ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ ಮೂಲಕ ಹೂಡಿಕೆ ಮಾಡುವವರು ಮಾರುಕಟ್ಟೆಯ ದೈನಂದಿನ ಏರಿಳಿತಗಳನ್ನು ಲೆಕ್ಕಿಸುವುದಿಲ್ಲ. ಅದರ ಬಗ್ಗೆ ಆಲೋಚನೆ ಮಾಡುವ ಅಗತ್ಯ ಅವರಿಗೆ ಕಂಡು ಬರುವುದಿಲ್ಲ. ( Mutual Fund SIP) ಮ್ಯೂಚುವಲ್ ಫಂಡ್‌ಗಳನ್ನು ವೃತ್ತಿಪರ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಸಾಮಾನ್ಯ ಹೂಡಿಕೆದಾರರಿಗೆ ವ್ಯಕ್ತಿಗತವಾಗಿ ಪ್ರತಿಯೊಂದು ಷೇರು, ಬಾಂಡ್‌ಗಳ ಅಧ್ಯಯನ, ಸಂಶೋಧನೆಯನ್ನು ನಡೆಯಲು ಕಾಲಾವಕಾಶ ಸಿಗದೆ ಇರಬಹುದು. ಫಂಡ್ ಮ್ಯಾನೇಜರ್‌ಗಳು ಫಂಡ್‌ನ ಉದ್ದೇಶಕ್ಕೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಮಾಡುತ್ತಾರೆ.
ಹೂಡಿಕೆದಾರರ ಹಣವನ್ನು ಈಕ್ವಿಟಿ, ಬಾಂಡ್, ಮನಿ ಮಾರ್ಕೆಟ್ ಇನ್‌ಸ್ಟ್ರುಮೆಂಟ್‌ಗಳಲ್ಲಿ ಹೂಡಲಾಗುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ( Systematic Investment Plan) ಮೂಲಕ ಹೂಡಿಕೆ ಮಾಡುವುದು ಜನಪ್ರಿಯ ವಿಧಾನಗಳಲ್ಲೊಂದು. ಸಿಪ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಕೋಟ್ಯಧಿಪತಿಯಾಗಲು ಸಾಧ್ಯವೇ? ಇದೆ ಎನ್ನುತ್ತಾರೆ ತಜ್ಞರು. ಇದು ಹೇಗೆ ಸಾಧ್ಯ? ಇದಕ್ಕೆ ಎಷ್ಟು ವರ್ಷ, ಎಷ್ಟು ಹೂಡಿಕೆ ಮಾಡಬೇಕು ಎನ್ನುತ್ತೀರಾ? ಇಲ್ಲಿದೆ ಕುತೂಹಲಕರ ಮಾಹಿತಿ.
ಈ ರೂಲ್ ಅನ್ನು 15x15x15 ಎಂದು ಕರೆಯುತ್ತಾರೆ. ಈ ನಿಯಮವು ನಿಮ್ಮನ್ನು ಕೋಟ್ಯಧಿಪತಿಯಾಗಿಸಲು ಸಹಕರಿಸುತ್ತದೆ. ಏನಿದರ ಅರ್ಥ ಎಂಬುದನ್ನು ತಿಳಿಯೋಣ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಹೆಚ್ಚು ಅಫರ್ಡಬಲ್ ಹಾಗೂ ಶಿಸ್ತುಬದ್ಧ ಹೂಡಿಕೆಯ ಆಯ್ಕೆ ಸಿಪ್. ಮ್ಯೂಚುವಲ್ ಫಂಡ್ ಸಿಪ್‌ನಲ್ಲಿ ಮಾಸಿಕ 500 ರೂ. ಹೂಡಿಕೆಯಿಂದ ಆರಂಭಿಸಬಹುದು. ಹೆಸರೇ ಸೂಚಿಸುವಂತೆ 15x15x15 ರೂಲ್ ಅಡಿಯಲ್ಲಿ ವ್ಯಕ್ತಿಯೊಬ್ಬ ಪ್ರತಿ ತಿಂಗಳು 15,000 ರೂ.ಗಳಂತೆ 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹಾಗೂ ಆತನಿಗೆ 15% ರಿಟರ್ನ್ ಸಿಕ್ಕಿದರೆ ಸ್ಕೀಮ್ ಮುಕ್ತಾಯದ ವೇಳೆಗೆ ಕೋಟ್ಯಧಿಪತಿಯಾಗುತ್ತಾನೆ. ಇದಕ್ಕಾಗಿ ನೀವು ಮಾಡುವ ಹೂಡಿಕೆ 27 ಲಕ್ಷ ರೂ. ಮಾತ್ರ. ಅದು ನಿಮಗೆ 73 ಲಕ್ಷ ರೂ. ಗಳಿಸಿಕೊಡುತ್ತದೆ.
ಇದು ಹೇಗೆ ಸಾಧ್ಯವಾಗುತ್ತದೆ ಎನ್ನುತ್ತೀರಾ? ಕಂಪೌಂಡಿಂಗ್ ಇಂಟರೆಸ್ಟ್ ಅಥವಾ ಚಕ್ರ ಬಡ್ಡಿಯಿಂದ ಇದು ಸಾಧ್ಯವಾಗುತ್ತದೆ. ನೀವು ಗಳಿಸಿದ ಬಡ್ಡಿಯ ಮೇಲೆ ಬಡ್ಡಿ ಸಿಗುವುದರಿಂದ ಹೂಡಿಕೆಯ ಮೊತ್ತ ಬೆಳೆಯುತ್ತದೆ. ಹೀಗಿದ್ದರೂ, ನೀವು ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಒಟ್ಟು ಹೂಡಿಕೆಯ ಅವಧಿಯಲ್ಲಿ 15% ಆದಾಯ ಸಿಕ್ಕಿರಬೇಕು. ಇಲ್ಲದಿದ್ದರೆ ಆಗುವುದಿಲ್ಲ.
ಹೂಡಿಕೆಯಲ್ಲಿ ರಿಸ್ಕ್ ಡೈವರ್ಸಿಫಿಕೇಶನ್ ಅಗತ್ಯ. ಈ ನಿಟ್ಟಿನಲ್ಲಿ ಮ್ಯೂಚುವಲ್ ಫಂಡ್ ಸಹಕರಿಸುತ್ತದೆ. ಈಕ್ವಿಟಿ, ಡೆಟ್ ಮತ್ತು ಗೋಲ್ಡ್ ಇತ್ಯಾದಿಯಾಗಿ ಹೂಡಿಕೆಯನ್ನು ವೈವಿಧ್ಯಗೊಳಿಸಲು ಮ್ಯೂಚುವಲ್ ಫಂಡ್ ಸಹಾಯಕವಾಗುತ್ತದೆ. ಹೀಗಾಗಿ ಕಷ್ಟದ ಕಾಲದಲ್ಲಿ ಮಾರುಕಟ್ಟೆಯಲ್ಲಿ ನಷ್ಟವಾದರೆ ನಿಮ್ಮ ಎಲ್ಲ ಹೂಡಿಕೆಯೂ ನಷ್ಟಕ್ಕೀಡಾಗುವುದಿಲ್ಲ.
ಎರಡನೆಯದಾಗಿ ಸಣ್ಣ ಮೊತ್ತದಲ್ಲೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಲಿಕ್ವಿಡಿಟಿಯೂ ಹೆಚ್ಚು. ಅಂದರೆ ಬೇಕೆನಿಸಿದಾಗ ಹೂಡಿಕೆ ಹಿಂತೆಗೆದುಕೊಳ್ಳುವುದು ಸುಲಭ. ನೀವು ಹೂಡಿಕೆ ಹಿಂತೆಗೆದುಕೊಂಡ 3-4 ದಿನಗಳೊಳಗೆ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಮಾತ್ರವಲ್ಲದೆ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಉತ್ತಮ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ.