ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆಯ ಮತ್ತೊಂದು ವಿಶೇಷತೆ ಏನೆಂದರೆ ವೈವಿಧ್ಯಮಯ ಹೂಡಿಕೆ. ಒಂದು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಅಡಿಯಲ್ಲಿ ಸಾಮಾನ್ಯವಾಗಿ ಐವತ್ತರಿಂದ ಎಪ್ಪತ್ತು ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ( Mutual fund ) ಹಾಗಾದರೆ ಇದರ ಪ್ರಯೋಜನವೇನು ಎನ್ನುತ್ತೀರಾ?
ಮೊದಲನೆಯದಾಗಿ ಎಲ್ಲ ಐವತ್ತೂ ಷೇರುಗಳು ಒಂದೇ ಸಲ ನಷ್ಟಕ್ಕೀಡಾಗುವ ಸಾಧ್ಯತೆಗಳು ಬಹಳ ಅಪರೂಪ. ಎಲ್ಲೋ ಕೋವಿಡ್ ಮಾದರಿಯ, ಶತಮಾನಕ್ಕೊಮ್ಮೆ ಸಂಭವಿಸುವ ವಿಪತ್ತುಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಷೇರುಗಳೂ ಒಟ್ಟಿಗೇ ನಷ್ಟಕ್ಕೀಡಾಗುವುದು ಎಂದರೆ ಅತ್ಯಪರೂಪ. ಕೆಲವು ಬಿಸಿನೆಸ್‌ಗಳು ಚೆನ್ನಾಗಿ ನಡೆಯುತ್ತವೆ, ಮತ್ತೆ ಕೆಲವು ವಿಫಲವಾಗುತ್ತವೆ ಹಾಗೂ ಇನ್ನು ಕೆಲವು ಸರಾಸರಿ ದರದಲ್ಲಿ ಇರುತ್ತವೆ.
ನೀವು ನೇರವಾಗಿ ಕಂಪನಿಗಳ ಷೇರುಗಳಲ್ಲಿ ಕೂಡ ಇನ್ವೆಸ್ಟ್ ಮಾಡಬಹುದು. ಆದರೆ ಆ ಕಂಪನಿಯ ಷೇರಿನ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಕಷ್ಟ ಸಾಧ್ಯವಾಗಬಹುದು. ದೇಶೀಯ- ಜಾಗತಿಕ ವಿದ್ಯಮಾನಗಳನ್ನು ಗಮನಿಸುವ ವ್ಯವಧಾನವೂ ಇರಲಿಕ್ಕಿಲ್ಲ. ಆಗ ನೀವು ಆಯ್ಕೆ ಮಾಡಿರುವ ಆರೇಳು ಷೇರುಗಳೂ ನಷ್ಟಕ್ಕೀಡಾಗುವ ಸಾಧ್ಯತೆ ಇದೆ. ಆದರೆ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಹಲವಾರು ಕೆಟಗರಿಗಳಲ್ಲಿನ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿದರೆ, ಆಗ ಉಂಟಾಗುವ ವೈವಿಧ್ಯತೆಯಿಂದಾಗಿ ರಿಸ್ಕ್ ಕಡಿಮೆಯಾಗುತ್ತದೆ ಮತ್ತು ರಿಟರ್ನ್ ಹೆಚ್ಚುತ್ತದೆ.
ಎರಡನೆಯದಾಗಿ ಮ್ಯೂಚುವಲ್ ಫಂಡ್ ಮೂಲಕ ಕೇವಲ ಷೇರುಗಳಲ್ಲಿ ಮಾತ್ರವಲ್ಲದೆ, ಇನ್ನೂ ಹಲವು ಅಸೆಟ್ ಕ್ಲಾಸ್‌ಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೊವನ್ನು ವೈವಿಧ್ಯಮಯಗೊಳಿಸಬಹುದು. ಭಾರತೀಯ ಶೈಲಿಯ ಊಟವನ್ನು ಗಮನಿಸಿ. ಅವುಗಳಲ್ಲಿ ಕಾರ್ಬೊ ಹೈಡ್ರೇಟ್ಸ್, ಪ್ರೊಟೀನ್, ಖನಿಜಗಳು, ಕೊಬ್ಬಿನ ಅಂಶಗಳು, ಸಿಹಿ ಎಲ್ಲವೂ ಇರುತ್ತದೆ. ನೀವು ಕೇವಲ ರೋಟಿ ಅಥವಾ ದಾಲ್ ಅನ್ನು ಮಾತ್ರ ಸೇವಿಸುವುದಿಲ್ಲ. ಎಲ್ಲದರ ಮಿಶ್ರಣವನ್ನು ಸೇವಿಸುತ್ತೀರಿ. ಇದೇ ರೀತಿ ಮ್ಯೂಚುವಲ್ ಫಂಡ್‌ನಲ್ಲಿ ನೀವು ಈಕ್ವಿಟಿ, ಡೆಟ್, ಚಿನ್ನ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್ ಇನ್ ಒನ್ ಗೈಡ್‌ನಲ್ಲೇನಿದೆ?
ಕೊನೆಯದಾಗಿ ಹೂಡಿಕೆದಾರರು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಏನೆಂದರೆ- ಸುರಕ್ಷಿತವಾಗಿ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದವರು, ದಿಢೀರ್ ಅದನ್ನು ಬಿಟ್ಟು ಅತ್ಯಂತ ಅಪಾಯಕಾರಿಯಾದ ಡೇ ಟ್ರೇಡಿಂಗ್‌ನಲ್ಲಿ ದುಡ್ಡು ಹಾಕಲು ಹೋಗಬಾರದು. ಫ್ಯೂಚರ್ ಮತ್ತು ಆಪ್ಷನ್ಸ್ ಮತ್ತು ಕ್ರಿಪ್ಟೊ ದಲ್ಲಿ ಹೂಡಿಕೆ ಮಾಡಬಾರದು. ಏಕೆಂದರೆ ಅವುಗಳು ಅತ್ಯಂತ ಅಪಾಯಕಾರಿ. ಆದರೆ ನಿಮಗೆ ಮಧ್ಯಮ ಮಾರ್ಗ ಇದ್ದೇ ಇದೆ. ಅದರ ಮೂಲಕ ದೀರ್ಘಕಾಲೀನವಾಗಿ ಉತ್ತಮ ಸಂಪತ್ತನ್ನು ಸೃಷ್ಟಿಸಬಹುದು.
ಆದರೆ ಮರೆಯದಿರಿ- ಹೂಡಿಕೆ ಎನ್ನುವುದು ಕೇವಲ ರಿಟರ್ನ್ ಬಗ್ಗೆ ಫೋಕಸ್ ಕೊಡೋದಲ್ಲ. ಹೂಡಿಕೆ ಎಂದರೆ ಲಿಕ್ವಿಡಿಟಿಯೂ ಹೌದು. ಹೂಡಿಕೆ ಎಂದರೆ ಡೈವರ್ಸಿಫಿಕೇಶನ್ ಕೂಡ ಹೌದು. ಹೂಡಿಕೆ ಎಂದರೆ ವೆಚ್ಚವೂ ಆಗಿರುತ್ತದೆ. ಹೂಡಿಕೆ ಎಂದರೆ ಸುಲಭ ವರ್ಗಾವಣೆ, ಅಗತ್ಯವಿದ್ದಾಗ ಸಿಗುವುದೂ ಆಗಿರಬೇಕು.