ಭಾರತದಲ್ಲಿ 44 ಮ್ಯೂಚುವಲ್ ಫಂಡ್ ಹೌಸ್‌ಗಳಿವೆ. 2,500ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಇವೆ. ಹೀಗಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸಹಜ. ( Mutual fund ) ನೀವು ಕಾರು ಖರೀದಿಸಬೇಕು ಎಂದುಕೊಳ್ಳುವಾಗ ಹೇಗೆ ಹುಡುಕಾಟವನ್ನು ಆರಂಭಿಸುತ್ತೀರಿ? ಮೊಟ್ಟ ಮೊದಲು ಯಾವ ಕೆಟಗರಿಯ ಕಾರು ಎಂದು ನಿರ್ಧಾರ ಮಾಡುತ್ತೀರಿ. ಹ್ಯಾಚ್ ಬ್ಯಾಕ್, ಸೆಡಾನ್, ಎಸ್ ಯುವಿ, ಲಕ್ಸುರಿ ಕೆಟಗರಿಗಳಲ್ಲಿ ಯಾವುದು ನಿಮ್ಮ ಆಯ್ಕೆ ಎಂದು ತೀರ್ಮಾನಿಸುತ್ತೀರಿ. ಬಳಿಕ ನೀವು ಕೆಟಗರಿಯಲ್ಲಿರುವ ವಿಶೇಷತೆಗಳ ಬಗ್ಗೆ ಆಲೋಚಿಸುತ್ತೀರಿ. ಮ್ಯೂಚುವಲ್ ಫಂಡ್‌ಗಳಲ್ಲೂ ನಾವು ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಬಳಿಕ ಯೋಜನೆಯನ್ನು ಹುಡುಕುತ್ತೀರಿ.
ಮಾರುಕಟ್ಟೆ ನಿಯಂತ್ರಕ ಸೆಬಿಯು 2016ರಲ್ಲಿ ಒಂದು ಅಂಶವನ್ನು ಗಮನಿಸಿತು. ಮ್ಯೂಚುವಲ್ ಫಂಡ್ ಕಂಪನಿಗಳು ಒಂದೇ ರೀತಿಯ ಸ್ಕೀಮ್‌ಗಳನ್ನು ಬಿಡುಗಡೆಗೊಳಿಸುತ್ತಿದ್ದವು. ಅದು ಹೂಡಿಕೆದಾರರನ್ನು ಗೊಂದಲಕ್ಕೀಡು ಮಾಡುತ್ತಿತ್ತು. ಒಂದೇ ಫಂಡ್ ಹೌಸ್ ಭಿನ್ನ ಹೆಸರುಗಳಲ್ಲಿ ನಾಲ್ಕು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳನ್ನು ಬಿಡುಗಡೆ ಮಾಡುತ್ತಿತ್ತು. ನಾಲ್ಕೂ ಯೋಜನೆಗಳಲ್ಲಿ 90 ಪರ್ಸೆಂಟ್ ಷೇರುಗಳು ಓವರ್ ಲ್ಯಾಪ್ ಆಗುತ್ತಿತ್ತು. ಇದಾದ ಬಳಿಕ ಸೆಬಿಯು ಮ್ಯೂಚುವಲ್ ಫಂಡ್‌ಗಳನ್ನು ಕೆಟಗರಿಗಳಾಗಿ ವಿಭಜಿಸಲು ನಿರ್ಧರಿಸಿತು.
ಸೆಬಿಯು ಮ್ಯೂಚುವಲ್ ಫಂಡ್ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಎರಡು ವಿಷಯಗಳಲ್ಲಿ ಕಾರ್ಯಪ್ರವೃತ್ತವಾಯಿತು. ಮೊದಲನೆಯದಾಗಿ 37 ಕೆಟಗರಿಗಳನ್ನು ಸೃಷ್ಟಿಸಿತು. ಓಪನ್ ಎಂಡೆಡ್ ಫಂಡ್‌ಗಳಿಗೆ ಇದು ಅನ್ವಯ. ಎರಡನೆಯದಾಗಿ ಪ್ರತಿ ಫಂಡ್ ಹೌಸ್ ಪ್ರತಿಯೊಂದು ಕೆಟಗರಿಯಲ್ಲಿ ಒಂದೇ ಮ್ಯೂಚುವಲ್ ಫಂಡ್ ಯೋಜನೆಯನ್ನು ಹೊಂದಿರಬೇಕು ಎಂದು ನಿಯಮವನ್ನು ಜಾರಿಗೊಳಿಸಿತು. ಕ್ಲೋಸ್ ಎಂಡೆಡ್ ಫಂಡ್‌ಗಳನ್ನು ಇದರಿಂದ ಹೊರಗಿಡಲಾಗಿದೆ. ಮ್ಯೂಚುವಲ್ ಫಂಡ್ ಕೆಟಗರಿಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್, ಡೆಟ್ ಮ್ಯೂಚುವಲ್ ಫಂಡ್, ಹೈಬ್ರಿಡ್ ಮ್ಯೂಚುವಲ್ ಫಂಡ್, ಮಲ್ಟಿ ಕ್ಯಾಪ್, ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಇಎಲ್‌ಎಸ್‌ಎಸ್, ಫ್ಲಿಕ್ಸಿ -ಕ್ಯಾಪ್, ಮಲ್ಟಿ-ಕ್ಯಾಪ್ ಇತ್ಯಾದಿ 37 ವಿಧಗಳಿವೆ.
ಮ್ಯೂಚುವಲ್ ಫಂಡ್‌ಗಳ 37 ವಿಧಗಳ ಪೈಕಿ ಮೂರು ಬೇಸಿಕ್ ಕೆಟಗರಿಗಳು ಇವೆ. ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳೆಂದು ಅವುಗಳನ್ನು ಕರೆಯುತ್ತಾರೆ. ಎರಡನೇ ಹಂತದಲ್ಲಿರುವ ಕ್ರಾಸ್-ಕ್ಯಾಪ್ ಕೆಟಗರಿಗಳು ಯಾವುದು ಎಂದರೆ, ಮಲ್ಟಿ -ಕ್ಯಾಪ್, ಫ್ಲೆಕ್ಸಿ-ಕ್ಯಾಪ್ ಮತ್ತು ಲಾರ್ಜ್ ಆಂಡ್ ಮಿಡ್-ಕ್ಯಾಪ್.
ಇದನ್ನೂ ಓದಿ: Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್ ಇನ್ ಒನ್ ಗೈಡ್‌ನಲ್ಲೇನಿದೆ?
ಹೀಗೆ ಮ್ಯೂಚುವಲ್ ಫಂಡ್‌ಗಳು ನಾನಾ ವಿಧಗಳಲ್ಲಿ ಮತ್ತು ಗಾತ್ರಗಳಲ್ಲಿ ಸಿಗುವುದರಿಂದ, ಇವುಗಳಲ್ಲಿ ನಿಮ್ಮ ಆಯ್ಕೆ ಮಾಡುವುದಕ್ಕೆ ಮುನ್ನ, ನಿಮ್ಮ ಉದ್ದೇಶ ಯಾವುದು ಎಂಬುದನ್ನು ಖಚಿತಗೊಳಿಸಬೇಕು. ನಿಮ್ಮ ಉದ್ದೇಶವನ್ನೂ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿ ಎಂದು ಮೂರು ಕೆಟಗರಿಗಳಲ್ಲಿ ವಿಂಗಡಿಸಬಹುದು. ಯಾವುದೇ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಮುನ್ನ ಇನ್ವೆಸ್ಟ್ ಮೆಂಟಿನ ಗುರಿಗಳನ್ನು ನಿರ್ಧರಿಸಬೇಕು. ನಿಮ್ಮ ಆದ್ಯತೆ ಏನು ಎಂದು ನಿಶ್ಚಯಿಸಬೇಕು. ಬಳಿಕ ಹಣದುಬ್ಬರವನ್ನು ಪರಿಗಣಿಸಬೇಕು. ನಂತರ ಡೆಟ್ ಮ್ಯೂಚುವಲ್ ಫಂಡ್, ಈಕ್ವಿಟಿ ಮ್ಯೂಚುವಲ್ ಫಂಡ್ ಅಥವಾ ಹೈಬ್ರಿಡ್ ಮ್ಯೂಚುವಲ್ ಫಂಡ್ ಅನ್ನು ಬಳಸಬಹುದು.