Site icon Vistara News

Narendra Modi: ಮುಕ್ತ ವ್ಯಾಪಾರ ಒಪ್ಪಂದ; ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಜತೆ ಮೋದಿ ಮಾತುಕತೆ

modi and sunak

modi and sunak

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ (Rishi Sunak) ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಉಭಯ ನಾಯಕರು, ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದ (Free Trade Agreement -FTA)ದ ಪ್ರಗತಿಯನ್ನು ಧನಾತ್ಮಕವಾಗಿ ಮೌಲ್ಯಮಾಪನ ನಡೆಸಿದರು. ಜತೆಗೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು ಎಂದು ವರದಿಯೊಂದು ತಿಳಿಸಿದೆ.

ಈ ಬಗ್ಗೆ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ʼʼದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಪರಸ್ಪರ ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದದ ಬಗೆಗಿನ ನಮ್ಮ ಬದ್ಧತೆಯ ಕುರಿತು ರಿಷಿ ಸಿನಕ್‌ ಅವರೊಂದಿಗೆ ಚರ್ಚೆ ನಡೆಸಲಾಯಿತುʼʼ ಎಂದು ಬರೆದುಕೊಂಡಿದ್ದಾರೆ.

ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಇತರ ಕ್ಷೇತ್ರಗಳಲ್ಲಿ ʼಮಾರ್ಗಸೂಚಿ 2030ʼರ ಅಡಿಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿಕೆ ತಿಳಿಸಿದೆ. ಮಾತುಕತೆ ವೇಳೆ ಮುಂಬರುವ ಹೋಳಿ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು ಎಂದು ವರದಿಯೊಂದಿ ತಿಳಿಸಿದೆ.

ಏಈ ಮಧ್ಯೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ತಡೆಹಿಡಿಯುವ ಸಮಸ್ಯೆಗಳನ್ನು ಪರಿಹರಿಸಲು ಇಂಗ್ಲೆಂಡ್‌ನ ಸಮಾಲೋಚಕರ ತಂಡವು ನವದೆಹಲಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದೆ. ʼʼಭಾರತವು ʼಸಮತೋಲಿತ, ನ್ಯಾಯಯುತ ಮತ್ತು ಸಮಾನʼ ಒಪ್ಪಂದವನ್ನು ಬಯಸುತ್ತಿದೆʼʼ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇತ್ದತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು.

ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಭಾರತ ಮತ್ತು ಇಂಗ್ಲೆಂಡ್‌ 2022ರ ಜನವರಿಯಿಂದ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿವೆ. 13ನೇ ಸುತ್ತಿನ ಮಾತುಕತೆ ಕಳೆದ ವರ್ಷ ಡಿಸೆಂಬರ್ 15ರಂದು ಕೊನೆಗೊಂಡಿತ್ತು. ಈ ನಡೆಯುತ್ತಿರುವ 14ನೇ ಸುತ್ತಿನ ಮಾತುಕತೆಯ ಮೂಲಕ ಎರಡೂ ಕಡೆಗೆ ಅನುಕೂಲವಾಗುವ ಒಪ್ಪಂದ ನಡೆಯಲಿದೆ ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ: Electoral Bond : ಆಯೋಗಕ್ಕೆ ಚುನಾವಣಾ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ

4 ರಾಷ್ಟ್ರಗಳ ಒಕ್ಕೂಟದೊಂದಿಗೆ ಭಾರತದ ವ್ಯಾಪಾರ ಒಪ್ಪಂದ

ಭಾರತ ಮತ್ತು ನಾಲ್ಕು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ಇಎಫ್‌ಟಿಎ (European Free Trade Association) ಭಾನುವಾರ ವ್ಯಾಪಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (Trade and Economic Partnership Agreement) ಸಹಿ ಹಾಕಿದವು. ಇದು ಆರ್ಥಿಕ ಸಹಕಾರದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದೇ ವಿಶ್ಲೇಷಿಲಾಗುತ್ತಿದೆ. ಈ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಭಾರತೀಯ ಗ್ರಾಹಕರು ಸ್ವಿಸ್‌ ಕೈ ಗಡಿಯಾರ, ಗಡಿಯಾರ, ಚಾಕೊಲೇಟ್‌, ಬಿಸ್ಕೆಟ್‌ಗಳಂತಹ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಭಾರತವು ಇಎಫ್‌ಟಿಎ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಈ ಸರಕುಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಹಂತ ಹಂತವಾಗಿ ತೆಗೆದು ಹಾಕಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version