ಮ್ಯೂಚುವಲ್ ಫಂಡ್‌ಗಳಲ್ಲಿ ಜನ ಸಾಮಾನ್ಯರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನಿಮಗೆ ಆಶ್ಚರ್ಯವಾದೀತು, 2023ರ ಡಿಸೆಂಬರ್‌ನಲ್ಲಿ (Mutual fund ) ಈಕ್ವಿಟಿ ಮ್ಯೂಚುವಲ್ ಫಂಡ್ ಸಿಪ್ ಮೂಲಕ 16,997 ಕೋಟಿ ರೂ. ಹರಿದು ಬಂದಿದೆ. 2023ರ ಇಡೀ ವರ್ಷದಲ್ಲಿ ಬರೋಬ್ಬರಿ 1.61 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ. ಒಟ್ಟಾರೆ ಮ್ಯೂಚುವಲ್ ಫಂಡ್ ಇಂಡಸ್ಟ್ರಿಯ ಗಾತ್ರ 50 ಲಕ್ಷ ಕೋಟಿ ರೂ.ಗಳಾಗಿದೆ. ಅದು ಹೇಗೆ ಜನ ಇಷ್ಟೊಂದು ಧೈರ್ಯದಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿದರು? ಇದಕ್ಕೆ ಅದು ನೀಡುವ ಹೈ ರಿಟರ್ನ್ ಒಂದು ಕಡೆಯಾದರೆ, ಮತ್ತೊಂದು ಕಡೆ ಮ್ಯೂಚುವಲ್ ಫಂಡ್ ವಲಯದ ಸುರಕ್ಷತೆಗೆ ಕಾರಣವಾಗಿರುವ ಮಾರುಕಟ್ಟೆ ನಿಯಂತ್ರಕ ಸೆಬಿ. (SEBI)
ಹೌದು, ಸಾರ್ವಜನಿಕ ವಲಯ ಅಥವಾ ಖಾಸಗಿ ವಲಯದ ಮ್ಯೂಚುವಲ್ ಫಂಡ್ ಯೋಜನೆಗಳ ಮೇಲುಸ್ತುವಾರಿಯನ್ನು ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನೋಡಿಕೊಳ್ಳುತ್ತದೆ. ವಿದೇಶಿ ಮೂಲದ ಮ್ಯೂಚುವಲ್ ಫಂಡ್ ಆಗಿದ್ದರೂ, ಭಾರತದಲ್ಲಿ ಕಾರ್ಯನಿರ್ವಹಿಸುವುದಿದ್ದರೆ ಸೆಬಿಯ ನಿಯಮಾವಳಿಗೆ ಬದ್ಧವಾಗಿರಬೇಕು. ಇದು ಕೇಂದ್ರ ಹಣಕಾಸು ಇಲಾಖೆಯ ವ್ಯಾಪ್ತಿಗೆ ಬರುವ ಸಂಸ್ಥೆಯಾಗಿದೆ. 1988ರ ಏಪ್ರಿಲ್ 12ರಂದು ಸೆಬಿಯನ್ನು ಸ್ಥಾಪಿಸಲಾಯಿತು. 1992ರ ಜನವರಿಯಲ್ಲಿ ಶಾಸನಾತ್ಮಕ ಅಧಿಕಾರವನ್ನು ನೀಡಲಾಯಿತು.
ಸೆಬಿಯು ಎಲ್ಲ ಮ್ಯೂಚುವಲ್ ಫಂಡ್‌ಗಳ ಮೇಲುಸ್ತುವಾರಿ ಮಾಡುವುದರಿಂದ ಇದರದಲ್ಲಿ ವಂಚನೆಗಳು ನಡೆಯುವುದು ಅಪರೂಪ. ಹೀಗಾಗಿ ಹೂಡಿಕೆದಾರರು ವಿಶ್ವಾಸವಿಟ್ಟು ಇನ್ವೆಸ್ಟ್ ಮಾಡುತ್ತಾರೆ. ಈ ಹಿಂದೆ ಹೊಫ್ಲಾಂಡ್ ಫೈನಾನ್ಸ್, ಸಿಆರ್‌ಬಿ, ಶಾರದಾ, ಸಹಾರಾ ಚಿಟ್ ಫಂಡ್ ಹಗರಣಗಳು ನಡೆದಿತ್ತು. ಸಾವಿರಾರು ಮಂದಿ ಹಣ ಕಳೆದುಕೊಂಡಿದ್ದರು. ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನು ಆಗ ಜನ ಕಳೆದುಕೊಳ್ಳುತ್ತಾರೆ. ಇಂಥ ಸಂದರ್ಭ ಸೆಬಿ ತನ್ನ ನಿಯಂತ್ರಕ ಕ್ರಮಗಳ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ಕಾಲಕಾಲಕ್ಕೆ ಸೆಬಿ ತನ್ನ ನಿರ್ದೇಶನಗಳನ್ನೂ ಹೊರಡಿಸುತ್ತಿರುತ್ತದೆ.
ಸೆಬಿಯ ಅತಿ ದೊಡ್ಡ ಜವಾಬ್ದಾರಿಯೇ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆಯನ್ನು ಸೃಷ್ಟಿಸುವುದು. ಮ್ಯೂಚುವಲ್ ಫಂಡ್‌ಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ನಿಟ್ಟಿನಲ್ಲಿ ಸೆಬಿ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. 1992ರಲ್ಲಿ ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ಭಾರಿ ಹಗರಣ ಬಯಲಾಗಿತ್ತು. ಷೇರು ಬ್ರೋಕರ್ ಹರ್ಷದ್ ಮೆಹ್ತಾ ಹಗರಣದ ಪ್ರಮುಖ ಆರೋಪಿಯಾಗಿದ್ದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹರ್ಷದ್ ಮೆಹ್ತಾ ಷೇರು ಮಾರುಕಟ್ಟೆಯಲ್ಲಿ ಭಾರಿ ಹಗರಣ ನಡೆಸಿದ್ದರು. ಆಗ ಷೇರು ಮಾರುಕಟ್ಟೆ ನಿಯಂತ್ರಣಕ್ಕೆ ಶಾಸನಾತ್ಮಕ ಅಧಿಕಾರದ ಬಲ ಹೊಂದಿರುವ ಸಂಸ್ಥೆಯ ಅಗತ್ಯ ಸೃಷ್ಟಿಯಾಗಿತ್ತು.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್ ಮಾರುಕಟ್ಟೆಗೆ ಲಿಂಕ್ ಆಗಿದ್ದರೂ, ಹೂಡಿಕೆಗೆ ಬೆಸ್ಟ್ ಏಕೆ?
ಸೆಬಿಯ ನಿಯಮಗಳ ಪ್ರಕಾರ ಎಲ್ಲ ಮ್ಯೂಚುವಲ್ ಫಂಡ್‌ಗಳು ಸೆಬಿಯಲ್ಲಿ ನೋಂದಣಿಯಾಗಿರಬೇಕು. ಸೆಬಿಯು ಎಂಎಫ್ ಲೈಟ್ ಎಂಬ ಮ್ಯೂಚುವಲ್ ಫಂಡ್ ರೆಗ್ಯುಲೇಷನ್ಸ್ ಅನ್ನು ಸಿದ್ಧಪಡಿಸುತ್ತಿದೆ. ಇದು ಬಿಸಿನೆಸ್ ಸ್ನೇಹಿಯಾಗಿರಲಿದೆ.