Site icon Vistara News

Mutual fund : ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಗೆ ಲಿಂಕ್‌ ಆಗಿದ್ದರೂ, ಹೂಡಿಕೆಗೆ ಬೆಸ್ಟ್‌ ಏಕೆ?

Mutual fund

ನಾವೇಕೆ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ತಿಳಿದುಕೊಳ್ಳಬೇಕು? ಬ್ಯಾಂಕ್‌ ಫಿಕ್ಸೆಡ್‌ ಡೆಪಾಸಿಟ್‌, ( Mutual fund ) ವಿಮೆ ಪಾಲಿಸಿಗಳು, ರಿಯಲ್‌ ಎಸ್ಟೇಟ್‌, ಚಿನ್ನದ ಮೇಲಿನ ಹೂಡಿಕೆಗೆ ಮತ್ರ ಏಕೆ ಸೀಮಿತರಾಗಬಾರದು? ಏರಿಳಿತಗಳನ್ನು ಒಳಗೊಂಡಿರುವ ಮಾರುಕಟ್ಟೆಗೆ ಲಿಂಕ್‌ ಆಗಿದ್ದರೂ, ಮ್ಯೂಚುವಲ್‌ ಫಂಡ್‌ ಏಕೆ ರಿಟೇಲ್ ಹೂಡಿಕೆಗೆ ಬೆಸ್ಟ್?‌ ಕಳಪೆ ಷೇರುಗಳನ್ನು ನಾವೇಕೆ ನೇರವಾಗಿ ಖರೀದಿಸಬಾರದು? ಈ ಎಲ್ಲ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಒಟ್ಟಾರೆ ಪರಿಸ್ಥಿತಿಯ ಚಿತ್ರಣವನ್ನು ನೋಡಬೇಕಾಗುತ್ತದೆ. ಮ್ಯೂಚುವಲ್‌ ಫಂಡ್‌ ಯಾಕೆ ಮಾರುಕಟ್ಟೆಗೆ ಲಿಂಕ್‌ ಆಗಿದೆ ಹಾಗೂ ರಿಟೇಲ್ ಹೂಡಿಕೆದಾರರಿಗೆ ಸ್ನೇಹಿಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಇಲ್ಲಿ ಈಗ ಹೇಳಲು ಹೊರಟಿರುವುದು ನೇರವಾಗಿ ನಿಮ್ಮ ಪೋರ್ಟ್‌ ಫೋಲಿಯೊ ಆಯ್ಕೆಗೆ ಸಂಬಂಧಿಸಿದ್ದಲ್ಲ. ಆದರೆ ಉತ್ಪನ್ನದ ಕೆಟಗರಿಯ ಮೇಲೆ ನಂಬಿಕೆ ಮೂಡಲು ಅದು ಎಷ್ಟು ಸುರಕ್ಷಿತ ಹಾಗೂ ಅದರ ನಿಯಂತ್ರಣ ವ್ಯವಸ್ಥೆ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಮ್ಯೂಚುವಲ್‌ ಫಂಡ್‌ ವಂಚನೆಗಳ ಸಾಧ್ಯತೆಗಳಿಂದ ಮುಕ್ತವಾಗಿದೆಯೇ ಎಂಬುದು ನಿರ್ಣಾಯಕವಾಗುತ್ತದೆ.

ಷೇರು, ಬಾಂಡ್‌, ಮ್ಯೂಚುವಲ್‌ ಫಂಡ್‌ ಉತ್ಪನ್ನಗಳು ಕಣ್ಣಿಗೆ ಕಾಣುವುದಿಲ್ಲ. ಹೀಗಾಗಿ ಅವುಗಳಲ್ಲಿ ಹೂಡಿಕೆಗೆ ಮುನ್ನ ಅರ್ಥ ಮಾಡಿಕೊಳ್ಳಲು ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳಬೇಕು. ಮೈಂಡ್‌ ಮ್ಯಾಪ್‌ ಮಾಡಿಕೊಳ್ಳಬೇಕಾಗುತ್ತದೆ. ಅನೇಕ ಮಂದಿ ಬ್ಯಾಂಕ್‌ ಡೆಪಾಸಿಟ್‌ಗಿಂತ ಹೆಚ್ಚು ಹಣವನ್ನು ಮ್ಯೂಚುವಲ್‌ ಫಂಡ್‌ಗಳಲ್ಲಿ ಮಾಡಬಹುದು ಎಂಬ ಏಕೈಕ ಭಾವನೆಯೊಂದಿಗೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಹಣ ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಮ್ಯೂಚುವಲ್‌ ಫಂಡ್‌ ಎಂದರೆ ನಿಮ್ಮ ಹೂಡಿಕೆಯನ್ನು ಈಕ್ವಿಟಿ, ಡೆಟ್‌, ಚಿನ್ನ ಇತ್ಯಾದಿ ನಾನಾ ಹೂಡಿಕೆಯ ವರ್ಗಗಳಲ್ಲಿ ಹಾಗೂ ಅವುಗಳ ಕಾಂಬಿನೇಷನ್‌ನಲ್ಲಿ ಇನ್ವೆಸ್ಟ್‌ ಮಾಡುವ ಸಾಧನ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಈ ಮ್ಯೂಚುವಲ್‌ ಫಂಡ್‌ ಸಾಧನವನ್ನು ಯಾರು ಹೇಗೆ ನಿರ್ವಹಿಸುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ. ಒಂದು ವೇಳೆ ಮ್ಯೂಚುವಲ್‌ ಫಂಡ್‌ ನಿರ್ವಾಹಕರು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಬೇರೆಲ್ಲೋ ತಿರುಗಿಸಿದರೆ, ಅನ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿದರೆ? ಹೂಡಿಕೆದಾರರಿಗೆ ವಂಚನೆ ಕಟ್ಟಿಟ್ಟ ಬುತ್ತಿ. ಆದರೆ ಹಾಗೆ ಆಗದಂತೆ ತಡೆಯಲು ಮ್ಯೂಚುವಲ್‌ ಫಂಡ್‌ ಕ್ಷೇತ್ರದಲ್ಲಿ ನಿಯಂತ್ರಕ ವ್ಯವಸ್ಥೆ ಇದೆ. ಅದು ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುತ್ತದೆ.

ಕಳೆದ ಹಲವಾರು ದಶಕಗಳಿಂದಲೂ ಮ್ಯೂಚುವಲ್‌ ಫಂಡ್‌ ಕ್ಷೇತ್ರದಲ್ಲಿ ರಿಟೇಲ್‌ ಹೂಡಿಕೆದಾರರ ಸೇಫ್ಟಿಗೆ ಸಂಬಂಧಿಸಿ ನಿಯಮಾವಳಿಗಳನ್ನು ಹೆಣೆಯಲಾಗಿದೆ. ಸೂಕ್ತ ನಿಯಂತ್ರಕ ವ್ಯವಸ್ಥೆಯನ್ನು (ಸೆಬಿ) ಅಳವಡಿಸಲಾಗಿದೆ. ಇದರಿಂದ ಹಣಕಾಸು, ಕಾನೂನು, ಇಕನಾಮಿಕ್ಸ್‌ ಬಗ್ಗೆ ಮಾಹಿತಿ ಇಲ್ಲದವರಿಗೂ ಸುರಕ್ಷಿತವಾಗಿ ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡಲು ಹಾದಿ ಸುಗಮವಾಗಿದೆ. ಈ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಅನೇಕ ಮಂದಿ ವಂಚಕ ಹೂಡಿಕೆಯ ಯೋಜನೆಗಳಲ್ಲಿ ಹೂಡಿಕೆ ಕೈ ಸುಟ್ಟುಕೊಂಡಿದ್ದರು. ಹೈ ರಿಟರ್ನ್‌ ಆಮಿಷ ಒಡ್ಡಿ ವಂಚಕರು ಸಾವಿರಾರು ಮಂದಿಯನ್ನು ವಂಚಿಸಿದ ಹಲವಾರು ಉದಾಹರಣೆಗಳು ಇವೆ.

ಇದನ್ನೂ ಓದಿ: Ram Mandir: ರಾಮಮಂದಿರ ಆತ್ಮನಿರ್ಭರತೆಯ ಸಂಕೇತ;‌ ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

1998ರ ಹೋಫ್ಲಾಂಡ್‌ ಇನ್ವೆಸ್ಟ್‌ಮೆಂಟ್‌ ಹಗರಣ, ಸಿಆರ್‌ಬಿ, ಶಾರದಾ ಚಿಟ್‌ ಫಂಡ್ ಹಗರಣಗಳ ಬಗ್ಗೆ ನೀವು ತಿಳಿದಿರಬಹುದು. ಷೇರು ಮಾರುಕಟ್ಟೆಯಲ್ಲಿ 1992ರಲ್ಲಿ ಬೆಳಕಿಗೆ ಬಂದ ಹರ್ಷದ್‌ ಮೆಹ್ತಾ ಹಗರಣದ ಬಗ್ಗೆ ಕೇಳಿರಬಹುದು. ಇವೆಲ್ಲವೂ ಸಾವಿರಾರು ರಿಟೇಲ್‌ ಹೂಡಿಕೆದಾರರು ಕಷ್ಟಪಟ್ಟು ಉಳಿಸಿದ್ದ ಹಣವನ್ನು ನುಂಗಿ ಹಾಕಿದ ವಂಚನೆಯ ಹಗರಣಗಳಾಗಿವೆ. ಇಂಥದ್ದು ನಡೆಯದಂತೆ ಕಡಿವಾಣ ಹಾಕಲು ಸೂಕ್ತ ನಿಯಂತ್ರಕ ವ್ಯವಸ್ಥೆ ಬೇಕೇ ಬೇಕು.

Exit mobile version