Site icon Vistara News

Mutual funds : ಏನಿದು ಮ್ಯೂಚುವಲ್‌ ಫಂಡ್?‌ ಹೇಗೆ ಕಾರ್ಯನಿರ್ವಹಿಸುತ್ತದೆ?

mutual fund

ಮ್ಯೂಚುವಲ್‌ ಫಂಡ್‌ ಎಂದರೆ ಹಲವಾರು ಜನರು ಒಟ್ಟಾಗಿ ಮಾಡುವ ಹಣದ ಹೂಡಿಕೆ. ಈ ಹೂಡಿಕೆಯನ್ನು ವೃತ್ತಿಪರ ಫಂಡ್‌ ಮ್ಯಾನೇಜರ್‌ಗಳು ಇದನ್ನು ನಿರ್ವಹಣೆ ಮಾಡುತ್ತಾರೆ. (Mutual funds) ಈ ರೀತಿ ಸಂಗ್ರಹಿಸುವ ಹಣವನ್ನು ಷೇರು, ಬಾಂಡ್‌, ಹಣಕಾಸು ಮಾರುಕಟ್ಟೆಯ ಸಾಧನಗಳು, ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ‌ ಅದರಲ್ಲಿ ಬರುವ ಆದಾಯ ಹೂಡಿಕೆದಾರರಿಗೆ ಸಿಗುತ್ತದೆ.

ಈ ಸಂಘಟಿತ ಹೂಡಿಕೆಯಲ್ಲಿ ಫಂಡ್‌ ನಿರ್ವಹಣೆಗೆ ತಗಲುವ ಖರ್ಚನ್ನು ಮತ್ತು ತೆರಿಗೆಯನ್ನು ಕಳೆದು ಉಳಿಯುವ ಮೊತ್ತವನ್ನು ಮ್ಯೂಚುವಲ್‌ ಫಂಡ್‌ನ ನಿವ್ವಳ ಆಸ್ತಿ ಮೌಲ್ಯದ ಲೆಕ್ಕಾಚಾರದಲ್ಲಿ (Net asset value) ಹೂಡಿಕೆದಾರರಿಗೆ ಅವರ ಹೂಡಿಕೆಯ ಪ್ರಮಾಣಾನುಸಾರ ವಿತರಿಸಲಾಗುತ್ತದೆ. ಪ್ರತಿ ಷೇರಿನ ದರಕ್ಕೆ ಷೇರು ದರ ಹೇಗೆ ಇರುವುದೋ, ಅದೇ ರೀತಿ ಪ್ರತಿ ಮ್ಯೂಚುವಲ್‌ ಫಂಡ್‌ನ ದರವನ್ನು ಎನ್‌ಎವಿ ಎನ್ನುತ್ತಾರೆ. ಮ್ಯೂಚುವಲ್‌ ಫಂಡ್‌ನ ಬೆಲೆಯನ್ನು ಇದು ಬಿಂಬಿಸುತ್ತದೆ.

ಮ್ಯೂಚುವಲ್‌ ಫಂಡ್‌ ಯುನಿಟ್‌ಗಳ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ. ಉದಾಹರಣೆಗೆ 12 ಚಾಕೊಲೇಟ್‌ಗಳ ಒಂದು ಬಾಕ್ಸ್‌ ಇದೆ ಎಂದಿಟ್ಟುಕೊಳ್ಳಿ. ಅದರ ದರ 40 ರೂ. 4 ಸ್ನೇಹಿತರು ಅದನ್ನು ಖರೀದಿಸಲು ಬಯಸಿದರು. ಆದರೆ ಪ್ರತಿಯೊಬ್ಬರ ಬಳಿ ತಲಾ 10 ರೂ. ಇದೆ. ಅಂಗಡಿಯ ಮಾಲೀಕ ಬಾಕ್ಸ್‌ ಅನ್ನು ಮಾತ್ರ ಮಾರಬಲ್ಲ. ಆಗ ಸ್ನೇಹಿತರು ತಲಾ 10 ರೂ.ಗಳನ್ನು ಸೇರಿಸಿ 12 ಚಾಕೊಲೇಟ್‌ಗಳನ್ನು ಖರೀದಿಸುತ್ತಾರೆ. ಈಗ ಸ್ನೇಹಿತರು ತಲಾ 3 ಚಾಕೊಲೇಟ್‌ಗಳನ್ನು ಪಡೆಯುತ್ತಾರೆ. ಮ್ಯೂಚುವಲ್‌ ಫಂಡ್‌ ಯುನಿಟ್‌ಗಳೂ ಇದೇ ರೀತಿ ನಡೆಯುತ್ತದೆ. ಹಾಗಾದರೆ ಒಂದು ಯುನಿಟ್‌ನ ವೆಚ್ಚವನ್ನು ಅಳೆಯುವುದು ಹೇಗೆ? ಒಟ್ಟು ಮೊತ್ತವನ್ನು ಚಾಕೊಲೇಟ್‌ಗಳ ಸಂಖ್ಯೆಯಿಂದ ಭಾಗಿಸಿದರೆ ಪ್ರತಿ ಯುನಿಟ್‌ನ ವೆಚ್ಚ ಸಿಗುತ್ತದೆ. 40/12=3.33.

ಈಗ ಮ್ಯೂಚುವಲ್‌ ಫಂಡ್‌ನ ನಿವ್ವಳ ಆಸ್ತಿ ಮೌಲ್ಯ ಅಥವಾ ನೆಟ್‌ ಅಸೆಟ್‌ ಮೌಲ್ಯ (Net Asset Value) ಅನ್ನು ಅರ್ಥ ಮಾಡಿಕೊಳ್ಳೋಣ. ಒಂದು ಮ್ಯೂಚುವಲ್‌ ಫಂಡ್‌ ಯುನಿಟ್‌ಗೆ ಒಂದು ನೆಟ್‌ ಅಸೆಟ್‌ ವಾಲ್ಯೂ ಇರುತ್ತದೆ. ಎನ್‌ಎವಿಯು ಮ್ಯೂಚುವಲ್‌ ಫಂಡ್‌ ಒಳಗೊಂಡಿರುವ ಷೇರುಗಳು, ಬಾಂಡ್‌ಗಳು ಹಾಗೂ ಸೆಕ್ಯುರಿಟೀಸ್‌ಗಳ ನಿರ್ದಿಷ್ಟ ದಿನದ ಒಟ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ. ನಾವು ಯಾವುದಾದರೂ ಷೇರನ್ನು ಖರೀದಿಸುವುದಿದ್ದರೆ ಅದರ ಬೆಲೆಯನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಯಾವುದಾದರೂ ಒಂದು ಷೇರಿನ ಬೆಲೆ 100 ರೂ. ಇದ್ದರೆ, 1 ಷೇರು ಖರೀದಿಸಲು 100 ರೂ. ಕೊಡಬೇಕಾಗುತ್ತದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರ ಹಣವನ್ನು ಕಲೆಕ್ಟ್‌ ಮಾಡಿ ಷೇರು, ಡಿಬೆಂಚರ್‌, ಬೇರೆ ಬೇರೆ ಷೇರುಗಳ ಮೇಲೆ ಹೂಡಿಕೆ ಮಾಡುತ್ತದೆ. ಮ್ಯೂಚುವಲ್‌ ಫಂಡ್‌ನ ಬೆಲೆಯನ್ನು ಎನ್‌ಎವಿ ದರದಲ್ಲಿ ನಿರ್ಧರಿಸಲಾಗುತ್ತದೆ. ಮ್ಯೂಚುವಲ್‌ ಫಂಡ್‌ ಖರೀದಿಸಬೇಕಿದ್ದರೆ ಎನ್‌ಎವಿ ದರವನ್ನು ನೀಡಬೇಕಾಗುತ್ತದೆ. ಮ್ಯೂಚವಲ್‌ ಫಂಡ್‌ ಯಾವೆಲ್ಲ ಅಸೆಟ್‌ ಮೇಲೆ ಹೂಡಿಕೆ ಮಾಡುತ್ತದೆಯೇ ಅದರ ಒಟ್ಟು ಮೌಲ್ಯವೇ ನೆಟ್‌ ಅಸೆಟ್‌ ವಾಲ್ಯೂ ಆಗಿದೆ. ಅದನ್ನು ಪರ್‌ ಯುನಿಟ್‌ ಆಧಾರದಲ್ಲಿ ಖರೀದಿಸಲಾಗುತ್ತದೆ. ದಿನವಹಿಯಾಗಿ ಎನ್‌ಎವಿ ಬದಲಾಗುತ್ತಿರುತ್ತದೆ. ಉದಾಹರಣೆಗೆ ಮ್ಯೂಚುವಲ್‌ ಫಂಡ್‌ನ ಒಂದು ಯುನಿಟ್‌ನ ಎನ್‌ಎವಿ 50 ರೂ. ಇದ್ದರೆ 50 ರೂ. ಕೊಟ್ಟು ಒಂದು ಯುನಿಟ್‌ ಕೊಳ್ಳಬಹುದು. ಮಾರುಕಟ್ಟೆ ತೆರೆದ ಬಳಿಕ ಮುಕ್ತಾಯವಾಗುವ ತನಕ ಮ್ಯೂಚುವಲ್‌ ಫಂಡ್‌ ಎನ್‌ಎವಿ ಬದಲಾಗುತ್ತಿರುತ್ತದೆ.

ಮ್ಯೂಚುವಲ್‌ ಫಂಡ್‌ಗಳು ಯಾರಿಗೆ ಸೂಕ್ತ ಎಂದು ನೋಡೋಣ. ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣದ ಕೊರತೆ ಇರುವವರು, ಮಾರುಕಟ್ಟೆ ಸಂಶೋಧನೆಗೆ ಸಮಯದ ಅಭಾವ ಇರುವವರು, ತಮ್ಮ ಸಂಪತ್ತನ್ನು ಬೆಳೆಸಲು ಬಯಸುವವರು ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಾಗಬಹುದು. ಹೀಗೆ ಸಂಗ್ರಹವಾಗುವ ಹಣವನ್ನು ಪ್ರೊಫೆಷನಲ್‌ ಫಂಡ್‌ ಮ್ಯಾನೇಜರ್‌ಗಳು ಯೋಜನೆಯ ಉದ್ದೇಶಕ್ಕೆನುಗುಣವಾಗು ಹೂಡಿಕೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಮ್ಯೂಚುವಲ್‌ ಫಂಡ್‌ ನಿರ್ದಿಷ್ಟ ಶುಲ್ಕ ಪಡೆಯುತ್ತದೆ. ಇದನ್ನು ಇನ್ವೆಸ್ಟ್‌ಮೆಂಟ್‌ನಲ್ಲಿ ಕಳೆಯುತ್ತಾರೆ. ಮ್ಯೂಚುವಲ್‌ ಫಂಡ್‌ ವಲಯ ನಿಯಂತ್ರಿಕ. ಸೆಬಿಯ ( Securities and Exchange Board of India) ವ್ಯಾಪ್ತಿಗೆ ಬರುತ್ತದೆ.

ಭಾರತವು ಜಾಗತಿಕ ಮಟ್ಟದಲ್ಲಿ ಹೆಚ್ಚು ಉಳಿತಾಯ ದರವನ್ನು ಹೊಂದಿರುವ ದೇಶಗಳಲ್ಲೊಂದು. ಬಹುತೇಕ ಮಂದಿ ಸಣ್ಣ ಉಳಿತಾಯಗಾರರು. ಅವರು ಸಾಂಪ್ರದಾಯಿಕ ಹೂಡಿಕೆಗಳಾದ ಬ್ಯಾಂಕ್‌ ಎಫ್‌ಡಿ, ಚಿನ್ನ ಮತ್ತು ಮ್ಯೂಚುವಲ್‌ ಫಂಡ್‌ಗಳಿಗೆ ಹೂಡಿಕೆ ಮಾಡುತ್ತಾರೆ. ಹೀಗಿದ್ದರೂ, ಮ್ಯೂಚುವಲ್‌ ಫಂಡ್‌ ಹೂಡಿಕೆ ಬಗ್ಗೆ ಜನತೆಗೆ ವ್ಯಾಪಕವಾಗಿ ಮಾಹಿತಿಯ ಕೊರತೆ ಇದೆ. ಹಲವಾರು ಉದ್ದೇಶಗಳಿಗೋಸ್ಕರ ಮ್ಯೂಚುವಲ್‌ ಫಂಡ್‌ಗಳಲ್ಲಿ ಜನ ಹೂಡಬಹುದು. ಮಕ್ಕಳ ಶಿಕ್ಷಣ, ವಿವಾಹ, ಮನೆ ಖರೀದಿ ಇತ್ಯಾದಿ ಉದ್ದೇಶಗಳಿಗೆ ಪಡೆಯಬಹುದು.

ರಿಟೇಲ್‌ ಹೂಡಿಕೆದಾರರಿಗೆ ಮ್ಯೂಚುವಲ್‌ ಫಂಡ್‌ಗಳಿ ಲಾಭದಾಯಕವಾಗಿರುವುದನ್ನು ಕಾಣಬಹುದು. ಷೇರುಪೇಟೆಯ ಟ್ರೆಂಡ್‌ಗಳ ಲಾಭ ಪಡೆಯಲು ಇದು ಅನುಕೂಲಕರ. ಹೀಗಿದ್ದರೂ ಸೂಕ್ತವಾದ ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡುವುದು ಕೂಡ ನಿರ್ಣಾಯಕ ಅಂಶಗಳಲ್ಲೊಂದು. ಮ್ಯೂಚುವಲ್‌ ಫಂಡ್‌ಗಳಲ್ಲೂ ಹಲವಾರು ಕೆಟಗರಿಗಳಿವೆ. ಅವುಗಳ ಲಾಭವನ್ನೂ ಹೂಡಿಕೆದಾರರು ಪಡೆಯಬಹುದು. ಉದಾಹರಣೆಗೆ ಈಕ್ವಿಟಿ ಫಂಡ್‌, ಡೆಟ್‌ ಫಂಡ್‌, ಹೈಬ್ರಿಡ್‌ ಫಂಡ್‌, ಗೋಲ್ಡ್‌ ಫಂಡ್‌ ಇತ್ಯಾದಿಗಳು ಇವೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಜನ ಯಾಕೆ ಮ್ಯೂಚುವಲ್‌ ಫಂಡ್‌ ಅನ್ನು ಖರೀದಿಸುತ್ತಾರೆ? ಮ್ಯೂಚುವಲ್‌ ಫಂಡ್‌ಗಳು ಫಂಡ್‌ ಮ್ಯಾನೇಜರ್‌ಗಳ ಮೂಲಕ ನಿರ್ವಹಣೆಯಾಗುತ್ತದೆ. ವೃತ್ತಿಪರತೆ ಮತ್ತು ಸಂಶೋಧನೆಯ ಬಳಿಕ ಹೂಡಿಕೆ ಮಾಡುವುದರಿಂದ ಜನ ಖರೀದಿಸುತ್ತಾರೆ.

ಮ್ಯೂಚುವಲ್‌ ಫಂಡ್‌ಗಳು ಸಾಮಾನ್ಯವಾಗಿ ಹಲವಾರು ಕಂಪನಿಗಳು ಮತ್ತು ಇಂಡಸ್ಟ್ರಿಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ ವೈವಿಧ್ಯಮಯ ಹೂಡಿಕೆಯ ಅವಕಾಶ ಸಿಗುತ್ತದೆ. ಇದರಿಂದಾಗಿ ರಿಸ್ಕ್‌ ಕಡಿಮೆಯಾಗುತ್ತದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಗಳ ಮೂಲಕ (SIP) ಅಥವಾ ಒಟ್ಟಿಗೆ ಲಂಪ್ಸಮ್‌ ಆಗಿಯೂ ಹೂಡಿಕೆ ಮಾಡಬಹುದು.

Exit mobile version