Site icon Vistara News

Mutual Funds: ಪಿಎಸ್‌ಯು ಷೇರುಗಳಲ್ಲಿ 90,000 ಕೋಟಿ ರೂ. ನಷ್ಟ ಅನುಭವಿಸಿದ ಮ್ಯೂಚುವಲ್ ಫಂಡ್‌

Mutual Funds

Mutual Funds

ಮುಂಬೈ: ಎಲ್ಲರ ನಿರೀಕ್ಷೆ ತಲೆ ಕೆಳಗಾಗಿಸಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ. ಇದರಿಂದ ಮ್ಯೂಚುವಲ್ ಫಂಡ್‌ (Mutual Funds) ಕಳೆದ ಎರಡು ಸೆಷನ್‌ಗಳಲ್ಲಿ ಸಾರ್ವಜನಿಕ ವಲಯದ ಸಂಸ್ಥೆ (Public Sector Undertaking)ಗಳ ಮಾರುಕಟ್ಟೆಯಲ್ಲಿ 90,000 ಕೋಟಿ ರೂ.ಗಳನ್ನು ಕಳೆದುಕೊಂಡಿದೆ.

ಜೂನ್ 3ರ ಹೊತ್ತಿಗೆ ಮ್ಯೂಚುವಲ್ ಫಂಡ್‌ 84 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ 5.71 ಲಕ್ಷ ಕೋಟಿ ರೂ.ಗಳ ಷೇರುಗಳನ್ನು ಹೊಂದಿತ್ತು. ಅನಿರೀಕ್ಷಿತ ಚುನಾವಣಾ ಫಲಿತಾಂಶದ ನಂತರ ಈ ಮೌಲ್ಯವು 4.83 ಲಕ್ಷ ಕೋಟಿ ರೂ.ಗೆ ಇಳಿದಿದೆ.

ಜೂನ್ 4ರ ವೇಳೆಗೆ ಮ್ಯೂಚುವಲ್ ಫಂಡ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಅತಿದೊಡ್ಡ ಪಾಲನ್ನು ಹೊಂದಿದ್ದು, ಎನ್‌ಟಿಪಿಸಿ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಂತರ ಸ್ಥಾನದಲ್ಲಿವೆ. ಎಸ್‌ಬಿಐ ಷೇರುಗಳಲ್ಲಿ ಮ್ಯೂಚುವಲ್ ಫಂಡ್‌ ಮೌಲ್ಯ 77,400 ಕೋಟಿ ರೂ.ಗೆ ಇಳಿದಿದೆ. ಜೂನ್ 3ರಂದು ಇದರ ಮೌಲ್ಯ 90,440 ಕೋಟಿ ರೂ. ಆಗಿತ್ತು. ಎನ್‌ಟಿಪಿಸಿಯಲ್ಲಿ ಮ್ಯೂಚುವಲ್ ಫಂಡ್‌ ಮೌಲ್ಯ 58,157 ಕೋಟಿ ರೂ.ಗಳಾಗಿದ್ದು, ಇದರ ಹಿಂದಿನ ಮೌಲ್ಯ 68,780 ಕೋಟಿ ರೂ. ಆಗಿತ್ತು. ಹೀಗಾಗಿ 10,625 ಕೋಟಿ ರೂ. ಇಳಿಕೆಯಾಗಿದೆ.

ಪವರ್ ಗ್ರಿಡ್ ಕಾರ್ಪೊರೇಷನ್ (31,136 ಕೋಟಿ ರೂ.), ಕೋಲ್ ಇಂಡಿಯಾ (29,420 ಕೋಟಿ ರೂ.), ಪವರ್ ಫೈನಾನ್ಸ್ ಕಾರ್ಪೊರೇಷನ್ (22,430 ಕೋಟಿ ರೂ.), ಆರ್‌ಇಸಿ (18,390 ಕೋಟಿ ರೂ.) ಮತ್ತು ಒಎನ್‌ಜಿಸಿ (18,955 ಕೋಟಿ ರೂ.) ಗಮನಾರ್ಹ ಷೇರು ಹೊಂದಿರುವ ಇತರ ಪ್ರಮುಖ ಕಂಪನಿಗಳು. ಈ ಸಂಸ್ಥೆಗಳಲ್ಲಿನ ಮ್ಯೂಚುವಲ್ ಫಂಡ್ ಮೌಲ್ಯವು ಕ್ರಮವಾಗಿ 8,275 ಕೋಟಿ ರೂ., 4,400 ಕೋಟಿ ರೂ., 4,665 ಕೋಟಿ ರೂ., 4,500 ಕೋಟಿ ರೂ. ಮತ್ತು 5,490 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ.

ಒಟ್ಟು ಮಾರುಕಟ್ಟೆ ಕ್ಯಾಪ್‌ನಲ್ಲಿ ಪಿಎಸ್‌ಯು ಷೇರುಗಳ ಪಾಲು ಜೂನ್ 5ರ ವೇಳೆಗೆ ಆರು ತಿಂಗಳ ಕನಿಷ್ಠ ಶೇ. 13.1ಕ್ಕೆ ಇಳಿದಿದೆ. ಭಾರತೀಯ ಲಿಸ್ಟೆಡ್ ಪಿಎಸ್‌ಯುಗಳು ಎರಡು ಸೆಷನ್‌ಗಳಲ್ಲಿ ಒಟ್ಟಾರೆಯಾಗಿ ಸುಮಾರು 10 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದು, ಒಟ್ಟು ಮಾರುಕಟ್ಟೆ ಬಂಡವಾಳೀಕರಣ 55 ಲಕ್ಷ ಕೋಟಿ ರೂ.ಗೆ ತಲುಪಿದೆ. ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಬಹುಮತ ಪಡೆಯಲು ವಿಫಲವಾದ ನಂತರ ಎರಡು ಸೆಷನ್‌ಗಳಲ್ಲಿ ಈ ಕುಸಿತ ಕಂಡು ಬಂದಿದೆ.

ಮತ್ತೆ ಪುಟಿದೆದ್ದ ಷೇರು ಮಾರುಕಟ್ಟೆ!

ಇಂದು ನರೇಂದ್ರ ಮೋದಿ (PM Narendra Modi) ಮತ್ತೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 1.95 ರಷ್ಟು ಏರಿಕೆಯಾಗಿ 73,486.14ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 1.91ರಷ್ಟು ಏರಿಕೆಯಾಗಿ 22,303.40 ಮಟ್ಟದಲ್ಲಿದೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಪವರ್ ಫೈನಾನ್ಸ್ ಕಾರ್ಪೊರೇಷನ್ ಷೇರುಗಳು ಭಾರೀ ಕುಸಿತ (Stock Market Crash) ಕಂಡಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಪಕ್ಕಾ ಆಗುತ್ತಿದ್ದಂತೆ ನಿಫ್ಟಿಯಲ್ಲಿ ONGC, M&M, BPCL, HUL, ಟಾಟಾ ಸ್ಟೀಲ್ ಪ್ರಮುಖ ಲಾಭ ಗಳಿಸಿವೆ.

ಇದನ್ನೂ ಓದಿ: Stock Market Crash: ಬಿಜೆಪಿ ಹಿನ್ನಡೆಯಿಂದ ಹೂಡಿಕೆದಾರರಿಗೆ 40 ಲಕ್ಷ ಕೋಟಿ ನಷ್ಟ! ಯಾವ ಷೇರುಗಳು ಹೆಚ್ಚು ಕುಸಿತ?

Exit mobile version