Site icon Vistara News

Mutual funds : ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ಮುನ್ನ ಉದ್ದೇಶ ಮರೆಯದಿರಿ!

mutual fund

ಮ್ಯೂಚುವಲ್‌ ಫಂಡ್‌ ಎಂದರೆ ಸಾಮೂಹಿಕ ಹೂಡಿಕೆಯ ಸಾಧನ. ಹಲವಾರು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳ ನೆರವಿನಿಂದ ಈಕ್ವಿಟಿ, ಬಾಂಡ್‌, ಸರ್ಕಾರಿ ಸೆಕ್ಯುರಿಟೀಸ್‌, ಮನಿ ಮಾರ್ಕೆಟ್‌ ಸಾಧನಗಳಲ್ಲಿ ಹೂಡಿಕೆ ಮಾಡುವುದು.‌ ಪ್ರತಿ ಮ್ಯೂಚುವಲ್‌ ಫಂಡ್‌ ಯೋಜನೆಗೂ ಅದರದ್ದೇ ಆದ ಉದ್ದೇಶ ಇರುತ್ತದೆ. ಫಂಡ್‌ ನಿರ್ವಹಣೆಗೆ ತಗಲುವ ವೆಚ್ಚವನ್ನು ಕಳೆದು ಉಳಿಯುವ ಮೌಲ್ಯ ನೆಟ್‌ ಅಸೆಟ್‌ ವಾಲ್ಯೂ (Net Asset Value-NAV) ಎನ್ನುತ್ತಾರೆ. ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ತಮ್ಮ ಹಣವನ್ನು ಬೆಳೆಸಲು, ಸಿರಿವಂತಿಕೆ ಗಳಿಸಲು ಮ್ಯೂಚುವಲ್‌ ಫಂಡ್‌ ಹಲವು ರೀತಿಯಲ್ಲಿ ಸಹಕಾರಿ ಮತ್ತು ಲಾಭದಾಯಕವಾಗುತ್ತದೆ. ಅದರ ಬಗ್ಗೆ ವಿವರಗಳನ್ನು ನೋಡೋಣ.

ಭಾರತದಲ್ಲಿ ಮ್ಯೂಚುವಲ್‌ ಫಂಡ್‌ಗಳಿಗೆ ಇಂಡಿಯನ್‌ ಟ್ರಸ್ಟ್‌ ಕಾಯಿದೆ 1882 ಅಡಿಯಲ್ಲಿ ಅವಕಾಶ ನೀಡಲಾಗಿದೆ. ಸೆಬಿ ಇವುಗಳನ್ನು ನಿಯಂತ್ರಿಸುತ್ತದೆ. ಸೆಬಿಯ ನಿಯಮಾನುಸಾರ ಮ್ಯೂಚುವಲ್‌ ಫಂಡ್‌ಗಳು ಶುಲ್ಕಗಳನ್ನು ನಿಗದಿಪಡಿಸಬೇಕಾಗುತ್ತದೆ.

ಮ್ಯೂಚುವಲ್‌ ಫಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಮಾರುಕಟ್ಟೆಗಳಲ್ಲಿ ತೀವ್ರ ಏರಿಕೆ ಅಥವಾ ಇಳಿಕೆ ಆದಾಗ ಜನ ಮ್ಯೂಚುವಲ್‌ ಫಂಡ್‌ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಹೋಗಬಾರದು. ಅಂಥ ಉದ್ವೇಗಕ್ಕೆ ಬಲಿಯಾಗಬಾರದು. ಬದಲಿಗೆ ತಾಳ್ಮೆಯಿಂದ ಕನಿಷ್ಠ 18-24 ತಿಂಗಳುಗಳ ಕಾಲ ಕಾಯಬೇಕು. ಆಗ ಫಂಡ್‌ ಪೋರ್ಟ್‌ ಫೋಲಿಯೊದಲ್ಲಿ ರಿಟರ್ನ್‌ ಕೊಡುತ್ತದೆ.

ಮ್ಯೂಚುವಲ್‌ ಫಂಡ್‌ ಯಾರಿಗೆ ಸೂಕ್ತ? ಸ್ಟಾಕ್‌ ಮಾರ್ಕೆಟ್‌ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದವರು ಹಾಗೂ ತಿಳಿಯಲು ಸಮಯದ ಅಭಾವ ಇರುವವರು ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಬಹುದು. ಸಣ್ಣ ಮೊತ್ತದಲ್ಲಿ ಹೂಡಿಕೆ ಆರಂಭಿಸಲು ಬಯಸುವವರು ಮ್ಯೂಚುವಲ್‌ ಫಂಡ್‌ನಲ್ಲಿ 100 ರೂ.ಗಳ ಸಿಪ್‌ ಮೂಲಕವೂ ಹೂಡಿಕೆ ಶುರು ಮಾಡಬಹುದು. ಕಂಪೌಂಡಿಂಗ್‌ ಲಾಭ ಪಡೆಯಲು ಮ್ಯೂಚುವಲ್ ಫಂಡ್‌ ಉತ್ತಮ ಆಯ್ಕೆ.

ಮ್ಯೂಚುವಲ್‌ ಫಂಡ್‌ಗಳಲ್ಲಿ ಯಾಕೆ ಹೂಡಿಕೆ ಮಾಡಬೇಕು?

ಪ್ರತಿಯೊಬ್ಬರಿಗೂ ಹೂಡಿಕೆಯ ಗುರಿಗಳು ಭಿನ್ನವಾಗಿರುತ್ತವೆ. ಕೆಲವರಿಗೆ ಭವಿಷ್ಯದಲ್ಲಿ ಶ್ರೀಮಂತರಾಗಿ ಹೇರಳ ದುಡ್ಡು ಮಾಡುವ ಆಸೆ. ಮತ್ತೆ ಕೆಲವರಿಗೆ ನಿವೃತ್ತಿಯ ಬದುಕಿಗೆ ಹಣಕಾಸು ಅನುಕೂಲ ಆಗಬೇಕು ಎಂಬ ಬಯಕೆ. ಮತ್ತೆ ಹಲವರಿಗೆ ಮಕ್ಕಳ ಶಿಕ್ಷಣ, ಮದುವೆ, ವಿದೇಶ ಪ್ರವಾಸಕಕೆ ದುಡ್ಡು ಬೇಕು. ಅನೇಕ ಮಂದಿಗೆ ತಲೆಯ ಮೇಲೊಂದು ಸ್ವಂತ ಸೂರು ಮಾಡಲು ಕಾಸು ಬೇಕು. ಓಡಾಡಲು ಹೊಸ ಕಾರು ಬೇಕು. ಈ ಎಲ್ಲ ಗುರಿಗಳನ್ನು ಈಡೇರಿಸಲು ಮ್ಯೂಚುವಲ್‌ ಫಂಡ್‌ ಹೂಡಿಕೆ ಸಹಕರಿಸುತ್ತದೆ. ಮ್ಯೂಚುವಲ್‌ ಫಂಡ್‌ ಮೂಲಕ ನೀವು ಹಲವಾರು ಸಅಧನಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ ಷೇರುಗಳು, ಕಾರ್ಪೊರೇಟ್‌ ಬಾಂಡ್‌, ಸರ್ಕಾರಿ ಸೆಕ್ಯುರಿಟೀಸ್‌, ಮನಿ ಮಾರ್ಕೆಟ್‌ ಸಾಧನಗಳಲ್ಲಿ ಹೂಡಿಕೆ ಮಾಡಬಹುದು.

ಮ್ಯೂಚುವಲ್‌ ಫಂಡ್‌ ವಿಧಗಳು:

ಮ್ಯೂಚುವಲ್‌ ಫಂಡ್‌ಗಳಲ್ಲಿ ಹಲವು ವಿಧಗಳಿವೆ. ಹೂಡಿಕೆದಾರರ ವೈವಿಧ್ಯಮಯ ಗುರಿಗಳನ್ನು ಈಡೇರಿಸಲು ಇದು ಸಹಾಯಕ. ಸಂಘಟನಾತ್ಮಕ ಸ್ವರೂಪದಲ್ಲಿ ಓಪನ್‌ ಎಂಡೆಡ್‌, ಕ್ಲೋಸ್‌ ಎಂಡೆಡ್‌, ಇಂಟರ್‌ವಲ್.‌ ಪೋರ್ಟ್‌ ಫೋಲಿಯೊ ನಿರ್ವಹಣೆ ದೃಷ್ಟಿಯಿಂದ ಆಕ್ಟಿವ್‌ಲಿ ಅಥವಾ ಪ್ಯಾಸಿವ್ಲಿ, ಹೂಡಿಕೆಯ ಉದ್ದೇಶದ ದೃಷ್ಟಿಯಿಂದ ಗ್ರೋತ್‌, ಇನ್‌ ಕಮ್‌, ಲಿಕ್ವಿಡಿಟಿ ಮ್ಯೂಚುವಲ್‌ ಫಂಡ್‌ ಇದೆ. ಪೋರ್ಟ್‌ಫೋಲಿಯೊ ದೃಷ್ಟಿಯಿಂದ ಈಕ್ವಿಟಿ, ಡೆಟ್‌, ಹೈಬ್ರಿಡ್‌, ಮಲ್ಟಿ ಅಸೆಟ್‌ ಮ್ಯೂಚುವಲ್‌ ಫಂಡ್‌ ಇದೆ.

ಥೀಮ್‌ ಆಧಾರದಲ್ಲಿ ಟ್ಯಾಕ್ಸ್‌ ಸೇವಿಂಗ್‌, ರಿಟೈರ್‌ ಮೆಂಟ್‌ ಬೆನಿಫಿಟ್‌, ಚೈಲ್ಡ್‌ ವೆಲ್‌ ಫೇರ್‌ ಮ್ಯೂಚುವಲ್‌ ಫಂಡ್‌ ಇದೆ. ಎಕ್ಸ್‌ ಚೇಂಜ್‌ ಟ್ರೇಡೆಡ್‌ ಫಂಡ್‌ ಇದೆ. ಓವರ್‌ ಸೀಸ್‌ ಫಂಡ್‌ ಇದೆ.

ಮ್ಯೂಚುವಲ್‌ ಫಂಡ್‌ಗಳ ಸಂಘಟನಾತ್ಮಕ ವರ್ಗೀಕರಣ:

ಓಪನ್‌ ಎಂಡೆಡ್‌ ಸ್ಕೀಮ್ಸ್:‌ ಓಪನ್‌ ಎಂಡೆಡ್‌ ಸ್ಕೀಮ್ಸ್‌ ಎಂದರೆ ಸಬ್‌ ಸ್ಕ್ರಿಪ್ಷನ್‌ ಮತ್ತು ರಿಪರ್ಚೇಸ್‌ಗೆ ಮುಕ್ತವಾಗಿರುವ ಹಾಗೂ ಹಾಲಿ ಎನ್‌ಎವಿಯಲ್ಲಿ ಎಲ್ಲ ದಿನಗಳಲ್ಲಿ ಮುಂದುವರಿಯುವ ಮ್ಯೂಚುವಲ್‌ ಫಂಡ್‌ ಸ್ಕೀಮ್‌ ಇದಾಗಿದೆ.

ಕ್ಲೋಸ್‌ ಎಂಡೆಡ್‌ ಸ್ಕೀಮ್ಸ್:‌ ಇದು ನಿಶ್ಚಿತ ಮೆಚ್ಯೂರಿಟಿ ದಿನಾಂಕವನ್ನು ಹೊಂದಿರುತ್ತದೆ. ಇನಿಶಿಯಲ್‌ ಆಫರ್‌ ದಿನ ಯುನಿಟ್‌ಗಳನ್ನು ಖರೀದಿಸಬಹುದು. ಮೆಚ್ಯೂರಿಟಿಯ ದಿನ ಮಾತ್ರ ರಿಡೀಮ್‌ ಮಾಡಬಹುದು. ಸ್ಟಾಕ್ಸ್‌ ಎಕ್ಸ್‌ಚೇಂಜ್‌ಗಳಲ್ಲಿ ಇದರ ಮಾರಾಟ ಸಾಧ್ಯ.

ಇಂಟರ್ವಲ್‌ ಸ್ಕೀಮ್ಸ್:‌ ನಿರ್ದಿಷ್ಟ ಮಧ್ಯಂತರ ಅವಧಿಯಲ್ಲಿ ಖರೀದಿ ಹಾಗೂ ಮಾರಾಟಕ್ಕೆ ಇಂಟರ್ವಲ್‌ ಸ್ಕೀಮ್‌ಗಳಲ್ಲಿ ಅವಕಾಶ ಇರುತ್ತದೆ. ಎರಡು ಟ್ರಾನ್ಸಕ್ಷನ್‌ ನಡುವೆ ಕನಿಷ್ಠ 2 ದಿನಗಳು ಮತ್ತು ಗರಿಷ್ಠ 15 ದಿನಗಳ ಅಂತರ ಇರುತ್ತದೆ. ಇಂಟರ್ವಲ್‌ ಸ್ಕೀಮ್ಸ್‌ ಕಡ್ಡಾಯವಾಗಿ ಸ್ಟಾಕ್‌ ಎಕ್ಸ್‌ಚೇಂಜ್‌ಗಳಲ್ಲಿ ನೋಂದಣಿಯಾಗಿರಬೇಕು.

ಆಕ್ಟಿವ್‌ ಫಂಡ್ಸ್‌ : ಆಕ್ಟಿವ್‌ ಫಂಡ್‌ನಲ್ಲಿ ಫಂಡ್‌ ಮ್ಯಾನೇಜರ್‌, ಸೆಕ್ಯುರಿಟೀಸ್‌, ಷೇರು ಖರೀದಿ-ಮಾರಾಟದ ನಿರ್ಧಾರ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿರುತ್ತಾರೆ. ಕಾರ್ಯತಂತ್ರಕ್ಕೆ ಅನುಗುಣವಾಗಿ ಷೇರುಗಳ ಆಯ್ಕೆ ನಡೆಯುತ್ತದೆ.

ಪಾಸಿವ್‌ ಫಂಡ್ಸ್:‌ ‌ ಪಾಸಿವ್‌ ಫಣಡ್ಸ್‌ ನಿರ್ದಿಷ್ಟ ಇಂಡೆಕ್ಸ್‌ ಅಥವಾ ಬೆಂಚ್‌ ಮಾರ್ಕ್‌ ಅನ್ನು ಬಿಂಬಿಸುತ್ತದೆ. ಉದಾಹರಣೆಗೆ ಇಂಡೆಕ್ಸ್‌ ಫಂಡ್ಸ್‌, ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ಸ್‌

ಹೂಡಿಕೆಯ ಉದ್ದೇಶಕ್ಕಾಗಿ ವರ್ಗೀಕರಣ:

ಮ್ಯೂಚುವಲ್‌ ಫಂಡ್‌ಗಳಿಗೆ ಭಿನ್ನ ಉದ್ದೇಶಗಳು ಇರುತ್ತಿವೆ. ಉದಾಹರಣೆಗೆ ಕ್ಯಾಪಿಟಲ್‌ ಅಪ್ರಿಸಿಯೇಶನ್‌ (ಗ್ರೋತ್)‌, ಬಂಡವಾಳ ರಕ್ಷಣೆ, ನಿಯಮಿತ ಆದಾಯ, ಲಿಕ್ವಿಡಿಟಿ, ಟ್ಯಾಕ್ಸ್-ಸೇವಿಂಗ್.‌ ಹೂಡಿಕೆದಾರರ ಅಗತ್ಯಾನುಸಾರ ಗ್ರೋತ್‌ ಮತ್ತು ಡಿವಿಡೆಂಡ್‌ ಆಯ್ಕೆಯನ್ನು ನೀಡುತ್ತವೆ.

ಗ್ರೋತ್‌ ಫಂಡ್ಸ್:‌ ಗ್ರೋತ್‌ ಫಂಡ್ಸ್‌ ಬಂಡವಾಳ ವೃದ್ಧಿಗೆ ಸಹಕರಿಸುತ್ತವೆ. ಮೂಲತಃ ಈಕ್ವಿಟಿ ಇತ್ಯಾದಿ ಆಸ್ತಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇವುಗಳಲ್ಲಿ ಮಧ್ಯಂತರ ಮತ್ತು ದೀರ್ಘಾವಧಿಗೆ ಹೂಡಿಕೆ ಸೂಕ್ತ.

ಇನ್‌ಕಮ್‌ ಫಂಡ್ಸ್:‌ ಇನ್‌ಕಮ್‌ ಫಂಡ್ಸ್‌ ಹೂಡಿಕೆದಾರರಿಗೆ ನಿಯಮಿತ ಆದಾಯ ನೀಡುತ್ತದೆ. ಇನ್‌ ಕಮ್‌ ಫಂಡ್‌ಗಳು ಕಾರ್ಪೊರೇಟ್‌ ಬಾಂಡ್‌, ಡಿಬೆಂಚರ್ಸ್‌, ಸರ್ಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡುತ್ತವೆ.

ಮನಿ ಮಾರ್ಕೆಟ್‌ ಮ್ಯೂಚುವಲ್‌ ಫಂಡ್ಸ್:‌ ಲಿಕ್ವಿಡ್‌ ಸ್ಕೀಮ್‌, ಓವರ್‌ನೈಟ್‌ ಫಂಡ್ಸ್‌ ಮತ್ತು ಮನಿ ಮಾರ್ಕೆಟ್‌ ಫಂಡ್‌ ಹೂಡಿಕೆದಾರರಿಗೆ ಲಿಕ್ವಿಡಿಟಿ ಮತ್ತು ರಕ್ಷಣೆ ನೀಡುತ್ತದೆ.

ಇನ್ವೆಸ್ಟ್‌ಮೆಂಟ್‌ ಆಧರಿತ ವರ್ಗೀಕರಣ: ಮ್ಯೂಚುವಲ್‌ ಫಂಡ್‌ಗಳನ್ನು ಅವುಗಳ ಹೂಡಿಕೆಯ ಪೋರ್ಟ್‌ಫೊಲಿಯೊ ಆಧರಿಸಿ ವರ್ಗೀಕರಿಸಬಹುದು. ಮೊದಲನೆಯದಾಗಿ ಈಕ್ವಿಟಿ, ಡೆಟ್‌, ಮನಿ ಮಾರ್ಕೆಟ್‌ ಇನ್‌ಸ್ಟ್ರುಮೆಂಟ್‌ ಅಥವಾ ಚಿನ್ನ ಆಧರಿಸಿದ ವರ್ಗೀಕರಣ.

Exit mobile version