ. ಮ್ಯಾನ್ ಹಟ್ಟನ್‌ನ ಕೆಫೆಯೊಂದರಲ್ಲಿ ಕಾಫಿ ಕುಡಿಯಲು ಹೋದಾಗ ಅಲ್ಲಿ ಸಿಗುವ ನಾನಾ ವೆರೈಟಿಯ ಕಾಫಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಸಿಲುಕುತ್ತಾರೆ. ಮೊದಲನೆಯದಾಗಿ ನೀವು ಯಾವ ಬಗೆಯ ಕಾಫಿ ಎಂಬುದು. ಅದರಲ್ಲಿ ಹತ್ತು ಆಯ್ಕೆಗಳು ಇರುತ್ತವೆ. ಆಮೇಲೆ ಯಾವ ಫ್ಲೇವರ್ ಬೇಕು ಎಂಬುದು. ಅದರಲ್ಲೂ 7 ಆಯ್ಕೆಗಳು ಇರುತ್ತದೆ. ಹಾಲು ಬೆರೆಸಬೇಕೊ ಬೇಡವೊ ಎಂದೂ ಕೇಳುತ್ತಾರೆ. ಹಾಲಾದರೆ ಯಾವುದರ ಹಾಲು ಎಂದೂ ಕೇಳುತ್ತಾರೆ. ಕೊನೆಗೆ ಹೇ ಭಗವಾನ್, ಒಂದು ಕಾಫಿ ಕೊಟ್ಟರೆ ಸಾಕು ಎನ್ನುವ ಸ್ಥಿತಿ.
ಕಾಫಿ ಆಯ್ಕೆಯಲ್ಲಿ ಯಾವುದನ್ನು ಆಯ್ಕೆ ಮಾಡಿದರೂ, ಅಂಥ ಸಮಸ್ಯೆಯಾಗದು. ಆದರೆ ಮ್ಯೂಚುವಲ್ ಫಂಡ್‌ಗಳ ಆಯ್ಕೆ ಎಷ್ಟೊಂದು ಮಹತ್ವದ್ದು ಅಲ್ಲವೇ. ಇವತ್ತು ಮ್ಯೂಚುವಲ್ ಫಂಡ್‌ಗಳಲ್ಲೂ ಹಲವಾರು ಆಯ್ಕೆಗಳಿವೆ. ಭವಿಷ್ಯದ ದೃಷ್ಟಿಯಿಂದ ಆಯ್ಕೆ ಮುಖ್ಯವಾಗುತ್ತದೆ. ಇವತ್ತಿನ ನಮ್ಮ ಆಯ್ಕೆಗಳ ಆಧಾರದಲ್ಲಿ ನಮ್ಮ ಭವಿಷ್ಯ ಕೂಡ ನಿರ್ಧಾರವಾಗುತ್ತದೆ. ಯಾವಾಗ ಮ್ಯೂಚುವಲ್ ಫಂಡ್‌ಗಳನ್ನು ನಮ್ಮ ಹೂಡಿಕೆಯ ಸಾಧನವಾಗಿಸುತ್ತೇವೆಯೋ ಆಗ ಫಂಡ್ ಆಯ್ಕೆಯನ್ನು ಸಮಗ್ರವಾಗಿ ಪರಿಶೀಲಿಸಬೇಕಾಗುತ್ತದೆ. ಯಾವಾಗ ಅದಕ್ಕೆ ಪ್ರವೇಶಿಸಬೇಕು ಹಾಗೂ ಯಾವಾಗ ಹೊರ ಬರಬೇಕು ಎಂಬುದನ್ನು ಗಮನಿಸಬೇಕಾಗುತ್ತದೆ.
ಮಾರುಕಟ್ಟೆಯಲ್ಲಿ ರಿಸ್ಕ್ ಇರುವುದರಿಂದ ಕಿರಿಕಿರಿ ಎನ್ನಿಸುವುದು ಸಹಜ. ಆದರೆ ರಿಸ್ಕ್ ಇರುವಲ್ಲಿಯೇ ಆದಾಯ ಕೂಡ ಇರುತ್ತದೆ. ಇಂದಿನ ಹೂಡಿಕೆಯ ನಿರ್ಧಾರ ಭವಿಷ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸಬಲ್ಲುದು. ಭಾರತದಲ್ಲೂ ಇತ್ತೀಚಿನ ವರ್ಷಗಳಿಂದ ಆಯ್ಕೆಗಳಲ್ಲಿ ಓವರ್ ಲೋಡ್ ಆಗುತ್ತಿದೆ. ಈ ಪರಿಸ್ಥಿತಿ ಹೊಸತು. 2000ಕ್ಕೆ ಮುನ್ನ ಪೂರೈಕೆಯಲ್ಲಿ ಕೊರತೆ ಇತ್ತು. ಆದರೆ ಈಗ ಪೂರೈಕೆಯ ಸಮೃದ್ಧಿ ಉಂಟಾಗಿದೆ. ಚಾಯ್ಸ್ ಎನ್ನುವುದು ಈಗ ಆಯ್ಕೆಯಾಗಿ ಉಳಿದಿಲ್ಲ. ಯಾವಾಗಲೂ ಆಯ್ಕೆಗಳು ಇರಬೇಕು. ಏಕೆಂದರೆ ಕಡಿಮೆ ಆಯ್ಕೆ ಇದ್ದಾಗ ಅವುಗಳ ಗುಣಮಟ್ಟ ಕೂಡ ಕಳಪೆಯಾಗಿದ್ದರೆ ಪ್ರಯೋಜನವೇನು? 90ರ ದಶಕಕ್ಕೆ ಮುನ್ನ ನಾನಾ ನಿರ್ಬಂಧಗಳು, ಖಾಸಗಿ ವಲಯಕ್ಕೆ ನಿರ್ಬಂಧಗಳ ಪರಿಣಾಮ ಹೂಡಿಕೆದಾರರಿಗೆ ಹೆಚ್ಚಿನ ಆಯ್ಕೆಗಳೇ ಇರಲಿಲ್ಲ. ಯಾವಾಗ ಆರ್ಥಿಕ ಉದಾರೀಕರಣದ ಬಾಗಿಲನ್ನು ತೆರೆಯಲಾಯಿತೊ, ಅಂದಿನಿಂದ ಹೊಸ ಆಯ್ಕೆಗಳು ಸಿಗಲು ಆರಂಭವಾಯಿತು. ಮಾರುಕಟ್ಟೆಯ ಶಕ್ತಿಗಳಿಗೆ ಮುಕ್ತ ವಾತಾವರಣ ಕಲ್ಪಿಸಿದಾಗ ಗ್ರಾಹಕರಿಗೆ ಹಲವು ಆಯ್ಕೆಗಳು ಸಿಗುತ್ತವೆ. ಕೆಲ ದಶಕಗಳ ಹಿಂದೆ ಒಂದು ಟೆಲಿಫೋನ್ ಸಂಪರ್ಕ ಪಡೆಯಲು ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇತ್ತು. ಒಂದು ಎಲ್ಪಿಜಿ ಗ್ಯಾಸ್ ಕನೆಕ್ಷನ್ ಪಡೆಯಲು ಹರ ಸಾಹಸ ಪಡಬೇಕಾಗುತ್ತಿತ್ತು. ಸಮೀಪದ ಸೂಪರ್ ಮಾರ್ಕೆಟ್‌ಗೆ ಒಮ್ಮೆ ಹೋಗಿ ನೋಡಿ. ಎಷ್ಟೊಂದು ವೈವಿಧ್ಯಮಯವಾದ ಆಯ್ಕೆಗಳು ಇವೆ ಎಂಬುದು ಗೊತ್ತಾಗುತ್ತದೆ. ಮ್ಯೂಚುವಲ್ ಫಂಡ್ ಆಯ್ಕೆ ಮಾಡುವ ಮುನ್ನ ನಿಮ್ಮ ಅಗತ್ಯ ಮತ್ತು ಗುರಿಗಳು ಏನು ಎಂಬುದನ್ನು ಪರಿಶೀಲಿಸಿ. ಏಕೆಂದರೆ ಹೂಡಿಕೆಯ ನಿರ್ಧಾರಗಳು ಲೈಫ್ ಟೈಮ್ ಪ್ರಭಾವ ಬೀರುತ್ತದೆ.