ಯನಿಟ್ ಟ್ರಸ್ಟ್ ಆಫ್ ಇಂಡಿಯಾ (Unit Trust Of India – UTI) ಭಾರತದ ಮೊಟ್ಟ ಮೊದಲ ಮ್ಯೂಚುವಲ್ ಫಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1963ರಲ್ಲಿ ಸ್ಥಾಪನೆಯಾದ ಯುಟಿಐ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಇದು ಮೊದಲ 24 ವರ್ಷಗಳ ಕಾಲ ಮಾರುಕಟ್ಟೆಯನ್ನು ಏಕ ಸ್ವಾಮ್ಯವನ್ನು ಮೆರೆದಿತ್ತು. ಇದಕ್ಕೆ ಮಾರುಕಟ್ಟೆಯಲ್ಲಿ ಎದುರಾಳಿಗಳೇ ಇದ್ದಿರಲಿಲ್ಲ. 1987ರ ಡಿಸೆಂಬರ್‌ನಲ್ಲಿ ಕೆನರಾ ಬ್ಯಾಂಕ್ ಮ್ಯೂಚುವಲ್ ಫಂಡ್ ಅಸ್ತಿತ್ವಕ್ಕೆ ಬಂದಿತು. ನಂತರ ಕೆಲ ಸಾರ್ವಜನಿಕ ವಲಯದ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಬಿಡುಗಡೆಯಾಯಿತು. ಆಗಿನ ಕಾಲದಲ್ಲಿ ಖಾಸಗಿ ಮ್ಯೂಚುವಲ್ ಫಂಡ್ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ನಂಬಿಕೆ ಇದ್ದಿರಲಿಲ್ಲ.
ಮನಿ ಕಂಟ್ರೋಲ್ ಡಾಟ್ ಕಾಮ್ ವಿಶ್ಲೇಷಣೆಯ ಪ್ರಕಾರ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಮ್ಯೂಚುವಲ್ ಫಂಡ್ ಕಳೆದ 60 ವರ್ಷಗಳಲ್ಲಿ ಹೂಡಿಕೆದಾರರಿಗೆ 9-19% ಆದಾಯವನ್ನು ನೀಡಿದೆ. ಭಾರತದ ಮೊದಲ ಖಾಸಗಿ ಕ್ಷೇತ್ರದ ಮ್ಯೂಚುವಲ್ ಫಂಡ್ ಕೊಠಾರಿ ಪಯನೀರ್ ಆಗಿದೆ. ಈಗ ಇದು ಫ್ರಾಂಕ್ಲಿನ್ ಟೆಂಪ್ಲೆಟ್ ಮ್ಯೂಚುವಲ್ ಫಂಡ್ ಜತೆಗೆ ವಿಲೀನವಾಗಿದೆ. 1993ರಲ್ಲಿ ಕೊಠಾರಿ ಪಯನೀರ್ ಆರಂಭವಾಗಿತ್ತು.
ಭಾರತದಲ್ಲಿ ಮ್ಯೂಚುವಲ್ ಫಂಡ್ ಯೋಜನೆಗಳು ಎಂದೂ ಹೂಡಿಕೆದಾರರನ್ನು ನಿರಾಸೆಗೊಳಿಸಿಲ್ಲ. 1986ರಿಂದಲೂ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸಿವೆ. ಇವುಗಳು ಈಕ್ವಿಟಿ ಸ್ಕೀಮ್ ಅಥವಾ ಹೈಬ್ರಿಡ್ ಸ್ಕೀಮ್‌ಗಳಾಗಿವೆ. ಈಗ ಭಾರತದಲ್ಲಿ 2,500ಕ್ಕೂ ಹೆಚ್ಚು ಮ್ಯೂಚುವಲ್ ಸ್ಕೀಮ್‌ಗಳು ಇವೆ. ಆರಂಭದ ಹಂತದಲ್ಲಿ ಇದ್ದಂಥ ಸಾರ್ವಜನಿಕ ವಲಯದ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಅಂಥ ಆಕರ್ಷಣೆ ಗಳಿಸಿರಲಿಲ್ಲ. 1987-1993ರ ಅವಧಿಯಲ್ಲಿ ಕೆನರಾ ಬ್ಯಾಂಕ್ ಮ್ಯೂಚುವಲ್ ಫಂಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯೂಚುವಲ್ ಫಂಡ್, ಇಂಡಿಯನ್ ಬ್ಯಾಂಕ್ ಮ್ಯೂಚುವಲ್ ಫಂಡ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮ್ಯೂಚುವಲ್ ಫಂಡ್ ಅಸ್ತಿತ್ವಕ್ಕೆ ಬಂದಿತು.
ಆರಂಭದಲ್ಲಿ ಮ್ಯೂಚುವಲ್ ಫಂಡ್ ವಲಯಕ್ಕೆ ಯಾವುದೇ ನಿಯಂತ್ರಕ ವ್ಯವಸ್ಥೆ ಅಥವಾ ನಿಯಮಾವಳಿಗಳು ಇದ್ದಿರಲಿಲ್ಲ. 1993ರಲ್ಲಿ ಮ್ಯೂಚುವಲ್ ಫಂಡ್ ವಲಯಕ್ಕೆ ಸಂಬಂಧಿಸಿ ಮೊದಲ ಕಂತಿನ ನಿಯಮಾವಳಿಗಳು ಜಾರಿಗೆ ಬಂದಿತು. ಆರಂಭದಲ್ಲಿ ಯುಟಿಐ ಹೊರತುಪಡಿಸಿ ಎಲ್ಲ ಮ್ಯೂಚುವಲ್ ಫಂಡ್ ಯೋಜನೆಗಳು ಈ ನಿಯಮಾವಳಿಗಳ ವ್ಯಾಪ್ತಿಗೆ ಬಂದಿತು. ಬಳಿಕ 2003ರಲ್ಲಿ ಯುಟಿಐ ಕೂಡ ಸೆಬಿಯ ವ್ಯಾಪ್ತಿ ಬಂದಿತು.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್ ಮಾರುಕಟ್ಟೆಗೆ ಲಿಂಕ್ ಆಗಿದ್ದರೂ, ಹೂಡಿಕೆಗೆ ಬೆಸ್ಟ್ ಏಕೆ?
ಕಳೆದ ಹಲವಾರು ವರ್ಷಗಳಿಂದ ಸೆಬಿಯು ರಿಟೇಲ್ ಹೂಡಿಕೆದಾರರ ಹಿತ ರಕ್ಷಣೆಗೆ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ವಿಷಯವನ್ನು ಅದು ಗಂಭೀರವಾಗಿ ಪರಿಗಣಿಸಿದೆ. ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ಪ್ರತಿಯೊಂದು ಕ್ರಮಗಳನ್ನೂ ಸೆಬಿ ನಿಕಟವಾಗಿ ಗಮನಿಸುತ್ತದೆ. ಫೈನಾನ್ಷಿಯಲ್ ಪ್ರಾಡಕ್ಟ್‌ನಲ್ಲಿ ದೊಡ್ಡ ರಿಸ್ಕ್ ಯಾವುದು ಎಂದರೆ ವಂಚನೆ. ಯಾವುದೋ ಕಂಪನಿಯು ಹೆಚ್ಚು ರಿಟರ್ನ್ ನೀಡುವ ಆಮಿಷದೊಂದಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಯಾವತ್ತೋ ಒಂದು ದಿನ ವಂಚಿಸಬಹುದು. ಹೀಗಾಗಿಯೇ ಸೆಬಿಯು ಬಿಗಿಯಾದ ನಿಯಮಗಳನ್ನು ರೂಪಿಸಿದೆ.