Site icon Vistara News

Mutual fund : ಮ್ಯೂಚುವಲ್‌ ಫಂಡ್‌ ಅಂದ್ರೆ ಕೇವಲ ಹೆಚ್ಚಿನ ಆದಾಯ ಮಾತ್ರವಲ್ಲ

Mutual fund

ಮೊದಲ ಸಲ ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಅದರ ಕಡೆಗೆ ಆಕರ್ಷಿತರಾಗಲು ( Mutual fund ) ಮೊದಲ ಕಾರಣ ಯಾವುದು ಎಂದರೆ ಅದು ಹೈ ರಿಟರ್ನ್‌ ಕೊಡುತ್ತದೆ ಎಂಬುದೇ ಆಗಿರುತ್ತದೆ. ಸಾಂಪ್ರದಾಯಿಕ ಆಯ್ಕೆಗಳಿಗೆ ಹೋಲಿಸಿದರೆ ಮ್ಯೂಚುವಲ್‌ ಫಂಡ್‌ ದೀರ್ಘಕಾಲೀನವಾಗಿ ಹೆಚ್ಚು ಆದಾಯ ಕೊಡುವುದೂ ನಿಜ. ಆದರೆ ಬಹಳಷ್ಟು ಹೂಡಿಕೆದಾರರು ಮಾಡುವ ಪ್ರಮಾದ ಏನೆಂದರೆ ಕಿತ್ತಳೆಯನ್ನು ಆ್ಯಪಲ್‌ಗೆ ಹೋಲಿಸುವುದು. ಎಲ್ಲ ಬಗೆಯ ಈಕ್ವಿಟಿ ಫಂಡ್‌ಗಳಿಗೂ ಫಿಕ್ಸೆಡ್‌ ಡೆಪಾಸಿಟ್‌ (ಎಫ್‌ಡಿ) ರಿಟರ್ನ್ ಜತೆಗೆ ಹೋಲಿಕೆ ಮಾಡಬಾರದು. ಆದರೆ ಮ್ಯೂಚುವಲ್‌ ಫಂಡ್‌ ಅನ್ನು ಎಫ್‌ಡಿ ಜತೆಗೆ ಹೋಲಿಸಿದರೂ, ಮ್ಯೂಚುವಲ್‌ ಫಂಡೇ ಆಕರ್ಷಕವೆನ್ನಿಸುತ್ತದೆ. ಇರಲಿ.

ಕೇವಲ ಹೆಚ್ಚಿನ ಆದಾಯ ಮಾತ್ರವಲ್ಲದೆ, ಇತರ ಕಾರಣಗಳಿಂದಲೂ ಮ್ಯೂಚುವಲ್‌ ಫಂಡ್‌ ಉಪಯುಕ್ತ. ಅವುಗಳಲ್ಲಿ ಮುಖ್ಯವಾಗಿ ಲಿಕ್ವಿಡಿಟಿ. ಮ್ಯೂಚುವಲ್‌ ಫಂಡ್‌ ಹಾಗೂ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಅನ್ನು ಹೋಲಿಸಿ. ನಿವೇಶನ, ಮನೆ, ಫ್ಲ್ಯಾಟ್‌ ಅನ್ನು ಮಾರಾಟ ಮಾಡುವುದು ಸುಲಭವಲ್ಲ, ನಾವು ಅಂದುಕೊಂಡಂತೆ ಪ್ರಾಪರ್ಟಿ ಸೇಲ್‌ ಸಾಧ್ಯವಾಗುವುದಿಲ್ಲ. ಆದರೆ ಮ್ಯೂಚುವಲ್‌ ಫಂಡ್‌ನಲ್ಲಿ ಒಂದರಿಂದ ನಾಲ್ಕು ದಿನಗಳಲ್ಲಿ ನಿಮಗೆ ಹಣ ಸಿಗುತ್ತದೆ. ಮ್ಯೂಚುವಲ್‌ ಫಂಡ್‌ ಅನ್ನು ನೀವು ಕೇವಲ ಹೈ ರಿಟರ್ನ್ ಹೂಡಿಕೆಯ ಸಾಧನವಲ್ಲ ಎಂಬ ದೃಷ್ಟಿಯಿಂದ ನೋಡಿದರೆ, ಅದರ ಇತರ ಬೆನಿಫಿಟ್‌ಗಳು ಮನವರಿಕೆಯಾಗುತ್ತದೆ.

ಸಮರ್ಪಕ ವಿಧಾನದಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಇನ್ವೆಸ್ಟ್‌ ಮಾಡಿದರೆ, ಭವಿಷ್ಯದಲ್ಲಿ ಫಿಕ್ಸೆಡ್‌ ಡೆಪಾಸಿಟ್‌ಗಿಂತಲೂ ಹೆಚ್ಚು ಆದಾಯವನ್ನು ಗಳಿಸಬಹುದು. ಗೆಳೆಯರೊಬ್ಬರು ಭಾರತದ ನಗರವೊಂದರ ಹೊರ ವಲಯದಲ್ಲಿ ನಿವೇಶನವೊಂದನ್ನು ಇಪ್ಪತ್ತು ವರ್ಷಗಳ ಹಿಂದೆ ಖರೀದಿಸಿದ್ದರು. ಆಸ್ತಿಯ ಮೇಲಿನ ಹೂಡಿಕೆ ಉತ್ತಮ ಪ್ರತಿಫಲ ಕೊಟ್ಟಿತ್ತು. ನಿವೇಶನದ ದರ ಏರಿತ್ತು. ಈ ನಡುವೆ ಅವರು ಮಾಡುತ್ತಿದ್ದ ವ್ಯಾಪಾರದಲ್ಲಿ ಭಾರಿ ನಷ್ಟ ಸಂಭವಿಸಿತು. ದೊಡ್ಡ ಮೊತ್ತದ ಸಾಲವೂ ಇತ್ತು. ನಿವೇಶನವನ್ನು ಮಾರಾಟ ಮಾಡಿ ಎಲ್ಲ ಸಾಲಗಳನ್ನು ಚುಕ್ತಾ ಮಾಡಬಹುದು ಎಂದು ಅವರು ಭಾವಿಸಿದರು. ಸಾಲ ಮರು ಪಾವತಿಸುವುದಲ್ಲದೆ ಮತ್ತಷ್ಟು ಹಣವೂ ಕೈಯಲ್ಲಿ ಉಳಿಯಬಹುದಿತ್ತು. ಆದರೆ ಸೈಟ್‌ ಮಾರಾಟ ಮಾಡಲು ಮುಂದಾಗಿ ಎರಡು ವರ್ಷ ಕಳೆದರೂ ಡೀಲ್‌ ಮಾತ್ರ ಆಗಿರಲಿಲ್ಲ. ಗೆಳೆಯರು ಬಯಸಿದ ದರದಲ್ಲಿ ಸೈಟ್‌ ಖರೀದಿಸಲು ಯಾರೂ ಮುಂದಾಗಿರಲಿಲ್ಲ. ಆಮೇಲೆ ಮತ್ತೊಂದು ಸಮಸ್ಯೆಯೂ ಎದುರಾಯಿತು. ಖರೀದಿದಾರರು 40% ರಿಂದ 60% ತನಕ ಕಪ್ಪು ಹಣವನ್ನು ನೀಡಲು ಬಯಸುತ್ತಿದ್ದರು. ಆದರೆ ಬ್ಯಾಂಕ್‌ ಸಾಲ ಹೊಂದಿದ್ದ ಗೆಳೆಯ, ವೈಟ್‌ ಮನಿಯ ನ್ನು ಬಯಸಿದ್ದ. ಹೀಗಾಗಿ ಕಪ್ಪು ಹಣವನ್ನು ಬಿಳಿಯಾಗಿಸುವುದು ಹೇಗೆ ಎಂದು ಆಲೋಚಿಸಿದ. ಅದಕ್ಕೆ 5-10% ವೆಚ್ಚವಾಗುತ್ತಿತ್ತು. ಈ ನಡುವೆ ಸ್ಥಳೀಯ ಲ್ಯಾಂಡ್‌ ಮಾಫಿಯಾದ ಮಂದಿ ಮಧ್ಯಪ್ರವೇಶಿಸಿದರು. ಮತ್ತೊಬ್ಬ ಖರೀದಿದಾರ ನಿರ್ಧಾರವನ್ನು ಬದಲಿಸಿ, ಕೊಟ್ಟಿದ್ದ ಮುಂಗಡ ಹಣವನ್ನು ವಾಪಸ್‌ ಕೊಡಲು ಒತ್ತಾಯಿಸಿದ. ಭೂಮಿಯ ವಿರುದ್ಧ ಲಿಟಿಗೇಶನ್‌ ಕೇಸ್‌ ಹಾಕುವುದಾಗಿ ಬೆದರಿಸಿದ್ದ. ಕೊನೆಗೂ ಈ ಎಲ್ಲ ಪಡಿಪಾಟಲುಗಳಿಂದ ಮುಕ್ತರಾಗಿ, ಬಿಳಿ ಹಣದಲ್ಲಿಯೇ ಖರೀದಿಸುವವರೊಬ್ಬರಿಗೆ ಸೈಟ್‌ ಮಾರಾಟವಾಯಿತು.

ಇದನ್ನೂ ಓದಿ: ITR filing online for AY 2023-24 : ವೇತನದಾರರಿಗೆ ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಕಂಪ್ಲೀಟ್‌ ಗೈಡ್

ಈ ಕಥೆಯನ್ನು ಕೇಳಿದರೆ, ರಿಯಲ್‌ ಎಸ್ಟೇಟ್‌ ಹೂಡಿಕೆಯಲ್ಲಿನ ನಾನಾ ರಿಸ್ಕ್‌ಗಳು ಎಷ್ಟು ಎಂಬುದರ ಬಗ್ಗೆ ಅರಿವಾಗುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ನಲ್ಲಿ ನಿಮ್ಮ ಹೂಡಿಕೆಯ ಹಣವನ್ನು ನಿಮ್ಮ ಮೊಬೈಲ್‌ನಲ್ಲಿಯೇ ಪಡೆಯಬಹುದು. ಹೀಗಾಗಿ ಮ್ಯೂಚುವಲ್‌ ಫಂಡ್‌ ಎಂದರೆ ಕೇವಲ ಹೈ ರಿಟರ್ನ್‌ ಮಾತ್ರವಲ್ಲ, ಖರೀದಿಸುವ ವೆಚ್ಚ, ಮಾರಾಟದ ಖರ್ಚು ಕೂಡ ಸೇರುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು.

Exit mobile version